ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆದಾಟು ಯೋಜನೆ ಅನುಮತಿಗೆ ಆಗ್ರಹಿಸಿ ವಿಧಾನಸಭೆಯಲ್ಲಿ ನಿರ್ಣಯ

ತಮಿಳುನಾಡು ನಿಲುವಿಗೆ ಖಂಡನೆ: ಪಕ್ಷಭೇದ ಮರೆತು ಒಗ್ಗಟ್ಟು ಪ್ರದರ್ಶನ
Last Updated 24 ಮಾರ್ಚ್ 2022, 16:34 IST
ಅಕ್ಷರ ಗಾತ್ರ

ಬೆಂಗಳೂರು: ತಮಿಳುನಾಡಿಗೆ ಹಾನಿಯಾಗದ ಮೇಕೆದಾಟು ಯೋಜನೆಗೆ ಅಗತ್ಯವಿರುವ ಎಲ್ಲ ಅನುಮತಿಗಳನ್ನು ತಕ್ಷಣವೇ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ವಿಧಾನಸಭೆಯಲ್ಲಿ ಗುರುವಾರ ಒಮ್ಮತದ ನಿರ್ಣಯ ಅಂಗೀಕರಿಸಲಾಯಿತು.

ತಮಿಳುನಾಡು ವಿಧಾನಸಭೆಯು ಮೇಕೆದಾಟು ಯೋಜನೆಯನ್ನು ವಿರೋಧಿಸಿ ಅಂಗೀಕರಿಸಿರುವ ನಿರ್ಣಯವನ್ನು ಖಂಡಿಸುವ ತೀರ್ಮಾನದೊಂದಿಗೆ ವಿಧಾನಸಭೆಯ ಎಲ್ಲ ಸದಸ್ಯರು ಒಕ್ಕೊರಲಿನಿಂದ ಈ ಪ್ರಸ್ತಾವಕ್ಕೆ ಒಪ್ಪಿಗೆ ಸೂಚಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ ನಿರ್ಣಯವನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್‌ನ ಎಚ್‌.ಡಿ.ರೇವಣ್ಣ ಅನುಮೋದಿಸಿದರು.

ಕೇಂದ್ರ ಜಲ ಆಯೋಗ ಹಾಗೂ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದಿಂದ ಮೇಕೆದಾಟು ಯೋಜನೆಗೆ ಅಗತ್ಯವಿರುವ ಅನುಮತಿಗಳನ್ನು ತಕ್ಷಣವೇ ನೀಡಬೇಕು ಎಂದು ನಿರ್ಣಯದಲ್ಲಿ ಒತ್ತಾಯಿಸಲಾಗಿದೆ.

ನದಿ ಜೋಡಣೆಗೂ ವಿರೋಧ: ರಾಜ್ಯದ ಒಪ್ಪಿಗೆ ಇಲ್ಲದೇ ನದಿ ಜೋಡಣೆ ಯೋಜನೆ ಅನುಷ್ಠಾನಗೊಳಿಸುವುದನ್ನು ವಿರೋಧಿಸುವ ನಿರ್ಣಯವನ್ನೂ ವಿಧಾನಸಭೆ ಅಂಗೀಕರಿಸಿದೆ.

‘ಕಣಿವೆ ರಾಜ್ಯಗಳ ನ್ಯಾಯಸಮ್ಮತ ಪಾಲನ್ನು ನಿರ್ಧರಿಸುವವರೆಗೆ ಗೋದಾವರಿ– ಕೃಷ್ಣಾ– ಪೆನ್ನಾರ್‌– ಕಾವೇರಿ– ವೈಗೈ– ಗುಂಡಾರ್‌ ಯೋಜನೆಯ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್‌) ಅಂತಿಮಗೊಳಿಸಬಾರದು. ಪ್ರಸ್ತುತ ಸಿದ್ಧಪಡಿಸಿರುವ ಡಿಪಿಆರ್‌ನಲ್ಲಿರುವ ಅಂಶಗಳಿಗೆ ಕರ್ನಾಟಕದ ಒಪ್ಪಿಗೆ ಪಡೆಯದೇ ಈ ಯೋಜನೆಯನ್ನು ಅನುಮೋದಿಸಬಾರದು’ ಎಂದು ನಿರ್ಣಯದಲ್ಲಿ ಆಗ್ರಹಿಸಲಾಗಿದೆ.

‘ತಮಿಳುನಾಡಿನ ಕಾನೂನುಬಾಹಿರ ಯೋಜನೆಗಳಿಗೆ ಅನುಮೋದನೆ ನೀಡಬಾರದು. ಆ ಯೋಜನೆಗಳನ್ನು ಮುಂದುವರಿಸದಂತೆ ತಮಿಳುನಾಡು ರಾಜ್ಯಕ್ಕೆ ಸಂಬಂಧಪಟ್ಟ ಕೇಂದ್ರ ಸಂಸ್ಥೆಗಳು ನಿರ್ದೇಶನ ನೀಡಬೇಕು’ ಎಂದು ಒತ್ತಾಯಿಸಲಾಗಿದೆ.

ಮೇಕೆದಾಟು ಯೋಜನೆಯಿಂದ ತಮಿಳುನಾಡು ರಾಜ್ಯಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಆದರೆ, ಈ ಯೋಜನೆಯನ್ನು ವಿರೋಧಿಸಿ ಸಭ್ಯವಲ್ಲದ ಭಾಷೆಯಲ್ಲಿ ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಬೆಂಗಳೂರು ನಗರಕ್ಕೆ ಹಂಚಿಕೆಯಾಗಿರುವ 24 ಟಿಎಂಸಿ ಅಡಿ ನೀರನ್ನು ಬಳಸಲು ಮತ್ತು ಜಲವಿದ್ಯುತ್‌ ಉತ್ಪಾದನೆಗಾಗಿ ಮೇಕೆದಾಟು ಯೋಜನೆ ರೂಪಿಸಲಾಗಿದೆ. ಈ ಅಣೆಕಟ್ಟೆ ನಿರ್ಮಿಸಲು ಕರ್ನಾಟಕವು ಸಾಂವಿಧಾನಿಕ ಅಧಿಕಾರ ಹೊಂದಿದೆ ಎಂದು ನಿರ್ಣಯದಲ್ಲಿ ಹೇಳಲಾಗಿದೆ.

ತಮಿಳುನಾಡು ಸರ್ಕಾರವು ಕಾವೇರಿ ನದಿ ನೀರನ್ನು ಬಳಸಿಕೊಳ್ಳಲು ಕೈಗೆತ್ತಿಕೊಂಡಿರುವ ಕುಂದಾ ಪಿಎಸ್‌ಪಿ, ಸಿಲ್ಲಹಳ್ಳ ಪಿಎಸ್‌ಪಿ, ಹೊಗೇನಕಲ್‌ ಎರಡನೇ ಹಂತ, ಕಾವೇರಿ (ಕಟ್ಟಲೈ)– ವೈಗೈ– ಗುಂಡಾರ್‌ ಜೋಡಣೆ ಯೋಜನೆಗಳನ್ನು ವಿಧಾನಸಭೆಯು ವಿರೋಧಿಸಿದೆ. ಮೇಕೆದಾಟು ಯೋಜನೆಗೆ ತನ್ನ ಅನುಮತಿ ಪಡೆಯಬೇಕೆಂಬ ತಮಿಳುನಾಡು ಸರ್ಕಾರದ ನಿಲುವನ್ನು ಖಂಡಿಸಿದೆ.

ನದಿ ಜೋಡಣೆಯನ್ನು ವಿರೋಧಿಸುವ ನಿರ್ಣಯದಲ್ಲಿನ ಕೆಲವು ಅಂಶಗಳಿಗೆ ಕಾಂಗ್ರೆಸ್‌ನ ಎಚ್‌.ಕೆ. ಪಾಟೀಲ ಆಕ್ಷೇಪ ಎತ್ತಿದರು. ‘ನದಿ ಜೋಡಣೆ ಯೋಜನೆಯನ್ನು ಕರ್ನಾಟಕ ಒಪ್ಪಿಕೊಂಡಿಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸುವ ವಾಕ್ಯವನ್ನು ಸೇರಿಸಬೇಕು’ ಎಂದು ಒತ್ತಾಯಿಸಿದರು. ಬಳಿಕ ನಿರ್ಣಯದಲ್ಲಿ ತಿದ್ದುಪಡಿ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT