ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಮಿಡ್ನಾಪುರದಲ್ಲಿ ಕನ್ನಡಿಗ ಐಎಎಸ್‌ ಅಧಿಕಾರಿ ಕೆಂಪಹೊನ್ನಯ್ಯ

Last Updated 26 ನವೆಂಬರ್ 2021, 7:29 IST
ಅಕ್ಷರ ಗಾತ್ರ

ಮೈಸೂರು: ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಾಪುರ್‌ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿರುವ ಸಿ.ಎಚ್‌.ಕೆಂಪಹೊನ್ನಯ್ಯ ಅವರು ಸ್ನಾತಕೋತ್ತರ ಪದವಿವರೆಗೂ ಕನ್ನಡ ಮಾಧ್ಯಮದಲ್ಲಿಯೇ ಓದಿದವರು. ಯುಪಿಎಸ್‌ಸಿ ಪರೀಕ್ಷೆ
ಯನ್ನೂ ಕನ್ನಡದಲ್ಲೇ ಬರೆದು ಭಾರತೀಯ ಆಡಳಿತ ಸೇವೆಗೆ ಸೇರಿದವರು!

ಬ್ರೈಲ್‌ ಲಿಪಿಯಲ್ಲಿ ಜ್ಞಾನದ ಹುಡುಕಾಟ ನಡೆಸಿದ ಇವರು, ದಶಕದ ಹಿಂದೆಯೇ ಇ–ಪುಸ್ತಕ, ಧ್ವನಿಮುದ್ರಿಕೆಗಳು ಸೇರಿದಂತೆ ಡಿಜಿಟಲ್‌ ಮಾಧ್ಯಮಗಳನ್ನು ಬಳಿಸಿಕೊಂಡವರು. ಕನ್ನಡ ಕಲಿಕೆಯ ಜೊತೆಗೆ ಇತರ ಜ್ಞಾನಶಾಖೆಗಳ ಬಗ್ಗೆಯೂ ಅವರಿಗೆ ವಿಶೇಷ ಒಲವು.ಐಎಎಸ್‌ ಆದ ಕರ್ನಾಟಕದ ಮೊದಲ ಅಂಧ ಅಭ್ಯರ್ಥಿ, ಸಾವಿರಾರು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ.

ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಚೌಡನಕುಪ್ಪೆ ಗ್ರಾಮದ ಕೆಂಪಹೊನ್ನಯ್ಯ, ನಗರದ ಸರ್ಕಾರಿ ಅಂಧ ಮತ್ತು ಕಿವುಡು ಮಕ್ಕಳ ಶಾಲೆಯಲ್ಲಿ 1–10ನೇ ತರಗತಿವರೆಗೆ ಓದಿದರು. ಮಹಾರಾಜ ಕಾಲೇಜಿನಲ್ಲಿ ಪದವಿ, ಮುಕ್ತ ವಿಶ್ವವಿದ್ಯಾಲಯದದಿಂದ ಕನ್ನಡ ಎಂ.ಎ.ಪದವಿ ಪಡೆದಿದ್ದಾರೆ. ಮೈಸೂರು, ಎಚ್.ಡಿ.ಕೋಟೆ ಸರ್ಕಾರಿ ಪಿಯು ಕಾಲೇಜಿನಲ್ಲಿ 8 ವರ್ಷ ಕನ್ನಡ ಉಪನ್ಯಾಸಕರಾಗಿದ್ದರು. ಆಗಲೂ ಕನ್ನಡದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆ ವಿಶೇಷ ತರಗತಿಗಳನ್ನು ನಡೆಸಿದ್ದರು.

ಮೂರನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆ ಉತ್ತೀರ್ಣರಾದ ಅವರು, 2017ರ ಬ್ಯಾಚ್‌ನ ಐಎಎಸ್‌ ಅಧಿಕಾರಿ. ಕನ್ಯಾಶ್ರೀ, ನರೇಗಾ, ಮಾನವಿಕ್‌, ಲಕ್ಷ್ಮಿ ಭಂಡಾರ ಸೇರಿದಂತೆಬಂಗಾಳ ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ ಮಿಡ್ನಾಪುರ್‌ನಲ್ಲಿ ಮನೆಮಾತಾಗಿದ್ದಾರೆ.

‘ಬಡತನ, ಹಸಿವು, ಅವಮಾನ, ಸೋಲುಗಳೇ ಸ್ಪರ್ಧಾರ್ಥಿಗೆ ಸ್ಪೂರ್ತಿಯಾಗಬೇಕು. ಸಮಾಜ ಸೇವೆಯ ಹಂಬಲವೇ ಮುನ್ನಡೆಸುತ್ತದೆ. ಅಧಿಕಾರವು ಸೇವೆಗೆ ದೊರೆತ ಅವಕಾಶ’ ಎಂದು ಹೇಳಿದರು.

‘ಯುಪಿಎಸ್‌ಸಿ ಪರೀಕ್ಷೆ ಪಾಸಾದವರನ್ನು ಉತ್ತರ ಭಾರತದ ರಾಜ್ಯಗಳಲ್ಲಿ ಆನೆಯ ಮೇಲೆ ಕೂರಿಸಿ ಸಂಭ್ರಮಿಸುತ್ತಾರೆ. ನಮ್ಮಲ್ಲಿ ಕನಿಷ್ಠ ಹೊಗಳುವುದೂ ಇಲ್ಲ. ಕರ್ನಾಟಕದಲ್ಲಿ ಅಕ್ಷರಸ್ಥರು, ಉತೃಷ್ಟ ವಿಶ್ವವಿದ್ಯಾಲಯಗಳಿದ್ದರೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವವರಿಗೆ ಪ್ರೋತ್ಸಾಹವಿಲ್ಲ. ವಿಶ್ವವಿದ್ಯಾಲಯಗಳ ಸ್ಪರ್ಧಾತ್ಮಕ ಕೇಂದ್ರಗಳೂ ಜಡವಾಗಿವೆ’ ಎಂದರು.

‘ಇಂಗ್ಲಿಷ್‌ ಮತ್ತು ಹಿಂ‌ದಿಯಲ್ಲಿ ನಾಗರಿಕ ಸೇವಾ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳಿರುತ್ತವೆ. ಕನ್ನಡ ಸೇರಿದಂತೆ 22 ಭಾಷೆಗಳಿಗೂ ಸಮಾನ ಅವಕಾಶ ನೀಡಬೇಕೆಂದು ಸಂಸದರು ಪ್ರತಿಪಾದಿಸುತ್ತಿಲ್ಲ. ಕನ್ನಡ ಮಾಧ್ಯಮದಲ್ಲಿ ಓದಿದವರು ಯಾರಿಗೇನೂ ಕಡಿಮೆ ಇಲ್ಲ. ಭಾಷಾ ಜ್ಞಾನ, ವಿಷಯ ಮಾಹಿತಿ ಇದ್ದರೆ ಎಂಥ ಕಠಿಣ ಪರೀಕ್ಷೆಗಳನ್ನು ಪಾಸು ಮಾಡಬಹುದು’ ಎಂದರು.

ಬಂಗಾಳಿ ಕಲಿತಿರುವ ಅವರಿಗೆ ರಬೀಂದ್ರ ಸಂಗೀತವೆಂದರೆ ಇಷ್ಟ. ಬಂಗಾಳದ ಹೊಸ ತಲೆಮಾರಿನ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದಿಸುವ ಕನಸೂ ಅವರಿಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT