ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ ಬಳಿಯ ಇಶಾ ಆದಿಯೋಗಿ ಪ್ರತಿಮೆ ಸ್ಥಾಪನೆ ಕಾಮಗಾರಿಗೆ ಹೈಕೋರ್ಟ್ ತಡೆ

ಯಥಾಸ್ಥಿತಿ ಕಾಯ್ದುಕೊಳ್ಳಲು ಹೈಕೋರ್ಟ್ ಆದೇಶ
Last Updated 11 ಜನವರಿ 2023, 18:47 IST
ಅಕ್ಷರ ಗಾತ್ರ

ಬೆಂಗಳೂರು: ‘ಚಿಕ್ಕಬಳ್ಳಾಪುರ ತಾಲ್ಲೂಕಿನ ಆವಲಗುರ್ಕಿಯ ಹಸಿರುಪಟ್ಟಿ ವ್ಯಾಪ್ತಿಯಲ್ಲಿ ಈಶಾ ಯೋಗ ಕೇಂದ್ರವು ಆದಿಯೋಗಿ ಪ್ರತಿಮೆ ಸ್ಥಾಪನೆಯ ಕಾಮಗಾರಿ ಕೈಗೊಳ್ಳದಂತೆ ಮತ್ತು ಲೋಹದ ಮೂರ್ತಿ ಪ್ರತಿಷ್ಠಾಪಿಸದಂತೆ, ಹಬ್ಬದ ದಿನಗಳಲ್ಲಿ ಲಕ್ಷಗಟ್ಟಲೆ ಜನ ಜಮಾಯಿಸದಂತೆ ನಿರ್ಬಂ ಧಿಸಬೇಕು’ ಎಂಬ ಪಿಐಎಲ್ ಮಧ್ಯಂತರ ಮನವಿಯನ್ನು ಮಾನ್ಯ ಮಾಡಿರುವ ಹೈಕೋರ್ಟ್‌, ಈ ಪ್ರದೇಶದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದೆ.

ಈ ಸಂಬಂಧ ಚಿಕ್ಕಬಳ್ಳಾಪುರ ತಾಲ್ಲೂಕಿನ ಚಂಬಳ್ಳಿಯ ಕೃಷಿಕ ಎಸ್.ಕ್ಯಾತಪ್ಪ, ಮುಸ್ಟೂರು ಗ್ರಾಮದ ಜಿ‌.ಎಂ.ಶ್ರೀಧರ ಸೇರಿದಂತೆ ನಾಲ್ವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಹಾಗೂ ನ್ಯಾಯಮೂರ್ತಿ ಅಶೋಕ್ ಎಸ್.ಕಿಣಗಿ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಂ.ಶಿವಪ್ರಕಾಶ್ ವಾದ ಮಂಡಿಸಿ, ‘ಆವಲಗುರ್ಕಿ ಗ್ರಾಮದ ಸರ್ವೇ ನಂಬರ್‌ 174 ರಿಂದ 287ರ ವ್ಯಾಪ್ತಿಯಲ್ಲಿರುವ ಸುಳಿಕುಂಟೆ, ಕೇಶವನಹಳ್ಳಿ, ಹನುಮಂತಾಪುರ, ಬೈರೋಜನಹಳ್ಳಿ, ವಡ್ಡರಪಾಳ್ಯ, ಲಿಂಗಶೆಟ್ಟಿಹಳ್ಳಿಯಲ್ಲಿ ಕಂದಾಯ ಜಮೀನುಗಳನ್ನು ಶಾಸನಾತ್ಮಕ ನಿಯಮ ಮೀರಿ ಈಶಾ ಯೋಗ ಕೇಂದ್ರಕ್ಕೆ ನೀಡಿದೆ’ ಎಂದು ಆಕ್ಷೇಪಿಸಿದರು.

‘ಇಲ್ಲಿ ಐತಿಹಾಸಿಕ ನಂದಿಬೆಟ್ಟ ಪ್ರದೇಶವಿದ್ದು, ಇಲ್ಲಿರುವ ದಿಬ್ಬಗಿರಿ, ಬ್ರಹ್ಮಗಿರಿ, ಚೆನ್ನಗಿರಿ, ನಂದಿಗಿರಿ ಹಾಗೂ ಸ್ಕಂದಗಿರಿ ಬೆಟ್ಟಗಳು ಪೌರಾಣಿಕ ಮಹತ್ವ ಪಡೆದಿವೆ. ಅಂತೆಯೇ ಸುತ್ತಲಿನ ಭೂ ಪ್ರದೇಶವು ಅಮೂಲ್ಯ ವೃಕ್ಷ ಸಂಪತ್ತಿನಿಂದ ಕೂಡಿದೆ. ಆದರೆ, ಈಶಾ ಕೇಂದ್ರವು ಇಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಉದ್ದೇಶ ಹೊಂದಿದ್ದು, ಇದರಿಂದ ಸ್ಥಳೀಯ ಪರಿಸರವೂ ಸೇರಿದಂತೆ ಆವಲಗುರ್ಕಿಯಲ್ಲಿರುವ ಭೂ ಪ್ರದೇಶಕ್ಕೆ ಹಾನಿಯುಂಟಾಗಲಿದೆ. ಹಾಗಾಗಿ, ಇಂತಹ ಯಾವುದೇ ಚಟುವಟಿಕೆಗೆ ಅವಕಾಶ ನೀಡದಂತೆ ನಿರ್ದೇಶಿಸಬೇಕು’ ಎಂದು ಮನವಿ ಮಾಡಿದರು.

ಆದೇಶ ತೆರವಿಗೆ ಮನವಿ
ಬೆಳಗಿನ ಕಲಾಪದಲ್ಲಿ ಹೈಕೋರ್ಟ್‌ ಮಧ್ಯಂತರ ಆದೇಶ ಹೊರಡಿಸುತ್ತಿದ್ದಂತೆಯೇ, ಇಶಾ ಯೋಗ ಕೇಂದ್ರದ ಪರವಾಗಿ ಹಿರಿಯ ವಕೀಲ ಉದಯ ಹೊಳ್ಳ ಅವರು ಮಧ್ಯಾಹ್ನ ನ್ಯಾಯಪೀಠದ ಮುಂದೆ ಹಾಜರಾಗಿ, ‘ಆದಿಯೋಗಿ ಪ್ರತಿಮೆ ಬಳಿ ಇದೇ 15ರಂದು ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆದರೆ, ನ್ಯಾಯಾಲಯದ ಯಥಾಸ್ಥಿತಿ ಆದೇಶದಿಂದ ಕಾರ್ಯಕ್ರಮಕ್ಕೆ ತೊಂದರೆಯಾಗುವ ಸಾಧ್ಯತೆಯಿದ್ದು ಅರ್ಜಿಯನ್ನು ತುರ್ತು ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು’ ಎಂದು ಮನವಿ ಮಾಡಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ ವಿಚಾರಣೆಯನ್ನು 13ಕ್ಕೆ ನಿಗದಿಪಡಿಸಿತು.

ಆಕ್ಷೇಪ ಏನು?: ‘ವಿವಿಧ ಸರ್ವೆ ನಂಬರ್‌ಗಳಲ್ಲಿ ಶೈಕ್ಷಣಿಕ ಉದ್ದೇಶಕ್ಕಾಗಿ ಈಶಾ ಯೋಗ ಕೇಂದ್ರಕ್ಕೆ ಮಂಜೂರು ಮಾಡಿರುವ ಕ್ರಮವು, ಪರಿಸರ ಸಂರಕ್ಷಣಾ ಕಾಯ್ದೆ–1986, ಭಾರತೀಯ ಅರಣ್ಯ ಕಾಯ್ದೆ–1927, ಸಂರಕ್ಷಣಾ ನಿಯಮಗಳು–2003, ಕರ್ನಾಟಕ ಭೂ ಕಂದಾಯ ಕಾಯ್ದೆ, ಕರ್ನಾಟಕ ಭೂ ಮಂಜೂರಾತಿ ನಿಯಮಗಳು ಮತ್ತು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ–1987 ಹಾಗೂ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ–1961ಕ್ಕೆ ವಿರುದ್ಧವಾಗಿದೆ’ ಎಂದು ಆಕ್ಷೇಪಿಸಿದರು.

ಈ ವಾದವನ್ನು ಮಾನ್ಯ ಮಾಡಿದ ನ್ಯಾಯಪೀಠವು, ಪ್ರತಿವಾದಿಗಳಾದ ಕೇಂದ್ರ ಪರಿಸರ ಸಚಿವಾಲಯ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಈಶಾ ಯೋಗ ಕೇಂದ್ರವೂ ಸೇರಿದಂತೆ ಒಟ್ಟು 16 ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT