ರೈತ ಮೋರ್ಚಾ ಕಾರ್ಯಕಾರಿಣಿಯಲ್ಲಿ ಕನ್ನಡ ಮಾಯ: ಜೆಡಿಎಸ್

ಬೆಳಗಾವಿ: ನಗರದಲ್ಲಿ ಬಿಜೆಪಿ ರೈತ ಮೋರ್ಚಾ ಜ.29, 30ರಂದು ಸಂಘಟಿಸಿದ್ದ ರಾಷ್ಟ್ರೀಯ ಕಾರ್ಯಕಾರಣಿಯ ವೇದಿಕೆಯಲ್ಲಿ ಕನ್ನಡ ಬಳಸದಿರುವುದಕ್ಕೆ ಜೆಡಿಎಸ್ ಆಕ್ಷೇಪ ವ್ಯಕ್ತಪಡಿಸಿದೆ.
‘ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಬಿಜೆಪಿ ರೈತ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಣಿಯ ವೇದಿಕೆಯಲ್ಲಿ ದುರ್ಬೀನು ಹಾಕಿ ಹುಡುಕಿದರೂ ಕನ್ನಡ ಸಿಗದಿರುವುದು ನಾಚಿಕೆಗೇಡಿನ ಸಂಗತಿ. ನಮ್ಮ ರಾಜ್ಯದಲ್ಲಿ ನಡೆಯುವ ಸಭೆಯಲ್ಲಿ ಒಂದು ಸಾಲು ಕನ್ನಡ ಬಳಸದೆ, ಒಕ್ಕೂಟ ವ್ಯವಸ್ಥೆಯ ಗೌರವವನ್ನು ಗಾಳಿಗೆ ತೂರಿರುವುದು ಖಂಡನಾರ್ಹ’ ಎಂದು ಜೆಡಿಎಸ್ ಪಕ್ಷದ ಟ್ವಿಟರ್‌ನಲ್ಲಿ ಮಂಗಳವಾರ ಟ್ವೀಟ್ ಮಾಡಲಾಗಿದೆ.
ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ @BJP4Karnataka ಕಿಸಾನ್ ಮೋರ್ಚಾ ಕಾರ್ಯಕಾರಣಿ ಸಭೆಯ ವೇದಿಕೆಯಲ್ಲಿ ದುರ್ಬೀನು ಹಾಕಿ ಹುಡುಕಿದರೂ ಕನ್ನಡ ಸಿಗದಿರುವುದು ನಾಚಿಕೆಗೇಡಿನ ಸಂಗತಿ. ನಮ್ಮ ರಾಜ್ಯದ ಭಾಗದಲ್ಲಿ ನಡೆಯುವ ಸಭೆಯಲ್ಲಿ ಒಂದು ಸಾಲು ಕನ್ನಡ ಬಳಸದೆ ಒಕ್ಕೂಟ ವ್ಯವಸ್ಥೆಯ ಗೌರವವನ್ನು ಗಾಳಿಗೆ ತೂರಿರುವುದು ಖಂಡನಾರ್ಹ.
1/3 pic.twitter.com/qvWNWAOSMq— Janata Dal Secular (@JanataDal_S) January 31, 2023
‘ದೆಹಲಿಯ ಹೈಕಮಾಂಡ್ ಓಲೈಸಲು ಇಂತಹ ಆತ್ಮಗೌರವವಿಲ್ಲದ ನಡೆಯನ್ನು ಇನ್ನೂ ಎಷ್ಟು ದಿನ ಮುಂದುವರಿಸುತ್ತೀರಿ ಸಿ.ಟಿ.ರವಿ ಅವರೇ? ಕನ್ನಡ ಭಾಷೆ, ಜಲ, ಕನ್ನಡಿಗರ ಬದುಕು, ಕರುನಾಡ ಏಳ್ಗೆ ಎಲ್ಲದರ ಬಗ್ಗೆಯೂ ಇಷ್ಟು ತಾತ್ಸಾರದ ನಡೆ ದುರಭಿಮಾನದಿಂದ ಕೂಡಿದೆ. ಹೈಕಮಾಂಡ್ ಗುಲಾಮಿ ಪಕ್ಷ ಎನ್ನಲು ಇದಕ್ಕಿಂತ ಹೆಚ್ಚೇನು ಬೇಕು?’ ಎಂದು ಪ್ರಶ್ನಿಸಿದೆ.
‘ಕನ್ನಡ ಎನೆ ಕುಣಿದಾಡುವುದೆನ್ನೆದೆ, ಕನ್ನಡ ಎನೆ ಕಿವಿ ನಿಮಿರುವುದು ಎಂದ ಕುವೆಂಪು ಅವರ ನಾಡಿನ ನಮಗೆ ಕಿಂಚಿತ್ತಾದರೂ ಸ್ವಾಭಿಮಾನ ಇರಬೇಕು. ನಿಮ್ಮ ಕನ್ನಡ ವಿರೋಧಿ ನಡೆಗೆ ಜನತೆ ಸೂಕ್ತ ಉತ್ತರ ನೀಡುತ್ತಾರೆ. ರಾಜಕೀಯ ಲಾಭ-ನಷ್ಟದ ಕಾರಣಕ್ಕೆ ನಮ್ಮ ಸ್ವಾಭಿಮಾನವನ್ನು ಅಡ ಇಡುವ ಕೆಲಸ ಘನತೆ ತರುವಂತದಲ್ಲ’ ಎಂದು ಟೀಕಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.