ಸೋಮವಾರ, ಆಗಸ್ಟ್ 8, 2022
23 °C
ಪ್ರಜಾವಾಣಿ ವರದಿ ಪರಿಣಾಮ: ಮಣಿದ ಸರ್ಕಾರ; ಸಮಿತಿ ಕೈಬಿಟ್ಟಿರುವ ಪಠ್ಯಗಳನ್ನು ಮರು ಪರಿಷ್ಕರಿಸಲು ನಿರ್ಧಾರ

ಚಕ್ರತೀರ್ಥ ಸಮಿತಿ ತಿದ್ದುಪಡಿ ಮಾಡಿದ್ದ ಪಠ್ಯಗಳ ಮರು ಪರಿಷ್ಕರಣೆಗೆ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯ ಪುಸ್ತಕ ಪರಿಶೀಲನಾ ಸಮಿತಿ ಪರಿಷ್ಕರಿಸಿದ ಪಠ್ಯ ಪುಸ್ತಕದ ವಿಚಾರದಲ್ಲಿ ವಿರೋಧ ಪಕ್ಷಗಳು, ನಾನಾ ಮಠಾಧೀಶರು, ವಿವಿಧ ಸಂಘಟನೆಗಳ ಬೇಡಿಕೆಗೆ ಕೊನೆಗೂ ರಾಜ್ಯ ಸರ್ಕಾರ ಮಣಿದಿದೆ. ಸಮಿತಿ ಕೈಬಿಟ್ಟ, ತಿದ್ದುಪಡಿ ಮಾಡಿದ್ದ ಪಠ್ಯಗಳನ್ನು ಮರು ಪರಿಷ್ಕರಿಸಲು ನಿರ್ಧರಿಸಿದೆ.

ಪರಿಷ್ಕೃತ ಪಠ್ಯದಲ್ಲಿ ಅಂಬೇಡ್ಕರ್‌ ಕುರಿತ ‘ಸಂವಿಧಾನ ಶಿಲ್ಪಿ’ ಪದ, ಹಿಂದುಳಿದವರಲ್ಲಿ ಸ್ವಾಭಿಮಾನದ ಕಿಚ್ಚು ಹೊತ್ತಿಸಿರುವ ಬ್ರಹ್ಮಶ್ರೀ ನಾರಾಯಣಗುರು, ಭಗತ್ ಸಿಂಗ್‌ ಕುರಿತ ಪಾಠ, ‘ಭಕ್ತಿ ಪಂಥ ಹಾಗೂ ಸೂಫಿ ಸಂತರು’ ಪಾಠ, ಸಿದ್ದಗಂಗಾ ಮಠ ಹಾಗೂ ಆದಿ ಚುಂಚನಗಿರಿ ಮಠದ ಕುರಿತು ವಿವರಗಳನ್ನು ಸಮಿತಿ ಕೈಬಿಟ್ಟಿತ್ತು. ಬಸವಣ್ಣನವರ ಕುರಿತ ವಿಷಯಾಂಶ ತಿದ್ದುಪಡಿ ಮಾಡಿತ್ತು. ಈ ಪರಿಷ್ಕೃತ ಪಠ್ಯಪುಸ್ತಕಗಳು ಮುದ್ರಣ ಹಂತದಲ್ಲಿರುವಾಗಲೇ ಕೈಬಿಟ್ಟಿದ್ದ ಮತ್ತು ತಿದ್ದುಪಡಿ ಮಾಡಿದ್ದ ಅಂಶಗಳಿಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.

‘ಚಕ್ರತೀರ್ಥ ಸಮಿತಿಯು ಉದ್ದೇಶಪೂರ್ವಕವಾಗಿ ಕೆಲವರ ಪರಿಚಯದ ಪಾಠವನ್ನು ಕೈಬಿಟ್ಟಿದೆ, ಕೆಲವನ್ನು ತಿರುಚಿದೆ’ ಎಂದು ಸಾಹಿತಿಗಳು, ಹೋರಾಟಗಾರರು ದಾಖಲೆ ಸಮೇತ ಸಾರ್ವಜನಿಕರ ಮುಂದಿಟ್ಟಿದ್ದರು. ಪರಿಷ್ಕರಿಸಿರುವ ಪಠ್ಯಪುಸ್ತಕಗಳನ್ನು ವಾಪಸ್‌ ಪಡೆದು, ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ಪರಿಷ್ಕರಿಸಿದ್ದ ಹಿಂದಿನ ಪಠ್ಯಪುಸ್ತಕಗಳನ್ನೇ ಈ ವರ್ಷವೇ ನೀಡಬೇಕು ಎಂದು ‘ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ’ ಆಗ್ರಹಿಸಿತ್ತು. ಜೆಡಿಎಸ್‌ ವರಿಷ್ಠಎಚ್.ಡಿ. ದೇವೇಗೌಡರು ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದರು.

ಇದೆಲ್ಲ ಆದ ಬಳಿಕವೂ, ಕಂದಾಯ ಸಚಿವ ಆರ್‌. ಅಶೋಕ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ನಾಲ್ವರು ಸಚಿವರಿದ್ದ ತಂಡ, ಪರಿಷ್ಕರಣೆಯಲ್ಲಿ ಪ್ರಮಾದವೇ ಆಗಿಲ್ಲ; ಸಣ್ಣ ಪುಟ್ಟ ತಪ್ಪುಗಳಾಗಿವೆ ಎಂದು ಸಮರ್ಥನೆಯನ್ನೂ ಮಾಡಿದ್ದರು. ಸರ್ಕಾರವು, ಸೋಮವಾರ ಹೊರಡಿಸಿರುವ ಆದೇಶದಲ್ಲಿ, ಚಕ್ರತೀರ್ಥ ಸಮಿತಿ ಎಸಗಿದ್ದ ತಪ್ಪುಗಳನ್ನು ಪಟ್ಟಿ ಮಾಡಿದ್ದಲ್ಲದೇ, ಅದಕ್ಕೆ ತಿದ್ದೋಲೆಯನ್ನೂ ಹೊರಡಿಸಿದೆ.

‘ಸಾಮಾನ್ಯವಾಗಿ ಪಠ್ಯ ಪುಸ್ತಕಗಳ ರಚನೆ, ಪರಿಷ್ಕರಣೆಗೆ ಒಳಗಾದಾಗ ಅಗತ್ಯವಾದ ತಿದ್ದುಪಡಿಗಳನ್ನು ತಿದ್ದೋಲೆ ರೂಪದಲ್ಲಿ ನೀಡುವುದು ಈ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪ್ರಕ್ರಿಯೆ’ ಎಂದು ಆದೇಶದಲ್ಲಿ ಹೇಳಿದೆ.

ಚಕ್ರತೀರ್ಥ ಸಮಿತಿ ಕೈಬಿಟ್ಟಿದ್ದ  9ನೇ ತರಗತಿಯ ಸಮಾಜ ವಿಜ್ಞಾನ ಭಾಗ–1ರ ‘ನಮ್ಮ ಸಂವಿಧಾನ’ ಪಾಠದಲ್ಲಿದ್ದ ‘ಸಂವಿಧಾನ ಶಿಲ್ಪಿ’ ಪದ, 7ನೇ ತರಗತಿಯ ಸಮಾಜ ವಿಜ್ಞಾನ ಭಾಗ–1ರಲ್ಲಿನ ‘ಭಕ್ತಿ ಪಂಥ ಹಾಗೂ ಸೂಫಿ ಸಂತರು’ ಪಾಠ, 9ನೇ ತರಗತಿಯ ಸಮಾಜ ವಿಜ್ಞಾನ ಭಾಗ–1 ಪಠ್ಯಪುಸ್ತಕದಲ್ಲಿ ‘ಭಾರತದ ಮತ ಪರಿವರ್ತಕರು’ ಪಾಠದಲ್ಲಿರುವ ಬಸವಣ್ಣನವರ ಕುರಿತ ವಿಷಯಾಂಶವನ್ನು ಮತ್ತೆ ಸೇರಿಸಲು ಸರ್ಕಾರ ತೀರ್ಮಾನಿಸಿದೆ.

‘ಪಠ್ಯಪುಸ್ತಕಗಳ ಮುದ್ರಣಕ್ಕೆ ಕಾರ್ಯಾದೇಶ ಪಡೆದಿರುವ ಮುದ್ರಕರಿಂದ ತಿದ್ದುಪಡಿಗೆ ಸಂಬಂಧಿಸಿದ ತಿದ್ದೋಲೆಯ ಪ್ರತಿಗಳನ್ನು ಮುದ್ರಿಸಿ ಎಲ್ಲ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳಿಗೆ ಉಚಿತವಾಗಿ ತಲಾ ಒಂದು ಪ್ರತಿ ವಿತರಿಸಲಾಗುವುದು. ಅಲ್ಲದೆ, ತಿದ್ದುಪಡಿ ಮಾಡಿರುವ ಅಂಶಗಳನ್ನು ಕರ್ನಾಟಕ ಪಠ್ಯ ಪುಸ್ತಕ ಸಂಘದ ಜಾಲತಾಣದಲ್ಲಿರುವ ಮೂಲ ಪುಸ್ತಕಗಳ ಸಾಫ್ಟ್‌ ಪ್ರತಿಯಲ್ಲಿಯೂ ಅಳವಡಿಸಲಾಗುವುದು’ ಎಂದೂ ಆದೇಶದಲ್ಲಿ ತಿಳಿಸಲಾಗಿದೆ.

 

ಪಠ್ಯದಲ್ಲಿ ಏನೆಲ್ಲ ಮರು ಸೇರ್ಪಡೆ?

* 9ನೇ ತರಗತಿಯ ಸಮಾಜ ವಿಜ್ಞಾನ ಭಾಗ–1ರ ‘ನಮ್ಮ ಸಂವಿಧಾನ’ ಪಾಠದಲ್ಲಿ ಕೈಬಿಟ್ಟಿದ್ದ ‘ಸಂವಿಧಾನ ಶಿಲ್ಪಿ’ ಪದ

* 7ನೇ ತರಗತಿಯ ಸಮಾಜ ವಿಜ್ಞಾನ ಭಾಗ–1ರ ‘ಭಕ್ತಿ ಪಂಥ ಹಾಗೂ ಸೂಫಿ ಸಂತರು’ ಪಾಠ ಸಂಪೂರ್ಣ ಸೇರ್ಪಡೆ

* 7ನೇ ತಗರಗತಿಯ ಪ್ರಥಮ ಭಾಷೆ ಕನ್ನಡ ಪಠ್ಯ ಪುಸ್ತಕದಲ್ಲಿ ‘ಗೊಂಬೆ ಕಲಿಸುವ ನೀತಿ’ ಪದ್ಯದ ಕೃತಿಕಾರ ಹೆಸರು ಆರ್‌.ಎನ್‌. ಜಯಗೋಪಾಲ್‌ ಎಂದು ತಪ್ಪಾಗಿ ಮುದ್ರಣವಾಗಿದ್ದು, ಅದನ್ನು ಬದಲಿಸಿ ಮೂಲ ಕೃತಿಕಾರರಾದ ಚಿ. ಉದಯಶಂಕರ್‌ ಎಂದು ನಮೂದಿಸುವುದು

* 6ನೇ ತರಗತಿಯ ಸಮಾಜ ವಿಜ್ಞಾನ ಭಾಗ–1ರ ಪಾಠ ‘ನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕ’ ಪಾಠದಲ್ಲಿ ಸಿದ್ದಗಂಗಾ ಮಠ ಹಾಗೂ ಆದಿ ಚುಂಚುನಗಿರಿ ಮಠದ ಕುರಿತು ವಿವರ

* 7ನೇ ತಗರತಿಯ ಸಮಾಜ ವಿಜ್ಞಾನ ಭಾಗ–1ರಲ್ಲಿ ‘ಮೈಸೂರು ಮತ್ತು ಇತರ ಸಂಸ್ಥಾನಗಳು’ ಪಾಠದಲ್ಲಿದ್ದ ಸುರ‍ಪುರ ನಾಯಕರ ಕುರಿತ ವಿವರ‌

* 9ನೇ ತರಗತಿಯ ಸಮಾಜ ವಿಜ್ಞಾನ ಭಾಗ–1 ಪಠ್ಯಪುಸ್ತಕದಲ್ಲಿ ‘ಭಾರತದ ಮತ ಪರಿವರ್ತಕರು’ ಅಧ್ಯಾಯದಲ್ಲಿ ಬಸವಣ್ಣನವರ ಕುರಿತ ವಿಷಯಾಂಶವನ್ನು ಮಾರ್ಪಡಿಸುವುದು

* 7ನೇ ತರಗತಿಯ ಸಮಾಜ ವಿಜ್ಞಾನ ಭಾಗ–2 ಪಠ್ಯಪುಸ್ತಕದ ‘ಕರ್ನಾಟಕ ರಾಜ್ಯ ಏಕೀಕರಣ ಹಾಗೂ ಗಡಿ ವಿವಾದಗಳು’ ಎಂಬ ಪಾಠದಲ್ಲಿ ರಾಷ್ಟ್ರಕವಿ ಕುವೆಂಪುರವರ ಹಾಗೂ ಹುಯಿಲಗೋಳ ನಾರಾಯಣ ರಾವ್‌ ಅವರ ಭಾವಚಿತ್ರ ಅಳವಡಿಕೆ

* 4ನೇ ತರಗತಿಯ ಪರಿಸರ ಅಧ್ಯಯನ ಪಠ್ಯದಲ್ಲಿನ ‘ಪ್ರತಿಯೊಬ್ಬರು ವಿಶಿಷ್ಟ’ ಪಾಠದಲ್ಲಿ ‘ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ ಕುವೆಂಪು ಅವರಿಗೆ ಚಿಕ್ಕಂದಿನಿಂದಲೂ ಕಥೆ, ಕವನ, ಪುಸ್ತಕ ಓದುವ, ಬರೆಯುವ ಅಭ್ಯಾಸ ಇತ್ತು’ ಎಂಬ ವಾಕ್ಯದ ನಂತರ ‘ಅನೇಕರ ಪ್ರೋತ್ಸಾಹದಿಂದ ಇವರು ಮುಂದೆ ಪ್ರಖ್ಯಾತ ಕವಿ ಎನಿಸಿಕೊಂಡರು’ ಎಂಬ ಸಾಲು ಕೈಬಿಡುವುದು.

 

ಪ್ರಜಾವಾಣಿ ವರದಿ ಪರಿಣಾಮ

ಪಠ್ಯಪುಸ್ತಕ ಪರಿಶೀಲನೆ ನಡೆಸಿ ವರದಿ ಸಲ್ಲಿಸಲು ನೇಮಿಸಲಾಗಿದ್ದ ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿ ಪಠ್ಯಪರಿಷ್ಕರಣೆ ಮೂಲಕ ಮಾಡಿದ್ದ ತಪ್ಪುಗಳನ್ನು ಸರಿಪಡಿಸಲು ಸರ್ಕಾರ ಕೊನೆಗೂ ಮುಂದಾಗಿದೆ.

ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಆಗಿರುವ ಲೋಪ–ದೋಷಗಳಿಗೆ ಸಂಬಂಧಿಸಿದಂತೆ ಮೇ 18 ರಿಂದ ‘ಪ್ರಜಾವಾಣಿ’ ನಿರಂತರ ವರದಿ– ವಿಶ್ಲೇಷಣೆಗಳನ್ನು ಪ್ರಕಟಿಸಿದೆ.

ಆರ್‌ಎಸ್‌ಎಸ್‌ ಸಂಸ್ಥಾಪಕ ಕೇಶವ ಬಲಿರಾಮ ಹೆಡಗೇವಾರ್‌ ಅವರ ಭಾಷಣವನ್ನು ಪಠ್ಯವಾಗಿ ಸೇರಿಸಿದ್ದಲ್ಲದೇ, ದೇಶದ ಹಲವು ದಾರ್ಶನಿಕರು ನೀಡಿದ್ದ ಕೊಡುಗೆಯನ್ನು ಪರಿಚಯಿಸುವ ಹಲವು ಪಠ್ಯಗಳನ್ನು ಕೈಬಿಟ್ಟಿರುವ ಬಗ್ಗೆ ವರದಿ ಮಾಡಿದ್ದಲ್ಲದೇ, ವಿಸ್ತೃತವಾಗಿ ವಿಶ್ಲೇಷಣೆಗೂ
ಒಳಪಡಿಸಲಾಗಿತ್ತು. ಪತ್ರಿಕೆಯ ವರದಿಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಯಿತು. ಸರ್ಕಾರದ ನಡೆಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಹಲವು ಸಂಘಟನೆಗಳೂ ಆಕ್ಷೇಪ ವ್ಯಕ್ತಪಡಿಸಿ ಹೋರಾಟಗಳನ್ನೂ ಹಮ್ಮಿಕೊಂಡಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು