ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪೇಸಿಎಂ’ ಅಭಿಯಾನ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿ

‘ರೀ–ಡೂ ಸಿದ್ದರಾಮಯ್ಯ, ಇ.ಡಿ ಡಿಕೆಶಿ’ ಎದಿರೇಟಿನ ಅಭಿಯಾನ
Last Updated 21 ಸೆಪ್ಟೆಂಬರ್ 2022, 21:20 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಮಂಡಲ ಕಲಾಪ ನಡೆಯುತ್ತಿರುವಾಗಲೇ ‘ಪೇಸಿಎಂ– ಇಲ್ಲಿ ಶೇ 40 ಸ್ವೀಕರಿಸ ಲಾಗುವುದು’ ಎಂಬ ಶೀರ್ಷಿಕೆಯಡಿ ಕಾಂಗ್ರೆಸ್‌ ಆರಂಭಿಸಿರುವ ಅಭಿಯಾನ ಬುಧವಾರ ದೊಡ್ಡ ಸದ್ದು ಮಾಡಿತು. ‘ಇದು ರಾಜ್ಯದ ಹೆಸರು ಕೆಡಿಸುವ ಷಡ್ಯಂತ್ರ’ ಎಂದುಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಟುವಾಗಿ ಪ್ರತಿಕ್ರಿಯಿಸಿದರು.

ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ‘ಶೇ 40ರಷ್ಟು ಕಮಿಷನ್‌’ ಸರ್ಕಾರ ಎಂಬ ಅಭಿಯಾನವನ್ನು ಕಾಂಗ್ರೆಸ್ ನಡೆಸುತ್ತಿದೆ. ಅದರ ಮುಂದುವರಿದ ಭಾಗವಾಗಿ ಈ ಅಭಿಯಾನ ನಡೆದಿದೆ. ಬೆಂಗಳೂರಿನ ಪ್ರಮುಖ ಪ್ರದೇಶಗಳ ಗೋಡೆಗಳ ಮೇಲೆಲ್ಲಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಹೋಲುವ ಚಿತ್ರದ ಕ್ಯೂಆರ್ ಕೋಡ್‌ ಸಹಿತ ‘ಪೇಸಿಎಂ’‌ ಎಂದು ಬರೆದ ಭಿತ್ತಿಪತ್ರಗಳು ರಾರಾಜಿಸುತ್ತಿದ್ದವು. ಅದರ ಜತೆಗೆ ಮೊಬೈಲ್ ಸಂಖ್ಯೆಯನ್ನೂ ನೀಡಲಾಗಿತ್ತು.

‘ಪೇಟಿಎಂ’ ಮಾದರಿಯಲ್ಲಿರುವ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿದರೆ ರಾಜ್ಯ ಸರ್ಕಾರದ ವಿರುದ್ಧದ ದೂರುಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಘಟಕ ಇತ್ತೀಚೆಗೆ ಬಿಡುಗಡೆ ಮಾಡಿದ ‘ಶೇ 40 ಕಮಿಷನ್ ಸರ್ಕಾರ’ ವೆಬ್‌ಸೈಟ್‌ ಕಾಣಿಸುತ್ತದೆ. ‘ಶೇ 40 ಸ್ಕ್ಯಾಮ್ ಸ್ಟಾರ್ಸ್’ ಎಂಬ ಪುಟ ತೆರೆದುಕೊಂಡು, ರೋಡ್ ಸ್ಕ್ಯಾಮ್, ಬಿಟ್‌ಕಾಯಿನ್ ಸ್ಕ್ಯಾಮ್, ಪಿಎಸ್‌ಐ ಸ್ಕ್ಯಾಮ್ ಎನ್ನುವ ಪುಟಗಳೂ ಬರುತ್ತದೆ.

ಸ್ಕ್ಯಾನ್ ಮಾಡಿದ ತಕ್ಷಣ ‘ಅಭಿಯಾನಕ್ಕೆ ಸೇರ್ಪಡೆ ಆಗಿದ್ದೀರಿ’ ಎಂಬ ಸಂದೇಶವೂ ಬರುತ್ತದೆ.

ನಗರಗಳಲ್ಲಿ ಅಂಟಿಸಿದ್ದ ಭಿತ್ತಿಪತ್ರದ ವಿಡಿಯೊ, ಫೋಟೋಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದಂತೆ ಎಚ್ಚೆತ್ತುಕೊಂಡ ಸರ್ಕಾರ, ಅದನ್ನು ಕೂಡಲೇ ತೆರವು ಮಾಡುವಂತೆ ಸೂಚಿಸಿತು.

ಪೊಲೀಸ್ ಹಾಗೂ ಬಿಬಿಎಂಪಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿ ಬೊಮ್ಮಾಯಿ, ‘ರಾತ್ರಿಯೇ ಇದನ್ನು ಅಂಟಿಸಲಾಗಿದ್ದರೂ ತೆರವುಗೊಳಿಸುವ ಅಥವಾ ಪ್ರಕರಣ ದಾಖಲಿಸುವ ಕೆಲಸ ಏಕೆ ಮಾಡಲಿಲ್ಲ’ ಎಂದು ಕಟುವಾಗಿ ಪ್ರಶ್ನಿಸಿದರು ಎಂದು ಗೊತ್ತಾಗಿದೆ. ತಕ್ಷಣವೇ ಎಚ್ಚೆತ್ತಕೊಂಡ ಪೊಲೀಸರು, ಬಿಬಿಎಂಪಿ ಸಿಬ್ಬಂದಿ ಅವುಗಳನ್ನು ತೆರವುಗೊಳಿಸಿದರು. ಈ ಬಗ್ಗೆ ಟ್ವೀಟ್ ಮಾಡಿರುವ ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ, ಸರ್ಕಾರವು ‘ಪೇಸಿಎಂ’ ಭಿತ್ತಿಪತ್ರಗಳನ್ನು ತೆರವುಗೊಳಿಸುವ ಸಾಮರ್ಥ್ಯ ಹೊಂದಿರಬಹುದು. ಆದರೆ, ಅವರ ಭ್ರಷ್ಟಾಚಾರವನ್ನು ಕರ್ನಾಟಕದ ಜನರ ಎದುರು ಹೇಗೆ ಸಮರ್ಥಿಸಿಕೊಳ್ಳುತ್ತಾರೆ. ಮುಖ್ಯಮಂತ್ರಿ ಹುದ್ದೆಯೂ (₹2500 ಕೋಟಿಗೆ) ಸೇರಿದಂತೆ ಪ್ರತಿಯೊಂದೂ ಕರ್ನಾಟಕದಲ್ಲಿ ಸೂಕ್ತ ಬೆಲೆಗೆ ಮಾರಾಟಕ್ಕಿದೆ’ ಎಂದು ಕುಟುಕಿದ್ದಾರೆ.

‘ಪೇಸಿಎಂ’‌ ಅಭಿಯಾನವನ್ನು ಟೀಕಿಸಿದ ವಿಧಾನ ಪರಿಷತ್ ಬಿಜೆಪಿ ಸದಸ್ಯ ಎನ್. ರವಿಕುಮಾರ್, ‘ಕಾಂಗ್ರೆಸ್‌ನವರು ಭಾರತ್ ಜೋಡೊ ಯಾತ್ರೆಗೆ ಮೊದಲು ಪೇ ಮಾಡಲಿ. ಸಿದ್ದರಾಮಯ್ಯ ಕಾರು ಹಾಗೂ ವಾಚುಗಳಿಗೆ ಪೇ ಮಾಡಲಿ. ರಮೇಶ್ ಕುಮಾರ್ ಹೇಳಿದ್ರಲ್ಲ, ತಲೆಮಾರು ಕುಳಿತು ತಿನ್ನು ವಷ್ಟು ಮಾಡಿದ್ದೇವೆಂದು, ಅದಕ್ಕೆ ಪೇ ಮಾಡಲಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ‘ತುಂಬಾ ವರ್ಷ ಅಧಿಕಾರ ಅನುಭವಿಸಿರುವ ಕಾಂಗ್ರೆಸ್ಸಿಗರು, ಕಳೆದ ಎಂಟು ವರ್ಷಗಳಲ್ಲಿ ಏನೂ ಸಿಗದೆ ಹತಾಶರಾಗಿದ್ದಾರೆ. ಈ ರೀತಿಯ ಕೆಳಮಟ್ಟದ ಯೋಚನೆ ಕಾಂಗ್ರೆಸ್‌ಗೆ ಒಳ್ಳೆಯದಲ್ಲ’ ಎಂದರು.

ಹೆಸರು ಕೆಡಿಸಲು ಅಭಿಯಾನ: ಸಿ.ಎಂ

‘ನನ್ನ ಹಾಗೂ ಕರ್ನಾಟಕದ ಹೆಸರು ಕೆಡಿಸಲು ‘ಪೇಸಿಎಂ’ ಅಭಿಯಾನ ನಡೆಸಲಾಗುತ್ತಿದೆ. ಇಂತಹ ಸುಳ್ಳು ಅಭಿಯಾನ ನಡೆಸಲು ಎಲ್ಲರಿಗೂ ಬರುತ್ತದೆ’ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಇದು ವ್ಯವಸ್ಥಿತವಾಗಿ ನಡೆಸಿ ರುವ ಷಡ್ಯಂತ್ರ. ಪ್ರಕರಣ ದಾಖಲು ಮಾಡು ವಂತೆಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿ ಸಿದ್ದೇನೆ’ ಎಂದು ಹೇಳಿದರು.

ಆಧಾರರಹಿತವಾಗಿ ಅಭಿಯಾನ ಮಾಡುವುದು ಎಲ್ಲರಿಗೂ ಬರುತ್ತದೆ. ಆದರೆ ಇದು ಸುಳ್ಳು ಎಂದು ಜನಕ್ಕೆ ತಿಳಿಯುತ್ತದೆ. ಇದಕ್ಕೆ ಯಾವ ಬೆಲೆಯೂ ಇಲ್ಲ. ರಾಜ್ಯದ ಹೆಸರು ಕೆಡಿಸುವ ಇಂತಹ ಪ್ರಯತ್ನಕ್ಕೆ ಕಡಿವಾಣ ಹಾಕುವ ಪ್ರಯತ್ನ ನಮ್ಮದು’ ಎಂದರು.

ಜಾಲತಾಣದಲ್ಲಿ ಪ್ರತಿ ಅಭಿಯಾನ

ಪೇಸಿಎಂ ಅಭಿಯಾನ ಸದ್ದು ಮಾಡುತ್ತಿದ್ದಂತೆ ಇದಕ್ಕೆ ಪ್ರತಿಯಾಗಿ ‘ರೀ–ಡೂ ಸಿದ್ದರಾಮಯ್ಯ, ಇ.ಡಿ ಡಿಕೆಶಿ’ ಹೆಸರಿನಲ್ಲಿ ಮತ್ತೊಂದು ಅಭಿಯಾನವೂ ಸಾಮಾಜಿಕ ಜಾಲತಾಣಗಳಲ್ಲಿ ನಡೆಯಿತು.ಆದರೆ, ಇದು ತಮ್ಮದೇ ಅಭಿಯಾನ ಎಂದು ಬಿಜೆಪಿ ಹೇಳಿಕೊಳ್ಳಲಿಲ್ಲ.

‘ಬಿಜೆಪಿ ಕರ್ನಾಟಕ’ದ ಅಧಿಕೃತ ಟ್ವೀಟರ್ ಖಾತೆಯಲ್ಲಿ, ‘ಭಾರತ್‌ ಜೋಡೋ ಯಾತ್ರೆಗಾಗಿ ಕೇರಳದ ಕೊಲ್ಲಂನಲ್ಲಿ ತರಕಾರಿ ಮಾರುವವರನ್ನು ಕಾಂಗ್ರೆಸ್‌ ಕಾರ್ಯಕರ್ತರು ದೋಚಿದ ಪ್ರಕರಣ ಬೆಳಕಿಗೆ ಬಂದಿತ್ತು. ಕಾಂಗ್ರೆಸ್ಸಿಗರೇ, ಯಾತ್ರೆಗಾಗಿ ರಾಹುಲ್‌ ಗಾಂಧಿ ಅವರ ಫೋಟೋ ಹಾಕಿ, ಕ್ಯುಆರ್‌ ಕೋಡ್‌ ಸೃಷ್ಟಿಸಿ ಭಿಕ್ಷೆ ಬೇಡಬಹುದಲ್ಲವೇ?’ ಎಂದು ಕುಟುಕಿದೆ.

‘ಸಿದ್ದರಾಮಯ್ಯ ಅವರೇ, ನಿಮ್ಮ ಕಾಲದಲ್ಲಿ ಹಗರಣದ ಮೂಲಕ ಯಾವುದರ ಗಂಟು ಪಡೆದಿದ್ದು? ಸ್ಟೀಲ್ ಬ್ರಿಡ್ಜ್ ನಿರ್ಮಾಣದಲ್ಲಿ ಕಮಿಷನ್‌ ಯಾವ ಗಂಟಿನ ರೂಪದಲ್ಲಿ ಪಡೆದಿದ್ದು ಬಿಬಿಎಂಪಿಯಲ್ಲಿ ನಿಮ್ಮ ಅವಧಿಯಲ್ಲಿ 1400 ಕೋಟಿ ಹಗರಣ ನಡೆದಿತ್ತು. ಈ ಹಗರಣದಲ್ಲಿನ ಕಮಿಷನ್ ಮೊತ್ತವನ್ನು ಯಾವ ರೂಪದಲ್ಲಿ ಪಡೆದಿದ್ದು? ಎಂದು ಬಿಜೆಪಿ ಪ್ರಶ್ನಿಸಿತು.

ಸಿಸಿಬಿಗೆ ವರ್ಗ

‘ಪೇ ಸಿಎಂ’ ಎಂಬ ಘೋಷಣೆಯ ಭಿತ್ತಿಪತ್ರ ಹಾಗೂ ಕ್ಯೂಆರ್‌ ಕೋಡ್ ಅಭಿಯಾನದ ವಿರುದ್ಧ ಹೈಗ್ರೌಂಡ್ಸ್‌, ಸದಾಶಿವನಗರ, ಭಾರತಿ ನಗರ, ಶೇಷಾದ್ರಿಪುರಂ, ಜೆಸಿ ನಗರ ಸೇರಿ ನಗರದ ಹಲವು ಪೊಲೀಸ್‌ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಿ, ನಗರ ಪೊಲೀಸ್ ಆಯುಕ್ತ ಪ್ರತಾಪ್‌ ರೆಡ್ಡಿ ಆದೇಶ ಹೊರಡಿಸಿದ್ದಾರೆ.

‘ಬಿಬಿಎಂಪಿ ಅಧಿಕಾರಿಗಳ ದೂರು ಆಧರಿಸಿ ಅಪರಿಚಿತರ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಲಾಗುತ್ತಿದೆ. ಮಂಗಳವಾರ ರಾತ್ರಿ ಈ ಭಿತ್ತಿಪತ್ರಗಳನ್ನು ಅಂಟಿಸಿರುವ ಸಾಧ್ಯತೆ ಇದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT