ಭಾನುವಾರ, ಜುಲೈ 3, 2022
27 °C

ಮತಾಂತರ ನಿಷೇಧ ಮಸೂದೆ: ಮಠಾಧೀಶರ ಬೆಂಬಲ ಕೋರಿದ ಸಿ.ಎಂ ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಮತಾಂತರ ನಿಷೇಧ ಮಸೂದೆಗೆ ವಿಧಾನಮಂಡಲ ಅಧಿವೇಶನದಲ್ಲಿ ಅನುಮೋದನೆ ಪಡೆದು ಕಾಯ್ದೆ ರೂಪಿಸಿ ಜಾರಿಗೊಳಿಸಲು ಬೆಂಬಲ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಠಾಧೀಶರನ್ನು ಕೋರಿದರು.

‘ಮತಾಂತರ ನಿಷೇಧ ಮಸೂದೆಯನ್ನು ಅಧಿವೇಶನದಲ್ಲಿ ಮಂಡಿಸಿ, ಕಾಯ್ದೆಯನ್ನು ಕೂಡಲೇ ಜಾರಿಗೊಳಿಸಬೇಕು’  ಎಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಉತ್ತರ ಪ್ರಾಂತದ ವತಿಯಿಂದ ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಠಾಧೀಶರ ಸಭೆಯಲ್ಲಿ ಶ್ರೀಗಳು ಹಾಗೂ ವಿಎಚ್‌ಪಿ ಮುಖಂಡರಿಂದ ಮನವಿ ಸ್ವೀಕರಿಸಿ ಅವರು ಮಾತನಾಡಿದರು.

‘ನಮ್ಮ ಅಸ್ಮಿತೆ ಇಲ್ಲದೆ ಬದುಕಲಾಗುವುದಿಲ್ಲ. ನಮ್ಮಲ್ಲಿರುವ ಬಡತನ–ಅಸಹಾಯಕತೆ ದುರುಪಯೋಗ ಮಾಡಿಕೊಳ್ಳುವ ಪ್ರಯತ್ನ ನಡೆಯುತ್ತಿವೆ. ಇದನ್ನು ತಡೆಯಬೇಕು’ ಎಂದು ಹೇಳಿದರು.

ಕಾನೂನು ಬೇಕಾಗಿದೆ: ‘ಆಸೆ, ಆಮಿಷ, ಒತ್ತಡ ಅಥವಾ ಒತ್ತಾಯದಿಂದ ಮತಾಂತರ ಮಾಡುವುದನ್ನು ತಡೆಯಲು ಕಾನೂನು ಬೇಕಾಗಿದೆ. ಸರ್ಕಾರದ ಭಾಗವಾಗಿ ನಮ್ಮ ಕರ್ತವ್ಯ ನಿರ್ವಹಿಸುತ್ತೇವೆ. ಚಳವಳಿಗೆ ಅಗತ್ಯ ಸಹಕಾರವನ್ನೂ ಕೊಡುತ್ತೇವೆ’ ಎಂದು ತಿಳಿಸಿದರು.

‘ಮತಾಂತರ ನಿಷೇಧ ಕಾಯ್ದೆಯನ್ನು ಈಗ ವಿರೋಧಿಸುತ್ತಿರುವವರೇ 2016ರಲ್ಲಿ ಜಾರಿಗೆ ಯತ್ನಿಸಿದ್ದರು. ರಾಜಕೀಯ ಹಿತಾಸಕ್ತಿಯಿಂದಾಗಿ ನಿಲ್ಲಿಸಿದ್ದರು’ ಎಂದು ಪರೋಕ್ಷವಾಗಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ
ನಡೆಸಿದರು.

‘ಶ್ರೀಗಳು ಮನವಿ ಸಲ್ಲಿಸಿದ್ದರಿಂದ ಮುಂದಿನ ಹೆಜ್ಜೆ ಇಡಲು ಸ್ಫೂರ್ತಿ ಹಾಗೂ ಶಕ್ತಿ ಸಿಕ್ಕಿದೆ. ನಮ್ಮ ಕಾರ್ಯ ಯಶಸ್ವಿಯಾಗಲು ಶ್ರೀಗಳೆಲ್ಲರ ಆಶೀರ್ವಾದವಿರಲಿ’ ಎಂದು ಮನವಿ ಮಾಡಿದರು.

ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ‘ಮತಾಂತರವು ದೇಶದ ಅಖಂಡತೆಗೆ ಮಾರಕವಾಗಿದೆ. ಮತಾಂತರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಕೋರಿದರು.

ನಿಡಸೋಸಿಯ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಕಾರಂಜಿ ಮಠದ ಗುರುಸಿದ್ದ ಸ್ವಾಮೀಜಿ, ಮಹಾರಾಷ್ಟ್ರದ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಭಾಗವಹಿಸಿದ್ದರು. ಸಚಿವರಾದ ಮುರುಗೇಶ ನಿರಾಣಿ, ಪ್ರಭು ಚವ್ಹಾಣ, ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ, ಶಾಸಕ ಅನಿಲ ಬೆನಕೆ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಸಭಿಕರ ಸಾಲಿನಲ್ಲಿದ್ದರು.

‘ಎಲ್ಲರೂ ಹಿಂದೂ ಧರ್ಮೀಯರೇ’
‘ದೇಶದ ಮೇಲೆ  ಹಲವು ಬಾರಿ ಭೌಗೋಳಿಕವಾಗಿ ದಾಳಿಯಾಗಿದೆ. ಆಗೆಲ್ಲಾ ಹಿಂದೂ ಧರ್ಮ ಸಂಕಷ್ಟಕ್ಕೀಡಾಗಿದೆ. ಹಲವು ಸಂದರ್ಭಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮತಾಂತರ ನಡೆದಿದೆ. ದೇಶದಲ್ಲಿರುವ ಇತರ ಧರ್ಮೀಯರ ಮೂಲ ಹುಡುಕಿದರೆ ಅವರೆಲ್ಲರೂ ಹಿಂದೂ ಧರ್ಮೀಯರೇ ಆಗಿದ್ದಾರೆ. ಭೌಗೋಳಿಕ ದಾಳಿ ಜೊತೆಗೆ ಧಾರ್ಮಿಕ ದಾಳಿಯು ಹಿಂದೆ ಮತಾಂತರದ ಮೂಲಕ ಆಗುತ್ತಿತ್ತು. ಆದರೆ, ಈಗ ಗುಪ್ತವಾಗಿ ನಡೆಯುತ್ತಿರುವುದನ್ನು ಗಮನಿಸಿದ್ದೇವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

*
‘ಮತಾಂತರ ನಿಷೇಧ ಸಮಾಜದ ಅಗತ್ಯ. ಅದನ್ನು ಜವಾಬ್ದಾರಿಯುತ ಸರ್ಕಾರ ಈಡೇರಿಸದಿದ್ದರೆ, ಆಶಯಗಳಿಗೆ ಪ್ರತಿಕ್ರಿಯಿಸದಿದ್ದರೆ ಅರ್ಥ ಇರುವುದಿಲ್ಲ’
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು