ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿ ಸ್ಥಾನಕ್ಕೆ ನಾನು ಲಾಬಿ ಮಾಡಿಲ್ಲ: ಮುರುಗೇಶ್ ನಿರಾಣಿ

Last Updated 27 ಜುಲೈ 2021, 9:29 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಖ್ಯಮಂತ್ರಿ ಸ್ಥಾನಕ್ಕೆ ನಾನು ಲಾಬಿ ಮಾಡಿಲ್ಲ. ಅಧಿಕಾರಕ್ಕಾಗಿ ಹಿಂದೆಯೂ ಲಾಬಿ ಮಾಡಿಲ್ಲ. ಮುಂದೆಯೂ‌ ಮಾಡಲ್ಲ’ ಎಂದು ಮುರುಗೇಶ್ ನಿರಾಣಿ ಹೇಳಿದರು.

ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಮುಖ್ಯಮಂತ್ರಿಯಾಗಿ ಹೈಕಮಾಂಡ್‌ ಯಾರನ್ನೇ ಆಯ್ಕೆ ಮಾಡಿದರೂ ಸಂತೋಷದಿಂದ ಎಲ್ಲರೂ ಸ್ವೀಕರಿಸುತ್ತೇವೆ’ ಎಂದರು.

‘ದಕ್ಷಿಣಭಾರತದ ಮಟ್ಟದಲ್ಲಿ ಬಿಜೆಪಿಯನ್ನು ಕಟ್ಟಿದವರು ಯಡಿಯೂರಪ್ಪ. ಕರ್ನಾಟಕದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಪಕ್ಷದ ಶಾಸಕರನ್ನು ಅವರನ್ನು ಗೆಲ್ಲಿಸಿದ್ದಾರೆ. ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ‌ನಡುಗುವುದು ಎಂಬ ಮಾತು ಹೇಳುತ್ತಿದ್ದೆವು. ತಂದೆ ಸ್ಥಾನದಲ್ಲಿ ನಿಂತು ನಮ್ಮನ್ನು ಯಡಿಯೂರಪ್ಪ ಬೆಳೆಸಿದ್ದಾರೆ. ಅವರು ರಾಜೀನಾಮೆ ‌ಕೊಟ್ಟಿರುವುದು ಬಹಳ ನೋವು ಉಂಟು ಮಾಡಿದೆ. ಇದು ಬಿಜೆಪಿಯಲ್ಲಿ ಅನಿವಾರ್ಯ. 75 ವರ್ಷದ ಬಳಿಕ ಯುವಕರಿಗೆ ಬಿಟ್ಟು ಕೊಡಬೇಕು. ಇದು ಬಿಜೆಪಿ ಸಿದ್ಧಾಂತ’ ಎಂದೂ ಹೇಳಿದರು.

‘ಈಗ ಹೊಸ ನಾಯಕರ ಆಯ್ಕೆ ಮಾಡುವ ಸಂದರ್ಭ. ಹೈಕಮಾಂಡ್ ಹೊಸ ನಾಯಕನನ್ನು ಆಯ್ಕೆ ಮಾಡಲಿದೆ. ಬಿಜೆಪಿಯ ಎಲ್ಲ ಶಾಸಕರು ಮುಖ್ಯಮಂತ್ರಿ ಸ್ಥಾನಕ್ಕೆ ಯೋಗ್ಯರಿದ್ದಾರೆ. ಯಾರೇ ಮುಖ್ಯಮಂತ್ರಿ ಆದರೂ ಅದಕ್ಕೆ ಸಂಘ ಪರಿವಾರ ಮತ್ತು ಯಡಿಯೂರಪ್ಪ ಅವರ ಮಾರ್ಗದರ್ಶನ ಇರಲಿದೆ’ ಎಂದರು.

ಯಡಿಯೂರಪ್ಪ ಅವರನ್ನು ಬೆಳಿಗ್ಗೆ ಭೇಟಿ ಮಾಡಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಬೆಂಗಳೂರಲ್ಲಿ ಇಲ್ಲದೇ ಇದ್ದುದರಿಂದ ಸೋಮವಾರ ಅವರನ್ನು ಭೇಟಿ‌ ಮಾಡಲು ಸಾಧ್ಯ ಆಗಿರಲಿಲ್ಲ. ಹೀಗಾಗಿ, ಯಡಿಯೂರಪ್ಪ ಅವರನ್ನು ಇಂದು ಭೇಟಿ ಮಾಡಿ ಕಾರ್ಯಚಟುವಟಿಕೆ, ಕ್ಷೇತ್ರದ ಬಗ್ಗೆ ಮಾತುಕತೆ ‌ನಡೆಸಿದ್ದೇನೆ. ರಾಜಕೀಯ ಚರ್ಚೆ ‌ಮಾಡಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಉತ್ತರ ಕರ್ನಾಟಕದವರು ಮುಖ್ಯಮಂತ್ರಿ ಆಗಬೇಕು’ ಎಂದು ಉಮೇಶ ಕತ್ತಿ ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಅದು ಅವರ ಅಭಿಪ್ರಾಯ. ಅವರ ಅಭಿಪ್ರಾಯ ಹೇಳಿದ್ದಾರೆ. ಅವರ ಮಾತಿನಲ್ಲಿ ಯಾವುದೇ ರೀತಿಯ ತಪ್ಪಿಲ್ಲ. ಏನೇ ಹೇಳಿದರೂ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಹೈಕಮಾಂಡ್ ತೀರ್ಮಾನಕ್ಕೆ ನಾವು ಎಲ್ಲರೂ ಬದ್ಧರಾಗಿರುತ್ತೇವೆ. ಪಕ್ಷ ಯಾವ ಜವಾಬ್ದಾರಿಯನ್ನು ಕೊಡುತ್ತೊ ಅದನ್ನು ನಿಭಾಯಿಸಲು ಸಿದ್ಧ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT