ಶುಕ್ರವಾರ, ಡಿಸೆಂಬರ್ 2, 2022
21 °C
ಕಿತ್ತೂರು ಚನ್ನಮ್ಮ ವಿಜಯ ಜ್ಯೋತಿ ಯಾತ್ರೆಗೆ ಚಾಲನೆ

ಈ ವರ್ಷವೇ ಸುವರ್ಣಸೌಧದಲ್ಲಿ ಚನ್ನಮ್ಮ, ರಾಯಣ್ಣ ಪ್ರತಿಮೆ ಸ್ಥಾಪನೆ: ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ₹ 50 ಕೋಟಿ ಅನುದಾನ ಒದಗಿಸಲಾಗಿದ್ದು, ಇದೇ ವರ್ಷ ಬೆಳಗಾವಿಯ ಸುವರ್ಣಸೌಧದಲ್ಲಿ ರಾಣಿ ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆ ಪ್ರತಿಷ್ಠಾಪಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬೆಳಗಾವಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿಯಾಗಿ ನಗರದಲ್ಲಿ ಭಾನುವಾರ ಹಮ್ಮಿಕೊಂಡ ‘ಕಿತ್ತೂರು ಚನ್ನಮ್ಮಾಜಿ ವಿಜಯ ಜ್ಯೋತಿ ಯಾತ್ರೆ’ಗೆ ಚಾಲನೆ ನೀಡಿ, ಮಾತನಾಡಿದರು.

‘ಕಿತ್ತೂರು ಉತ್ಸವ ಪ್ರಾರಂಭವಾಗಿ 25-30 ವರ್ಷಗಳಾಗಿವೆ. ಕುಂಟುತ್ತಿದ್ದ ಈ ಉತ್ಸವವನ್ನು ನಮ್ಮ ಸರ್ಕಾರ ರಾಜ್ಯ ಮಟ್ಟದಲ್ಲಿ ಆಚರಿಸುತ್ತಿದೆ. ಹಿಂದೆ ಬೆಳಗಾವಿ ಉಸ್ತುವಾರಿ ಸಚಿವನಾಗಿದ್ದ ಸಂದರ್ಭ ಈ ಉತ್ಸವಕ್ಕೆ ಹೆಚ್ಚಿನ ಅನುದಾನ ಒದಗಿಸಿದ್ದೆ. ಆಗ ಜ್ಯೋತಿಯು ಕಿತ್ತೂರಿನಿಂದ ಬೆಂಗಳೂರಿಗೆ ಚನ್ನಮ್ಮಳ ಸಂದೇಶ ಹೊತ್ತು ಬರುತ್ತಿತ್ತು. ಈಗ ರಾಜಧಾನಿ ಬೆಂಗಳೂರಿನಿಂದ ಕಿತ್ತೂರು ಸಂಸ್ಥಾನದ ರಾಜಧಾನಿ ಕಿತ್ತೂರಿಗೆ ಜ್ಯೋತಿ ಯಾತ್ರೆ ನಡೆಯುತ್ತಿದೆ’ ಎಂದು ಹೇಳಿದರು.

‘ಈಗಾಗಲೇ ಸಂಗೊಳ್ಳಿ ರಾಯಣ್ಣ ಹೆಸರಿನಲ್ಲಿ ಸೈನಿಕ ಶಾಲೆ ಪ್ರಾರಂಭ ಮಾಡಿದ್ದೇವೆ. ಮುಂದಿನ ತಿಂಗಳು ಸೈನಿಕ ಶಾಲೆ ಉದ್ಘಾಟನೆ ಮಾಡುತ್ತೇವೆ. ಇದರ ಜತೆಗೆ ರಾಯಣ್ಣನನ್ನು ನೇಣುಗಂಬಕ್ಕೆ ಹಾಕಿದ ನಂದಗಡ ಸಮಾಧಿ ಸ್ಥಳವನ್ನೂ ಅಭಿವೃದ್ಧಿ ಮಾಡಲಾಗುತ್ತಿದೆ’ ಎಂದು ಹೇಳಿದರು. 

ಇದಕ್ಕೂ ಮೊದಲು ಬೆಂಗಳೂರು ನಗರ ಶರಣ ಸಾಹಿತ್ಯ ಪರಿಷತ್ತು ಹಾಗೂ ಬೆಂಗಳೂರು ನಗರದ ಸರ್ವ ಸಂಘಟನೆಗಳ ಒಕ್ಕೂಟದ ಪರವಾಗಿ ರಂಗಕರ್ಮಿ ಕೆ.ವಿ. ನಾಗರಾಜಮೂರ್ತಿ ಅವರು ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿ, ‘ವಿಧಾನಸೌಧದ ಮುಂದೆ ಕಿತ್ತೂರು ಚನ್ನಮ್ಮ ಅವರ ಪ್ರತಿಮೆ ಪ್ರತಿಷ್ಠಾಪಿಸಬೇಕು. ಚನ್ನಮ್ಮ ಅವರ ಜನ್ಮದಿನ ನ.14 ಅದೇ ದಿನ ಜನ್ಮದಿನಾಚರಣೆ ಆಚರಿಸಬೇಕು. ಕಿತ್ತೂರು ನಗರವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಬೇಕು. ಚನ್ನಮ್ಮ ಅವರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪ್ರಥಮ ಮಹಿಳೆ ಎಂದು ಘೋಷಿಸಬೇಕು’ ಎಂದು ಆಗ್ರಹಿಸಿದರು. 

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಪ್ರಾರಂಭವಾದ ವಿಜಯ ಜ್ಯೋತಿ ಯಾತ್ರೆ ಇದೇ 23 ರಂದು ಕಿತ್ತೂರು ತಲುಪಲಿದೆ. ಬೆಳಗಾವಿ ಜಿಲ್ಲೆ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಸಚಿವ ಎಂ.ಟಿ.ಬಿ. ನಾಗರಾಜ್, ಶಾಸಕ ಮಹಾಂತೇಶ ದೊಡ್ಡಗೌಡರ, ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಇದ್ದರು. 

‘ಹೊಸ ಅರಮನೆ ನಿರ್ಮಾಣಕ್ಕೆ ನಿರ್ಧಾರ’

‘ಸ್ವಾತಂತ್ರ್ಯ ಹೋರಾಟದ ಮೊದಲ ವೀರ ಮಹಿಳೆ ಕಿತ್ತೂರು ರಾಣಿ ಚನ್ನಮ್ಮ ಎಂಬುದಾಗಿ ಕರ್ನಾಟಕ ವಿಶ್ವವಿದ್ಯಾಲಯ ಗೆಜೆಟಿಯರ್‌ನಲ್ಲಿ ಪ್ರಕಟಗೊಂಡಿದೆ. ಇದನ್ನು ‘ಭಾರತೀಯ ರಾಷ್ಟ್ರೀಯ ಅಭಿಲೇಖಾಗಾರ’ ಸಂಸ್ಥೆಗೆ ಕಳಿಸಿಕೊಟ್ಟು, ನೋಂದಣಿ ಮಾಡಿಸುತ್ತೇವೆ. ಕಿತ್ತೂರಿನಲ್ಲಿ ಶಿಥಿಲಗೊಂಡಿರುವ ಅರಮನೆಯನ್ನು ಗಟ್ಟಿಗೊಳಿಸಿ, ಪಕ್ಕದಲ್ಲೇ ಹೊಸ ಅರಮನೆಯನ್ನೂ ಕಟ್ಟಿಸಲು ತೀರ್ಮಾನ ಮಾಡಲಾಗಿದೆ’ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

‘ಕಿತ್ತೂರನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಬೈಲಹೊಂಗಲ, ಸಂಗೊಳ್ಳಿ ಸೇರಿ ಕಿತ್ತೂರು ಸಂಸ್ಥಾನದ ಪ್ರಾಚೀನ ಕುರುಹುಗಳನ್ನು ಅಭಿವೃದ್ಧಿಪಡಿಸಲಾಗುವುದು’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು