ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಕೆಟ್‌ ಆಕಾಂಕ್ಷಿಗಳಿಂದ ಹಬ್ಬದ ಉಡುಗೊರೆ: ಸೀರೆ, ಹಾಟ್‌ಬಾಕ್ಸ್, ಟೋಕನ್‌ ವಿತರಣೆ

Last Updated 23 ಅಕ್ಟೋಬರ್ 2022, 20:45 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದ್ದು, ಟಿಕೆಟ್‌ ಆಕಾಂಕ್ಷಿಗಳು ಸಾಲು ಸಾಲು ಹಬ್ಬಗಳನ್ನೇ ನೆಪವಾಗಿಸಿಕೊಂಡು ಮತದಾರರ ಸೆಳೆಯಲು ‘ಉಡುಗೊರೆ’ಯ ಮೊರೆ ಹೋಗಿದ್ದಾರೆ.

ಹಾಸನ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಕೊಡಗು ಜಿಲ್ಲೆ ಒಳಗೊಂಡಂತೆ ರಾಜ್ಯದ ಹಲವು ವಿಧಾನಸಭಾ ಕ್ಷೇತ್ರದಲ್ಲಿನ ಟಿಕೆಟ್‌ ಆಕಾಂಕ್ಷಿಗಳು ಹಾಗೂ ಹಾಲಿ ಶಾಸಕರು ಮನೆ ಮನೆಗೆ ತೆರಳಿ ಸೀರೆ, ಹಾಟ್‌ ಬಾಕ್ಸ್‌, ಬಳೆ ಹಾಗೂ ಟೋಕನ್‌ ವಿತರಣೆ ಮಾಡುತ್ತಿದ್ದಾರೆ. ಟಿಕೆಟ್‌ ಸಿಗುತ್ತದೆ ಎಂದು ನಂಬಿರುವ ಹೊಸಮುಖಗಳೂ ಅಖಾಡ ಸಜ್ಜುಗೊಳಿಸಿಕೊಳ್ಳುತ್ತಿದ್ದಾರೆ.

ಚುನಾವಣೆ ಘೋಷಣೆಯಾದ ಮೇಲೆ ಮತದಾರರಿಗೆ ಸಾಮಗ್ರಿ ಹಂಚಿಕೆ ಸಾಧ್ಯವಿಲ್ಲ ಎಂಬ ಕಾರಣಕ್ಕೆ ಈಗಿನಿಂದಲೇ ಮಹಿಳಾ ಮತದಾರರ ಮನ ಗೆಲ್ಲಲು ಕಸರತ್ತು ನಡೆಯುತ್ತಿವೆ ಎಂದು ಹಾಸನ ಜಿಲ್ಲೆಯ ಬೇಲೂರಿನ ಯುವ ಮತದಾರ ಸಂದೇಶ ಹೇಳುತ್ತಾರೆ.
ರಾಜ್ಯದ ಕೆಲವು ಕ್ಷೇತ್ರಗಳಲ್ಲಿ ಬಟ್ಟೆ ಹಾಗೂ ಪಾತ್ರೆ ಅಂಗಡಿಗೆ ಆಕಾಂಕ್ಷಿಗಳು ಮುಂಗಡ ಹಣ ಪಾವತಿಸಿ ಮತದಾರರಿಗೆ ಟೋಕನ್‌ ವ್ಯವಸ್ಥೆ ಮಾಡಿದ್ದಾರೆ. ಮತದಾರರು ನಿಗದಿತ ಸಮಯದಲ್ಲಿ ಟೋಕನ್‌ ನೀಡಿ ವಸ್ತು ಖರೀದಿಸುತ್ತಿದ್ದಾರೆ. ದೇವಸ್ಥಾನಗಳ ಜೀರ್ಣೋದ್ಧಾರಕ್ಕೂ ಮುಂಗಡ ಹಣ ಪಾವತಿಸಿ ನೆಲೆ ಭದ್ರ ಪಡಿಸಿಕೊಳ್ಳುತ್ತಿದ್ದಾರೆ.

‘ಹಾಸನ ಕ್ಷೇತ್ರದಲ್ಲಿ ಹಾಲಿ ಶಾಸಕ ಪ್ರೀತಂಗೌಡ ಬೆಂಬಲಿಗರು ಈ ಹಿಂದಿನ ಗಣೇಶ ಚತುರ್ಥಿಯಲ್ಲೇ ಸರ್ಕಾರಿ ನೌಕರರಿರುವ ಪ್ರತಿ ಮನೆಗೆ ಸೀರೆ ಹಾಗೂ ಬಳೆ ವಿತರಿಸಿದ್ದಾರೆ’ ಎಂದು ಮೂಲಗಳು ಖಚಿತಪಡಿಸಿವೆ.

ರಾಜ್ಯದ ಕೆಲವು ಕ್ಷೇತ್ರಗಳಲ್ಲಿ ವರ್ಷದ ತೊಡಕು ನೆಪದಲ್ಲಿ ದೀಪಾವಳಿ ಬಳಿಕ ಮಾಂಸದೂಟ ಹಾಕಿಸಲು ಯೋಜನೆ ರೂಪಿಸಲಾಗಿದೆ.
‘ಹಾಸನದ ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಹುಲ್ಲಳ್ಳಿ ಸುರೇಶ್‌, ಬೆಳಕಿನ ಹಬ್ಬ ದೀಪಾವಳಿ ನೆಪದಲ್ಲಿ ಸಾವಿರಾರು ಸೀರೆ ವಿತರಿಸಿದ್ದಾರೆ. ಅವರ ಬೆಂಬಲಿಗರು ತಾಲ್ಲೂಕಿನ ಗೆಂಡೇಹಳ್ಳಿ, ತೊಳಲು, ನವಿಲೇಹಳ್ಳಿ, ಮರೂರು ಭಾಗದ ಬಹುತೇಕ ಮನೆಗಳಿಗೆ ಸೀರೆ ಹಂಚಿದ್ದಾರೆ’ ಎಂದು ಮತದಾರರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲೂ ಕಾಂಗ್ರೆಸ್‌ನ ಎಚ್.ಕುಸುಮಾ ಹಬ್ಬದ ಅಂಗವಾಗಿ ನೂರಾರು ಮಹಿಳೆಯರಿಗೆ ಬಾಗಿನ ನೀಡಿದ್ದಾರೆ. ‘ಚುನಾವಣೆ ಕಾರಣಕ್ಕೆ ಅಲ್ಲ, ಇದು ಸಂಪ್ರದಾಯ’ ಎಂದು ಕುಸುಮಾ ಆಪ್ತರಲ್ಲಿ ಹೇಳಿಕೊಂಡಿದ್ದರು. ಚಿಕ್ಕಬಳ್ಳಾಪುರ ಗೌರಿಬಿದನೂರಿನಲ್ಲಿ ಸಮಾಜ ಸೇವಕ ಕೆ.ಎಚ್‌.ಪುಟ್ಟಸ್ವಾಮಿ ಸಾವಿರಾರು ಟೋಕನ್‌ ವಿತರಿಸಿದ್ದಾರೆ. ಕೊಡಗಿನಲ್ಲಿ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ ಮಂಥರ್‌ಗೌಡ ಕ್ಷೇತ್ರದಲ್ಲಿನ ಕ್ರೀಡಾ ಆಯೋಜಕರಿಗೆ ದೇಣಿಗೆ ನೀಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರೂ ಆಗಿರುವ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್ ನೇತೃತ್ವದಲ್ಲಿ ಕೆಂಗೇರಿ ಭಾಗದಲ್ಲಿ ಸೀಮಂತ ಸಂಭ್ರಮವೂ ನಡೆದಿತ್ತು.

‘ಸೀರೆ, ಹಾಟ್‌ ಬಾಕ್ಸ್‌ನಲ್ಲಿ ಆಕಾಂಕ್ಷಿ ಗಳು ಹೆಸರು ಹಾಗೂ ಫೋಟೊ ಹಾಕಿಲ್ಲ. ವಿರೋಧಿಗಳಿಗೆ ಸುಳಿವು ಸಿಗದಂತೆ ಉಪಾಯ ಕಂಡುಕೊಂಡಿದ್ದಾರೆ’ ಎಂದು ಮಹಿಳೆಯೊಬ್ಬರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT