ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸಾಪ -ಶತಮಾನದ ಇತಿಹಾಸ: ಮಹಿಳೆಗಿಲ್ಲ ಅವಕಾಶ

ಕಸಾಪ ಅಧ್ಯಕ್ಷ ಸ್ಥಾನವನ್ನು ಈವರೆಗೂ ಮಹಿಳೆಯರು ಅಲಂಕರಿಸಿಲ್ಲ
Last Updated 15 ನವೆಂಬರ್ 2021, 0:59 IST
ಅಕ್ಷರ ಗಾತ್ರ

ಬೆಂಗಳೂರು: ಶತಮಾನದ ಇತಿಹಾಸವಿರುವ ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷ ಸ್ಥಾನವನ್ನು ಈವರೆಗೂ ಮಹಿಳೆಯರು ಅಲಂಕರಿಸಿಲ್ಲ. ಹೀಗಾಗಿ, ಕಸಾಪ ರಾಜ್ಯಘಟಕದ ವಿವಿಧ ಹುದ್ದೆಗಳಲ್ಲಿ ಅವರಿಗೂ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಎಂಬ ಕೂಗು ಚುನಾವಣೆ ವೇಳೆ ಪ್ರತಿಧ್ವನಿಸುತ್ತಿದೆ.

ಪರಿಶಿಷ್ಟರು ಹಾಗೂ ಹಿಂದುಳಿದ ಸಮುದಾಯದವರಿಗೆ ಅವಕಾಶಗಳು ಸಿಗುತ್ತಿಲ್ಲ ಎಂಬ ಆರೋಪ ಕೂಡ ಸಾಂಸ್ಕೃತಿಕ ವಲಯದಲ್ಲಿವೆ. 107 ವರ್ಷಗಳ ಇತಿಹಾಸವಿರುವ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಈ ಬಾರಿ 21 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಅವರಲ್ಲಿ ಒಬ್ಬರು ಮಾತ್ರ ಮಹಿಳೆ.

1915ರಲ್ಲಿ ಸ್ಥಾಪನೆಯಾದ ಪರಿಷತ್ತಿಗೆ ಎಚ್.ವಿ. ನಂಜುಂಡಯ್ಯ ಪ್ರಥಮ ಅಧ್ಯಕ್ಷರಾಗಿದ್ದರು. ಈವರೆಗೆ ಪರಿಷತ್ತು 25 ಅಧ್ಯಕ್ಷರನ್ನು ಕಂಡಿದ್ದು, ಎಲ್ಲರೂ ಪುರುಷರೇ. ಪ್ರತಿ ಬಾರಿ ಚುನಾವಣೆ ಬಂದಾಗಲೂ ಮಹಿಳೆಯರಿಗೆ ಅವಕಾಶ ನೀಡಬೇಕೆಂಬ ಆಗ್ರಹ ಕೇಳಿಬರುತ್ತಿದೆ. ಈವರೆಗೆ ಪರಿಶಿಷ್ಟ ಸಮುದಾಯದ ಒಬ್ಬರೂ ಅಧ್ಯಕ್ಷರಾಗಿಲ್ಲ. ಹೀಗಾಗಿ, ಪರಿಷತ್ತಿನ ಚುನಾವಣೆಯಲ್ಲಿ ಅಭ್ಯರ್ಥಿಯ ಜಾತಿಯೂ ಮುಖ್ಯವಾಗುತ್ತದೆ ಎಂಬ ಆರೋಪವಿದೆ.

ಮೀಸಲಾತಿ ನೀಡಿ:‘ಪರಿಷತ್ತಿನಲ್ಲಿ ಸಾಂಸ್ಕೃತಿಕ ರಾಜಕಾರಣವಿದೆ. ಮಹಿಳಾ ಸಮುದಾಯಕ್ಕೆ ಆದ್ಯತೆ ಸಿಗುತ್ತಿಲ್ಲ. ಇನ್ನೊಂದೆಡೆ ಚುನಾವಣೆಯಲ್ಲಿ ಸಮರ್ಥ ಮಹಿಳೆಯರು ಸ್ಪರ್ಧಿಸಿದ್ದಾರಾ ಎಂಬ ಪ್ರಶ್ನೆಗಳೂ ಹುಟ್ಟುತ್ತವೆ. ಪರಿಷತ್ತಿನ ಚುನಾವಣೆಯನ್ನು ಎದುರಿಸಬೇಕಾದರೆ ಸಾಂಸ್ಕೃತಿಕ ರಾಜಕಾರಣದಲ್ಲಿ ಪಳಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲವಾದಲ್ಲಿ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗುವುದಿಲ್ಲ. ಪರಿಷತ್ತಿನ ಬೈಲಾ ಬದಲಿಸಿ, ಮಹಿಳೆಗೆ ಮೀಸಲಾತಿ ನೀಡಬೇಕು’ ಎಂದು ಸಾಹಿತಿ ಡಾ. ಅರವಿಂದ ಮಾಲಗತ್ತಿ ತಿಳಿಸಿದರು.

ಬೈಲಾ ಬದಲಾಯಿಸಿ:‘ಸಾಹಿತ್ಯ ಪರಿಷತ್ತು ತನ್ನ ಕಾರ್ಯಕ್ಷೇತ್ರ ವಿಸ್ತರಿಸಿಕೊಂಡಿದೆ. ಪರಿಷತ್ತಿನ ಸಂಸ್ಥಾಪಕರಾದನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಮೂಲ ಆಶಯ ಮರೆಯಾಗುತ್ತಿದೆ. ಜಾತಿ ಕೇಂದ್ರಿತ ಪರಿಷತ್ತಾಗಿ ಮಾರ್ಪಾಡು ಆಗುತ್ತಿದೆ. ಪರಿಷತ್ತಿನ ಬೈಲಾವನ್ನು ಬದಲಾಯಿಸಬೇಕಿದೆ. ಈಗಿರುವ ಚುನಾವಣೆ ವ್ಯವಸ್ಥೆಯಲ್ಲಿ ಪಾರದರ್ಶಕತೆ ನಿರೀಕ್ಷಿಸಲು ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ರಾಜಕೀಯ ಪಕ್ಷಗಳೂ ಹಸ್ತಕ್ಷೇಪ ಮಾಡುತ್ತಿರುವುದು ವಿಪರ್ಯಾಸ. ಹಣ, ಜಾತಿಯ ಲೆಕ್ಕಾಚಾರಗಳು ನಡೆಯುತ್ತಿವೆ. ಹೀಗಾಗಿ, ಮಹಿಳೆಯರು ಸ್ಪರ್ಧಿಸಲು ಆಸಕ್ತಿ ತೋರುತ್ತಿಲ್ಲ’ ಎಂದು ಸಾಹಿತಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ಧರಾಮಯ್ಯ ತಿಳಿಸಿದರು.

ರಾಜಕೀಯ ಸ್ವರೂಪ: ‘ಸಾಹಿತ್ಯ ಪರಿಷತ್ತಿನ ಚುನಾವಣೆಯು ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಮಹಿಳೆಯರಿಗೆ ಅವಕಾಶ ಸಿಗುತ್ತಿಲ್ಲ. ಈಗಿನ ವಾತಾವರಣದಲ್ಲಿ ಮಹಿಳೆಯರು ಪರಿಷತ್ತಿನ ಚುನಾವಣೆ ಎದುರಿಸುವುದು ಕಷ್ಟ. ಹೆಣ್ಣಿನ ಸಂವೇದನೆಯ ಸ್ಪರ್ಶ ಪರಿಷತ್ತಿಗೆ ಸಿಗಬೇಕಿದೆ. ಸಾಂಸ್ಕೃತಿಕ ಹಾಗೂ ಶಿಕ್ಷಣ ಕ್ಷೇತ್ರದ ವಿವಿಧ ಸಂಸ್ಥೆಗಳ ಅವಕಾಶ ಸಿಕ್ಕಾಗ ಮಹಿಳೆಯರು ಸಮರ್ಥವಾಗಿ ಮುನ್ನಡೆಸಿದ್ದಾರೆ. ಹಾಗಾಗಿ, ಮಹಿಳೆಯರಿಗೆ ಪರಿಷತ್ತಿನಲ್ಲಿ ಅವಕಾಶ ನೀಡಬೇಕು’ ಎಂದು ಲೇಖಕಿ ವಿನಯಾ ಒಕ್ಕುಂದ ಆಗ್ರಹಿಸಿದರು.

ಅಧಿಕ ಖರ್ಚು: ‘ಪರಿಷತ್ತಿನ ಚುನಾವಣೆಯಲ್ಲಿ ಅಭ್ಯರ್ಥಿಗಳು ಅಧಿಕ ಹಣ ಖರ್ಚು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಮಹಿಳಾ ಅಭ್ಯರ್ಥಿಗಳಿಗೆ ಬೆಂಬಲವೂ ಸಿಗುತ್ತಿಲ್ಲ.ಹೀಗಾಗಿ, ಮಹಿಳೆಯರು ಸ್ಪರ್ಧಿಸಲು ಹಿಂದೇಟು ಹಾಕುತ್ತಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳಂತೆ ಕಸಾಪ ಚುನಾವಣೆಯಲ್ಲೂ ಕೆಲ ವರ್ಷಗಳು ‌ಮೀಸಲಾತಿ ನೀಡಬೇಕು’ ಎಂದು ಲೇಖಕಿ ಕೆ. ಷರೀಫಾ ತಿಳಿಸಿದರು

‘ಕಸಾಪ ಸ್ಥಿತಿಗತಿ ಸುಧಾರಣೆ’
ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಿತಿಗತಿ ಕೆಟ್ಟುಹೋಗಿದೆ. ವ್ಯವಸ್ಥೆಯಲ್ಲಿ ಪಾರದರ್ಶಕತೆ ತಂದು, ಜನಪರ ಪರಿಷತ್ತಾಗಿ ಮಾರ್ಪಡಿಸುತ್ತೇನೆ. 5 ವರ್ಷಗಳಿಗೆ ಏರಿಸಿರುವ ಅಧ್ಯಕ್ಷ ಸ್ಥಾನದ ಅವಧಿಯನ್ನು 3 ವರ್ಷಗಳಿಗೆ ಇಳಿಕೆ ಮಾಡುತ್ತೇನೆ. ಬೆಳಗಾವಿಯಲ್ಲಿ ಪರಿಷತ್ತಿನ ಶಾಖೆ ಪ್ರಾರಂಭಿಸಿ, ಕನ್ನಡಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಈ ಮೂಲಕ ಮರಾಠಿಗರ ಪ್ರಾಬಲ್ಯವನ್ನು ಹತ್ತಿಕ್ಕುತ್ತೇನೆ. ಸದಸ್ಯತ್ವ ಶುಲ್ಕವನ್ನು ₹ 100ಕ್ಕೆ ಇಳಿಸಿ, ನನ್ನ ಅವಧಿಯಲ್ಲಿ ಸದಸ್ಯರ ಸಂಖ್ಯೆಯನ್ನು 10 ಲಕ್ಷಕ್ಕೆ ಏರಿಸುವ ಗುರಿ ಹಾಕಿಕೊಂಡಿದ್ದೇನೆ.
-ಪ್ರೊ.ಶಿವರಾಜ ಪಾಟೀಲ್, ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ

‘ಜಿಲ್ಲಾವಾರು ಪುಸ್ತಕ ಪ್ರಕಟಣೆ’
ಸಾಹಿತಿಗಳ ಪುಸ್ತಕಗಳನ್ನು ಜಿಲ್ಲಾವಾರು ಹಂತದಲ್ಲಿ ಪ್ರಕಟಿಸಲು ಯೋಜನೆ ಹಮ್ಮಿಕೊಳ್ಳಲಾಗುವುದು. ಸಾಹಿತಿಗಳಿಂದ ಸಾಹಿತ್ಯ ಪರಿಷತ್ತು ನಿರ್ಮಾಣವಾಗಿದೆ. ಅಲ್ಲಿ ಬೇರೆಯವರು ರಾಜಕೀಯ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಕ್ರಮವಹಿಸುತ್ತೇನೆ. ಕನ್ನಡ ಸಾಹಿತ್ಯವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಶ್ರಮಿಸುತ್ತೇನೆ. ಸಾಹಿತಿಗಳನ್ನು ಪ್ರೋತ್ಸಾಹಿಸಿ, ಉತ್ತಮ ಕೃತಿಗಳನ್ನು ಪ್ರಕಟಿಸಲು ಆದ್ಯತೆ ನೀಡುತ್ತೇನೆ. ಜಗತ್ತಿನ ಸಾಹಿತ್ಯಕ್ಕೆ ಕನ್ನಡಿಗರ ಕೊಡುಗೆ ಏನು ಎಂಬುದನ್ನು ತೋರಿಸಿಕೊಡುತ್ತೇನೆ.
-ಬಸವರಾಜ ಶಿ. ಹಳ್ಳೂರ, ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ

‘ಅಧ್ಯಕ್ಷ ಸ್ಥಾನದ ಅವಧಿ ಇಳಿಕೆ’
ಪರಿಷತ್ತಿನ ಕಾರ್ಯಕಾರಿ ಸಮಿತಿಯ ಅಧಿಕಾರಾವಧಿಯನ್ನು 5 ವರ್ಷಗಳಿಗೆ ಏರಿಕೆ ಮಾಡಿರುವುದು ತಪ್ಪು. ಬೈಲಾಕ್ಕೆ ತಿದ್ದುಪಡಿ ತಂದು, ಅಧಿಕಾರವಧಿಯನ್ನು ಮೂರು ವರ್ಷಗಳಿಗೆ ಇಳಿಕೆ ಮಾಡಲಾಗುವುದು. ಮತದಾರರ ಪಟ್ಟಿಯನ್ನು ಪರಿಷ್ಕರಿಸಿ, ಮೃತರ ಹೆಸರನ್ನು ತೆಗೆದುಹಾಕಲಾಗುವುದು. ಚುನಾವಣೆ ವೆಚ್ಚಗಳಿಗೆ ಕಡಿವಾಣ ಹಾಕಲಾಗುವುದು. ಮಹಿಳೆಯರಿಗೂ ಆದ್ಯತೆ ನೀಡುತ್ತೇನೆ. ಪರಿಷತ್ತಿನ ಲೆಕ್ಕಪತ್ರವನ್ನು ಸ್ವತಂತ್ರ ಲೆಕ್ಕ ಪರಿಶೋಧಕರಿಂದ ಪರಿಶೀಲಿಸಿ, ತಪ್ಪು ಹಾಗೂ ಅವ್ಯವಹಾರ ಕಂಡುಬಂದಲ್ಲಿ ಶಿಕ್ಷೆಗೆ ಗುರಿಪಡಿಸಲಾಗುವುದು.
-ಪ್ರಮೋದ್ ಹಳಕಟ್ಟಿ, ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ

‘ಎಲ್ಲ ಭಾಗದವರಿಗೂ ಅವಕಾಶ’
ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಕನ್ನಡ ಭವನಗಳನ್ನು ನಿರ್ಮಿಸಲಾಗುವುದು. ವರ್ಷಪೂರ್ತಿ ಕನ್ನಡದ ಕಾರ್ಯಕ್ರಮಗಳನ್ನು ಆಯೋಜಿಸುತ್ತೇನೆ. ಬ್ಯಾಂಕಿಂಗ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿಯೂ ನಡೆಸಬೇಕಿದೆ. ಈ ಬಗ್ಗೆ ಧ್ವನಿಯೆತ್ತಿ, ಹೋರಾಟ ನಡೆಸಲಾಗುವುದು. ವೈದ್ಯಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕನ್ನಡ ಅನುಷ್ಠಾನಗೊಳ್ಳಬೇಕಿದೆ. ಆ ಬಗ್ಗೆಯೂ ಕ್ರಮವಹಿಸಲಾಗುವುದು. ಸಾಹಿತ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬೆಂಗಳೂರು ಮತ್ತು ಮೈಸೂರು ಭಾಗದವರಿಗೆ ಮಾತ್ರ ಹೆಚ್ಚಿನ ಅವಕಾಶಗಳು ಸಿಗುತ್ತಿವೆ. ಎಲ್ಲರಿಗೂ ಅವಕಾಶಗಳು ಸಿಗುವಂತಾಗಲು ಕ್ರಮವಹಿಸುತ್ತೇನೆ.
-ಕೆ. ರವಿ ಅಂಬೇಕೆರೆ, ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT