ಸೋಮವಾರ, ಮಾರ್ಚ್ 1, 2021
19 °C
ಮುಖ್ಯಮಂತ್ರಿ ಬಿಎಸ್‌ವೈ ಸ್ಪಷ್ಟ ನುಡಿ l ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿಕೆಗೆ ವ್ಯಾಪಕ ಆಕ್ರೋಶ

‘ರಾಜ್ಯದ ಒಂದಿಂಚೂ ಜಾಗ ಬಿಟ್ಟು ಕೊಡಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ‘ರಾಜ್ಯದ ಒಂದಿಂಚು ಭೂಮಿಯನ್ನು, ಯಾವುದೇ ಕಾರಣಕ್ಕೂ ಮಹಾರಾಷ್ಟ್ರಕ್ಕೆ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರ ಪ್ರತಿಪಾದಿಸಿದರು.

ಬೆಳಗಾವಿ ಕುರಿತಂತೆ ಉದ್ಧವ್‌ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಹೇಳಿಕೆಗೆ ಪಕ್ಷಭೇದ ಮರೆತು ಆಕ್ರೋಶ ವ್ಯಕ್ತವಾಗಿದೆ. ‘ಗಡಿ ವಿಷಯದಲ್ಲಿ ಮಹಾಜನ್‌ ವರದಿಯೇ ಅಂತಿಮ’ ಎಂದು ವಿವಿಧ ಮುಖಂಡರು ಬಲವಾಗಿ ಪ್ರತಿಪಾದಿಸಿದ್ದಾರೆ.

ಆದಿ ಉಡುಪಿಯ ಹೆಲಿಪ್ಯಾಡ್‌ನಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು,  ‘ಮಹಾರಾಷ್ಟ್ರ ಮುಖ್ಯಮಂತ್ರಿ ಅವರದ್ದು ಉದ್ಧಟತನದ ಹೇಳಿಕೆ. ಭಾರತದ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ. ಇಂಥ ವಿವಾದಾತ್ಮಕ ಹೇಳಿಕೆಗಳು ಅವರಿಗೆ ಗೌರವವನ್ನು ತರುವಂಥದಲ್ಲ’ ಎಂದು ಟೀಕಿಸಿದರು.

‘ಮಹಾಜನ್ ವರದಿಯೇ ಅಂತಿಮವಾಗಿದ್ದರೂ, ಗಡಿ ವಿವಾದ ತೆಗೆಯುತ್ತಿರುವುದು ಖಂಡನೀಯ. ರಾಜ್ಯದಲ್ಲಿ ಮರಾಠಿಗರು ಹಾಗೂ ಕನ್ನಡಿಗರು ಒಂದೇ ತಾಯಿ ಮಕ್ಕಳಂತೆ ಇದ್ದಾರೆ. ಗಡಿ ಜಿಲ್ಲೆಗಳಲ್ಲಿ ಸೌಹಾರ್ದ ವಾತಾವರಣ ಕೆಡಿಸುವ ಕೆಲಸ ಸರಿಯಲ್ಲ’ ಎಂದು ಮುಖ್ಯಮಂತ್ರಿ ಹೇಳಿದರು.

‘ಬೆಳಗಾವಿ ರಾಜ್ಯದ ಅವಿಭಾಜ್ಯ ಅಂಗ’ (ಬೆಳಗಾವಿ ವರದಿ):  ‘ಬೆಳಗಾವಿ ವಿಷಯದಲ್ಲಿ ಮಹಾರಾಷ್ಟ್ರ ಸರ್ಕಾರ ಅನಗತ್ಯ ಗೊಂದಲ ಸೃಷ್ಟಿಸುತ್ತಿದೆ. ಬೆಳಗಾವಿ ಎಂದಿಗೂ ಕರ್ನಾಟಕದ ಅವಿಭಾಜ್ಯ ಅಂಗ’ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ‘ಮಹಾಜನ್‌ ವರದಿಯನ್ನು ಈಗಾಗಲೇ ಒಪ್ಪಿಯಾಗಿದೆ. ಮಹಾರಾಷ್ಟ್ರ ಸರ್ಕಾರವು ಗಡಿಭಾಗದ ಜನರಲ್ಲಿ ಗೊಂದಲ ಸೃಷ್ಟಿಸುವುದು ಸರಿಯಲ್ಲ. ಆ ಸರ್ಕಾರ ತನ್ನ ವೈಫಲ್ಯ ಮರೆ ಮಾಚಿಕೊಳ್ಳಲು ಗಡಿ ವಿಷಯ ಪ್ರಸ್ತಾಪಿಸಿ ಜನರ ಭಾವನೆ ಕೆರಳಿಸಲು ಯತ್ನಿಸುವುದನ್ನು ನಿಲ್ಲಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಅವಿವೇಕಿತನದ ಹೇಳಿಕೆ –ಲಕ್ಷ್ಮಣ ಸವದಿ ಟೀಕೆ (ದಾವಣಗೆರೆ ವರದಿ): ‘ಬೆಳಗಾವಿ ನಮ್ಮದು’ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಅವರ ಟ್ವೀಟ್‌ ಅವಿವೇಕತನದ್ದು. ಇಂಥ ಹೇಳಿಕೆ ನೀಡುವ ಮೊದಲು ಯೋಚಿಸಬೇಕು’ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಪ್ರತಿಕ್ರಿಯಿಸಿದ್ದಾರೆ.

‘ಸಾವಿರ ಮುಖ್ಯಮಂತ್ರಿ ಬಂದರೂ ಬೆಳಗಾವಿ, ನಿಪ್ಪಾಣಿ ಕರ್ನಾಟಕದಲ್ಲೇ ಉಳಿಯಲಿದೆ’ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ತಿಳಿಸಿದರು.

‘ಕೆಲವರದು ಕ್ಯಾತೆ ತೆಗೆಯುವ ಮನಸ್ಥಿತಿ’ (ಶಿವಮೊಗ್ಗ ವರದಿ): ಉದ್ಧವ್‌ ಠಾಕ್ರೆ ಹೇಳಿಕೆಗೆ ತಿರುಗೇಟು ನೀಡಿರುವ ಸಚಿವ ಕೆ.ಎಸ್. ಈಶ್ವರಪ್ಪ, ‘ಮಹಾರಾಷ್ಟ್ರದಲ್ಲೂ ಕನ್ನಡಿಗರಿದ್ದಾರೆ. ಹಾಗಂತ ಮಹಾರಾಷ್ಟ್ರ ಕರ್ನಾಟಕಕ್ಕೆ ಸೇರಿಸಲು ಆಗುತ್ತದೆಯೇ’ ಎಂದು ಪ್ರಶ್ನಿಸಿದ್ದಾರೆ.

‘ಭಾಷೆ, ನೀರು, ಗಡಿ ಕುರಿತು ಖ್ಯಾತೆ ತೆಗೆಯುವ ಮನಃಸ್ಥಿತಿ ಮಹಾರಾಷ್ಟ್ರದ ಕೆಲವರಿಗೆ ಬಂದುಬಿಟ್ಟಿದೆ. ರಾಜ್ಯದಲ್ಲಿರುವ ಮರಾಠರು ಬೆಂಬಲಿಸುತ್ತಾರೆ ಎಂಬುದು ಅವರ ಭ್ರಮೆ’ ಎಂದರು.

‘ಇಲ್ಲಿ ಮರಾಠರು ಮತ್ತು ಕನ್ನಡಿಗರು ಅಣ್ಣತಮ್ಮಂದಿರಂತೆ ಇದ್ದಾರೆ. ಕರ್ನಾಟಕದ ಒಂದಿಂಚು ಭೂಮಿಯನ್ನೂ ಮಹಾರಾಷ್ಟ್ರಕ್ಕೆ ಕೊಡುವುದಿಲ್ಲ’ ಎಂದೂ ತಿರುಗೇಟು ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು