ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಉತ್ತರ ಕನ್ನಡ ಹೋರಾಟಕ್ಕೆ ಕುಮಾರಸ್ವಾಮಿ ಬೆಂಬಲ

Last Updated 25 ಜುಲೈ 2022, 4:51 IST
ಅಕ್ಷರ ಗಾತ್ರ

ನವದೆಹಲಿ: ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಜನರು ನಡೆಸುತ್ತಿರುವ ಹೋರಾಟಕ್ಕೆ ನನ್ನ ಪರಿಪೂರ್ಣ ಬೆಂಬಲವಿದ್ದು, ರಾಜ್ಯ ಸರ್ಕಾರ ಆದ್ಯತೆಯ ಮೇರೆಗೆ ಬೇಡಿಕೆ ಈಡೇರಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೋಮವಾರ ಹೇಳಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಉತ್ತರ ಕನ್ನಡ ಜಿಲ್ಲೆಯ ಜನರು ನಡೆಸುತ್ತಿರುವ ಹೋರಾಟಕ್ಕೆ ನನ್ನ ಪರಿಪೂರ್ಣ ಬೆಂಬಲವಿದೆ. ಈ ಹೋರಾಟದಲ್ಲಿ ನಮ್ಮ ಪಕ್ಷವೂ ನಿಲ್ಲುತ್ತದೆ. ವರ್ಷಗಳ ಕಾಲದ ನ್ಯಾಯಯುತವಾದ ಈ ಬೇಡಿಕೆಯನ್ನು ರಾಜ್ಯ ಬಿಜೆಪಿ ಸರ್ಕಾರ ಆದ್ಯತೆಯ ಮೇರೆಗೆ ಈಡೇರಿಸಬೇಕು. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆರೋಗ್ಯ ಸಚಿವ ಸುಧಾಕರ್ ಅವರೇ ಖುದ್ದು ಕ್ರಮ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ಕೆಲವೆಡೆ ಮಾತ್ರ ಸುಸಜ್ಜಿತ ಆಸ್ಪತ್ರೆಗಳಿವೆ. ಬಹುತೇಕ ಜಿಲ್ಲೆಗಳಲ್ಲಿ ಇಲ್ಲ. ತುರ್ತು ಚಿಕಿತ್ಸೆ ಬೇಕೆಂದರೆ, ಬೆಂಗಳೂರು, ಹುಬ್ಬಳ್ಳಿ, ಮಂಗಳೂರು, ಮೈಸೂರು, ಬೆಳಗಾವಿಯಂಥ ಕೆಲವಷ್ಟೇ ನಗರಗಳಲ್ಲಿ ಮಾತ್ರ ಲಭ್ಯವಿದೆ. ಜನ ಹೋಗುವುದು ಹೇಗೆ? ಆರೋಗ್ಯ ಸೌಲಭ್ಯದಲ್ಲಿ ಅಸಮಾನತೆ ರಾಜ್ಯಕ್ಕೆ ಭೂಷಣವಲ್ಲ ಎಂದು ಹೇಳಿದರು.

ಕೋವಿಡ್ ವೇಳೆ ಎಲ್ಲ ಸಮುದಾಯ ಕೇಂದ್ರ, ತಾಲೂಕು, ಜಿಲ್ಲಾ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುತ್ತೇವೆ ಎಂದು ಅಬ್ಬರಿಸಿ ಬೊಬ್ಬಿರಿದ ಸರ್ಕಾರ, ಕೋವಿಡ್ ಇಳಿದ ಮೇಲೆ ತಣ್ಣಗಾಗಿದೆ. ಆಕ್ಸಿಜನ್ ಘಟಕ, ವೆಂಟೆಲೇಟರ್ ಸೇರಿ ಖರೀದಿ ಮಾಡಿದ ವೈದ್ಯ ಪರಿಕರಗಳೆಲ್ಲ ಅನೇಕ ಕಡೆ ಧೂಳು ತಿನ್ನುತ್ತಿವೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಇನ್ನೆಷ್ಟು ಆಂಬುಲೆನ್ಸ್ ದುರಂತಗಳು ಆಗಬೇಕು? ಇನ್ನೆಷ್ಟು ಜನರು ರಸ್ತೆಗಳ ಮೇಲೆಯೇ ಜೀವ ಕಳೆದುಕೊಳ್ಳಬೇಕು? ಶಿರೂರು ಟೋಲ್ ಬಳಿ ಸಂಭವಿಸಿದ ಭೀಕರ ಅಪಘಾತದಿಂದ ರಾಜ್ಯ ಸರ್ಕಾರ ಕಣ್ತೆರೆಯಲೇಬೇಕು ಎಂದು ಹೇಳಿದರು.

ಆರೋಗ್ಯ ಸೌಲಭ್ಯ ಕಲ್ಪಿಸುವುದರ ಜತೆಗೆ ಇರುವ ವ್ಯವಸ್ಥೆಯ ಸಮರ್ಪಕ ನಿರ್ವಹಣೆ ಸರಕಾರದ ಹೊಣೆ. ಆರೋಗ್ಯ ಎಲ್ಲರ ಹಕ್ಕು. ನಾನು ರೂಪಿಸಿರುವ ಪಂಚರತ್ನ ಕಾರ್ಯಕ್ರಮದಲ್ಲಿ ಆರೋಗ್ಯವೂ ಪ್ರಮುಖ ಕಾರ್ಯಕ್ರಮ. ಜನತೆಗೆ ಅತ್ಯುತ್ತಮ ಆರೋಗ್ಯ ಸೌಲಭ್ಯ ಕೊಡುವುದು ನನ್ನ ಗುರಿ ಎಂದು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT