ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ: ತರಾತುರಿಯಲ್ಲಿ ಆನ್‌ಲೈನ್ ಸಂದರ್ಶನ

ಕೇಂದ್ರದ ಯೋಜನಾ ನಿರ್ದೇಶಕರ ನೇಮಕಾತಿ
Last Updated 6 ಆಗಸ್ಟ್ 2020, 20:06 IST
ಅಕ್ಷರ ಗಾತ್ರ
ADVERTISEMENT
""

ಮೈಸೂರು: ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕರ ಅವಧಿ ಇನ್ನೂ ನಾಲ್ಕು ತಿಂಗಳು ಇರುವಾಗ ಆ ಸ್ಥಾನಕ್ಕೆ ಬೇರೊಬ್ಬರನ್ನು ನೇಮಕ ಮಾಡಲು ಭಾರತೀಯ ಭಾಷಾ ಸಂಸ್ಥಾನವು (ಸಿಐಐಎಲ್‌) ತರಾತುರಿಯಲ್ಲಿ ಆನ್‌ಲೈನ್‌ ಮೂಲಕ ಸಂದರ್ಶನ ನಡೆಸಲು ಮುಂದಾಗಿದೆ.

ಸಿಐಐಎಲ್‌ ನಿರ್ದೇಶಕ ಡಾ.ಡಿ.ಜಿ.ರಾವ್‌, ಸೆಪ್ಟೆಂಬರ್‌ನಲ್ಲಿ ನಿವೃತ್ತರಾಗಲಿದ್ದು, ಇದೇ 28ರೊಳಗೆ ಮಾತೃ ಸಂಸ್ಥೆಯಾದ ಪ್ರಾದೇಶಿಕ ಶಿಕ್ಷಣ ಸಂಸ್ಥೆಗೆ ತೆರಳುವಂತೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಂಎಚ್‌ಆರ್‌ಡಿ) ಸೂಚಿಸಿದೆ. ಹೀಗಿರುವಾಗ, ಆ.11ರಂದು ಬೆಳಿಗ್ಗೆ 10ಕ್ಕೆ ಸಂದರ್ಶನ ಕರೆದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಈ ಹಿಂದೆ ಎಂಎಚ್‌ಆರ್‌ಡಿ ನಿಯಮಗಳನ್ನು ಉಲ್ಲಂಘಿಸಿ, ಕೇಂದ್ರದ ಯೋಜನಾ ನಿರ್ದೇಶಕ ಹಾಗೂ ಸಂಶೋಧಕರ ಹುದ್ದೆಗಳಿಗೆ ನೇಮಕಾತಿ ಮಾಡಲು ಸಿಐಐಎಲ್‌ ನಿರ್ದೇಶಕರು ಮಾರ್ಚ್‌ 5ರಂದು ಅಧಿಸೂಚನೆ ಹೊರಡಿಸಿದ್ದರು. ಇದು ಸಾಹಿತಿಗಳು ಹಾಗೂ ಕನ್ನಡಪರ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿತ್ತು. ಇದಕ್ಕೆ ಮಣಿದಿದ್ದ ನಿರ್ದೇಶಕರು, ಯಥಾಸ್ಥಿತಿ ಕಾಯ್ದುಕೊಳ್ಳುವುದಾಗಿ ತಿಳಿಸಿದ್ದರು.

‘ಯಾವುದೇ ನೇಮಕಾತಿ ನಡೆಸಬೇಕಾದರೆ ಶಾಸ್ತ್ರೀಯ ಕನ್ನಡ ಕೇಂದ್ರದ ‌ಯೋಜನಾ ಮೇಲುಸ್ತುವಾರಿ ಮಂಡಳಿಯಲ್ಲಿ (ಪಿಎಂಬಿ) ಅನುಮೋದನೆ ಪಡೆಯಬೇಕು. ಅರ್ಜಿಗಳ ಅಂತಿಮ ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ಆದರೆ, ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ನೇಮಕಾತಿ ನಡೆಸಲಾಗುತ್ತಿದೆ. ಸಂದರ್ಶನಕ್ಕೆ ಹಾಜರಾಗುವಂತೆ ಐವರಿಗೆ ಆಹ್ವಾನ ನೀಡಲಾಗಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಸಿಐಐಎಲ್‌ ಸಿಬ್ಬಂದಿಯೊಬ್ಬರು ಹೇಳಿದರು.

ಭಾರತೀಯ ಭಾಷಾ ಸಂಸ್ಥಾನ (ಸಿಐಐಎಲ್‌)

ಪ್ರತಿಕ್ರಿಯೆ ಪಡೆಯಲು ಸಿಐಐಎಲ್‌ ನಿರ್ದೇಶಕ ಡಾ.ಡಿ.ಜಿ.ರಾವ್‌ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ನೇಮಕಾತಿ ಅಧಿಸೂಚನೆಯ ಜಾಹೀರಾತು ನೀಡಿದ್ದೆವು. ಅದರಂತೆ ಈಗ ಸಂದರ್ಶನ ಕರೆಯಲಾಗಿದೆ. ಈಗ ಬ್ಯುಸಿ ಇದ್ದೇನೆ’ ಎಂದಷ್ಟೇ ಹೇಳಿ ಕರೆ ಕಡಿತಗೊಳಿಸಿದರು.

ಇಂದು ಸಭೆ, ಚರ್ಚೆ

‘‌ಸಿಐಐಎಲ್‌ ನಿರ್ದೇಶಕರು ಪಿಎಂಬಿ ಸದಸ್ಯರ ಗಮನಕ್ಕೆ ತಾರದೆ ನೇಮಕಾತಿ ಅಧಿಸೂಚನೆ ಹೊರಡಿಸಿದ್ದಾರೆ. ಶಾಸ್ತ್ರೀಯ ಕನ್ನಡ ಕೇಂದ್ರಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಲು ಕನ್ನಡ ಮತ್ತು ಸಂಸ್ಕೃತಿ ಸಚಿವರ ನೇತೃತ್ವದಲ್ಲಿ ಆ.7ರಂದು ಬೆಂಗಳೂರಿನಲ್ಲಿ ಅಧಿಕಾರಿಗಳ ಸಭೆ ಕರೆಯಲಾಗಿದೆ. ಸಭೆಯಲ್ಲಿ ಈ ಎಲ್ಲ ವಿಷಯಗಳ ಬಗ್ಗೆ ಚರ್ಚಿಸಲಾಗುವುದು’ ಎಂದು ಪಿಎಂಬಿ ಸದಸ್ಯರೂ ಆದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT