ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗರ ಮೇಲೂ ಕಲ್ಲು – ಮೊಟ್ಟೆ ಹೊಡೆಸಬಹುದು, ನಾವು ಹಾಗೆ ಮಾಡಲ್ಲ: ಸಿದ್ದರಾಮಯ್ಯ

ಕಾಂಗ್ರೆಸ್‌ – ಬಿಜೆಪಿ ಜಟಾಪಟಿ
Last Updated 13 ಸೆಪ್ಟೆಂಬರ್ 2022, 14:31 IST
ಅಕ್ಷರ ಗಾತ್ರ

ಬೆಂಗಳೂರು: ‘ನೀವು ಮೊಟ್ಟೆ ಎಸೆದರೆ ಶೂರರೂ ಅಲ್ಲ, ಧೀರರೂ ಅಲ್ಲ. ಇವಕ್ಕೆಲ್ಲ ಹೆದ್ರೋ ಮಕ್ಕಳೂ ಅಲ್ಲ. ಇಡೀ ರಾಜ್ಯದಲ್ಲಿ ನಿಮ್ಮ ಮೇಲೂ ಮೊಟ್ಟೆಗಳಿಂದ ಹೊಡೆಸಬಹುದು. ಆದರೆ ನಾವು ಹಾಗೆ ಮಾಡಲ್ಲ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ಧ ಗುಡುಗಿದರು.

ವಿಧಾನಸಭೆಯಲ್ಲಿ ಮಂಗಳವಾರ ಮಳೆ ಮತ್ತು ಪ್ರವಾಹದ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದರು. ಕೊಡಗಿನಲ್ಲಿ ತಮ್ಮ ವಿರುದ್ಧ ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಮೊಟ್ಟೆ ಎಸೆದ ಘಟನೆಯನ್ನು ಪ್ರಸ್ತಾಪಿಸಿ ಆಕ್ರೋಶ ವ್ಯಕ್ತಪಡಿಸಿದರು.

‘ಹಿಂದೆ ಜನಾರ್ದನ ರೆಡ್ಡಿ ಬಳ್ಳಾರಿಗೆ ಬನ್ನಿ ನೋಡ್ಕೋತ್ತೇನೆ ಎಂದು ಸವಾಲು ಹಾಕಿದಾಗ ನಾವು ಅಲ್ಲಿಗೆ ಹೋದ ಮೇಲೆ ಏನೆಲ್ಲಾ ಆಯಿತು ಎಂಬುದು ಗೊತ್ತೇ ಇದೆ. ಕೊಡಗಿಗೆ ಬನ್ನಿ ನೋಡ್ಕೋತ್ತೇವೆ ಎಂದು ಸವಾಲು ಹಾಕಿದರೆ ಬರಲು ಹಿಂದೇಟು ಹಾಕುವುದಿಲ್ಲ. ನೀವೇನು ಪಾಳೆಗಾರರ? ಮೈಸೂರು ಮತ್ತು ಬೇರೆ ಜಿಲ್ಲೆಗಳಿಗೆ ನೀವು ಬಂದರೆ ನಾವೂ ಹೀಗೆ ಮಾಡಿದರೆ ಏನಾಗುತ್ತೆ’ ಎಂದು ಬಿಜೆಪಿ ಶಾಸಕರಾದ ಅಪ್ಪಚ್ಚು ರಂಜನ್‌ ಮತ್ತು ಕೆ.ಜಿ.ಬೋಪಯ್ಯ ಅವರನ್ನು ಉದ್ದೇಶಿಸಿ ಕಿಡಿಕಾರಿದರು.

‘ಕೊಡಗಿಗೆ ರೈತರ ಕಷ್ಟವನ್ನು ಕೇಳಲೆಂದು ಹೋಗಿದ್ದು. ಅಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ, ಕೋಳಿ ಮೊಟ್ಟೆ ಎಸೆದಿದ್ದು ಏಕೆ. ಇದಕ್ಕೆ ಕಾರಣವೇನು ಎಂಬುದು ನನಗೆ ಗೊತ್ತಿಲ್ಲ’ ಎಂದು ಸಿದ್ದರಾಮಯ್ಯ ಹೇಳಿದಾಗ, ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಇವರೇನೋ ಕಾರಣ ಹೇಳುತ್ತಾರಲ್ಲ’ ಎಂದು ಬೋಪಯ್ಯ ಮತ್ತು ಅಪ್ಪಚ್ಚು ರಂಜನ್ ಅವರತ್ತ ನೋಡುತ್ತಾ ಸಿದ್ದರಾಮಯ್ಯ ಅವರ ಗಮನ ಸೆಳೆದರು.

ಅದಕ್ಕೆ ಪ್ರತಿಕ್ರಿಯಿಸಿದ ಬೋಪಯ್ಯ, ‘ಇವರು ಟಿಪ್ಪು ಹೆಸರನ್ನು ಪದೇ ಪದೇ ಹೇಳುತ್ತಾರೆ. ಇದರಿಂದ ಕೊಡಗಿನ ಜನ ಕೆರಳುತ್ತಾರೆ’ ಎಂದರು.

‘ಮೊಟ್ಟೆ ಎಸೆದದ್ದು ನಿಮ್ಮ ಪಕ್ಷದವರೇ, ನಮ್ಮ ಕಾರ್ಯಕರ್ತರಲ್ಲ’ ಎಂದು ಬಿಜೆಪಿಯ ಮತ್ತೊಬ್ಬ ಶಾಸಕ ಅಪ್ಪಚ್ಚು ರಂಜನ್‌ ಹೇಳಿದಾಗ, ಕೆರಳಿದ ಸಿದ್ದರಾಮಯ್ಯ, ‘ನೀನೇ ಮಾಡ್ಸಿದ್ದು ಕೂತುಕೊ, ಇಂತಹ ಷಡ್ಯಂತ್ರಗಳಿಗೆ ಮಣಿಯುವುದಿಲ್ಲ. ನಾವೂ ಒಂದು ಕಾಲದಲ್ಲಿ ಕಪ್ಪು ಬಾವುಟ ತೋರಿಸಿ, ಮೊಟ್ಟೆ ಎಸೆದವರೇ. ನಿಮ್ಮ ಆಟಗಳಿಗೆ ಹೆದರುವುದಿಲ್ಲ. ಟಿಪ್ಪು ಬಗ್ಗೆ ಮಾತಾಡ್ತಿರಾ ಅಲ್ಲ, ಆತ ಒಬ್ಬ ಬ್ರಿಟಿಷರ ವಿರುದ್ಧ ಧರ್ಮಯುದ್ಧ (ಕ್ರುಸೇಡ್) ಸಾರಿದವ. ನಿಮ್ಮವರು ಹಿಂದೆ ಅಧಿಕಾರದಲ್ಲಿ ಇದ್ದಾಗ ಟಿಪ್ಪು ಪೇಟ ಹಾಕಿಕೊಂಡು ಖಡ್ಗ ಹಿಡಿದಿದ್ದರು. ಆಗ ನಿಮಗೆ ನಾಚಿಕೆ ಆಗಲಿಲ್ವಾ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

‘ನಿಮ್ಮಿಂದಾಗಿ ಕೊಡಗಿನ ಅಭಿವೃದ್ಧಿ ನಾಶವಾಗಿದೆ. ಕೊಡಗಿನ ಜನ ಒಳ್ಳೆಯವರು. ಆದರೆ, ಅವರನ್ನು ಎತ್ತಿಕಟ್ಟಿ ಹಾಳು ಮಾಡುತ್ತಿದ್ದೀರಿ. ನೀವೇನು ಅಧಿಕಾರದಲ್ಲಿ ಸದಾ ಗೂಟ ಹೊಡ್ಕೊಂಡು ಇರ್ತೀರಾ’ ಎಂದೂ ಪ್ರಶ್ನಿಸಿದರು.

‘20 ರಿಂದ 30 ಜನ ಸೇರಿ ಕಾರಿನ ಮೇಲೆ ಮೊಟ್ಟೆ ಮತ್ತು ಕಲ್ಲು ಎಸೆಯುವಾಗ ಪೊಲೀಸಿನವರು ಮೂಕ ಪ್ರೇಕ್ಷಕರಾಗಿ ನಿಂತಿದ್ದರು. ಅವರನ್ನು ಏಕೆ ಬಂಧಿಸಲಿಲ್ಲ. ನಿಮ್ಮದೇನು ಸ್ವತಂತ್ರ ರಾಜ್ಯವಾ? ಕಿಡಿಗೇಡಿಗಳು 5 ಕಡೆ ಕಪ್ಪು ಬಾವುಟ ತೋರಿಸಿದರು. ಎಸ್ಪಿ ಸುಮ್ಮನೆ ಇದ್ದರು. ಇವರು ಕೆಲಸ ಮಾಡಲು ಲಾಯಕ್ಕಿಲ್ಲ’ ಎಂದು ಸಿದ್ದರಾಮಯ್ಯ ಹೇಳಿದರು.

ಈ ಹಂತದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಸದಸ್ಯರ ಮಧ್ಯೆ ತೀವ್ರ ವಾಕ್ಸಮರ ನಡೆಯಿತು. ‘ನಾನು ಕಪ್ಪು ಬಾವುಟ ತೋರಿಸಲು ಹೋದವರನ್ನು ಬಿಡಿಸಲು ಠಾಣೆಗೆ ಹೋಗಿದ್ದೆ. ಆದರೆ, ಮೊಟ್ಟೆ ಎಸೆದ ವ್ಯಕ್ತಿ ನಿಮ್ಮ ಕಾರ್ಯಕರ್ತ’ ಎಂದು ಅಪ್ಪಚ್ಚು ರಂಜನ್‌ ಹೇಳಿದಾಗ ಕಾಂಗ್ರೆಸ್‌ ಸದಸ್ಯರು ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದರು. ಕಾಂಗ್ರೆಸ್‌ನ ಕೆ.ಜೆ.ಜಾರ್ಜ್‌ ಮತ್ತು ಬೋಪಯ್ಯ ಮಧ್ಯೆ ವಾಗ್ವಾದ ನಡೆಯಿತು.

‘ಅಪ್ಪಚ್ಚು ರಂಜನ್‌ ಅವರ ಕುಮ್ಮಕ್ಕಿನಿಂದಲೇ ಇವೆಲ್ಲ ನಡೆದದ್ದು, ಗೂಂಡಾಗಳನ್ನು ಅಲ್ಲಿಗೆ ಕಳಿಸಿದ ಇವರೇ ನಿಜವಾದ ತಪ್ಪಿತಸ್ಥರು’ ಎಂದು ಸಿದ್ದರಾಮಯ್ಯ ಹೇಳಿದರು.

‘ನೀವು ಮಳೆ ಮತ್ತು ಪ್ರವಾಹದ ಬಗ್ಗೆ ಮಾತನಾಡದೇ ಕೊಡಗಿನಲ್ಲಿ ಮೊಟ್ಟೆ ಎಸೆದ ವಿಚಾರ ಪ್ರಸ್ತಾಪಿಸುವುದಿದ್ದರೆ, ತಮಗೆ ಕೊಡಗಿನಲ್ಲಿ ಪೊಲೀಸರು ರಕ್ಷಣೆ ನೀಡಲಿಲ್ಲ ಎಂದು ಪ್ರತ್ಯೇಕ ನೊಟೀಸ್ ಕೊಡಿ. ಆ ಬಗ್ಗೆ ಚರ್ಚೆ ನಡೆಬಹುದು. ಸುಮ್ಮನೇ ಆರೋಪ ಮಾಡುತ್ತಾ ನಿಂತರೆ ಆಗುವುದಿಲ್ಲ’ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ ಹೇಳಿದರು.

‘ಕೊಡಗಿಗೆ ಬಂದು ನಿಮ್ಮ ಮನೆಗೇ ನುಗ್ಗುತ್ತವೇ ಎಂದು ನಿಮ್ಮ ಪಕ್ಷದ ವಕ್ತಾರ ಲಕ್ಷ್ಮಣ್‌ ಎಂಬುವರು ಸವಾಲು ಹಾಕಿದರು. ಆಗ ತಾಕತ್ತಿದ್ದರೆ ಬನ್ನಿ ಎಂದಿದ್ದು ನಿಜ. ಆ ಮಾತು ನಿಮಗೆ ಹೇಳಿದ್ದಲ್ಲ. ಲಕ್ಷ್ಮಣ್ ಸವಾಲಿಗೆ ಪ್ರತಿಕ್ರಿಯೆ ನೀಡಿದ್ದು. ನೀವೂ ಬೇಕಿದ್ದರೆ ನಮ್ಮ ಮನೆಗೆ ಬನ್ನಿ’ ಎಂದು ಬೊಪ್ಪಯ್ಯ ಆಹ್ವಾನಿಸಿದರು. ಆಗ ಮಧ್ಯಪ್ರವೇಶಿಸಿದ ಕಂದಾಯ ಸಚಿವ ಆರ್‌.ಅಶೋಕ, ‘ಮಳೆ ಮತ್ತು ಪ್ರವಾಹದ ಬಗ್ಗೆ ಮಾತ್ರ ಮಾತನಾಡಿ. ವಿಷಯಾಂತರ ಮಾಡುವುದು ಬೇಡ’ ಎಂದು ವಾಗ್ವಾದಕ್ಕೆ ತೆರೆ ಎಳೆದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT