ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭೆ ಚುನಾವಣೆ 2023: ಅಕ್ರಮ ತಡೆಗೆ ಚುನಾವಣಾ ಆಯೋಗ ತಾಕೀತು

ಜಿಲ್ಲಾ ಚುನಾವಣಾಧಿಕಾರಿಗಳ ಜೊತೆ ಮುಖ್ಯ ಚುನಾವಣಾ ಆಯುಕ್ತ ಸಭೆ
Last Updated 10 ಮಾರ್ಚ್ 2023, 19:45 IST
ಅಕ್ಷರ ಗಾತ್ರ

ಬೆಂಗಳೂರು: ಚುನಾವಣಾ ಅಕ್ರಮಗಳನ್ನು ತಡೆಯಲು ಈಗಿನಿಂದಲೇ ಕಟ್ಟೆಚ್ಚರವಹಿಸಿ, ವ್ಯವಸ್ಥೆಯನ್ನು ಸಜ್ಜುಗೊಳಿಸಿಕೊಳ್ಳಬೇಕು. ರಾಜಕೀಯ ಪಕ್ಷಗಳು ಮತ್ತು ನಾಯಕರಿಂದ ಅಂತರ ಕಾಯ್ದುಕೊಳ್ಳಬೇಕು ಎಂದು ಕೇಂದ್ರ ಚುನಾವಣಾ ಆಯೋಗ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಕಟ್ಟಪ್ಪಣೆ ಮಾಡಿದೆ.

ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್ ನೇತೃತ್ವದ ತಂಡ ಶುಕ್ರವಾರ ವಿಕಾಸಸೌಧದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳ ಜತೆಗೆ ಸಭೆ ನಡೆಸಿದರು. ವಿವಿಧ ಜಿಲ್ಲೆಗಳಲ್ಲಿ ಚುನಾವಣೆಗಾಗಿ ನಡೆಸಿರುವ ತಯಾರಿಗಳ ಬಗ್ಗೆಯೂ ಮಾಹಿತಿಯನ್ನು ಪಡೆದುಕೊಂಡರು.

ಅಧಿಕಾರಿಯ ಬಗ್ಗೆ ದೂರು ಬಂದರೆ ಸಹಿಸುವುದಿಲ್ಲ. ಮುಕ್ತ, ನ್ಯಾಯಸಮ್ಮತ ಮತ್ತು ನಿರ್ಭೀತವಾಗಿ ಚುನಾವಣೆ ನಡೆಸಲು ಆಯೋಗ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ. ಚುನಾವಣೆ ಅಕ್ರಮಗಳನ್ನು ನಡೆಸುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮತೆಗೆದುಕೊಳ್ಳಬೇಕು ಎಂದು ರಾಜೀವ್‌ ಕುಮಾರ್‌ ಹೇಳಿದ್ದಾಗಿ ಮೂಲಗಳು ತಿಳಿಸಿವೆ.

ಎಲ್ಲಿ ಮತ್ತು ಯಾವ ರೀತಿಯ ಅಕ್ರಮಗಳು ನಡೆಯಬಹುದು ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಿ, ಅವುಗಳನ್ನು ತಡೆಯಬೇಕು. ಆರೋಪಿಗಳ ವಿರುದ್ಧ ಕ್ರಮತೆಗೆದುಕೊಳ್ಳಬೇಕು. ಈಗ ಮತದಾರರಿಗೆ ಆಮಿಷಗಳನ್ನು ಒಡ್ಡಲು ಹಲವು ಹೊಸವಿಧಾನ
ಕಂಡುಕೊಳ್ಳಲಾಗಿದೆ. ಅವುಗಳ ಮೇಲೆ ನಿಗಾವಹಿಸಬೇಕು ಎಂಬುದಾಗಿ ಸೂಚನೆ ನೀಡಿದರು.

ಇವಿಎಂ ಬೇಡ: ಬಿಎಸ್‌ಪಿ: ವಿಧಾನಸಭಾ ಚುನಾವಣೆಯಲ್ಲಿ ವಿದ್ಯುನ್ಮಾನ ಮತ ಯಂತ್ರಗಳ ಬದಲಿಗೆ ಮತಪೆಟ್ಟಿಗೆಗಳ ಪದ್ಧತಿಯನ್ನೇ ಮತ್ತೆ ಜಾರಿಗೆ ತರಬೇಕು ಎಂದು ರಾಜ್ಯ ಬಹುಜನ ಸಮಾಜ ಪಾರ್ಟಿ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.

ಡಿಜಿಪಿ ಎತ್ತಂಗಡಿಗೆ ಕಾಂಗ್ರೆಸ್‌ ಆಗ್ರಹ
ರಾಜ್ಯ ಪೊಲೀಸ್‌ ಮಹಾನಿರ್ದೇಶಕರನ್ನು ಬದಲಾಯಿಸಲು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಕೆಪಿಸಿಸಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.

ಈ ಸಂಬಂಧ ಆಯೋಗಕ್ಕೆ ಮನವಿ ನೀಡಿರುವ ಕೆಪಿಸಿಸಿ, ಆಗಲೇ ಮೂರು ವರ್ಷ ಸೇವಾವಧಿ ಮುಗಿಸಿರುವ ಡಿಜಿಪಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂದು ದೂರಿದೆ.

ಅಲ್ಲದೇ, ಒಂದೇ ಸ್ಥಳದಲ್ಲಿ ಮೂರು ವರ್ಷ ಸೇವೆ ಪೂರ್ಣಗೊಳಿಸಿರುವ ಅಧಿಕಾರಿಗಳು ಮತ್ತು ತವರು ಜಿಲ್ಲೆಗಳಲ್ಲಿ ಇರುವವರನ್ನು ಬೇರೆ ಜಿಲ್ಲೆಗಳಿಗೆ ವರ್ಗಾವಣೆ ಮಾಡಬೇಕು. ಆಡಳಿತ ಪಕ್ಷದಿಂದ ಸಾಮಾಜಿಕ ಮಾಧ್ಯಮಗಳ ದುರುಪಯೋಗ ತಡೆಯಲು ಕ್ರಮ ತೆಗೆದುಕೊಳ್ಳಬೇಕು. ಇದರ ಮೇಲೆ ನಿಗಾ ಇಡಲು ಪಾರದರ್ಶಕವಾದ ಸಮಿತಿಯೊಂದನ್ನು ರಚಿಸಬೇಕು. ಸಾಮಾಜಿಕ ಮಾಧ್ಯಮದ ವೆಚ್ಚವನ್ನು ಅಭ್ಯರ್ಥಿಯ ವೆಚ್ಚಕ್ಕೆ ಸೇರಿಸಬೇಕು ಎಂದು ಮನವಿಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT