ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ್‌ ಜೋಡೋ: ಗುಂಡ್ಲುಪೇಟೆಯಿಂದ ರಾಯಚೂರುವರೆಗೆ 21 ದಿನ ಕಾಂಗ್ರೆಸ್ ಪಾದಯಾತ್ರೆ

Last Updated 28 ಆಗಸ್ಟ್ 2022, 20:54 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯಲಿರುವ ‘ಭಾರತ ಒಗ್ಗೂಡಿಸಿ (ಭಾರತ್‌ ಜೋಡೋ) ಪಾದಯಾತ್ರೆ’ ಕರ್ನಾಟಕದಲ್ಲಿ 21 ದಿನ, ಚಾಮರಾಜನಗರ ಜಿಲ್ಲೆಯಿಂದಗುಂಡ್ಲುಪೇಟೆಯಿಂದ ರಾಯಚೂರುವರೆಗೆ ಸಾಗಲಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜೊತೆ ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ‌‘ಈ ಯಾತ್ರೆಯಲ್ಲಿ ರಾಜ್ಯದಲ್ಲಿ ಒಂದೊಂದು ದಿನ ಯಾರು ಪಾಲ್ಗೊಳ್ಳಬೇಕು, 21 ದಿನವೂ ಯಾರು ಇರಬೇಕೆಂದು ನಿಶ್ಚಯಿಸಲಾಗಿದೆ’ ಎಂದರು.

‘ಈ ದೇಶದಲ್ಲಿ ಸಾಮಾಜಿಕ ಸಾಮರಸ್ಯ ಹದಗೆಡುತ್ತಿದ್ದು, ಕುವೆಂಪು ಅವರು ಹೇಳಿರುವಂತೆ ನಮ್ಮ ನಾಡು ಶಾಂತಿಯ ತೋಟ ಆಗಬೇಕು. ಪ್ರತಿ ಕುಟುಂಬವೂ ಬೆಲೆ ಏರಿಕೆಯಿಂದ ತತ್ತರಿಸುತ್ತಿದ್ದು, ಅದರಲ್ಲೂ ಮಹಿಳೆಯರಿಗೆ ಆರ್ಥಿಕ, ಮಾನಸಿಕ ಶಕ್ತಿ ತುಂಬಬೇಕು. ನಿರುದ್ಯೋಗ ಪ್ರಮಾಣ ಹೆಚ್ಚಿದ್ದು ಯುವಕರಿಗೆ ಉದ್ಯೋಗ ಸಿಗಬೇಕು, ರಾಜ್ಯದಲ್ಲಿ ಭ್ರಷ್ಟಾಚಾರ ರಹಿತ ಸರ್ಕಾರ ರಚನೆ ಆಗಬೇಕು, ರೈತರು ಹಾಗೂ ಕಾರ್ಮಿಕರ ಬದುಕು ಹಸನಾಗಬೇಕು, ಈ ಐದು ಉದ್ದೇಶದೊಂದಿಗೆ, ಎಲ್ಲ ವರ್ಗದವರನ್ನು ರಕ್ಷಣೆ ಮಾಡಲು ಈ ಯಾತ್ರೆ ನಡೆಯಲಿದೆ’ ಎಂದು ವಿವರಿಸಿದರು.

’ನಮ್ಮ ರಾಜ್ಯದಲ್ಲಿನ ಪಾದಯಾತ್ರೆ ಇಡೀ ದೇಶಕ್ಕೆ ಮಾದರಿಯಾಗಲಿದೆ ಎಂಬ ವಿಶ್ವಾಸವಿದೆ. ಈ ಪಾದಯಾತ್ರೆಯಲ್ಲಿ ಶಿಕ್ಷಕರು, ನಿವೃತ್ತ ಅಧಿಕಾರಿಗಳು, ಸಂಘ ಸಂಸ್ಥೆಗಳು, ರೈತರು, ಕಾರ್ಮಿಕರಿಗೆ ಅವಕಾಶ ಮಾಡಿಕೊಡಲಾಗುವುದು. ರಾಜ್ಯದಲ್ಲಿ ನಿತ್ಯ 25 ಕಿ.ಮೀ ದೂರ ಪಾದಯಾತ್ರೆ ಮಾಡಲಾಗುವುದು. ಎಲ್ಲ ಜಿಲ್ಲೆಗಳ ಜನರು ಪಾದಯಾತ್ರೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗುವುದು. ರಾಹುಲ್ ಗಾಂಧಿ ಅವರು ರಾಷ್ಟ್ರಾದ್ಯಂತ 3,500 ಕಿ.ಮೀ. ಹೆಜ್ಜೆ ಹಾಕಲಿದ್ದಾರೆ’ ಎಂದರು.

‘ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಇಂದು ಸಂಜೆ ನಡೆಯಲಿದೆ. ನಾಳೆ (ಆ. 29) ಪದಾಧಿಕಾರಿಗಳ ಸಭೆ ನಡೆಯಲಿದೆ. ಪಾದಯಾತ್ರೆಯಲ್ಲಿ ಎಲ್ಲ ನಾಯಕರು ಜವಾಬ್ದಾರಿಯನ್ನು ಹಂಚಿಕೊಳ್ಳುತ್ತೇವೆ. ರಾಜ್ಯದ ಪ್ರಮುಖ ನಾಯಕರೆಲ್ಲರೂ ಸೆ. 7ರಂದು ಕನ್ಯಾಕುಮಾರಿಯಲ್ಲಿ ಈ ಯಾತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇವೆ’ ಎಂದರು

‘ರಾಜ್ಯದಲ್ಲಿ ಪಾದಯಾತ್ರೆ ಉಸ್ತುವಾರಿಯನ್ನು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಅವರಿಗೆ ನೀಡಲಾಗಿದೆ. ರಾಷ್ಟ್ರ ಮಟ್ಟದ ಸಮಿತಿಯಲ್ಲಿ ರಾಜ್ಯದಿಂದ ಕೆ.ಜೆ. ಜಾರ್ಜ್ ಮತ್ತು ಸಲೀಂ ಅಹ್ಮದ್ ಅವರಿಗೆ ಸ್ಥಾನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲರ ಜತೆ ಸಭೆ ಮಾಡಿ ಯಾರೆಲ್ಲಾ 21 ದಿನ ನಡೆಯಬೇಕು ಎಂದು ಅಭಿಪ್ರಾಯ ಸಂಗ್ರಹಿಸಿ, ನಂತರ ಅವರನ್ನು ಆಯ್ಕೆ ಮಾಡಲಾಗುವುದು. ಎಲ್ಲರಿಗೂ ಅಧಿಕೃತ ವೆಬ್ ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ’ ಎಂದರು.

‘ಬಳ್ಳಾರಿಯಲ್ಲಿ ಸಾರ್ವಜನಿಕ ಸಮಾವೇಶ ಹಮ್ಮಿಕೊಳ್ಳಲಾಗುವುದು. ಮೈಸೂರಿನಲ್ಲಿ ತಾಂತ್ರಿಕ ಸಮಸ್ಯೆ ಇದೆ. ಅಕ್ಟೋಬರ್ 4-5 ರಂದು ದಸರಾ ಹಬ್ಬ ನಡೆಯಲಿದ್ದು, ಈ ದಿನ ಯಾವ ರೀತಿ ಮಾಡಬೇಕು ಎಂದು ದೆಹಲಿ ನಾಯಕರ ಜತೆ ಚರ್ಚಿಸಿ ತೀರ್ಮಾನಿಸುತ್ತೇವೆ’ ಎಂದರು.

ಸಿದ್ದರಾಮಯ್ಯ ಮಾತನಾಡಿ, ‘ದೇಶದಲ್ಲಿ ಸಾಮರಸ್ಯ ಹಾಳಾಗುತ್ತಿದೆ, ಐಕ್ಯತೆಗೆ ಧಕ್ಕೆ ಬಂದಿದೆ. ಹೀಗಾಗಿ ಸಾಮರಸ್ಯ ಮೂಡಿಸಬೇಕಾದ ಅಗತ್ಯವಿದೆ. ಪ್ರಜಾಪ್ರಭುತ್ವಕ್ಕೆ ಬೀಳುತ್ತಿರುವ ಹೊಡೆತವನ್ನು ತಪ್ಪಿಸಬೇಕಿದೆ. ಧರ್ಮ ರಾಜಕಾರಣ ಹೆಚ್ಚಾಗುತ್ತಿದೆ. ಮತಗಳ ಕ್ರೋಡೀಕರಣಕ್ಕೆ ಧರ್ಮ ರಾಜಕಾರಣ ಮಾಡಲಾಗುತ್ತಿದೆ. ಸಮ ಸಮಾಜವನ್ನ ನಿರ್ಮಿಸುವುದು ನಮ್ಮ ಪಕ್ಷದ ಉದ್ದೇಶ‘ ಎಂದರು.

ಅದಕ್ಕೂ ಮೊದಲು ಮಾತನಾಡಿದ ಬಿ.ಕೆ. ಹರಿಪ್ರಸಾದ್‌, ಕನ್ಯಾಕುಮಾರಿಯಿಂದ ಆರಂಭವಾಗಲಿರುವ ಯಾತ್ರೆ ತಮಿಳಿನಾಡಿನಲ್ಲಿ ನಾಲ್ಲು ದಿನ, ಕೇರಳದಲ್ಲಿ 19 ದಿನ ಸಾಗಲಿದೆ. 125 ಜನರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಹೆಜ್ಜೆ ಹಾಕಲಿದ್ದಾರೆ. 12 ರಾಜ್ಯಗಳು, 2 ಕೇಂದ್ರಾಡಳಿತ ಪ್ರದೇಶಗಳ ಮೂಲಕ ಯಾತ್ರೆ ಸಾಗಲಿದೆ‘ ಎಂದರು.

‘ಕರ್ನಾಟಕದಲ್ಲಿ ಬೆಳಿಗ್ಗೆ 7 ಗಂಟೆಗೆ ಪಾದಯಾತ್ರೆ ಆರಂಭವಾಗಲಿದೆ. 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೂ ಸಾಹಿತಿಗಳು, ವಕೀಲರು, ಶಿಕ್ಷಕರು, ವಿದ್ಯಾರ್ಥಿಗಳು, ಯುವಕ, ಯುವತಿಯರ ಜೊತೆ ಸಂವಾದ. ಸಂಜೆ 4ಗಂಟೆಗೆ 20 ಸಾವಿರ ಜನ ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಲಿದ್ದಾರೆ. ಗುಂಡ್ಲುಪೇಟೆ ಮಾರ್ಗವಾಗಿ ಪ್ರವೇಶಿಸುವ ಯಾತ್ರೆ ರಾಯಚೂರು ಜಿಲ್ಲೆಯೊಂದಿಗೆ ಮತ್ತೊಂದು ರಾಜ್ಯಕ್ಕೆ ಪ್ರವೇಶಿಸಲಿದೆ’ ಎಂದರು.

ಮುರುಘಾಶ್ರೀಗಳ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ಕುರಿತು ಪ್ರತಿಕ್ರಿಯಿಸಲು ಕಾಂಗ್ರೆಸ್‌ ನಾಯಕರು ನಿರಾಕರಿಸಿದರು.

ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ಬಿ.ಕೆ. ಹರಿಪ್ರಸಾದ್, ಎಐಸಿಸಿ ಕಾರ್ಯದರ್ಶಿಗಳಾದ ಅಭಿಷೇಕ್ ದತ್, ಜೈಕುಮಾರ್, ವಿಷ್ಣುನಾಥನ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ, ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ರಾಮಲಿಂಗಾರೆಡ್ಡಿ, ಧ್ರುವನಾರಾಯಣ್, ಮಾಜಿ ಸಚಿವರಾದ ಕೆ.ಜೆ. ಜಾರ್ಜ್, ಕೆಪಿಸಿಸಿ ಸಂವಹನ, ಸಾಮಾಜಿಕ ಜಾಲತಾಣ ಘಟಕದ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ಅವರು ‘ಭಾರತ ಒಗ್ಗೂಡಿಸಿ’ ಯಾತ್ರೆ ಲೋಗೊ ಬಿಡುಗಡೆ ಮಾಡಿದರು. ವಿಧಾನಸಭೆಯಲ್ಲಿ ಪಕ್ಷದ ಮುಖ್ಯ ಸಚೇತಕ ಡಾ. ಅಜಯ್ ಸಿಂಗ್, ಪರಿಷತ್‌ ಸದಸ್ಯ ದಿನೇಶ್ ಗೂಳಿಗೌಡ, ಮನ್ಸೂರ್ ಅಲಿಖಾನ್ ಇದ್ದರು.



ಪಾದಯಾತ್ರೆಗೆ ಶಾಸಕರ ಹಾಜರಿ ಕಡ್ಡಾಯ
ಬೆಂಗಳೂರು:
‌ರಾಜ್ಯದಲ್ಲಿ ಸೆಪ್ಟೆಂಬರ್‌ 30ರಿಂದ 21 ದಿನ‌ ನಡೆಯಲಿರುವ ‘ಭಾರತ ಒಗ್ಗೂಡಿಸಿ’ (ಭಾರತ್‌ ಜೋಡೋ) ಪಾದಯಾತ್ರೆಯಲ್ಲಿ ಪಕ್ಷದ ಎಲ್ಲ ಶಾಸಕರು ಮತ್ತು ವಿಧಾನ ಪರಿಷತ್‌ ಸದಸ್ಯರು ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಸೂಚನೆ ನೀಡಲಾಗಿದೆ.

ಪಾದಯಾತ್ರೆಯ ಸ್ವರೂಪ, ಸಿದ್ಧತೆ ಮತ್ತಿತರ ವಿವರಗಳನ್ನು ಚರ್ಚಿಸುವುದಕ್ಕಾಗಿಯೇ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಭಾನುವಾರ ರಾತ್ರಿ ಸಭೆ ನಡೆಯಿತು.

‘ನಮ್ಮ ಕ್ಷೇತ್ರದಲ್ಲಿ ಪಾದಯಾತ್ರೆ ಸಾಗುವುದಿಲ್ಲ ಎಂಬ ಕಾರಣವನ್ನು ಮುಂದಿಟ್ಟುಕೊಂಡು ಯಾವುದೇ ಶಾಸಕರು ಕಾರ್ಯಕ್ರದಿಂದ ದೂರ ಉಳಿಯಬಾರದು. ಎಲ್ಲ ಶಾಸಕರೂ ತಮಗೆ ನಿಗದಿಪಡಿಸಿದ ದಿನದಂದು ಪಾದಯಾತ್ರೆಯಲ್ಲಿ ಭಾಗವಹಿಸಲೇಬೇಕು’ ಎಂದು ಸಿದ್ದರಾಮಯ್ಯ ಸೇರಿದಂತೆ ನಾಯಕರು ಸೂಚನೆ ನೀಡಿದರು ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಪಾದಯಾತ್ರೆಯಲ್ಲಿ ಭಾಗವಹಿಸುವ ಜನರಿಗೆ ಊಟ, ವಸತಿ ವ್ಯವಸ್ಥೆ ಮಾಡಬೇಕು. ಯಾತ್ರೆ ಸಾಗುವ ಮಾರ್ಗದಲ್ಲಿನ ಸಾಹಿತಿಗಳು, ಚಿಂತಕರ ಜತೆ ಚರ್ಚೆ ನಡೆಸುವುದಕ್ಕೆ ಪೂರಕವಾಗಿ ಕಾರ್ಯಕ್ರಮ ರೂಪಿಸಬೇಕು. ಪ್ರತಿ ದಿನವೂ ಕೆಲವು ಕಡೆ ಸಭೆಗಳನ್ನು ನಡೆಸುವುದಕ್ಕೆ ಸ್ಥಳ ಗುರುತಿಸಿ, ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂಬ ಸೂಚನೆಯನ್ನೂ ನೀಡಲಾಗಿದೆ.

‘ಭಾರತ ಒಗ್ಗೂಡಿಸಿ’ ಕಾರ್ಯಕ್ರಮದ ರೂಪುರೇಷೆ, ನಡೆದಿರುವ ಸಿದ್ಧತೆಗಳ ಕುರಿತು ಶಾಸಕರಿಗೆ ಸಭೆಯಲ್ಲಿ ವಿವರಿಸಲಾಯಿತು.

ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ರಾಜ್ಯದಲ್ಲಿ ಪಾದಯಾತ್ರೆಯ ಉಸ್ತುವಾರಿಯೂ ಆಗಿರುವ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌, ಎಐಸಿಸಿ ಕಾರ್ಯದರ್ಶಿಗಳಾದ ಅಭಿಷೇಕ್‌ ದತ್‌, ಮಯೂರ್‌ ಜಯಕುಮಾರ್‌, ವಿಷ್ಣುನಾಥನ್‌, ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ, ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ, ಈಶ್ವರ ಖಂಡ್ರೆ, ಸಲೀಂ ಅಹ್ಮದ್‌, ಆರ್‌. ಧ್ರುವನಾರಾಯಣ ಸೇರಿ ಹಲವು ನಾಯಕರು ಸಭೆಯಲ್ಲಿದ್ದರು.

ಬಿಜೆಪಿ ವಿರುದ್ಧ ‘ಚಾರ್ಜ್ ಶೀಟ್’: ಕಾಂಗ್ರೆಸ್‌
ಬೆಂಗಳೂರು:
ರಾಜ್ಯ ಬಿಜೆಪಿ ಸರ್ಕಾರದ ವೈಫಲ್ಯಗಳ ಚಾರ್ಜ್ ಶೀಟ್ (ಆರೋಪ ಪಟ್ಟಿ) ಸಿದ್ಧಪಡಿಸಿ ಜನರ ಬಳಿಗೆ ತೆಗೆದುಕೊಂಡು ಹೋಗಲು ಬಿಬಿಎಂಪಿ ಕಾಂಗ್ರೆಸ್‌ ಪ್ರಣಾಳಿಕಾ ಸಮಿತಿ ನಿರ್ಧರಿಸಿದೆ. ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ನಡೆದ ಸಮಿತಿ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

ರಸ್ತೆಗುಂಡಿ, ಆರೋಗ್ಯ ಸಮಸ್ಯೆ ಸೇರಿ ಬೆಂಗಳೂರಿಗೆ ಸಂಬಂಧಿಸಿದಂತೆ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು 15 ದಿನಗಳಲ್ಲಿ ಪಟ್ಟಿ ಮಾಡಿ, ಜನರ ಮುಂದೆ ತೆಗೆದುಕೊಂಡು ಹೋಗಲು ಕಾಂಗ್ರೆಸ್‌ ನಾಯಕರು ತೀರ್ಮಾನಿಸಿದ್ದಾರೆ.

ಜನಜಾಗೃತಿ ಅಭಿಯಾನ: ‘ಸರ್ಕಾರದ ಜನೋತ್ಸವದ ವಿರುದ್ಧ ಜನಜಾಗೃತಿ ಅಭಿಯಾನಕ್ಕೆ ಕಾಂಗ್ರೆಸ್ ನಿರ್ಧರಿಸಿದೆ. ನಾಯಕರಾದ ಸಿದ್ದರಾಮಯ್ಯ, ಸುರ್ಜೇವಾಲಾ, ಡಿ.ಕೆ ಶಿವಕುಮಾರ್ ಸೋಮವಾರ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT