ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕೋಳಿ ಹಿಡಿಯಲು ಮಾತ್ರ ಲಾಯಕ್ಕು: ಕಾಂಗ್ರೆಸ್

ಬೆಂಗಳೂರು: ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕೋಳಿ ಹಿಡಿಯಲು ಮಾತ್ರ ಲಾಯಕ್ಕು ಎಂದು ರಾಜ್ಯ ಕಾಂಗ್ರೆಸ್ ಘಟಕ ಗೃಹ ಸಚಿವರನ್ನು ಛೇಡಿಸಿದೆ.
ಕೊಪ್ಪಳದಲ್ಲಿ ಜೂಜಾಟಕ್ಕೆ ಇಡಲಾಗಿದ್ದ ಕೋಳಿಯನ್ನು ಬಂಧಿಸಿದ್ದ ಪ್ರಕರಣ ಹಾಗೂ ಪಿ.ಎಸ್.ಐ ಹಗರಣದ ಆರೋಪಿ ಆರ್.ಡಿ ಪಾಟೀಲ ಪರಾರಿಯಾದ ಪ್ರಕರಣವನ್ನು ಉಲ್ಲೇಖಿಸಿ ಕಾಂಗ್ರೆಸ್ ಈ ಟ್ವೀಟ್ ಮಾಡಿದೆ.
‘ಬಿಜೆಪಿ ಸರ್ಕಾರದಲ್ಲಿ ಕೋಳಿಗಳನ್ನು ಅರೆಸ್ಟ್ ಮಾಡಲಾಗುತ್ತದೆ. ಬಹುದೊಡ್ಡ ಅಕ್ರಮವೊಂದರ ಆರೋಪಿ ಪೊಲೀಸರನ್ನು ತಳ್ಳಿ ಪರಾರಿಯಾಗುತ್ತಾನೆ. ದೇಶದಲ್ಲೇ ನಂಬರ್ 1 ಎನಿಸಿಕೊಂಡಿದ್ದ ರಾಜ್ಯದ ಗೃಹ ಇಲಾಖೆಯನ್ನು ಇಂದು ನಾಚಿಕೆಗೇಡಿನ ಸ್ಥಿತಿಗೆ ತಂದಿಟ್ಟಿದೆ ಬಿಜೆಪಿ ಸರ್ಕಾರ. ಆರಗ ಜ್ಞಾನೇಂದ್ರ ಅವರು ಕೋಳಿ ಹಿಡಿಯಲು ಮಾತ್ರ ಲಾಯಕ್ಕಾಗಿದ್ದಾರೆ‘ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಬಿಜೆಪಿ ಸರ್ಕಾರದಲ್ಲಿ ಕೋಳಿಗಳನ್ನು ಅರೆಸ್ಟ್ ಮಾಡಲಾಗುತ್ತದೆ.
ಬಹುದೊಡ್ಡ ಅಕ್ರಮವೊಂದರ ಆರೋಪಿ ಪೊಲೀಸರನ್ನು ತಳ್ಳಿ ಪರಾರಿಯಾಗುತ್ತಾನೆ.
ದೇಶದಲ್ಲೇ ನಂಬರ್ 1 ಎನಿಸಿಕೊಂಡಿದ್ದ ರಾಜ್ಯದ ಗೃಹ ಇಲಾಖೆಯನ್ನು ಇಂದು ನಾಚಿಕೆಗೇಡಿನ ಸ್ಥಿತಿಗೆ ತಂದಿಟ್ಟಿದೆ ಬಿಜೆಪಿ ಸರ್ಕಾರ.@JnanendraAraga ಅವರು ಕೋಳಿ ಹಿಡಿಯಲು ಮಾತ್ರ ಲಾಯಕ್ಕಾಗಿದ್ದಾರೆ!
— Karnataka Congress (@INCKarnataka) January 20, 2023
ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣ: ಸಿಐಡಿ ಅಧಿಕಾರಿಗಳ ಎದುರೇ ಆರ್.ಡಿ. ಪಾಟೀಲ ಪರಾರಿ
ಕಲಬುರಗಿ: ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಹೊರಗಡೆ ಇದ್ದ ಆರ್.ಡಿ. ಪಾಟೀಲ ನಗರದ ಅಕ್ಕಮಹಾದೇವಿ ಕಾಲೊನಿಯ ತನ್ನ ಮನೆಯಿಂದ ಗುರುವಾರ ರಾತ್ರಿ ಪರಾರಿಯಾಗಿದ್ದಾನೆ.
ಈ ಸಂಬಂಧ ಸಿಐಡಿ ಅಧಿಕಾರಿಗಳು ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣದ ಆರೋಪಿಗಳಾದ ಆರ್.ಡಿ. ಪಾಟೀಲ ಆತನ ಸಹೋದರ ಮಹಾಂತೇಶ ಪಾಟೀಲ, ದಿವ್ಯಾ ಹಾಗರಗಿ, ಕಾಶಿನಾಥ ಚಿಲ್ಲ ಹಾಗೂ ಮಂಜುನಾಥ ಮೇಳಕುಂದಿಯ ಮನೆಗಳ ಮೇಲೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದರು. ದಾಳಿ ನಡೆಸಿ ರಾತ್ರಿ ಹೊರಬಂದ ಬಳಿಕ ತುಮಕೂರು ಜಿಲ್ಲೆಯಲ್ಲಿ ದಾಖಲಾದ ಪಿಎಸ್ಐ ನೇಮಕಾತಿ ಅಕ್ರಮದ ಸಂಬಂಧ ಬಂಧಿಸಲು ಸಿಐಡಿ ಅಧಿಕಾರಿಗಳು ಆರ್.ಡಿ. ಪಾಟೀಲ ಮನೆಗೆ ತೆರಳಿದ್ದಾರೆ.
ಈ ಸಂದರ್ಭದಲ್ಲಿ , 'ಯಾವ ಕೇಸು, ನನಗೇನೂ ಗೊತ್ತೇ ಇಲ್ಲ. ವಿನಾಕಾರಣ ನೀವು ಕಿರುಕುಳ ನೀಡುತ್ತಿದ್ದೀರಿ' ಎನ್ನುತ್ತಲೇ ಮನೆಯ ಹಿಂಬಾಗಿಲಿನಿಂದ ಪರಾರಿಯಾಗಿದ್ದಾನೆ ಎಂದು ಸಿಐಡಿ ಡಿಟೆಕ್ಟಿವ್ ಸಬ್ ಇನ್ ಸ್ಪೆಕ್ಟರ್ ಆನಂದ್ ದೂರಿನಲ್ಲಿ ತಿಳಿಸಿದ್ದಾರೆ.
ಜಾಮೀನಿನ ಷರತ್ತುಗಳನ್ನು ಉಲ್ಲಂಘಿಸಿ ಆರ್.ಡಿ. ಪಾಟೀಲ ಮನೆಯಿಂದ ನಾಪತ್ತೆಯಾಗಿದ್ದಾನೆ. ಅದ್ದರಿಂದ ಅತನಿಗೆ ನೀಡಿದ ಜಾಮೀನು ರದ್ದುಪಡಿಸಬೇಕು ಎಂದು ಕೋರಿ ಸಿಐಡಿ ಅಧಿಕಾರಿಗಳು ಕೆಲ ದಿನಗಳ ಹಿಂದೆ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಅದು ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.