ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚರತ್ನ ಸಮಾರೋಪ: ಚುನಾವಣೆಗೆ ರಣಕಹಳೆ ಮೊಳಗಿಸಿದ ಜೆಡಿಎಸ್‌

ದೇವೇಗೌಡರಿಗೆ ಚಿನ್ನಲೇಪಿತ ನೇಗಿಲು ಕಲಾಕೃತಿ ನೀಡಿದ ಕಾರ್ಯಕರ್ತ
Last Updated 26 ಮಾರ್ಚ್ 2023, 19:28 IST
ಅಕ್ಷರ ಗಾತ್ರ

ಮೈಸೂರು: ರಾಜ್ಯದ ಮೂಲೆ ಮೂಲೆಗಳಿಂದ ಬಂದಿದ್ದ ಲಕ್ಷಾಂತರ ಅಭಿಮಾನಿಗಳ ಜಯಘೋಷ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಭಾವುಕ ಭಾಷಣದೊಂದಿಗೆ ಜೆಡಿಎಸ್‌ ಇಲ್ಲಿ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಭಾನುವಾರ ರಣಕಹಳೆ ಮೊಳಗಿಸಿತು.

ಉತ್ತನಹಳ್ಳಿ ರಿಂಗ್ ರಸ್ತೆಯ ಜ್ವಾಲಾಮುಖಿ ತ್ರಿಪುರ ದೇಗುಲ ಸಮೀಪದ 100 ಎಕರೆ ವಿಶಾಲ ಮೈದಾನದಲ್ಲಿ ನಿರ್ಮಿಸಿದ್ದ ವೇದಿಕೆಯನ್ನು ಜೆಡಿಎಸ್‌ ನಾಯಕರು ಹಾಗೂ ಮುಖಂಡರು ಏರುತ್ತಿದ್ದಂತೆ ನೆರೆದಿದ್ದ ಕಾರ್ಯಕರ್ತರಲ್ಲಿ ಮಿಂಚಿನ ಸಂಚಲನ ಉಂಟು ಮಾಡಿತು. ನಾಯಕರೆಲ್ಲರೂ ಚಾಮುಂಡೇಶ್ವರಿಯ ಸ್ಮರಣೆ ಮಾಡಿದರು. ಪಕ್ಷಕ್ಕೆ ಶಕ್ತಿ ತುಂಬುವಂತೆಯೂ ಪ್ರಾರ್ಥಿಸಿದರು.

ಜೆಡಿಎಸ್‌ ಶಾಸಕಾಂಗ ‍ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿ, ‘ನಾಡದೇವತೆ ಚಾಮುಂಡೇಶ್ವರಿ ಶಕ್ತಿ ತುಂಬಿದ್ದಾಳೆ. ವೈದ್ಯರ ಅನುಮತಿ ಪಡೆದಿದ್ದೇನೆ. ದಯವಿಟ್ಟು ಜನರತ್ತ ಕೈ ಬೀಸುತ್ತಾ ಬನ್ನಿ. ಎಲ್ಲರನ್ನೂ ಒಮ್ಮೆ ನೋಡಿ ಬನ್ನಿ’ ಎಂದು ಎಚ್‌.ಡಿ.ದೇವೇಗೌಡ ಅವರನ್ನು ಕೇಳಿಕೊಂಡರು. ಆ ಕ್ಷಣದಲ್ಲಿ ಕುಮಾರಸ್ವಾಮಿ ಹಾಗೂ ದೇವೇಗೌಡರಿಬ್ಬರೂ ಕಣ್ಣೀರಾದರು. ಈ ಕ್ಷಣ ನೆರೆದಿದ್ದವರನ್ನೂ ಭಾವುಕರನ್ನಾಗಿಸಿತು. ಎಲ್ಲರೂ ಎದ್ದುನಿಂತು ನೆಚ್ಚಿನ ನಾಯಕನಿಗೆ ಕೈಮುಗಿದು ಅಭಿಮಾನ ಪ್ರದರ್ಶಿಸಿದರು.

ಅನಾರೋಗ್ಯದ ಕಾರಣ, ಗಾಲಿಕುರ್ಚಿಯಲ್ಲಿ ಕುಳಿತಿದ್ದ ದೇವೇಗೌಡರು ಜನರತ್ತ ಕೈಬೀಸಿದರು; ಕೈಮುಗಿದರು. ಅವರೊಂದಿಗೆ ಶಾಸಕ ಎಚ್‌.ಡಿ.ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ವಿಧಾನಪರಿಷತ್‌ ಸದಸ್ಯ ಸೂರಜ್ ರೇವಣ್ಣ, ಪಕ್ಷದ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೆಜ್ಜೆ ಹಾಕಿದರು.

‘ಪಂಚರತ್ನ’ ಯಾತ್ರೆಯ ಸಮಾರೋಪ ಭಾಷಣ ಮಾಡಿದ ಎಚ್‌.ಡಿ.ದೇವೇಗೌಡ ಅವರು, ‘ಜಾತಿ, ಧರ್ಮದ ನಡುವೆ ವೈಷಮ್ಯ ಬಿತ್ತಿ ಜನರನ್ನು ಆಳುವ ಮಾದರಿ ನಮ್ಮದಲ್ಲ. ನಾವು ರೈತರ ಮಕ್ಕಳು. ಬೆವರು ಸುರಿಸಿ ಅನ್ನ ತಿನ್ನುತ್ತೇವೆ. ಇಲ್ಲಸಲ್ಲದ ಬಣ್ಣದ ಮಾತುಗಳಿಂದ ಮೇಲೆ ಬರುವ ಪ್ರಯತ್ನ ಮಾಡುವುದಿಲ್ಲ. ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇನೆ, ಬ್ರಿಟಿಷರು ಒಡೆದು ಆಳುವ ನೀತಿಯನ್ನೇ ದಶಕದ ಹಿಂದೆ ಅಧಿಕಾರಕ್ಕೆ ಬಂದ ಪಕ್ಷವು ಮಾಡುತ್ತಿದೆ’ ಎಂದು ಚಾಟಿ ಬೀಸಿದರು. ಆದರೆ, ನಿರ್ದಿಷ್ಟವಾಗಿ ಯಾರನ್ನಾಗಲಿ, ವ್ಯಕ್ತಿಯನ್ನಾಗಲಿ ಪ್ರಸ್ತಾಪಿಸಲಿಲ್ಲ.

‘ಆರೋಗ್ಯವನ್ನೂ ಲೆಕ್ಕಿಸದೇ ಪಂಚರತ್ನ ಯಾತ್ರೆಯನ್ನು ರಾಜ್ಯದ ಉದ್ದಗಲಕ್ಕೂ ಎಚ್‌.ಡಿ.ಕುಮಾರಸ್ವಾಮಿ ಮಾಡಿದ್ದಾರೆ. ಸಮಾರೋಪದಲ್ಲಿ ನಿಮ್ಮನ್ನು ನೋಡುತ್ತೇನೆಯೋ, ಇಲ್ಲವೋ ಎನಿಸಿತ್ತು. ದೇವರು ನಿಮ್ಮ ಮುಂದೆ ತಂದು ನಿಲ್ಲಿಸಿದ್ದಾನೆ’ ಎಂದರು.

‘ಏಳು ದಶಕದ ರಾಜಕೀಯದಲ್ಲಿ ಜನರ ಕಣ್ಣಿಗೆ ಮಣ್ಣೆರಚಲಿಲ್ಲ‌. ಮಾಡಿದ ಕಾರ್ಯಗಳನ್ನು ಆಧರಿಸಿ ಮತ ಭಿಕ್ಷೆ ಬೇಡಿದ್ದೇನೆ. ಹೋರಾಟ ಫಲಿಸದೇ ಇದ್ದಾಗ ರಾಜೀನಾಮೆ ಕೊಟ್ಟಿದ್ದೇನೆ. ಪಂಜಾಬ್‌ ಜನ ಅನ್ನಕ್ಕೆ ನನ್ನ ಹೆಸರಿಟ್ಟುಕೊಂಡಿದ್ದಾರೆ. ಅದಕ್ಕಿಂತ ಇನ್ನಾವ ಸಮ್ಮಾನ ಬೇಕಿಲ್ಲ’ ಎಂದರು.

‘ಬೆಂಗಳೂರು ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಗರ್ಜಿಸುತ್ತಿದೆ. ನಾನು ಮಾಡಿರುವ ಕೆಲಸ ಎಲ್ಲರಿಗೂ ಗೊತ್ತಿದೆ. ಅದು ಕಡತಗಳಲ್ಲಿದೆ. ಪ್ರಚಾರಕ್ಕಾಗಿ ಹಣ ವ್ಯಯ ಮಾಡಲಿಲ್ಲ. ಯಾರೋ ಮಾಡಿದ ಕೆಲಸವನ್ನು ನನ್ನದೆನ್ನಲಿಲ್ಲ’ ಎಂದರು.

‘ನಾಲ್ವಡಿ ಕೃಷ್ಣರಾಜ ಒಡೆಯರ್, ಬಸವಣ್ಣ, ಕುವೆಂಪು, ಟಿಪ್ಪು ಸುಲ್ತಾನ್‌, ಕನಕದಾಸ, ಪುರಂದರದಾಸ, ಸರ್ ಎಂ.ವಿಶ್ವೇಶ್ವರಯ್ಯ ಸೇರಿದಂತೆ ಎಲ್ಲ ಮಹನೀಯರ ತತ್ವಾದರ್ಶದಲ್ಲಿ ಸಣ್ಣ ದೀಪ ಹಚ್ಚುವ ಕೆಲಸ ಮಾಡಿದ್ದೇನಷ್ಟೇ’ ಎಂದು ಹೇಳಿದರು.

ಪಕ್ಷದ ಕಾರ್ಯಕರ್ತ ಸತೀಶ್ ಗೌಡ ಅವರು ದೇವೇಗೌಡ ಅವರಿಗೆ ಚಿನ್ನ ಲೇಪಿತ ನೇಗಿಲು ಕಲಾಕೃತಿ ನೀಡಿ ಹಾಗೂ ಇಮ್ಮಡಿ‌ ಪುಲಿಕೇಶಿ ಕಿರೀಟ ತೊಡಿಸಿ‌ ಸನ್ಮಾನಿಸಿದರು.

5 ವರ್ಷ ಪೂರ್ಣಾವಧಿ ಸರ್ಕಾರಕ್ಕೆ ಆಶೀರ್ವದಿಸಿ: ಕುಮಾರಸ್ವಾಮಿ

ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿ, ‘ನ.18ರಿಂದ ಕೋಲಾರದ ಮುಳಬಾಗಿಲಿನಿಂದ ಆರಂಭವಾದ ಪಂಚರತ್ನ ಯಾತ್ರೆಯಲ್ಲಿ ಜನರ ಕಷ್ಟ ನೋಡಿದ್ದೇನೆ. ಪಂಚರತ್ನ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದೇ ನನ್ನ ಗುರಿ. ಅಮೃತ ಕಾಲಕ್ಕೆ 2047ರ ವರೆಗೆ ಕಾಯಬೇಕಿಲ್ಲ. 5 ವರ್ಷ ಪೂರ್ಣಾವಧಿ ಸರ್ಕಾರ ಕೊಟ್ಟು ಆಶೀರ್ವದಿಸಿ’ ಎಂದು ಕೋರಿದರು.

‘ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಸಾಲ ಮನ್ನಾ ಮಾಡಲಾಗುವುದು. ರೈತರ ಮಕ್ಕಳ ಮದುವೆಗೆ ₹ 2 ಲಕ್ಷ ಸಹಾಯ ನೀಡಲಾಗುವುದು. ₹ 30 ಲಕ್ಷದವರೆಗಿನ ಚಿಕಿತ್ಸಾ ವೆಚ್ಚವನ್ನು ಭರಿಸಲಾಗುವುದು. ನಗರದ ಶಾಲೆಗಳಂತೆಯೇ ಹಳ್ಳಿಗಳಲ್ಲೂ ಇಂಗ್ಲಿಷ್‌ ಹಾಗೂ ಕನ್ನಡ ಮಾಧ್ಯಮದಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುವುದು. ಮಳೆಗಾಲದಲ್ಲಿ ಪ್ರತಿ ರೈತನಿಗೂ ಎಕರೆಗೆ ₹ 10ಸಾವಿರ ಸಹಾಯಧನ ಕೊಡಲಾಗುವುದು’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT