ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸ್ತಕ್ಷೇಪ l ಸಿ.ಎಂ ವಿರುದ್ಧ ಈಶ್ವರಪ್ಪ ಬಂಡಾಯ: ಮೋದಿ, ಅಮಿತ್ ಶಾಗೆ ದೂರು?

Last Updated 31 ಮಾರ್ಚ್ 2021, 20:40 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಬಂಡೆದ್ದಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ, ತಮ್ಮ ಇಲಾಖೆಯಲ್ಲಿ ಯಡಿಯೂರಪ್ಪ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆಪಾದಿಸಿ ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಬುಧವಾರ ದೂರು ನೀಡಿದ್ದಾರೆ.

ಸಚಿವರೊಬ್ಬರು ಮುಖ್ಯಮಂತ್ರಿ ವಿರುದ್ಧವೇ ರಾಜ್ಯಪಾಲರಿಗೆ ದೂರು ನೀಡಿದ ಪ್ರಕರಣ ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲನೆಯದು.

ಈ ದೂರಿನ ಪ್ರಕರಣಆಡಳಿತಾರೂಢ ಬಿಜೆಪಿಯಲ್ಲಿ ಬಿರುಗಾಳಿ ಎಬ್ಬಿಸಿದ್ದು, ಯಡಿಯೂರಪ್ಪ ಮೌನಕ್ಕೆ ಶರಣಾಗಿದ್ದಾರೆ.

ಒಂದು ವಾರದ ಹಿಂದೆ ಮುಖ್ಯಮಂತ್ರಿ ನಿವಾಸದಲ್ಲಿ ಸಭೆ ಸೇರಿದ್ದ ಬಿಜೆಪಿಯ 60 ಶಾಸಕರು ಸಚಿವ ಈಶ್ವರಪ್ಪ ವಿರುದ್ಧ ಹರಿಹಾಯ್ದಿದ್ದರು. ‘ನಮ್ಮ ವಿಧಾನಸಭಾ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ. ನಮ್ಮ ಮಾತು ಕೇಳುತ್ತಿಲ್ಲ. ನೇರವಾಗಿ ನೀವೇ ಅನುದಾನ ಬಿಡುಗಡೆ ಮಾಡಬೇಕು’ ಎಂದು ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದರು. ಅದರ ಮರುದಿನವೇ ಪಕ್ಷದ ರಾಜ್ಯ ಉಸ್ತುವಾರಿಯಾಗಿರುವ ಅರುಣ್ ಸಿಂಗ್ ಅವರಿಗೆ, ಪತ್ರ ಬರೆದಿದ್ದ ಈಶ್ವರಪ್ಪ ಮುಖ್ಯಮಂತ್ರಿ ವಿರುದ್ಧ ದೂರುಗಳನ್ನು ಸಲ್ಲಿಸಿದ್ದರೂ ಎಂದು ಹೇಳಲಾಗುತ್ತಿದೆ.

ದೂರು ಕೊಟ್ಟ ಬಳಿಕ ರಾಜಭವನದ ಎದುರು ಸುದ್ದಿಗಾರರ ಜತೆ ಮಾತನಾಡಿದ ಈಶ್ವರಪ್ಪ ‘ಪತ್ರದಲ್ಲಿರುವ ಎಲ್ಲ ಅಂಶಗಳನ್ನೂ ರಾಜ್ಯಪಾಲರಿಗೆ ವಿವರಿಸಿದ್ದು, ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದೇನೆ’ ಎಂದಷ್ಟೇ ಹೇಳಿದ್ದಾರೆ.

‘ರಾಜ್ಯಪಾಲರನ್ನು ಭೇಟಿ ಮಾಡಿದ್ದ ಈಶ್ವರಪ್ಪ ಅವರು ಈ ದೂರನ್ನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕಳುಹಿಸಿದ್ದೇನೆ. ರಾಜ್ಯ ಸರ್ಕಾರದ ಸಾಂವಿಧಾನಿಕ ಮುಖ್ಯಸ್ಥರಾದ ತಮಗೂ ನೀಡುತ್ತಿದ್ದೇನೆ’ ಎಂದು ವಿವರಿಸಿದ್ದಾಗಿ ಮೂಲಗಳು ಹೇಳಿವೆ.

ಈಶ್ವರಪ್ಪ ಅವರು ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೂ ಪತ್ರ ಕಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪತ್ರದ ಸಾರಾಂಶ: ‘ಕಳೆದ ಒಂದು ವರ್ಷದ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ಎಲ್ಲ ನಿರ್ಧಾರಗಳನ್ನು ನನ್ನ ಗಮನಕ್ಕೆ ತರದೇ ಸ್ವತಃ ಮುಖ್ಯಮಂತ್ರಿಯವರೇ ಕೈಗೊಳ್ಳುತ್ತಿದ್ದಾರೆ. ಇದರಿಂದ ಸಂಪುಟದ ಅತ್ಯಂತ ಹಿರಿಯ ಸದಸ್ಯನಾದ ನನಗೆ ತೀವ್ರ ಮುಜುಗರ ಮತ್ತು ನೋವು ಉಂಟಾಗಿದೆ’.

‘ಸಚಿವ ಸಂಪುಟ ಸಭೆಯಲ್ಲಿ ಸಚಿವರ ಅಭಿಪ್ರಾಯಗಳನ್ನು ಕಡೆಗಣಿಸಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅದಕ್ಕೆ ಸಾಕಷ್ಟು ನಿದರ್ಶನಗಳನ್ನು ನೀಡಬಲ್ಲೆ’ ಎಂದೂ ಅವರು ಪತ್ರದಲ್ಲಿ ವಿವರಿಸಿದ್ದಾರೆ.

‘2020–21 ರ ಬಜೆಟ್‌ನಲ್ಲಿ ಗ್ರಾಮೀಣ ಪ್ರದೇಶದ ರಸ್ತೆಗಳನ್ನು ಅಭಿವೃದ್ಧಿಪಡಿಸುವ ‘ಗ್ರಾಮೀಣ ಸುಮಾರ್ಗ’ ಯೋಜನೆ ಪ್ರಕಟಿಸಲಾಗಿತ್ತು. ಈ ಯೋಜನೆಯಡಿ 5 ವರ್ಷಗಳಲ್ಲಿ 20 ಸಾವಿರ ಕಿ.ಮೀ ರಸ್ತೆ ಅಭಿವೃದ್ಧಿಪಡಿಸಲು ₹780 ಕೋಟಿ ನಿಗದಿ ಮಾಡಲಾಗಿತ್ತು. ಇದನ್ನು ಕಾರ್ಯಗತಗೊಳಿಸಲು ಇಲಾಖೆ ಎಲ್ಲ ಸಿದ್ಧತೆ ಮಾಡಿಕೊಂಡಿತ್ತು. ಆದರೆ, ನಿಗದಿ ಮಾಡಿದ ಮೊತ್ತವನ್ನು ಹಣಕಾಸು ಇಲಾಖೆ ಬಿಡುಗಡೆ ಮಾಡಲೇ ಇಲ್ಲ. ಇದಕ್ಕೆ ಕಾರಣವೇನೆಂದು ಗೊತ್ತಿಲ್ಲ’ ಎಂದು ಹೇಳಿದ್ದಾರೆ.

ಅಲ್ಲದೆ, ಹಣಕಾಸು ಇಲಾಖೆ 2020–21 ರ ಬಜೆಟ್‌ನಲ್ಲಿ ಪ್ರಕಟಿಸಿದ ಇತರ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅಗತ್ಯ ಅನುದಾನವನ್ನೂ ಬಿಡುಗಡೆ ಮಾಡಲಿಲ್ಲ. ಆದರೆ, ಕಳೆದ ಒಂದೂವರೆ ವರ್ಷದಲ್ಲಿ ವಿಶೇಷ ಅನುದಾನದ ಹೆಸರಿನಲ್ಲಿ (ಬಜೆಟ್‌ ಹೊರತುಪಡಿಸಿ) ₹1,439.25 ಕೋಟಿಗೆ ಅನುಮೋದನೆ (ಹಿಂದಿನ ಸರ್ಕಾರದ ಬಿಡುಗಡೆ ಮಾಡಿದ ₹973.80 ಕೋಟಿ ಬಿಟ್ಟು) ನೀಡಿದೆ ಎಂದು ಅವರು ಹೇಳಿದ್ದಾರೆ.

ಇತ್ತೀಚೆಗೆ (17.02.21) ರಂದು ಹಣಕಾಸು ಇಲಾಖೆ 81 ವಿಧಾನಸಭಾ ಕ್ಷೇತ್ರಗಳಿಗೆ ₹775 ಕೋಟಿ ಅನುಮೋದನೆ ನೀಡಿದೆ. ಒಂದೊಂದು ವಿಧಾನಸಭಾ ಕ್ಷೇತ್ರಕ್ಕೆ ₹ 5 ಕೋಟಿಯಿಂದ ₹23 ಕೋಟಿವರೆಗೆ ಅನುದಾನ ಹಂಚಿಕೆ ಮಾಡಿದೆ. ಬೇಕಾಬಿಟ್ಟಿ ಹಣ ನೀಡುವುದರಿಂದ ಗ್ರಾಮೀಣ ಮೂಲಸೌಕರ್ಯ ಯೋಜನೆಗಳ ಮೇಲೆ ದೀರ್ಘಾವಧಿಯಲ್ಲಿ ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ವಿಶೇಷ ಅನುದಾನ ಯೋಜನೆಯಡಿ ₹5 ಲಕ್ಷದೊಳಗೆ ರಸ್ತೆ ಕಾಮಗಾರಿ ಕೈಗೊಳ್ಳುವ ಯೋಜನೆ ಜಾರಿ ಮಾಡಲಾಗಿದೆ. ಇದರಿಂದ ರಸ್ತೆಗಳ ಗುಣಮಟ್ಟದ ಮೇಲೆ ಪರಿಣಾಮ ಬೀರುವುದಲ್ಲದೆ, ಅಕ್ರಮದ ಆರೋಪಕ್ಕೂ ಒಳಗಾಗಬೇಕಾಗುತ್ತದೆ ಎಂದಿದ್ದಾರೆ.

‘ಇಲ್ಲಿಯವರೆಗೆ ಗ್ರಾಮೀಣಾಭಿವೃದ್ಧಿ ಇಲಾಖೆಗೆ ₹3,998.56 ಕೋಟಿ ಅನುಮೋದನೆ ನೀಡಿದ್ದು, ಅದರಲ್ಲಿ ₹1,600.42 ಕೋಟಿ ಮಾತ್ರ ಬಿಡುಗಡೆ ಮಾಡಲಾಗಿದೆ. ಬಿಡುಗಡೆ ಆಗದೇ ಇರುವ ಮೊತ್ತ ₹2,398.18 ಕೋಟಿ. ಇದರ ಅರ್ಥ ನನ್ನ ಇಲಾಖೆಯ ಯೋಜನೆಗಳನ್ನು ಕಡೆಗಣಿಸಲಾಗುತ್ತಿದೆ. ಈಗಿನ ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಸಾರ್ವಜನಿಕರ ಹಣ ದುರುಪಯೋಗ ಎಂದೇ ಕರೆಯಬೇಕಾಗುತ್ತದೆ’ ಎಂದಿದ್ದಾರೆ.

ಆಡಳಿತ ಶೈಲಿ ಬದಲಿಸಲೇಬೇಕು

‘ಹಣಕಾಸು ಇಲಾಖೆಯ ಈ ವರ್ತನೆಯಿಂದ ನಮ್ಮ ಪಕ್ಷದ ಶಾಸಕರು ಮತ್ತು ಕಾರ್ಯಕರ್ತರ ಮುಂದೆ ನಾನು ಮುಜುಗರಕ್ಕೆ ಒಳಗಾಗಿದ್ದೇನೆ. ಪಕ್ಷ ಅಧಿಕಾರದಲ್ಲಿದ್ದರೂ, ನಮ್ಮ ಪಕ್ಷದ ಶಾಸಕರ ಕ್ಷೇತ್ರಗಳನ್ನು ಕಡೆಗಣಿಸಿ, ವಿರೋಧ ಪಕ್ಷಗಳ ಶಾಸಕರಿಗೆ ಅತಿ ಹೆಚ್ಚಿನ ವಿಶೇಷ ಅನುದಾನವನ್ನು ನೀಡಲಾಗುತ್ತಿದೆ. ರಾಜ್ಯ ಮತ್ತು ಪಕ್ಷದ ಹಿತ ದೃಷ್ಟಿಯಿಂದ ಈಗಿನ ಆಡಳಿತ ಶೈಲಿಯನ್ನು ಬದಲಿಸಲೇಬೇಕು’ ಎಂದು ಕೆ.ಎಸ್‌.ಈಶ್ವರಪ್ಪ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT