ಶುಕ್ರವಾರ, ಜನವರಿ 22, 2021
28 °C
‘ಬ್ಲ್ಯಾಕ್‌ಮೇಲರ್‌ಗಳು, ವಂಚಕರಿಗೆ ಸಚಿವ ಸ್ಥಾನ’– ಶಾಸಕರ ವಾಗ್ದಾಳಿ

ಸಚಿವ ಸಂಪುಟ ವಿಸ್ತರಣೆ: ‘ನಿಷ್ಠ’ರ ಆಕ್ರೋಶ ಸ್ಫೋಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಯ ‘ಗಜ ಪ್ರಸವ’ ಮುಗಿಯುತ್ತಿದ್ದಂತೆ ಮೂಲ ಬಿಜೆಪಿ ಶಾಸಕರ ಆಕ್ರೋಶ ಕಟ್ಟೆಯೊಡೆದಿದೆ. ಸುಮಾರು 10 ಕ್ಕೂ ಹೆಚ್ಚು ಶಾಸಕರು ಬಹಿರಂಗವಾಗಿ ನಾಯಕತ್ವಕ್ಕೆ ಸವಾಲು ಹಾಕಿದ್ದಾರೆ.

‘ಮೂಲ ಬಿಜೆಪಿ ಶಾಸಕರಲ್ಲಿ ವಿಸ್ತರಣೆ ಸೃಷ್ಟಿಸಿರುವ ಅಸಹನೆಯು ಮುಂಬರುವ ದಿನಗಳಲ್ಲಿ ‘ಬಿರುಗಾಳಿ’ಯಾಗಿ ಅಪ್ಪಳಿಸಿದರೂ ಅಚ್ಚರಿ ಇಲ್ಲ. ಈ ಭಾರೀ ಸವಾಲು ಎದುರಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಸಿದ್ಧರಾಗಲೇಬೇಕು’ಎಂಬ ಮಾತು ಪಕ್ಷದ ‘ಗರ್ಭಗುಡಿ’ಯಿಂದಲೇ ಕೇಳಿಬಂದಿದೆ.

ಓದಿ: 

ಬುಧವಾರ ಬೆಳಿಗ್ಗೆ ಪಟ್ಟಿ ಹೊರ ಬೀಳುತ್ತಿದ್ದಂತೆಯೇ ಶಾಸಕರು ತಮ್ಮ ಬೇಗುದಿಯನ್ನು ಹೊರ ಹಾಕಿದರು. ಅವರಲ್ಲಿ ಬಸನಗೌಡ ಪಾಟೀಲ ಯತ್ನಾಳ, ಎಸ್‌.ಎ. ರಾಮದಾಸ್‌, ಅರವಿಂದ ಬೆಲ್ಲದ, ಎಂ.ಪಿ.ರೇಣುಕಾಚಾರ್ಯ, ಜಿ.ಎಚ್‌. ತಿಪ್ಪಾರೆಡ್ಡಿ, ಸತೀಶ್‌ ರೆಡ್ಡಿ, ನೆಹರೂ ಓಲೇಕಾರ್‌, ಜಿ. ಸೋಮಶೇಖರ ರೆಡ್ಡಿ, ಜಿ. ಕರುಣಾಕರ ರೆಡ್ಡಿ, ಅಭಯ ಪಾಟೀಲ, ವಿಧಾನಪರಿಷತ್ ಸದಸ್ಯ ಎಚ್‌.ವಿಶ್ವನಾಥ್ ಪ್ರಮುಖರು.

‘ಬ್ಲ್ಯಾಕ್‌ಮೇಲರ್‌’ಗಳಿಗೆ ಪಟ್ಟ’: ‘ಯಡಿಯೂರಪ್ಪನವರ ಕೆಲವೊಂದು ಸಿ.ಡಿ ಇಟ್ಟುಕೊಂಡು ಅವರ ರಕ್ತ ಸಂಬಂಧಿ ಮುಖಾಂತರ ಬ್ಲ್ಯಾಕ್‌
ಮೇಲ್‌ ಮಾಡುತ್ತಿರುವವರನ್ನು ಸಚಿವರನ್ನಾಗಿ ಮಾಡಲಾಗಿದೆ. ಸಿ.ಡಿ ತೋರಿಸಿಬೆದರಿಕೆಯೊಡ್ಡುವ ಜತೆ ವಿಜಯೇಂದ್ರ
ನಿಗೆ ಹಣ ಸಂದಾಯ ಮಾಡಿರುವ ಇಬ್ಬರನ್ನು ಸಚಿವರನ್ನಾಗಿ ಮಾಡಿದ್ದಾರೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದ್ದಾರೆ.

‘ಯೋಗೇಶ್ವರ್‌ ಒಬ್ಬ ಫ್ರಾಡ್‌’: ‘ಸೈನಿಕ’ (ಸಿ.ಪಿ.ಯೋಗೇಶ್ವರ್)ನಿಗೆ ಸಚಿವಸ್ಥಾನ ಕೊಡುವ ಅಗತ್ಯ ಏನಿತ್ತು. ಅವನೊಬ್ಬ ಫ್ರಾಡ್‌, ರಿಯಲ್‌ ಎಸ್ಟೇಟ್‌ನಲ್ಲಿ ಸಾವಿರಾರು ಜನರಿಗೆ ವಂಚಿಸಿರುವ ಪ್ರಕರಣಗಳು ಇವೆ. ಅಂತಹ ವ್ಯಕ್ತಿಗೆ ಕರೆದು ಮಂತ್ರಿ ಸ್ಥಾನ ಕೊಟ್ಟಿದ್ದಾರೆ ಎಂದರೆ ಬಲವಾದ ಕಾರಣ ಇರಲೇಬೇಕು. ಬ್ಲ್ಯಾಕ್‌ಮೇಲ್‌ ಏನಾದರೂ ಇರಬಹುದು’ ಎಂದು ಎಚ್‌. ವಿಶ್ವನಾಥ್‌ ಹೇಳಿದ್ದಾರೆ.

ಓದಿ: 

ನಿಮ್ಮ ಮಾನದಂಡವೇನು?: ‘ಯಡಿಯೂರಪ್ಪನವರೇ, ಮಂತ್ರಿ ಮಂಡಲ ವಿಸ್ತರಣೆಯಲ್ಲಿ ಸಚಿವ ಸ್ಥಾನದ ಆಯ್ಕೆಗೆ ಮಾನದಂಡವೇನು? ನಿಮಗೆ, ನಮ್ಮ ರಾಜ್ಯ ಮತ್ತು ರಾಷ್ಟ್ರ ನಾಯಕರಿಗೆ ನಿಷ್ಠಾವಂತ ಯುವ ನಾಯಕರು ಕಾಣುವುದಿಲ್ಲವೇ? ನಮ್ಮ ಕಷ್ಟ ಆಲಿಸುತ್ತಿದ್ದ ಅನಂತಕುಮಾರ್‌ಜೀ ಇಲ್ಲದಿರುವುದು ಎದ್ದು ಕಾಣುತ್ತಿದೆ’ ಎಂದು ಸತೀಶ್‌ ರೆಡ್ಡಿ ಎಂದಿದ್ದಾರೆ.

ಆತ್ಮಸಾಕ್ಷಿಗೆ ವಿರುದ್ಧ ನಡೆಯಲ್ಲ: ‘ನಾನೊಬ್ಬ ನೈಜ ಸ್ವಯಂಸೇವಕ, ಅನ್ಯ ಮಾರ್ಗದಲ್ಲಿ ಸಚಿವನಾಗುವುದು ನನ್ನ ಆತ್ಮಸಾಕ್ಷಿಗೆ ವಿರುದ್ಧವಾದುದು. ಹಳೇ ಮೈಸೂರು ಪ್ರಾಂತ್ಯಕ್ಕೆ ಅನ್ಯಾಯವಾಗಿದೆ‘ ಎಂದು ಎಸ್‌.ಎ.ರಾಮದಾಸ್‌ ಬೇಸರ ವ್ಯಕ್ತಪಡಿಸಿದ್ದಾರೆ.

‘ಪಕ್ಷ ನಿಷ್ಠರಿಗೆ ಅನ್ಯಾಯ ಆಗಿರುವ ಕುರಿತು ಪಕ್ಷದ ಸಭೆಯಲ್ಲೇ ಪ್ರಸ್ತಾಪಿಸಲಾಗುವುದು. ವರಿಷ್ಠರನ್ನೂ ಭೇಟಿ ಮಾಡಿ ಈ ವಿಷಯವನ್ನು ಮನವರಿಕೆ ಮಾಡಿಕೊಡಲಾಗುವುದು’ ಎಂದು ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅಸಮಾಧಾನ ಹೊರಹಾಕಿದ್ದಾರೆ.

ಸಂತೋಷ್ ‘ರಹಸ್ಯ’ ಕಾರ್ಯಾಚರಣೆ?: ಸಂಪುಟ ವಿಸ್ತರಣೆಯ ಒಟ್ಟಾರೆ ಪ್ರಕ್ರಿಯೆಯಲ್ಲಿ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಆದರೆ, ಸಿ.ಪಿ.ಯೋಗೇಶ್ವರ್ ಮತ್ತು ಅರವಿಂದ ಲಿಂಬಾವಳಿಯವರ ಸಂಪುಟ ಸೇರ್ಪಡೆಯಲ್ಲಿ ಸಂತೋಷ್‌ ಪಾತ್ರ ಪ್ರಧಾನವಾಗಿದೆ ಎಂದೂ ಹೇಳಲಾಗುತ್ತಿದೆ.

ಯೋಗೇಶ್ವರ್‌ ಅವಕಾಶ ಕೊಟ್ಟಿದ್ದಕ್ಕೆ ಸಾಕಷ್ಟು ಶಾಸಕರು ಅಸಮಾಧಾನ ಹೊರಹಾಕಿದ್ದಾರೆ. ಕಳೆದ ಚುನಾವಣೆಯಲ್ಲಿ ಸೋತಿದ್ದ ಇವರನ್ನು ವಿಧಾನಪರಿಷತ್‌ ಸದಸ್ಯರನ್ನಾಗಿ ಮಾಡಿದ್ದೂ ಅಲ್ಲದೆ, ಈಗ ಸಚಿವ ಸ್ಥಾನವನ್ನೂ ನೀಡಲಾಗಿದೆ. ಈ ಯೋಗೇಶ್ವರ ಮತ್ತು ಲಿಂಬಾವಳಿಗೆ ಸಚಿವ ಸ್ಥಾನ ನೀಡಲು ಯಡಿಯೂರಪ್ಪ ಅವರ ಸಮ್ಮತಿ ಇರಲಿಲ್ಲ. ಆದರೆ, ಸಂತೋಷ್ ಅವರ ಒತ್ತಡದಿಂದಲೇ ಪಟ್ಟಿಗೆ ಈ ಎರಡೂ ಹೆಸರುಗಳನ್ನು ಸೇರಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಓದಿ: 

ಗೃಹ ಸಚಿವ ಅಮಿತ್‌ ಶಾ ಮತ್ತು ಜೆ.ಪಿ.ನಡ್ಡಾ ಅವರು ಇತ್ತೀಚೆಗೆ ಯಡಿಯೂರಪ್ಪ ಜತೆ ನಡೆಸಿದ ಸಭೆಯಲ್ಲಿ ಸಂತೋಷ್‌ ಹಾಜರಾಗಿರಲಿಲ್ಲ. ಇವತ್ತಿನ ಸಂಪುಟ ವಿಸ್ತರಣೆ ಸಂಬಂಧಿಸಿದಂತೆ ಟ್ವೀಟ್‌ ಮೂಲಕ ತಮ್ಮ ಅಭಿಪ್ರಾಯವನ್ನೂ ಅವರು ಹಂಚಿಕೊಂಡಿಲ್ಲ.ಈ ವಿದ್ಯಮಾನ ಬಿಜೆಪಿ ವಲಯದಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಬೆಳಗಾವಿ, ಬೆಂಗಳೂರಿಗೆ ಸಿಂಹಪಾಲು

ಈ ವಿಸ್ತರಣೆಯೂ ಸೇರಿದಂತೆ ರಾಜ್ಯ ಸಚಿವ ಸಂಪುಟದಲ್ಲಿ ಬೆಂಗಳೂರು ನಗರಕ್ಕೆ 8 ಮತ್ತು ಬೆಳಗಾವಿ ಜಿಲ್ಲೆಗೆ 5 ಸಚಿವ ಸ್ಥಾನಗಳು ಲಭಿಸಿದಂತಾಗಿದೆ. ಬೆಂಗಳೂರಿನ ಆಸುಪಾಸು ಇರುವ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರಕ್ಕೆ ಪ್ರಾತಿನಿಧ್ಯ ಸಿಕ್ಕಂತಾಗಿದೆ. ಬಿಜೆಪಿ ಶಾಸಕರು ಅಧಿಕ ಸಂಖ್ಯೆಯಲ್ಲಿ ಗೆದ್ದಿರುವ ಸಾಕಷ್ಟು ಜಿಲ್ಲೆಗಳಿಗೆ ಪ್ರಾತಿನಿಧ್ಯವೇ ಇಲ್ಲವಾಗಿದೆ ಎಂಬ ಅಸಮಾಧಾನವೂ ಶುರುವಾಗಿದೆ.

7 ನೂತನ ಸಚಿವರ ಪ್ರಮಾಣ ಸ್ವೀಕಾರ

ರಾಜಭವನದ ಗಾಜಿನಮನೆಯಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ಏಳು ನೂತನ ಸಚಿವರಿಗೆ ಬುಧವಾರ ಅಧಿಕಾರ ಪದ ಹಾಗೂ ಗೋಪ್ಯತೆಯ ಪ್ರಮಾಣವಚನ ಬೋಧಿಸಿದರು.

ಬಾಗಲಕೋಟೆ ಜಿಲ್ಲೆಯ ಬೀಳಗಿ ಶಾಸಕ ಮುರುಗೇಶ ನಿರಾಣಿ ಹಾಗೂ ಹುಕ್ಕೇರಿ ಶಾಸಕ ಉಮೇಶ ಕತ್ತಿ ದೇವರು ಹಾಗೂ ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಬೆಂಗಳೂರಿನ ಮಹದೇವಪುರ ಕ್ಷೇತ್ರ ಶಾಸಕ ಅರವಿಂದ ಲಿಂಬಾವಳಿ, ವಿಧಾನ ಪರಿಷತ್ ಸದಸ್ಯರಾದ ಎಂ.ಟಿ.ಬಿ. ನಾಗರಾಜ್, ಸಿ. ಪಿ.ಯೋಗೇಶ್ವರ್ ಹಾಗೂ ಆರ್. ಶಂಕರ್ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಆರನೇ ಬಾರಿಗೆ ಶಾಸಕರಾಗಿರುವ ಸುಳ್ಯ ವಿಧಾನಸಭಾ ಕ್ಷೇತ್ರದ ಎಸ್. ಅಂಗಾರ ಮೊದಲ ಬಾರಿಗೆ ಮಂತ್ರಿಯಾಗಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್‌, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಉಪ ಮುಖ್ಯಮಂತ್ರಿಗಳಾದ ಡಾ. ಅಶ್ವಥ್‍ ನಾರಾಯಣ್ ಹಾಗೂ ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ವಸತಿ ಸಚಿವ ವಿ. ಸೋಮಣ್ಣ, ಕಂದಾಯ ಸಚಿವ ಆರ್. ಅಶೋಕ ಸೇರಿದಂತೆ ಅನೇಕ ಸಚಿವರುಗಳು, ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮುಂತಾದವರು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು