ಭಾನುವಾರ, ಫೆಬ್ರವರಿ 28, 2021
31 °C

ಎಚ್‌ಡಿಕೆ ಕ್ಷೇತ್ರ ಚನ್ನಪಟ್ಟಣದಲ್ಲಿ ಜೆಡಿಎಸ್‌ ಬೆಂಬಲಿಗರ ಮೇಲುಗೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಪಟ್ಟಣ: ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಬುಧವಾರ ಗ್ರಾಮ ಪಂಚಾಯಿತಿ ಚುನಾವಣೆಯ ಮತ ಎಣಿಕೆ ಕಾರ್ಯ ಶಾಂತಿಯುತವಾಗಿ ನಡೆಯಿತು.

ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭಗೊಂಡು ಸಂಜೆ 7 ಗಂಟೆಯಾದರೂ ಮುಂದುವರಿದಿತ್ತು. ತಾಲ್ಲೂಕಿನಲ್ಲಿ 434 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಒಟ್ಟು 1156 ಮಂದಿ ಅಂತಿಮ ಕಣದಲ್ಲಿದ್ದರು. ತಾಲ್ಲೂಕಿನಲ್ಲಿ ಒಟ್ಟು 70,144 ಪುರುಷರು, 71,800 ಮಹಿಳಾ ಮತದಾರರು ಸೇರಿ ಒಟ್ಟು 1,41,944 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.

ಮತ ಎಣಿಕೆಗಾಗಿ 12 ಕೊಠಡಿಗಳಲ್ಲಿ 84 ಟೇಬಲ್ ವ್ಯವಸ್ಥೆ ಮಾಡಲಾಗಿತ್ತು. 92 ಮೇಲ್ವಿಚಾರಕರು, 184 ಮತ ಎಣಿಕೆ ಸಿಬ್ಬಂದಿಗಳನ್ನು ನೇಮಿಸಲಾಗಿತ್ತು. ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದಂತೆ ಸೂಕ್ತ ಬಂದೋಬಸ್ತ್ ನೊಂದಿಗೆ ಮತ ಎಣಿಕೆ ಕಾರ್ಯ ನಡೆಸಲಾಯಿತು.

ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಆರಂಭಗೊಂಡ ಹಿನ್ನೆಲೆಯಲ್ಲಿ 10 ಗಂಟೆಯ ವೇಳೆಗೆ ಫಲಿತಾಂಶ ಬರಲಾರಂಭಿಸಿತು. ಹೊರಗಡೆ ತಮ್ಮ ಅಭ್ಯರ್ಥಿಗಳ ಫಲಿತಾಂಶವನ್ನು ಕಾಣಲು ಕಿಕ್ಕಿರಿದ ಜನಸ್ತೋಮ ಕಾದು ಕುಳಿತಿತ್ತು. ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಗೆದ್ದವರು ಪಟಾಕಿ ಸಿಡಿಸಿ, ಜೈಕಾರ ಹಾಕಿ, ಗೆದ್ದವರನ್ನು ಮೇಲೇತ್ತಿ ಸಂಭ್ರಮಿಸಿದರು.

ಜೆಡಿಎಸ್ ಬೆಂಬಲಿತರ ಜಯಭೇರಿ

32 ಗ್ರಾಮ ಪಂಚಾಯಿತಿಗಳಲ್ಲಿ 25 ಗ್ರಾಮ ಪಂಚಾಯಿತಿಯಲ್ಲಿ ಜೆಡಿಎಸ್ ಬೆಂಬಲಿತರು ಜಯಭೇರಿ ಬಾರಿಸಿದ್ದು, ಇಲ್ಲಿ ಜೆಡಿಎಸ್ ಅಧಿಕಾರ ಹಿಡಿಯುವುದು ಬಹುತೇಕ ಖಚಿತವಾಗಿದೆ.

ಉಳಿದಂತೆ ಬಿಜೆಪಿ ಬೆಂಬಲಿಗರು 5 ಪಂಚಾಯಿತಿಗಳಲ್ಲಿ ಬಹುಮತ ಪಡೆದಿದ್ದು, ಉಳಿದ 2 ಪಂಚಾಯಿತಿಗಳು ಅತಂತ್ರವಾಗುವ ಸಾಧ್ಯತೆ ಹೆಚ್ಚಾಗಿತ್ತು.

ಫಲಿತಾಂಶ ವಿಶೇಷತೆ

ಬಿಜೆಪಿ ತಾಲ್ಲೂಕು ಅಧ್ಯಕ್ಷ ಸೋಲು: ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಟಿ.ಜಯರಾಂ ಅವರು 200 ಕ್ಕೂ ಹೆಚ್ಚು ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ.

 ಬೇವೂರು ಗ್ರಾ.ಪಂ. ವ್ಯಾಪ್ತಿಯ ಕೆಲಗೆರೆ ಗ್ರಾಮದ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜಯರಾಂ ಅವರು ಜೆಡಿಎಸ್ ಬೆಂಬಲಿತ ಅಭ್ಯರ್ಥಿ ರಂಗಸ್ವಾಮಿ ವಿರುದ್ಧ ಸೋಲು ಕಂಡಿದ್ದಾರೆ.

ಪುಟ್ಟಣ್ಣ ಸಹೋದರ ಸೋಲು: ತಾಲ್ಲೂಕಿನ ಎಲೆತೋಟದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಂಕನಹಳ್ಳಿ ಕ್ಷೇತ್ರದಲ್ಲಿ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅವರ ಸಹೋದರ ಕೆ.ಪಿ.ರಾಜು ಸೋಲು ಕಂಡಿದ್ದಾರೆ.

ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಾಜು ತಮ್ಮ ಪ್ರತಿಸ್ಪರ್ಧಿ ಜೆಡಿಎಸ್ ಬೆಂಬಲಿತ ಮರೀಗೌಡ ವಿರುದ್ಧ 19 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ರಾಜು ಅವರು ಕಳೆದ ಚುನಾವಣೆಯಲ್ಲಿ ಜಯಗಳಿಸಿ ಗ್ರಾ.ಪಂ. ಅಧ್ಯಕ್ಷರಾಗಿದ್ದರು.

ಪುಟ್ಟಣ್ಣ ಅವರ ಮತ್ತೊಬ್ಬ ಸಹೋದರ ಕಾಂತರಾಜು ಅವರು ಎಲೆತೋಟದಹಳ್ಳಿ ಗ್ರಾ.ಪಂ.ನ ಕರಲಹಳ್ಳಿ ಕ್ಷೇತ್ರದಿಂದ ಅವಿರೋಧ ಆಯ್ಕೆಯಾಗಿದ್ದಾರೆ.

ಲಾಟರಿ ಮೂಲಕ ಆಯ್ಕೆ: ತಾಲ್ಲೂಕಿನ ಎರಡು ಗ್ರಾಮ ಪಂಚಾಯಿತಿಗಳಲ್ಲಿ ಅಭ್ಯರ್ಥಿಗಳಿಬ್ಬರು ಸಮ ಮತಗಳನ್ನು ಪಡೆದ ಕಾರಣ ಲಾಟರಿ ಮೂಲಕ ಆಯ್ಕೆ ಮಾಡಲಾಯಿತು.

ತಾಲ್ಲೂಕಿನ ಎಂ.ಬಿ.ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಗನೂರು ಕ್ಷೇತ್ರದಲ್ಲಿ ರಾಮದಾಸೇಗೌಡ ಹಾಗೂ ವೆಂಕಟಗಿರಿಗೌಡ ತಲಾ 113 ಮತ ಪಡೆದು ಸಮಬಲ ಸಾಧಿಸಿದ್ದರು. ಆಗ ಚುನಾವಣಾಧಿಕಾರಿ ಸಮ್ಮುಖದಲ್ಲಿ ಲಾಟರಿ ಎತ್ತಲಾಯಿತು. ಲಾಟರಿಯಲ್ಲಿ ರಾಮದಾಸೇಗೌಡ ಅವರಿಗೆ ಜಯಲಕ್ಷ್ಮಿ ಒಲಿಯಿತು.

ಹಾಗೆಯೆ ತಾಲ್ಲೂಕಿನ ತಿಟ್ಟಮಾರನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಕೋಟಮಾರನಹಳ್ಳಿ ಕ್ಷೇತ್ರದಲ್ಲಿ ನಾಗಮ್ಮ ಹಾಗೂ ಜ್ಯೋತಿ ಸ್ಪರ್ಧಿಸಿದ್ದರು. ಇಬ್ಬರು 258 ಮತ ಪಡೆದಿದ್ದರು. ಈ ಕ್ಷೇತ್ರದಲ್ಲಿ ಮರು ಎಣಿಕೆ ಮಾಡಲಾಯಿತು. ಆಗಲೂ 258 ಮತ ಬಂದ ಕಾರಣ ಲಾಟರಿ ಮೂಲಕ ಆಯ್ಕೆ ಮಾಡಲಾಯಿತು. ಲಾಟರಿಯಲ್ಲಿ ನಾಗಮ್ಮ ಅವರಿಗೆ ಜಯ ಒಲಿಯಿತು.

ಮಂಗಳಮುಖಿ ಗೆಲುವು: ತಾಲ್ಲೂಕಿನ ಕೂಡ್ಲೂರು ಗ್ರಾಮ ಪಂಚಾಯಿತಿಯ ಕೂಡ್ಲೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಂಗಳಮುಖಿಯೊಬ್ಬರು ಗೆಲುವು ಸಾಧಿಸಿದ್ದಾರೆ.

ಮಂಗಳಮುಖಿ ಮಮತ ಅವರು ಜೆಡಿಎಸ್ ಬೆಂಬಲಿತರಾಗಿ ಸ್ಪರ್ಧಿಸಿ ಗೆಲುವು ಪಡೆದಿದ್ದಾರೆ. ಇವರು 2015 ರಲ್ಲಿ ನಡೆದಿದ್ದ ಗ್ರಾ.ಪಂ. ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು