ಗುರುವಾರ , ಮೇ 19, 2022
21 °C

ಸುಂಕದಕಟ್ಟೆ ಆ್ಯಸಿಡ್ ದಾಳಿ ಪ್ರಕರಣ: ಆರೋಪಿ ಪತ್ತೆಗೆ ಪೊಲೀಸರ 7 ತಂಡ ರಚನೆ

ಐಎಎನ್ಎಸ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರೀತಿಸಲು ನಿರಾಕರಿಸಿದ ಕಾರಣಕ್ಕೆ 24 ವರ್ಷದ ಯುವತಿ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿರುವ ಆರೋಪಿ ಪತ್ತೆಗೆ ಕರ್ನಾಟಕ ಪೊಲೀಸರು ಏಳು ತಂಡಗಳನ್ನು ರಚಿಸಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಪೊಲೀಸರು ಈ ಹಿಂದೆ ಮೂರು ತಂಡಗಳನ್ನು ರಚಿಸಿದ್ದು, ಅದನ್ನು ಐದಕ್ಕೆ ಹೆಚ್ಚಿಸಲಾಗಿತ್ತು. ಇದೀಗ ಏಳು ತಂಡಗಳ ಆರೋಪಿಯ ಪತ್ತೆಗೆ ಇಳಿದಿವೆ. ಆರೋಪಿಯನ್ನು ನಾಗರಾಜ್ ಎಂದು ಗುರುತಿಸಲಾಗಿದ್ದು, ದಾಳಿ ನಡೆದ ದಿನವಾದ ಏ. 28ರಿಂದ ತಲೆಮರೆಸಿಕೊಂಡಿದ್ದಾನೆ. ಆರೋಪಿಯ ಪತ್ತೆಗಾಗಿ ಪಶ್ಚಿಮ ವಿಭಾಗದ ಪೊಲೀಸರ ವಿಶೇಷ ತಂಡವೊಂದು ಹೊರ ರಾಜ್ಯಕ್ಕೂ ಹೋಗಿದೆ

ಶನಿವಾರ ಸಂಜೆಯೊಳಗೆ ಆರೋಪಿಯನ್ನು ಬಂಧಿಸಲಾಗುವುದು ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ಈ ಹಿಂದೆ ತಿಳಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಅಣ್ಣ ಹಾಗೂ ಪೋಷಕರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಇನ್ನೂ 20 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಈಮಧ್ಯೆ, ಸಂತ್ರಸ್ತೆ ಚೇತರಿಸಿಕೊಳ್ಳುತ್ತಿದ್ದು, ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಆಕೆಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸೋಮವಾರದಿಂದ ಚರ್ಮ ಕಸಿ ಚಿಕಿತ್ಸೆ ಆರಂಭವಾಗಲಿದೆ. ಕಸಿ ಮಾಡಿದ ನಂತರ, ಸಂತ್ರಸ್ತೆಯ ಹಾನಿಗೊಳಗಾದ ಚರ್ಮವು ಮತ್ತೆ ನೈಸರ್ಗಿಕವಾಗಿ ಬೆಳೆಯುವ ನಿರೀಕ್ಷೆಯಿದೆ. ಚರ್ಮ ಕಸಿ ಪ್ರಕ್ರಿಯೆ ಮುಗಿದ ಬಳಿಕ, ಸಂತ್ರಸ್ತೆಗೆ ನೋವು ಕಡಿಮೆಯಾಗಲಿದೆ. ಎರಡ್ಮೂರು ವಾರಗಳಲ್ಲಿ ಹೊಸ ಚರ್ಮ ಬೆಳೆಯುವ ನಿರೀಕ್ಷೆಯಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಪ್ರೀತಿಯನ್ನು ನಿರಾಕರಿಸಿದ ಕಾರಣಕ್ಕೆ ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯ ಸುಂಕದಕಟ್ಟೆಯಲ್ಲಿರುವ ಫೈನಾನ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಮೇಲೆ ಗುರುವಾರ (ಏಪ್ರಿಲ್ 28) ಬೆಳಿಗ್ಗೆ ಆರೋಪಿ ಆ್ಯಸಿಡ್ ಎರಚಿ ಪರಾರಿಯಾಗಿದ್ದಾನೆ. ದೇಹದ ಶೇ 45ರಷ್ಟು ಭಾಗ ಗಾಯಗೊಂಡಿರುವ ಯುವತಿಗೆ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸೇಂಟ್‌ ಜಾನ್ಸ್‌ ಆಸ್ಪತ್ರೆಗೆ ತೆರಳಿ ಯುವತಿ ಆರೋಗ್ಯ ಸ್ಥಿತಿ ವಿಚಾರಿಸಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್, ‘ಕೃತ್ಯ ಎಸಗಿದ ಆರೋಪಿ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಯುವತಿಗೆ ವೈಯಕ್ತಿಕವಾಗಿ ₹ 5 ಲಕ್ಷ ಸಹಾಯ ಧನ ನೀಡಲಾಗುವುದು. ಯುವತಿಯ ಭವಿಷ್ಯಕ್ಕೆ ನೆರವಾಗಲು ಉದ್ಯೋಗ ಸೇರಿದಂತೆ ಎಲ್ಲ ರೀತಿಯ ಪುನರ್ವಸತಿ ಕಲ್ಪಿಸಲು ಸರ್ಕಾರ ಬದ್ಧವಾಗಿದೆ’ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು