ಸೋಮವಾರ, ಸೆಪ್ಟೆಂಬರ್ 27, 2021
21 °C

ದ್ವಿತೀಯ ಪಿಯುಸಿ ಫಲಿತಾಂಶ: ತಜ್ಞರಿಂದ ತ್ರಿಸೂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ರದ್ದು ಮಾಡಿರುವುದರಿಂದ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡಲು ಅನುಸರಿಸಬೇಕಾದ ಮಾನದಂಡಗಳ ಬಗ್ಗೆ ಸಲಹೆ ನೀಡಲು ರಾಜ್ಯ ಸರ್ಕಾರ ರಚಿಸಿರುವ 12 ಸದಸ್ಯರ ತಜ್ಞರ ಸಮಿತಿ ಅನೌಪಚಾರಿಕವಾಗಿ ಚರ್ಚಿಸಿದ್ದು, ಮೂರು ಸೂತ್ರಗಳನ್ನು ರೂಪಿಸಿದೆ.

‘ಸಮಿತಿ ಇನ್ನೂ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿಲ್ಲ. ಆದರೆ, ಫಲಿತಾಂಶವನ್ನು ಯಾವೆಲ್ಲ ರೀತಿಯಲ್ಲಿ ನಿರ್ಣಯಿಸಬಹುದು ಎಂಬ ಬಗ್ಗೆ ಚರ್ಚಿಸಿದೆ. ಜುಲೈ 2ನೇ ವಾರದಲ್ಲಿ ಫಲಿತಾಂಶ ಪ್ರಕಟಿಸಲು ಈಗಾಗಲೇ ನಿರ್ಧರಿಸಲಾಗಿದೆ’ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

‘ಎಸ್ಸೆಸ್ಸೆಲ್ಸಿ ಮತ್ತು ಪ್ರಥಮ ಪಿಯುಸಿಯಲ್ಲಿ ವಿದ್ಯಾರ್ಥಿ ಪಡೆದ ಅಂಕಗಳನ್ನು ತಲಾ ಶೇ 50ರಂತೆ ತೆಗೆದುಕೊಂಡು, ಗರಿಷ್ಠ 600 ಅಂಕಕ್ಕೆ ನಿಗದಿಪಡಿಸುವುದು,  ಪ್ರಥಮ ಪಿಯುಸಿಯ ಶೇ 60 ಮತ್ತು ಎಸ್ಸೆಸ್ಸೆಲ್ಸಿಯ ಶೇ 35 ಅಂಕ ಸಮೀಕರಿಸಿ 600 ಅಂಕಗಳಿಗೆ ನಿಗದಿಪಡಿಸುವುದು ಅಥವಾ ಕೃಪಾಂಕ ನೀಡಿ ಪಾಸ್‌ ಮಾಡುವ ಬಗ್ಗೆ ಸಮಿತಿ ಚರ್ಚೆ ನಡೆಸಿದೆ. ಆದರೆ, ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ’ ಎಂದೂ ಮೂಲಗಳು ಹೇಳಿವೆ.

ಎಸ್ಸೆಸ್ಸೆಲ್ಸಿಯಲ್ಲಿ ಕೆಲವು ವಿಷಯಗಳಲ್ಲಿ ಹೆಚ್ಚಿನ ಅಂಕ ಗಳಿಸಿರುವ ವಿದ್ಯಾರ್ಥಿಗಳು ಪಿಯುಸಿಯಲ್ಲಿ ಕಡಿಮೆ ಅಂಕ ಅಂಕ ಗಳಿಸಿರುವ ನಿದರ್ಶನಗಳಿವೆ. ದ್ವಿತೀಯ ಪಿಯುಸಿ ಪರೀಕ್ಷೆಗೆ ನೋಂದಾಯಿಸಿರುವ ಎಲ್ಲರನ್ನೂ ಪಾಸು ಮಾಡಲಾಗುವುದೆಂದು ಸರ್ಕಾರ ಹೇಳಿರುವುದರಿಂದ ವಿದ್ಯಾರ್ಥಿಯು ಎಸ್ಸೆಸ್ಸೆಲ್ಸಿಯಲ್ಲಿ ಪಡೆದ ಹೆಚ್ಚಿನ ಅಂಕಗಳನ್ನು ಪಿಯುಸಿಗೆ ಕೃಪಾಂಕ ಎಂದು ಪರಿಗಣಿಸುವ ಬಗ್ಗೆಯೂ ಚರ್ಚೆ ನಡೆದಿದೆ.

ದ್ವಿತೀಯ ಪಿಯುಸಿ ಎಲ್ಲ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡಲು ಈಗಾಗಲೇ ಸರ್ಕಾರ ತೀರ್ಮಾನಿಸಿದೆ. ಆದರೆ, ವಿದ್ಯಾರ್ಥಿಗಳಿಗೆ ಅಂಕಗಳನ್ನು ನೀಡಬೇಕೇ, ಗ್ರೇಡ್‌ ನೀಡಬೇಕೇ ಎಂಬ ಬಗ್ಗೆ ಗೊಂದಲದ ಕಾರಣಕ್ಕೆ ಸಮಿತಿ ರಚಿಸಲಾಗಿತ್ತು. ಗ್ರೇಡಿಂಗ್‌ ಮೂಲಕ ವಿದ್ಯಾರ್ಥಿಗಳನ್ನು ಪಾಸು ಮಾಡುವ ನಿರ್ಧಾರಕ್ಕೆ ಪಾಲಕರು ಮತ್ತು ವಿದ್ಯಾರ್ಥಿಗಳಿಂದ ಆಕ್ಷೇಪ ವ್ಯಕ್ತವಾಗಿದ್ದರಿಂದ ಅಂಕಗಳನ್ನು ನೀಡಲು ಚಿಂತನೆ ನಡೆಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು