ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ಹೇಳಿಕೆ ವಿವಾದ: ಸತೀಶ್ ಜಾರಕಿಹೊಳಿ ವಿರುದ್ಧ ಬಿಜೆಪಿಯಿಂದ ಭಾರಿ ಪ್ರತಿಭಟನೆ

Last Updated 9 ನವೆಂಬರ್ 2022, 9:08 IST
ಅಕ್ಷರ ಗಾತ್ರ

ಬೆಳಗಾವಿ: 'ಹಿಂದೂ' ಪದ ಕುರಿತು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ನೀಡಿದ ಹೇಳಿಕೆ ಖಂಡಿಸಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು.

ಇಲ್ಲಿನ ರಾಣಿ ಚನ್ನಮ್ಮನ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಸತೀಶ ಜಾರಕಿಹೊಳಿ ಕೂಡಲೇ ತಮ್ಮ ಹೇಳಿಕೆ ಹಿಂದಕ್ಕೆ ಪಡೆಯಬೇಕು. ಹಿಂದೂಗಳ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಮಹಾಂತೇಶ ದೊಡ್ಡಗೌಡರ, ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ಮಹಾಂತೇಶ ಕವಟಗಿಮಠ, ಎಂ.ಬಿ.ಝಿರಲಿ ಇತರರಿದ್ದರು.

ಸತೀಶ ಜಾರಕಿಹೊಳಿ ಹೇಳಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ
ಹೊಸಪೇಟೆ (ವಿಜಯನಗರ): ‘ಹಿಂದೂ’ ಪದದ ಬಗ್ಗೆ ಸತೀಶ ಜಾರಕಿಹೊಳಿ ಕೊಟ್ಟಿರುವ ಹೇಳಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಬುಧವಾರ ನಗರದ ಡಾ. ಪುನೀತ್‌ ರಾಜಕುಮಾರ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಕೆಲಕಾಲ ರಸ್ತೆತಡೆ ನಡೆಸಿದ ಕಾರ್ಯಕರ್ತರು, ಸತೀಶ ಜಾರಕಿಹೊಳಿಗೆ ಧಿಕ್ಕಾರ ಎಂದು ಘೋಷಣೆಗಳನ್ನು ಕೂಗಿದರು. ‘ಸತೀಶ ಜಾರಕಿಹೊಳಿ ಅವರು ಹಿಂದೂಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಹಿಂದೂ ಪದದ ಅವಹೇಳನ ಮಾಡಿದ್ದಾರೆ. ಹಿಂದೂಗಳಿಗೆ ಅಪಮಾನ ಮಾಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಕಾಸೆಟ್ಟಿ ಉಮಾಪತಿ, ನಗರಸಭೆ ಸದಸ್ಯ ಜೀವರತ್ನಂ, ಜಿಲ್ಲಾ ಮಾಧ್ಯಮ ಸಂಚಾಲಕ ಸತ್ಯನಾರಾಯಣ, ಪಕ್ಷದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಸಾಲಿ ಸಿದ್ದಯ್ಯ ಸ್ವಾಮಿ, ಶಂಕರ್‌ ಮೇಟಿ ಇತರರಿದ್ದರು.

ಚಾಮರಾಜನಗರ: ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಹೇಳಿಕೆ ಖಂಡಿಸಿ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.ಜಾರಕಿಹೊಳಿ ಹೇಳಿಕೆ ಹಿಂಪಡೆದು ಕ್ಷಮಾಪಣೆ ಕೇಳಬೇಕು ಎಂದು ಆಗ್ರಹಿಸಿದರು.

ಸತೀಶ ಜಾರಕಿಹೊಳಿ ಪ್ರತಿಕೃತಿ ದಹಿಸಿ ಪ್ರತಿಭಟನೆ
ರಾಯಚೂರು:
ಶಾಸಕ ಸತೀಶ ಜಾರಕಿಹೊಳಿ ಹೇಳಿಕೆಯನ್ನು ವಿರೋಧಿಸಿ ಅವರ ಪ್ರತಿಕೃತಿ ದಹಿಸಿ ಜಿಲ್ಲಾ ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಯಿತು.ಜಿಲ್ಲಾ ಬಿಜೆಪಿ ಅಧ್ಯಕ್ಷ ರಮಾನಂದ ಯಾದವ್ ನೇತೃತ್ವದಲ್ಲಿ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಯಿತು. ಸತೀಶ ಜಾರಕಿಹೊಳಿ ವಿರುದ್ಧ ಘೊಷಣೆಗಳನ್ನು ಕೂಗಿದರು.

ಸತೀಶ್ ಜಾರಕಿಹೊಳಿ ಹೇಳಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

ಕೋಲಾರ: ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಹೇಳಿಕೆ‌‌ ಖಂಡಿಸಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಬುಧವಾರ ಇಲ್ಲಿನ ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.

'ನಾನು ಹಿಂದೂ' ಎಂದು ಘೋಷಣೆ ಕೂಗಿದರು. ‌'ಹಿಂದೂ ವಿರೋಧಿ ಕಾಂಗ್ರೆಸ್' ಎಂದು ಧಿಕ್ಕಾರ ಕೂಗಿದರು. ಹಿಂದೂಗಳ ಕ್ಷಮೆ ಕೋರುವವರೆಗೆ ಹೋರಾಟ ಮುಂದುವರಿಯಲಿದೆ ಎಂದರು. ಸತೀಶ್ ಜಾರಕಿಹೊಳಿ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಸತೀಶ ಜಾರಕಿಹೊಳಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ

ಬೈಲಹೊಂಗಲ (ಬೆಳಗಾವಿ ಜಿಲ್ಲೆ): ಪಟ್ಟಣದಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಕೆಪಿಸಿಸಿ ಶಾಸಕ ಸತೀಶ ಜಾರಕಿಹೊಳಿ ಅವರ ಹಿಂದೂ ವಿರೋಧಿ ಹೇಳಿಕೆ ಖಂಡಿಸಿ ಬುಧವಾರ ಪ್ರತಿಭಟನೆ ನಡೆಸಿದರು.

ಮಾಜಿ ಶಾಸಕ ಜಗದೀಶ ಮೆಟಗುಡ್ಡ ನೇತೃತ್ವದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸೇರಿದ ಕಾರ್ಯಕರ್ತರು ರಸ್ತೆ ತಡೆದು ಆಕ್ರೋಶ ಹೊರ ಹಾಕಿದರು. ಸತೀಶ ಜಾರಕಿಹೊಳಿ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿರುವ.

ಸನಾತನ ಹಿಂದೂ ಧರ್ಮಕ್ಕೆ ಜಯವಾಗಲಿ, ಶ್ರೀರಾಮ, ಜೈರಾಮ, ಜೈ ಹನುಮಾನ್ ಎಂದು ಎಂದು ಘೋಷಣೆ ಕೂಗಿದರು.

ಯುವ ತಾಲ್ಲೂಕು ಘಟಕದ ಮೋರ್ಚಾ ಅಧ್ಯಕ್ಷ ಪ್ರಶಾಂತ ಅಮ್ಮಿನಬಾವಿ ಮಾತನಾಡಿ, 'ಬಹು ಸಂಖ್ಯಾತ ಹಿಂದೂ ಧರ್ಮೀಯರ ಆಚರಣೆ, ಭಾವನೆಗಳಿಗೆ ಪದೇ ಪದೇ ಧಕ್ಕೆ ತರುವ ರೀತಿಯಲ್ಲಿ ಹೇಳಿಕೆ ನೀಡುತ್ತಿರುವ ಕೆಲ ರಾಜಕಾರಣಿಗಳು ತಮ್ಮ ನಾಲಿಗೆ ಬಿಗಿಹಿಡಿಯಬೇಕು. ಹಿಂದೂ ಸಮಾಜದ ಆಚರಣೆ, ಪರಂಪರೆ, ಸಂಸ್ಕೃತಿಗೆ ಧಕ್ಕೆ ತರುವಂತೆ ಹೇಳಿಕೆ ನೀಡಿರುವ ಸತೀಶ ಜಾರಕಿಹೊಳಿ ಅವರು ಕೂಡಲೇ ಹಿಂದೂ ಸಮಾಜವನ್ನು ಕ್ಷಮೆ ಕೇಳಬೇಕು. ಇಲ್ಲವಾದರೆ ದೇಶದಾದ್ಯಂತ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ' ಎಂದು ಎಚ್ಚರಿಸಿದರು.

ಪುರಸಭೆ ಸದಸ್ಯ ಸಾಗರ ಭಾವಿಮನಿ, ಮುಖಂಡರಾದ ಸಚಿನ ಕಡಿ, ಲಕ್ಕಪ್ಪ ಕಾರಗಿ, ಆತ್ಮಾನಂದ ಅಬ್ಬಾಯಿ, ನಾಗರಾಜ ಸಂಗೊಳ್ಳಿ, ಸದಾಶಿವಾನಂದ ಪಾಟೀಲ, ಸಾಗರ ಭಾವಿಮನಿ, ಸಂತೋಷ ಹಡಪದ, ಪವನ ಅಕ್ಕಿ, ರಾಘು ಕುಮಚಿ, ಓಂಕಾರ ಕೋಟಗಿ, ಅನೇಕರು ಇದ್ದರು. ರಾಯಣ್ಣ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಉಪವಿಭಾಗಾಧಿಕಾರಿ ಶಶಿಧರ ಬಗಲಿ ಅವರಿಗೆ ಮನವಿ ಸಲ್ಲಿಸಿದರು.

ಈ ಹೋರಾಟಕ್ಕೆ ಕೆಲ ಕಾಲೇಜು ವಿದ್ಯಾರ್ಥಿಗಳು ಬೆಂಬಲ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT