ಮಂಗಳವಾರ, ಜನವರಿ 18, 2022
15 °C

ಕೆಪಿಸಿಸಿ ಪಾದಯಾತ್ರೆ: ಸರ್ಕಾರಕ್ಕೆ ಹೈಕೋರ್ಟ್ ಹಿಗ್ಗಾಮುಗ್ಗ ತರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್‌ (ಕೆಪಿಸಿಸಿ) ನಡೆಸುತ್ತಿರುವ ಪಾದಯಾತ್ರೆ ತಡೆಯಲು ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಆಕ್ಷೇಪಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್‌, ಕೆಪಿಸಿಸಿಗೂ ಕಿವಿ ಹಿಂಡಿದೆ.

‘ಪಾದಯಾತ್ರೆ ವೇಳೆ ಕೋವಿಡ್‌ ಮಾರ್ಗಸೂಚಿಗಳನ್ನು ಎಷ್ಟರ ಮಟ್ಟಿಗೆ ಪಾಲನೆ ಮಾಡಿದ್ದೀರಿ ಎಂಬ ಬಗ್ಗೆ ಸೂಕ್ತ ವಿವರಣೆ ನೀಡಿ’ ಎಂದು ಕೆಪಿಸಿಸಿಗೆ ಖಡಕ್‌ ನಿರ್ದೇಶನ ನೀಡಿದೆ.

‘ಪಾದಯಾತ್ರೆ ತಡೆಯಲು ಸರ್ಕಾರಕ್ಕೆ ನಿರ್ದೇಶಿಸಬೇಕು‘ ಎಂದು ಕೋರಿ ತಿಂಡ್ಲು ನಿವಾಸಿ ಎ.ವಿ.ನಾಗೇಂದ್ರ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್‌ ಅವಸ್ಥಿ ಹಾಗೂ ಸೂರಜ್‌ ಗೋವಿಂದರಾಜ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ಹಿರಿಯ ವಕೀಲ ಅರವಿಂದ ಕಾಮತ್ ಹಾಗೂ ಶ್ರೀಧರ ಪ್ರಭು, ’ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ವಿಧಿಸಿರುವ ನಿರ್ಬಂಧಗಳ ನಡುವೆಯೂ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕೆಪಿಸಿಸಿ ಇದೇ 9ರ ಭಾನುವಾರದಿಂದ 10 ದಿನಗಳ ಪಾದಯಾತ್ರೆ ಆರಂಭಿಸಿದೆ. ಇದರಲ್ಲಿ ಕಾರ್ಯಕರ್ತರು, ಮುಖಂಡರು, ಸಾಂಸ್ಕೃತಿಕ ತಂಡಗಳೂ ಸೇರಿದಂತೆ ಸಾವಿರಾರು ಗ್ರಾಮಸ್ಥರು ಹಾಗೂ ಪಟ್ಟಣ ಪ್ರದೇಶಗಳ ಜನರು ಭಾಗವಹಿಸುತ್ತಿದ್ದಾರೆ. ಇದರಿಂದ ಕೋವಿಡ್‌ ವೇಗವಾಗಿ ಹರಡುವ ಸಾಧ್ಯತೆ ಇದೆ. ತಪ್ಪಿತಸ್ಥರ ವಿರುದ್ಧ ಸರ್ಕಾರ ಈತನಕ ಯಾವುದೇ ಕ್ರಮ ಜರುಗಿಸಿಲ್ಲ‘ ಎಂದು ಆರೋಪಿಸಿದರು.

‘ರಾಜ್ಯದಲ್ಲಿ ಸದ್ಯ 70 ಸಾವಿರ ಸಕ್ರಿಯ ಪ್ರಕರಣಗಳಿವೆ. ಓಮಿಕ್ರಾನ್ ಎಂಬ ಹೊಸ ಕೊರೋನಾ ರೂಪಾಂತರಿ ತಳಿಯಿಂದ ರಾಜ್ಯವು ತತ್ತರಿಸುತ್ತಿದೆ. ಎಲ್ಲ ನಿಯಮಗಳನ್ನೂ ಉಲ್ಲಂಘಿಸಿ ನಡೆಸಲಾಗುತ್ತಿರುವ ಪಾದಯಾತ್ರೆಯನ್ನು ತಕ್ಷಣವೇ ನಿರ್ಬಂಧಿಸಬೇಕಿದೆ. ಇಲ್ಲವಾದಲ್ಲಿ ಸಾರ್ವಜನಿಕರು ದೊಡ್ಡ ಪ್ರಮಾಣದ ಸಂಕಷ್ಟಕ್ಕೆ ಸಿಲುಕಲಿದ್ದಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

ಇದಕ್ಕೆ, ಹೆಚ್ಚುವರಿ ಅಡ್ವೊಕೇಟ್ ಜನರಲ್ ಆರ್.ಸುಬ್ರಹ್ಮಣ್ಯ, ‘ರಾಜ್ಯದಲ್ಲಿ ಎಲ್ಲಾ ರೀತಿಯ ಸಭೆ, ಸಮಾರಂಭ, ಸಮಾವೇಶ, ಪಾದಯಾತ್ರೆ, ಹಬ್ಬ, ರ‍್ಯಾಲಿಗಳನ್ನು ನಿರ್ಬಂಧಿಸಿ ಸರ್ಕಾರ ಇದೇ 4ರಂದು ಆದೇಶ ಹೊರಡಿಸಿದೆ. ಅಂತೆಯೇ, ರಾಮನಗರ ಜಿಲ್ಲಾಧಿಕಾರಿ ಕೆಪಿಸಿಸಿಗೆ ಇದೇ 6ರಂದು ನೋಟಿಸ್‌ ಜಾರಿ ಮಾಡಿದ್ದು, ಪಾದಯಾತ್ರೆಗೆ ಅನುಮತಿ ನೀಡಿಲ್ಲ. ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಕೆಪಿಸಿಸಿ ಮುಖಂಡರೂ ಸೇರಿದಂತೆ ಹಲವರ ವಿರುದ್ಧ ಸ್ಥಳೀಯ ಪೊಲೀಸ್‌ ಠಾಣೆಗಳಲ್ಲಿ ಈಗಾಗಲೇ ಮೂರು ಪ್ರತ್ಯೇಕ  ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ’ ಎಂದು ವಿವರಿಸಿದರು.

ಈ ವಿವರಣೆಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದ ನ್ಯಾಯಪೀಠ, ‘ಎಲ್ಲಾ ರೀತಿಯ ಸಾರ್ವಜನಿಕ ಚಟುವಟಿಕೆಗಳಿಗೆ ನಿರ್ಬಂಧ ಹೇರಿ ಎಸ್‌ಒಪಿ (ಪ್ರಮಾಣಿತ ಕಾರ್ಯಾಚರಣಾ ವಿಧಾನ) ಹೊರಡಿಸಲಾಗಿದೆ, ಪಾದಯಾತ್ರೆಗೆ ರಾಮನಗರ ಜಿಲ್ಲಾಡಳಿತ ನಿರಾಕರಿಸಿದೆ, ಪಾದಯಾತ್ರೆ ನಡೆಸದಂತೆ ಸೂಚಿಸಿ ಕೆಪಿಸಿಸಿಗೆ ನೋಟಿಸ್ ನೀಡಲಾಗಿದೆ ಎಂದೆಲ್ಲಾ ಹೇಳುತ್ತಿದ್ದೀರಿ. ಹಾಗಿದ್ದರೆ, ಪಾದಯಾತ್ರೆ ಮುಂದುವರಿಸಲು ಏಕೆ ಅವಕಾಶ ಮಾಡಿಕೊಟ್ಟಿದ್ದೀರಿ’ ಎಂದು ಅಸಮಾಧಾನ ಹೊರಹಾಕಿತು.

‘ಪಾದಯಾತ್ರೆ ತಡೆಯಲು ಯಾಕೆ ಈತನಕ ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರ ಅಷ್ಟೊಂದು ಅಸಹಾಯಕವಾಗಿದೆಯೇ, ನಿಯಮಗಳ ಉಲ್ಲಂಘನೆಯಾಗುತ್ತಿದ್ದರೂ ಕ್ರಮ ಜರುಗಿಸದೇ ಇರುವಷ್ಟು ಅಸಮರ್ಥವಾಗಿದೆಯಾ, ಎಫ್‌ಐಆರ್ ದಾಖಲಿಸಿದ್ದರೂ ಕೆಪಿಸಿಸಿ ಹೇಗೆ ಪಾದಯಾತ್ರೆ ನಡೆಸುತ್ತಿದೆ, ಪಾದಯಾತ್ರೆ ನಡೆಸುತ್ತಿದ್ದರೂ ಸರ್ಕಾರ ಏನು ಮಾಡುತ್ತಿದೆ. ಪಾದಯಾತ್ರೆ ನಡೆಸುವವರ ವಿರುದ್ಧ ಕ್ರಮ ಜರುಗಿಸುವುದಕ್ಕೆ ನೀವು ಯಾರ ಆಣತಿಗಾಗಿ ಕಾಯುತ್ತಿದ್ದೀರಿ, ಎಲ್ಲದಕ್ಕೂ ನಿಮಗೆ ನ್ಯಾಯಾಲಯವೇ ನಿರ್ದೇಶನ ನೀಡಬೇಕಾ’ ಎಂದು ಕಟುವಾಗಿ ಪ್ರಶ್ನಿಸಿತು.

ಏತನ್ಮಧ್ಯೆ ವಕೀಲ ಎಸ್.ರಾಜಶೇಖರ್, ‘ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ ರಾಜ್ಯ ಸರ್ಕಾರವೂ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಇದನ್ನು ಆಕ್ಷೇಪಿಸಿ ಅರ್ಜಿ ಸಲ್ಲಿಸಲಾಗಿದ್ದು, ಇದನ್ನೂ ಈ ಅರ್ಜಿಯೊಂದಿಗೆ ವಿಚಾರಣೆ ನಡೆಸಬೇಕು‘ ಎಂದು ಕೋರಿದರು. ಇದಕ್ಕೆ ನ್ಯಾಯಪೀಠ ಸಮ್ಮತಿಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು