ಮಂಗಳವಾರ, ಮಾರ್ಚ್ 21, 2023
28 °C
ಮುಸ್ಲಿಮರನ್ನು ನಾವು ಓಲೈಸುವ ಪ್ರಶ್ನೆಯೇ ಇಲ್ಲ

ಶಾದಿ ಭಾಗ್ಯವೇ ಸಿದ್ದರಾಮಯ್ಯ, ಕಾಂಗ್ರೆಸ್‌ಗೆ ದೌರ್ಭಾಗ್ಯವಾಯ್ತು: ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಶಾದಿ ಭಾಗ್ಯ ಯೋಜನೆಯೇ ಸಿದ್ದರಾಮಯ್ಯಗೆ ಹಾಗೂ ಅವರ ಪಕ್ಷಕ್ಕೆ ದೌರ್ಭಾಗ್ಯವಾಗಿದೆ. ಅಂತಹ ದೌರ್ಭಾಗ್ಯವೇ ಬೇಕೆಂದರೆ ತಮ್ಮ ನಿಲುವನ್ನು ಮುಂದುವರಿಸಿಕೊಂಡು ಹೋಗಲಿ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಮಂಡಕಳ್ಳಿ ವಿಮಾನನಿಲ್ದಾಣದಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ನಾವು ಮುಸ್ಲಿಮರನ್ನು ಓಲೈಸುವ ಪ್ರಶ್ನೆಯೇ ಇಲ್ಲ’ ಎಂದರು.

‘‍ಮುಸ್ಲಿಮರನ್ನು ಬಿಜೆಪಿಯತ್ತ ಸೆಳೆಯಿರಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಲ್ಲ. ಎಲ್ಲ ಸಮುದಾಯವನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು, ಮುಸ್ಲಿಮರಲ್ಲಿರುವ ಬಡವರಿಗೆ ಶಿಕ್ಷಣ ನೀಡಿ ಸಮಾಜದ ಮುಖ್ಯವಾಹಿನಿಗೆ ತರಬೇಕು. ಆಗ, ಅವರೂ ದೇಶ ಕಟ್ಟಲು ಕೊಡುಗೆ ನೀಡಲು ಸಾಧ್ಯವಿದೆ ಎಂದಿದ್ದಾರಷ್ಟೆ’ ಎಂದರು.

‘ಬಿಜೆಪಿಗೆ ಮುಸ್ಲಿಮರ ಮತವೇ ಬೇಡ ಎಂದು ನಿಮ್ಮದೇ ಪಕ್ಷದ ಕೆಲವರು ಹೇಳುತ್ತಾರಲ್ಲಾ’ ಎಂಬ ಪ್ರಶ್ನೆಗೆ, ‘ಅವರವರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವೈಯಕ್ತಿಕವಾಗಿ ಹೇಳಿದ್ದಾರೆ. ಆದರೆ, ದೇಶದ ಆಡಳಿತ ನಡೆಸುವಾಗ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎನ್ನುವುದು ಪ್ರಧಾನಿಯ ನಿಲುವು. ಹಾಗೆಂದು, ಯಾರ ಬಗ್ಗೆಯೂ ಒಲವಿನ–ಗೆಲುವಿನ ಪ್ರಶ್ನೆಯೇ ಇಲ್ಲ’ ಎಂದು ಹೇಳಿದರು.

‘ಚುನಾವಣೆ ವಿಷಯದಲ್ಲಿ ನಮ್ಮದು ವಿಭಿನ್ನ ಕಾರ್ಯತಂತ್ರವಾಗಿರಲಿದೆ. ಕಾಂಗ್ರೆಸ್, ಜೆಡಿಎಸ್‌ ರೀತಿ ಇರುವುದಿಲ್ಲ. ಏನೇನು ಆಶ್ವಾಸನೆಗಳನ್ನು ಕೊಟ್ಟಿದ್ದೆವು, ಎಷ್ಟನ್ನು ಅನುಷ್ಠಾನಕ್ಕೆ ತಂದಿದ್ದೇವೆ ಎಂಬ ವರದಿಯನ್ನು ಬಜೆಟ್ ಸಮಯದಲ್ಲಿ ಜನರ ಮುಂದಿಡಲಿದ್ದೇವೆ’ ಎಂದು ಪ್ರತಿಕ್ರಿಯಿಸಿದರು.

‘ಸಿದ್ದರಾಮಯ್ಯ, ರಾಜಕೀಯ ನಿವೃತ್ತಿ ಬಗ್ಗೆ ಆಗಾಗ ಮಾತನಾಡುತ್ತಿರುವುದನ್ನು ನೋಡಿದರೆ, ಅವರ ಹತಾಶ ಮನೋಭಾವದ ಸ್ಥಿತಿಯನ್ನು ತಿಳಿದುಕೊಳ್ಳಬಹುದಾಗಿದೆ’ ಎಂದು ವ್ಯಂಗ್ಯವಾಡಿದರು.

‘ಆರ್.ಅಶೋಕ್ ಅವರನ್ನು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಿದ್ದಕ್ಕೆ ವಿರೋಧವೇನಿಲ್ಲ. ಅವರಿಗೆ ದೊಡ್ಡ ಪ್ರಮಾಣದಲ್ಲಿ ಸ್ವಾಗತ ದೊರೆತಿದೆ. ಗೋಬ್ಯಾಕ್ ಪೋಸ್ಟರ್‌ ಅಂಟಿಸಿರುವುದು ಮಹತ್ವದ್ದೇನಲ್ಲ. ಯಾರೋ ನಾಲ್ವರು ಮಾಡಿದ್ದಕ್ಕೆ ಪ್ರಾಧಾನ್ಯತೆ ಕೊಡಬೇಕಿಲ್ಲ’ ಎಂದು ಪ್ರತಿಕ್ರಿಯಿಸಿದರು.

‘ಬಜೆಟ್‌ಗೆ ಸಿದ್ಧತೆ ನಡೆಸುತ್ತಿದ್ದೇವೆ. ಈ ಬಾರಿಯೂ ಜನಪರವಾಗಿರಲಿದೆ’ ಎಂದು ಹೇಳಿದರು.

‘ಚಿರತೆ ಕಾರ್ಯಪಡೆಯನ್ನು ರಚಿಸಲಾಗಿದ್ದು, ಅದು ಶಾಶ್ವತವಾಗಿರಲಿದೆ. ಒಂದು ಚಿರತೆ ಸೆರೆಯಾದ ತಕ್ಷಣ ಕಾರ್ಯಪಡೆಯ ಕಾರ್ಯ ನಿಲ್ಲುವುದಿಲ್ಲ. ಅದಕ್ಕೆ ಅಗತ್ಯ ಮಾನವ ಸಂಪನ್ಮೂಲ, ವಾಹನಗಳು ಹಾಗೂ ವಿಶೇಷ ಅನುದಾನವನ್ನೂ ಒದಗಿಸಲಾಗುವುದು’ ಎಂದರು.

‘ಅರಣ್ಯದಂಚಿನಲ್ಲಿರುವ ಹಳ್ಳಿಗಳ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರಲ್ಲಿ ಸ್ವಯಂಸೇವಕರನ್ನು ಗುರುತಿಸಿ ತರಬೇತಿ ನೀಡಬೇಕು ಹಾಗೂ ಪೆಟ್ರೋಲಿಂಗ್‌ ಸಮಯದಲ್ಲಿ ಅವರನ್ನೂ ಒಳಗೊಳಿಸಿಕೊಳ್ಳಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಏನು ಮಾಡಬೇಕು, ಏನನ್ನು ಮಾಡಬಾರದು ಎನ್ನುವುದನ್ನು ತಿಳಿಸಿಕೊಡಬೇಕು ಎಂದೂ ನಿರ್ದೇಶನ ಕೊಟ್ಟಿದ್ದೇನೆ. ಇದಕ್ಕೆ ಅಗತ್ಯವಾದ ಬೆಂಬಲ ಕೊಡಲಿದ್ದೇವೆ’ ಎಂದು ತಿಳಿಸಿದರು.

ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಮೇಯರ್ ಶಿವಕುಮಾರ್, ಉಪಮೇಯರ್‌ ಡಾ.ಜಿ.ರೂಪಾ ಯೋಗೇಶ್, ಬಿಜೆಪಿ ನಗರ ಘಟಕದ ಅಧ್ಯಕ್ಷ ಟಿ.ಎಸ್.ಶ್ರೀವತ್ಸ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು