ಶುಕ್ರವಾರ, ಮಾರ್ಚ್ 31, 2023
22 °C

ಡಾ.ವಿಷ್ಣುವರ್ಧನ್ ಸ್ಮಾರಕ: 13 ವರ್ಷಗಳ ಹೋರಾಟ ಸಾರ್ಥಕ, ಅಭಿಮಾನಿಗಳ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಚಲನಚಿತ್ರ ನಟ ದಿ. ವಿಷ್ಣುವರ್ಧನ್‌ ಅವರ ಸ್ಮಾರಕದ ಉದ್ಘಾಟನೆಗೆ ಮುಹೂರ್ತ ನಿಗದಿಯಾಗಿರುವುದು ಅವರ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

ಕಲಿಕೆಯ ತಾಣವಾಗುವ ಮಹತ್ವಾಕಾಂಕ್ಷೆಯೊಂದಿಗೆ ಜಿಲ್ಲೆಯ ಎಚ್‌.ಡಿ.ಕೋಟೆ ರಸ್ತೆಯಲ್ಲಿರುವ ಉದ್ಬೂರು ಬಳಿಯ ಹಾಲಾಳು ಗ್ರಾಮದಲ್ಲಿ ‘ಸಾಹಸ ಸಿಂಹ ದಿ. ಡಾ.ವಿಷ್ಣುವರ್ಧನ್ ಸ್ಮಾರಕ ಭವನ’ ನಿರ್ಮಾಣವಾಗಿದೆ. ಅಂತಿಮ ಹಂತದ ಕಾಮಗಾರಿಗಳು ಪ್ರಗತಿಯಲ್ಲಿವೆ.

2020ರ ಸೆ.15ರಂದು ಸ್ಮಾರಕ ನಿರ್ಮಾಣಕ್ಕೆ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವರ್ಚುವಲ್‌ ವೇದಿಕೆಯಲ್ಲಿ ಭೂಮಿ ಪೂಜೆ ನೆರವೇರಿಸಿದ್ದರು. ಕರ್ನಾಟಕ ಪೊಲೀಸ್ ವಸತಿ ನಿಗಮವು ₹ 11 ಕೋಟಿ ವೆಚ್ಚದಲ್ಲಿ ಸ್ಮಾರಕ ನಿರ್ಮಿಸಿದೆ. 5 ಎಕರೆಯಲ್ಲಿ ಸ್ಮಾರಕವಿದೆ. ಎರಡು ಎಕರೆಯಲ್ಲಿ ತಳಮಹಡಿ, ನೆಲಮಹಡಿ ಸೇರಿ ಒಟ್ಟು 27ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಸ್ಮಾರಕ ಕಟ್ಟಡ ತಲೆ ಎತ್ತಿದೆ. ವಿಷ್ಣುವರ್ಧನ್‌ ಅವರು ನಿಂತಿರುವ ಭಂಗಿಯ ಪ್ರತಿಮೆಯನ್ನು ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ಕೃಷ್ಣಶಿಲೆಯಲ್ಲಿ ಕೆತ್ತಿದ್ದಾರೆ. ಸ್ಮಾರಕವನ್ನು ‘ಎಂ9 ಡಿಸೈನ್ ಸ್ಟುಡಿಯೊ’ದ ನಿಶ್ಚಲ್ ಅವರು ವಿನ್ಯಾಸಗೊಳಿಸಿದ್ದಾರೆ. ಸಭಾಂಗಣ, ಕಲಾವಿದರ ಕೊಠಡಿ, ತರಗತಿಗಳೂ ಇವೆ. ಸ್ಮಾರಕ ಉದ್ಘಾಟನೆಗೊಳ್ಳುವಾಗ ಇಲ್ಲಿ ವಿಷ್ಣುವರ್ಧನ್‌ ಅವರ ಚಿತಾಭಸ್ಮವನ್ನೂ ತಂದಿಡಲಾಗುತ್ತದೆ. ಮೈಸೂರಿನ ಪ್ರವಾಸಿ ತಾಣಗಳ ಪಟ್ಟಿಗೆ ಮತ್ತೊಂದು ಸೇರ್ಪಡೆಯಾಗಲಿದೆ.

‘ಜ.29ರಂದು ಬೆಳಿಗ್ಗೆ 11ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್ ಸೇರಿದಂತೆ ಜನಪ್ರತಿನಿಧಿಗಳು ಭಾಗವಹಿಸುವರು. ಆರಂಭದಲ್ಲಿ ಪೋಟೊ ಗ್ಯಾಲರಿ, ಪ್ರತಿಮೆ, ಥಿಯೇಟರ್‌ ಉದ್ಘಾಟಿಸುವರು. ಬಳಿಕ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಥಿಯೇಟರ್ ಒಳಗೆ 250 ಮಂದಿಯಷ್ಟೆ ಕುಳಿತುಕೊಳ್ಳಲು ಸಾಧ್ಯವಿರುವುದರಿಂದ ಹೊರಭಾಗದಲ್ಲಿ ಕಾರ್ಯಕ್ರಮ ನಡೆಸುವ ಸಂಬಂಧ ಶೀಘ್ರದಲ್ಲೇ ಸಭೆ ನಡೆಸಿ ತೀರ್ಮಾನಿಸಲಾಗುವುದು’ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಡಾ.ವಿಷ್ಣುವರ್ಧನ್‌ ಪ್ರತಿಷ್ಠಾನದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘13 ವರ್ಷಗಳ ಹೋರಾಟ, ಸಂಘರ್ಷದ ಬಳಿಕ ಸಂತಸದ ದಿನ ಬಂದಿದೆ. ಸ್ಮಾರಕದ ಸ್ಥಳಕ್ಕೆ ಭಾರತಿ ವಿಷ್ಣುವರ್ಧನ್‌ ಅವರೊಂದಿಗೆ ಆಗಾಗ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳುತ್ತಿದ್ದೇವೆ’ ಎಂದು ವಿಷ್ಣುವರ್ಧನ್‌ ಅಳಿಯ, ನಟ ಅನಿರುದ್ಧ್‌ ‘ಪ್ರಜಾವಾಣಿ’ಗೆ ತಿಳಿಸಿದರು.‌

‘ಒಳ್ಳೆಯವರಿಗೆ ತಡವಾಗಿ ಒಳ್ಳೆಯದಾಗುತ್ತದೆ, ಅದು ಶಾಶ್ವತವಾಗಿರುತ್ತದೆ ಎಂದು ವಿಷ್ಣುವರ್ಧನ್‌ ಹೇಳುತ್ತಿದ್ದರು. ಅದರಂತೆ ಅಂತರರಾಷ್ಟ್ರೀಯ ಮಟ್ಟದ ಸ್ಮಾರಕ ಚೆನ್ನಾಗಿ ಮೂಡಿಬಂದಿದೆ. ಅವರ ಕೋಟ್ಯಂತರ ಅಭಿಮಾನಿಗಳಿಗೆ ಖುಷಿ ನೀಡಿದೆ’ ಎಂದು ವಿಷ್ಣು ಸೇನಾ ಜಿಲ್ಲಾ ಮತ್ತು ಗ್ರಾಮಾಂತರ ಘಟಕದ ಅಧ್ಯಕ್ಷ, ನಿರ್ಮಾಪಕ ಎಂ.ಡಿ.ಪಾರ್ಥಸಾರಥಿ ಹೇಳಿದರು.

2010–11ರಲ್ಲೇ ಅನುದಾನ
2009ರ ಡಿ.30ರಂದು ಮೈಸೂರಿನಲ್ಲಿ ಮೃತಪಟ್ಟ ವಿಷ್ಣುವರ್ಧನ್‌ ಅಂತ್ಯಕ್ರಿಯೆ ಬೆಂಗಳೂರಿನ ಅಭಿಮಾನ್ ಸ್ಟುಡಿಯೊದಲ್ಲಿ ನೆರವೇರಿತ್ತು. ಅಭಿಮಾನಿಗಳು, ಕುಟುಂಬದವರ ಒತ್ತಾಸೆಯಂತೆ ಸ್ಮಾರಕ ಭವನ ನಿರ್ಮಾಣಕ್ಕಾಗಿ ಅಂದಿನ ಸರ್ಕಾರ 2010–11ರ ಬಜೆಟ್‌ನಲ್ಲಿ ₹ 11 ಕೋಟಿ ಅನುದಾನ ಮೀಸಲಿರಿಸಿ ಜಾಗ ಘೋಷಿಸಿತ್ತು.

ಆರಂಭದಿಂದಲೂ ಸ್ಮಾರಕಕ್ಕೆ ಜಾಗದ ತಕರಾರು ಕಂಟಕವಾಗಿ ಕಾಡಿತು. ಕೊನೆಗೆ, ಭಾರತಿ ಅವರು ಮೈಸೂರಿನಲ್ಲೇ ಜಾಗ ಕೋರಿದ ಬಳಿಕ 5 ಎಕರೆ ಭೂಮಿಯನ್ನು ಸರ್ಕಾರ ನೀಡಿತು. ವಿಷ್ಣುಗೆ ಪ್ರಿಯವಾದ ಮೈಸೂರಿನಲ್ಲೇ ಸ್ಮಾರಕ ಮೈದಳೆದಿದೆ.

ಮೈಸೂರಿನಿಂದ ಸ್ಮಾರಕದವರೆಗೆ ಮೆರವಣಿಗೆ
‘ಜ.29ರಂದು ಬೆಳಿಗ್ಗೆ ಅಭಿಮಾನಿಗಳು ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಿಂದ ವಿಷ್ಣುವರ್ಧನ್‌ ಭಾವಚಿತ್ರವನ್ನು ಹೂವಿನ ಪಲ್ಲಕ್ಕಿಯಲ್ಲಿರಿಸಿ ಬೆಳ್ಳಿ ರಥದಲ್ಲಿ ಸ್ಮಾರಕದವರೆಗೆ ಮೆರವಣಿಗೆ ಮಾಡಲಾಗುವುದು. ಒಂದು ಲಕ್ಷ ಜನ ಸೇರಿಸುವ ಉದ್ದೇಶವಿದೆ. ಈ ಬಗ್ಗೆ ಸಭೆ ನಡೆಸಿ ಯೋಜನೆ ರೂಪಿಸಲಾಗುವುದು’ ಎಂದು ಎಂ.ಡಿ.ಪಾರ್ಥಸಾರಥಿ ಹೇಳಿದರು.

‘ನಮ್ಮ ಮನವಿಗಳನ್ನು ಸರ್ಕಾರ ಈಡೇರಿಸಿದೆ. ಕೋಟೆ ಆಂಜನೇಯ ದೇವಸ್ಥಾನದ ಬಳಿಯ ಉದ್ಯಾನಕ್ಕೆ ವಿಷ್ಣುವರ್ಧನ್‌ ಉದ್ಯಾನ ಎಂದು ಅಧಿಕೃತವಾಗಿ ನಾಮಕರಣ ಮಾಡಬೇಕು’ ಎಂದು ಕೋರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು