ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಧ್ವಜ: ಪರಿಷತ್‌ನಲ್ಲೂ ವಾಗ್ವಾದ, ಗದ್ದಲ

ನಿಲುವಳಿ ಸೂಚನೆ ತಿರಸ್ಕರಿಸಿದ ಸಭಾಪತಿ ಬಸವರಾಜ ಹೊರಟ್ಟಿ: ಕಾಂಗ್ರೆಸ್‌ ಸದಸ್ಯರ ಧರಣಿ
Last Updated 16 ಫೆಬ್ರುವರಿ 2022, 20:00 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರಧ್ವಜದ ಕುರಿತು ಸಚಿವ ಕೆ.ಎಸ್‌. ಈಶ್ವರಪ್ಪ ನೀಡಿರುವ ಹೇಳಿಕೆ ವಿಧಾನಪರಿಷತ್‌ನಲ್ಲೂ ಬುಧವಾರ ಗದ್ದಲ ಸೃಷ್ಟಿಸಿತು. ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ಬಿರುಸಿನ ವಾಗ್ವಾದ ನಡೆದಿದ್ದರಿಂದ ಇಡೀ ದಿನ ಕಲಾಪ ನಡೆಯಲಿಲ್ಲ.

ಈ ವಿಷಯದ ಬಗ್ಗೆ ನಿಲುವಳಿ ಸೂಚನೆಮಂಡಿಸಲು ಪರಿಷತ್‌ನಲ್ಲಿನ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ಅವರಿಗೆ ಸಭಾಪತಿ ಬಸವರಾಜ ಹೊರಟ್ಟಿ ಅವಕಾಶ ನೀಡಲಿಲ್ಲ.

ಕಾಂಗ್ರೆಸ್‌ ಸದಸ್ಯರು ಸಭಾಪತಿ ಪೀಠದ ಮುಂದೆ ಎರಡು ಬಾರಿ ಧರಣಿ ನಡೆಸಿದ್ದರಿಂದ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಯಿತು.

ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ಬಿ.ಕೆ. ಹರಿಪ್ರಸಾದ್‌, ‘ಕೆಂಪು ಕೋಟೆ ಮೇಲೆ ಕೇಸರಿ ಧ್ವಜ ಹಾರಿಸುವುದಾಗಿ ಹೇಳಿಕೆ ನೀಡುವ ಮೂಲಕ ಸಚಿವ ಈಶ್ವರಪ್ಪ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ. ಈ ಬಗ್ಗೆ ಚರ್ಚೆಗಾಗಿ ನಿಯಮ 59ರ ಅಡಿಯಲ್ಲಿ ನಿಲುವಳಿ ಸೂಚನೆ ಮಂಡಿಸಲು ಅವಕಾಶ ನೀಡಬೇಕು. ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾಗೊಳಿಸಿ ದೇಶದ್ರೋಹ ಪ್ರಕರಣ ದಾಖಲಿಸಿ ಬಂಧಿಸಬೇಕು’ ಎಂದು ಒತ್ತಾಯಿಸಿದರು.

ಕಾಂಗ್ರೆಸ್‌ನ ಸಲಿಂ ಅಹಮದ್‌ ಮತ್ತು ಪ್ರಕಾಶ್‌ ಕೆ. ರಾಥೋಡ್‌ ಅವರು ದನಿಗೂಡಿಸಿದಾಗ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಸದನದಲ್ಲಿ ಗದ್ದಲ ಉಂಟಾಗಿದ್ದರಿಂದ ಸಭಾಪತಿ ಬಸವರಾಜ ಹೊರಟ್ಟಿ ಅವರು ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಿದರು.

ಕಲಾಪ ಮತ್ತೆ ಆರಂಭವಾದಾಗ ಹರಿಪ್ರಸಾದ್ ಅವರು, ‘ಸಾಂವಿಧಾನಿಕ ಹುದ್ದೆ ಹೊಂದಿರುವ ಸಚಿವರ ಪ್ರಚೋದನಾಕಾರಿ ಹೇಳಿಕೆ ದೇಶದ ಏಕತೆಯನ್ನು ಛಿದ್ರಗೊಳಿಸುವ ಹುನ್ನಾರವಾಗಿದೆ. ತ್ರಿವರ್ಣ ಧ್ವಜವನ್ನು ಆರೆಸ್ಸೆಸ್, ಜನಸಂಘ ಮತ್ತು ಬಿಜೆಪಿ ಕೂಡಾ ಒಪ್ಪಿಕೊಂಡಿಲ್ಲ’ ಎಂದು ಆರೋಪಿಸಿದರು.

ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಬಿ.ಸಿ. ನಾಗೇಶ್‌ ಮತ್ತು ಇತರ ಸದಸ್ಯರು, ‘ನಾಗಪುರದ ಹೆಸರನ್ನು ಅವಹೇಳನಕಾರಿಯಾಗಿ ಮತ್ತು ವ್ಯಂಗ್ಯವಾಗಿ ಹೇಳುವ ಮೂಲಕ ಹರಿಪ್ರಸಾದ್‌ ಅವರು ಅವಮಾನ ಮಾಡಿದ್ದಾರೆ’ ಎಂದರು.

‘ಅಂಬೇಡ್ಕರ್‌ ಅವರ ಜನ್ಮಸ್ಥಳಕ್ಕೂ ಅವಮಾನ ಮಾಡುತ್ತಿದ್ದಾರೆ’ ಎಂದು ಬಿಜೆಪಿಯ ವೈ.ಎ. ನಾರಾಯಣಸ್ವಾಮಿ ಹೇಳಿದರು. ಆಗ ಪ್ರತಿಕ್ರಿಯಿಸಿದ ಹರಿಪ್ರಸಾದ್‌ ಅವರು, ‘ಅಂಬೇಡ್ಕರ್‌ ಅವರು ಜನಿಸಿದ್ದು ನಾಗಪುರದಲ್ಲಿ ಅಲ್ಲ. ಅಂಬೇಡ್ಕರ್‌ ಜನ್ಮ ಸ್ಥಳ ಮಧ್ಯಪ್ರದೇಶದ ಇಂದೋರ್‌ ಜಿಲ್ಲೆಯ ಮಹೂದಲ್ಲಿ. ಇದೂ ಗೊತ್ತಿಲ್ಲವೇ?’ ಎಂದರು.

ಈಶ್ವರಪ್ಪ ಅವರನ್ನು ಸಮರ್ಥಿಸಿಕೊಂಡ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ‘ಈಶ್ವರಪ್ಪ ಅವರ ಹೇಳಿಕೆಯಲ್ಲಿ ಯಾವ ತಪ್ಪೂ ಇಲ್ಲ. 200–300 ವರ್ಷಗಳ ನಂತರ ನಡೆಯಬಹುದಾದ ಘಟನೆಯ ಬಗ್ಗೆ ಅವರು ಹೇಳಿದ್ದಾರೆ. ರಾಜಕೀಯ ಕಾರಣಕ್ಕೆ ತೇಜೋವಧೆ ಮಾಡುತ್ತಿರುವುದರಿಂದ ನಿಲುವಳಿ ಸೂಚನೆ ತಿರಸ್ಕರಿಸಬೇಕು’ ಎಂದು ಕೋರಿದರು.

ನಂತರ, ನಿಲುವಳಿ ಸೂಚನೆ ತಿರಸ್ಕರಿಸಿರುವುದಾಗಿ ಸಭಾಪತಿ ಪ್ರಕಟಿಸಿದರು. ಇದರಿಂದ, ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್‌ ಸದಸ್ಯರು, ಪೀಠದ ಮುಂದೆ ಧರಣಿ ನಡೆಸಿದ್ದರಿಂದ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು.

ಮಧ್ಯಾಹ್ನದ ಕಲಾಪ ಸೇರಿದಾಗ ಕವಿ ಚೆನ್ನವೀರ ಕಣವಿ ಮತ್ತು ಮಾಜಿ ಶಾಸಕ ಎಚ್.ಡಿ. ಚೌಡಯ್ಯ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಕಾಂಗ್ರೆಸ್‌ ಸದಸ್ಯರು ಮತ್ತೆ ಧರಣಿ ಮುಂದುವರಿಸಿದರು. ಈ ಮಧ್ಯೆಯೇ ಪ್ರಶ್ನೋತ್ತರ ಕಲಾಪ ನಡೆಯಿತು. ಬಳಿಕ ಕಲಾಪವನ್ನು ಸಭಾಪತಿ ಗುರುವಾರಕ್ಕೆ ಮುಂದೂಡಿದರು.

ಸದನದಲ್ಲಿ ಸದಸ್ಯರ ಮಾತು

ಸದನದ ಮರ್ಯಾದೆ ತೆಗೆಯಬೇಡಿ. ನಿಮಗೆ ಹೇಳೋರು, ಕೇಳೋರು ಯಾರು ಇಲ್ಲವೇ?

-ಬಸವರಾಜ ಹೊರಟ್ಟಿ,ವಿಧಾನ ಪರಿಷತ್‌ ಸಭಾಪತಿ

***

ಭಾರತಾಂಬೆಯ ಹಾಲು ಕುಡಿದ ನಾವು ಕಾಶ್ಮೀರದ ಲಾಲ್‌ಚೌಕ್‌ನಲ್ಲಿ ರಾಷ್ಟ್ರಧ್ವಜ ಹಾರಿಸಿದ್ದೇವೆ.

-ಭಾರತಿ ಶೆಟ್ಟಿ,ಬಿಜೆಪಿ ಸದಸ್ಯೆ

***

ಸಚಿವ ಈಶ್ವರಪ್ಪ ಕ್ಷಮೆ ಕೇಳಲಿ. ಸಚಿವ ಸಂಪುಟದಿಂದ ಅವರನ್ನು ವಜಾಗೊಳಿಸಿ, ಆ ಮೂಲಕ ನಿಮ್ಮ ದೇಶಭಕ್ತಿ ತೋರಿಸಿ.

-ಸಿ.ಎಂ. ಇಬ್ರಾಹಿಂ,ಕಾಂಗ್ರೆಸ್‌ ಸದಸ್ಯ

***

ಈಶ್ವರಪ್ಪ ಅವರಿಗೆ ನಾಚಿಕೆಯಾಗಬೇಕು. ಇದು ಬಿಜೆಪಿ ಸಂಸ್ಕೃತಿಯಾ? ಇವರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಬೇಕು.

-ಸಲೀಂಅಹಮದ್‌,ಕಾಂಗ್ರೆಸ್ ಸದಸ್ಯ

***

ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಸಚಿವ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.

-ಪ್ರಕಾಶ್ ಕೆ. ರಾಥೋಡ್‌,ಕಾಂಗ್ರೆಸ್‌ ಸದಸ್ಯ

***

ಗೋಲಿಬಾರ್‌ಗೆ ಎದೆವೊಡ್ಡಿ ರಾಷ್ಟ್ರಧ್ವಜ ಹಾರಿಸಿದ ಪಕ್ಷ ಬಿಜೆಪಿ. ನಿಲುವಳಿ ಸೂಚನೆಯಲ್ಲಿ ಹುರುಳಿಲ್ಲ

-ಜೆ.ಸಿ. ಮಾಧುಸ್ವಾಮಿ,ಕಾನೂನು ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT