ಭಾನುವಾರ, ಜೂನ್ 13, 2021
23 °C

ಕೋವಿಡ್‌: ವೈದ್ಯಕೀಯ ಸಲಕರಣೆಗಳ ಬೆಲೆ ದುಪ್ಪಟ್ಟು

ಬಸವರಾಜ ಹವಾಲ್ದಾರ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ರಾಜ್ಯದಲ್ಲಿ ಕೋವಿಡ್‌–19 ಸಕ್ರಿಯ ಪ್ರಕರಣಗಳು ಹೆಚ್ಚಾಗುತ್ತಲೇ ಸಾಗಿವೆ. ಚಿಕಿತ್ಸೆಗೆ ಬಳಸುವ ವೈದ್ಯಕೀಯ ಸಲಕರಣೆಗಳ ಬೇಡಿಕೆಯೂ ಹೆಚ್ಚಿದೆ. ಇದನ್ನೇ ಬಂಡವಾಳವಾಗಿಸಿಕೊಂಡಿರುವ ಕಂಪನಿ ಹಾಗೂ ಔಷಧ ಅಂಗಡಿ ಗಳವರು, ಅವುಗಳನ್ನು ಎರಡರಿಂದ ಮೂರು ಪಟ್ಟು ಹೆಚ್ಚಿನ ಬೆಲೆ ಮಾರಾಟ ಮಾಡುತ್ತಿದ್ದಾರೆ.

ಪಲ್ಸ್‌ ಆಕ್ಸಿಮೀಟರ್‌, ಸ್ಟೀಮ್‌ ಇನ್‌ಹೇಲರ್‌, ಥರ್ಮೋಮೀಟರ್‌ ಮುಂತಾದ  ಬಹಳಷ್ಟು ಸಲಕ ರಣೆಗಳ ಮೇಲೆ ಕಂಪನಿ ಹೆಸರೂ ಇಲ್ಲ, ಬಾಕ್ಸ್‌ಗಳ ಮೇಲೆ ಎಂಆರ್‌ಪಿ ಯೂ ಇರುವುದಿಲ್ಲ. ಔಷಧ ಅಂಗಡಿಗಳವರು ನಿಗದಿಪಡಿಸಿದ್ದೇ ದರ ಎನ್ನುವಂತಾಗಿದೆ.

ಕೋವಿಡ್ ಬಾಧಿತ ಬಹಳಷ್ಟು ಮಂದಿ ಹೋಂ ಐಸೋಲೇಷನ್‌ನಲ್ಲಿರುತ್ತಿದ್ದಾರೆ. ಪಲ್ಸ್‌ ಆಕ್ಸಿಮೀಟರ್, ಥರ್ಮೋಮೀಟರ್ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸುತ್ತಿದ್ದಾರೆ. ಜೊತೆಗೆ ಸ್ಟೀಮ್‌ ತೆಗೆದುಕೊಂಡರೆ ಒಳ್ಳೆಯದೆಂಬ ಸಲಹೆಯನ್ನೂ ನೀಡುತ್ತಾರೆ. ಹಾಗಾಗಿ, ಅವುಗಳ ಬೇಡಿಕೆ ಹೆಚ್ಚಿದೆ.

ಫೆಬ್ರವರಿ ತಿಂಗಳಿನಲ್ಲಿ ₹500 ರಿಂದ ₹700ರವರೆಗೆ ದೊರೆಯುತ್ತಿದ್ದ ಪಲ್ಸ್‌ ಆಕ್ಸಿಮೀಟರ್ ಈಗ ₹1800 ರಿಂದ 2,500ಕ್ಕೆ ಮಾರಾಟ ಮಾಡಲಾಗುತ್ತಿದೆ. ಅದರಲ್ಲೂ ಮೇಡ್‌ ಇನ್‌ ಚೈನಾ ಹಾವಳಿ ಮಿತಿ ಮೀರಿದೆ. ಕೆಲವು ಆಕ್ಸಿಮೀಟರ್‌ಗಳ ಮೇಲೆ ಕಂಪನಿಯ ಹೆಸರು, ದರ ನಮೂದಿಸಿದ್ದರೆ, ಇನ್ನು ಕೆಲವುಗಳ ಮೇಲೆ ಕಂಪನಿಯ ಹೆಸರೂ ಇರುವುದಿಲ್ಲ, ದರವೂ ಇಲ್ಲ.

₹70 ರಿಂದ ₹150ರವರೆಗೆ ಸಿಗುತ್ತಿದ್ದ ಥರ್ಮೋಮೀಟರ್ ಈಗ ₹120 ರಿಂದ 200ವರೆಗೆ ದೊರೆಯುತ್ತಿದೆ. ₹400 ರಿಂದ 700ರವರೆಗಿದ್ದ ಸ್ಟೀಮ್‌ ಇನ್‌ಹೇಲರ್ ಬೆಲೆಯು ₹600 ರಿಂದ ₹1000ವರೆಗೆ ಆಗಿದೆ. ಆಮ್ಲಜನಕ ಕಾನ್ಸನ್‌ಟ್ರೇಟರ್ಸ್‌ಗಳನ್ನು ಜನಸಾಮಾನ್ಯರು ಕೊಳ್ಳಲು ಮುಂದಾಗದಿರುವುದರಿಂದ ಅವುಗಳ ಬೆಲೆ ಹೆಚ್ಚಳದಿಂದ ಬಚಾವಾಗಿದ್ದಾರೆ.

ಪಲ್ಸ್ ಆಕ್ಸಿಮೀಟರ್, ಸ್ಟೀಮ್‌ ಇನ್‌ಹೇಲರ್‌ಗಳು ಎಲೆಕ್ಟ್ರಾನಿಕ್‌, ಎಲೆಕ್ಟ್ರಿಕಲ್‌ ಡಿವೈಸ್‌ಗಳೆಂದು ಪರಿಗಣಿಸಲ್ಪಡುತ್ತವೆ. ಅವುಗಳನ್ನು ವೈದ್ಯಕೀಯ ಸಲಕರಣೆಗಳು ಎಂದು ಘೋಷಿಸಿದಾಗ ನಮ್ಮ ನಿಯಂತ್ರಣಕ್ಕೆ ಬರುತ್ತವೆ. ಪಲ್ಸ್‌ ಆಕ್ಸಿಮೀಟರ್ ಅನ್ನು ಇತ್ತೀಚೆಗೆ ವೈದ್ಯಕೀಯ ಸಲಕರಣೆ ಎಂದು ಘೋಷಿಸಲಾಗಿದೆ. ಇನ್ನು ಆದೇಶ ಪ್ರತಿ ಬಂದಿಲ್ಲ ಎನ್ನುತ್ತಾರೆ ಧಾರವಾಡ ವೃತ್ತ ಔಷಧ ನಿಯಂತ್ರಕ ದಯಾನಂದ.

ಕೋವಿಡ್‌ಗೆ ಸಂಬಂಧಿಸಿ ವೈದ್ಯಕೀಯ ಸಲಕರಣೆಗಳ ಬೆಲೆ ಹೆಚ್ಚಿರುವುದು ಬಡ ಹಾಗೂ ಮಧ್ಯಮ ವರ್ಗದವರಿಗೆ ಹೊರೆಯಾಗುತ್ತಿದೆ. ಬಹಳಷ್ಟು ಜನರಿಗೆ ಹೋಂ ಐಸೋಲೇಷನ್‌ನಲ್ಲಿರುವಂತೆ ತಿಳಿಸುತ್ತಿರುವುದರಿಂದ ಪ್ರತಿ ಮನೆಯವರೂ ಇವುಗಳನ್ನು ಖರೀದಿಸುವಂತಾಗಿದೆ. ಬೆಲೆ ನಿಯಂತ್ರಣಕ್ಕೆ ಸರ್ಕಾರ ಮುಂದಾಗಬೇಕು ಎಂಬುದು ಆಮ್‌ ಆದ್ಮಿ ಪಾರ್ಟಿ ಜಿಲ್ಲಾ ಘಟಕದ ಅಧ್ಯಕ್ಷ ಸಂತೋಷ ನರಗುಂದ ಆಗ್ರಹ.

‘ಮೂರು ತಿಂಗಳ ಹಿಂದೆ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದೇವೆ. ಈಗ ತಯಾರಕರೇ ಬೆಲೆ ಹೆಚ್ಚಿಸಿದ್ದಾರೆ. ಹಾಗಾಗಿ, ನಾವೂ ಬೆಲೆ ಹೆಚ್ಚಿಸಿದ್ದೇವೆ. ಹೆಚ್ಚಿನ ಬೆಲೆ ನೀಡಿದರೂ ಸಿಗುತ್ತಿಲ್ಲ’ ಎನ್ನುತ್ತಾರೆ ಹೆಸರು ಬಹಿರಂಗ ಪಡಿಸಲು ಬಯಸದ ವ್ಯಾಪಾರಿಯೊಬ್ಬರು.

 *
ಎಲೆಕ್ಟ್ರಾನಿಕ್‌ ಡಿವೈಸ್‌ ಗಳಾಗಿದ್ದರಿಂದ ನಮ್ಮ ವ್ಯಾಪ್ತಿಯಲ್ಲಿ ಬರುವುದಿಲ್ಲ. ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು.
-ದಯಾನಂದ, ಔಷಧ ನಿಯಂತ್ರಕ, ಧಾರವಾಡ ವೃತ್ತ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು