ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಹೊತ್ತಿ ಉರಿಯುತ್ತಿದೆ: ಹೈಕೋರ್ಟ್‌ ಆತಂಕ- ವಿಶೇಷ ವರದಿ

Last Updated 8 ಫೆಬ್ರುವರಿ 2022, 20:46 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ನಿರ್ಬಂಧ ಸಡಿಲಿಕೆಯಾಗಿದ್ದರೂ ಹೈಕೋರ್ಟ್‌ ಪ್ರವೇಶಕ್ಕೆ ವಿಧಿಸಿರುವ ಸಾರ್ವಜನಿಕರು, ಕಕ್ಷಿದಾರರ ಪ್ರವೇಶ ಮಿತಿಯಲ್ಲಿ ಅಷ್ಟೇನೂ ವ್ಯತ್ಯಾಸವಾಗಿಲ್ಲ. ಆದರೂ, ಮಂಗಳವಾರ ಹೈಕೋರ್ಟ್‌ನ 10ನೇ ಸಂಖ್ಯೆಯ ಹಾಲ್‌ನಲ್ಲಿ ಹಿರಿ–ಕಿರಿಯ ವಕೀಲರು, ಬೆಳಿಗ್ಗೆ 10.30ಕ್ಕೆ ಸರಿಯಾಗಿ ಕಿಕ್ಕಿರಿದು ಜಮಾಯಿಸಿದ್ದರು.

ಹಿಜಾಬ್‌ ಕುರಿತಾದ ರಿಟ್‌ ಅರ್ಜಿಗಳ ಸಂಖ್ಯೆ ಮಂಗಳವಾರ ಒಟ್ಟು ಏಳಕ್ಕೇರಿದೆ. ಈ ಎಲ್ಲ ರಿಟ್ ಅರ್ಜಿಗಳನ್ನು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಧ್ಯಾಹ್ನ ವಿಚಾರಣೆಗೆ ಕೈಗೆತ್ತಿಕೊಂಡಿತು.

ಕಲಾಪ ಆರಂಭವಾಗುತ್ತಿದ್ದಂತೆಯೇ ದಿನದ ಕಾಸ್‌ ಲಿಸ್ಟ್‌ನಲ್ಲಿ ನಮೂದಿಸಲಾಗಿದ್ದ (ಹಿಜಾಬ್‌ ಹೊರತುಪಡಿಸಿ) ಇತರೆಲ್ಲಾ ಪ್ರಕರಣಗಳಿಗೆ ಮುದ್ದತ್ತು ನೀಡಿ ವಿಚಾರಣೆ ಮುಂದೂಡಲಾಯಿತು. ಕೆಲವು ವಕೀಲರು, ‘ನಮ್ಮ ಅರ್ಜಿಗಳ ತುರ್ತು ವಿಚಾರಣೆ ಅಗತ್ಯವಿದೆ‘ ಎಂದು ಮನವಿ ಮಾಡಿದರು.

ಇದಕ್ಕೆ ನ್ಯಾಯಮೂರ್ತಿಗಳು, ‘ಇಡೀ ರಾಜ್ಯ ಹೊತ್ತಿ ಉರಿಯುತ್ತಿದೆ. ಮುಗ್ಧ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಲು ಎಲ್ಲೆಡೆ ಅಡಚಣೆಯಾಗುತ್ತಿದೆ. ಅವರೆಲ್ಲಾ ರಸ್ತೆಗೆ ಇಳಿದಿದ್ದಾರೆ. ಇದ್ಯಾವುದೂ ಸಂತೋಷದ ವಿಷಯವಲ್ಲ. ಹಾಗಾಗಿ ಹಿಜಾಬ್ ಪ್ರಕರಣಕ್ಕೆ ಅದ್ಯತೆ ನೀಡಲಾಗುವುದು. ಸಂವಿಧಾನ ಏನು ಹೇಳುತ್ತದೆಯೋ ಹಾಗೆ ನಡೆಯೋಣ. ಈ ಅರ್ಜಿಗಳ ಕಾನೂನು ಪರಾಮರ್ಶೆ ನಡೆಸೋಣ’ ಎಂದರು.

ಸಂಖ್ಯೆ ಮುಖ್ಯವಲ್ಲ: ಅರ್ಜಿದಾರರ ಪರ ವಕೀಲರೊಬ್ಬರು, ‘ಸ್ವಾಮಿ ಈ ವಿಷಯಕ್ಕೆ ಸಂಬಂಧಿಸಿದಂತೆ ಇನ್ನೂ ಹಲವು ಅರ್ಜಿಗಳು ದಾಖಲಾಗುತ್ತಿವೆ. ಆದ್ದರಿಂದ, ವಿಚಾರಣೆ ಮುಂದೂಡಬೇಕು‘ ಎಂದು ಕೋರಿದರು.

ಇದಕ್ಕೆ ನ್ಯಾಯಮೂರ್ತಿಗಳು, ‘ಇದು ಕೆ.ಆರ್.ಮಾರ್ಕೆಟ್ ಅಲ್ಲ. ಹೈಕೋರ್ಟ್. ಅರ್ಜಿಗಳ ಸಂಖ್ಯೆ ಎಷ್ಟೇ ಇದ್ದರೂ ತೀರ್ಪು ಎಲ್ಲವಕ್ಕೂ ಒಂದೇ ಅನ್ವಯವಾಗುತ್ತದೆ ಅಲ್ಲವೇ’ ಎಂದು ಪ್ರಶ್ನಿಸಿದರು.

ಸಂಸ್ಕೃತಕ್ಕಿಂತ ಸುಂದರ ಕನ್ನಡ:ಅರ್ಜಿದಾರರ ಪರ ಹಿರಿಯ ವಕೀಲ ದೇವದತ್ತ ಕಾಮತ್ ಇಡೀ ದಿನದ ಕಲಾಪ ಅಂತ್ಯವಾಗುವ ತನಕ ವಾದ ಮಂಡಿಸಿದರು. ಆರಂಭದಲ್ಲಿಯೇ, ‘ಸರ್ಕಾರದ ಸುತ್ತೋಲೆ ಆಕ್ಷೇಪಾರ್ಹವಾಗಿದೆ’ ಎಂದು ವಿವರಿಸುತ್ತಿದ್ದಂತೆಯೇ, ನ್ಯಾಯಮೂರ್ತಿಗಳು, ‘ಸರಿ, ಸರ್ಕಾರದ ಆದೇಶವನ್ನು ಎಲ್ಲ ವಕೀಲರು ಮತ್ತು ಕಕ್ಷಿದಾರರಿಗೆ ಕೇಳುವಂತೆ ಗಟ್ಟಿಯಾಗಿ ಓದಿ‘ ಎಂದು ನಿರ್ದೇಶಿಸಿದರು.ಆಗ ಕಾಮತ್, ‘ಸ್ವಾಮಿ, ನನಗೆ ಕನ್ನಡ ಅಷ್ಟೊಂದು ಚೆನ್ನಾಗಿ ಬರುವುದಿಲ್ಲ, ಕ್ಷಮಿಸಬೇಕು’ ಎಂದರು.

ಇದಕ್ಕೆ ಅಚ್ಚರಿ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ಕಾಮತ್, ನೀವು ಕನ್ನಡಿಗರು. ನಿಮಗೆ ಗೊತ್ತೇ, ಸಂಸ್ಕೃತಕ್ಕಿಂತಲೂ ಕನ್ನಡ ಅತ್ಯಂತ ಸುಂದರವಾದ ಭಾಷೆ.ಈ ಮಾತನ್ನು ಡಿ.ವಿ. ಗುಂಡಪ್ಪನವರು ತಮ್ಮ, ‘ಸಾಹಿತ್ಯ ಮತ್ತು ಜೀವನ ಸೌಂದರ್ಯ’ದಲ್ಲಿ ಉಲ್ಲೇಖಿಸಿದ್ದಾರೆ ಎಂದು ಗಮನ ಸೆಳೆದರು.

ಆಕ್ಷೇಪಣೆ ಸಿದ್ಧ: ಸರ್ಕಾರದ ಪರ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ.ನಾವದಗಿ ಹಾಜರಾಗಿ, ‘ಸರ್ಕಾರದ ಅಕ್ಷೇಪಣೆ ಸಿದ್ಧವಿದೆ’ ಎಂದು ಅರುಹಿದರು.ವಾದ ಮಂಡನೆಯ ಮಧ್ಯದಲ್ಲಿ ಕಾಮತ್‌, ‘ಕೆಲವೆಡೆ ವಿದ್ಯಾರ್ಥಿಗಳಿಗೆ ರಕ್ಷಣೆ ಬೇಕಾಗಿದೆ. ಸರ್ಕಾರ ಈ ಪ್ರಕರಣವನ್ನು ರಾಜಕೀಯಗೊಳಿಸುತ್ತಿದೆ. ಇನ್ನೆರಡು ತಿಂಗಳಲ್ಲಿ ವಾರ್ಷಿಕ ಪರೀಕ್ಷೆ ಎದುರಾಗಲಿವೆ. ಅಲ್ಲಿಯವರೆಗೂ ಯಥಾಸ್ಥಿತಿ ಕಾಪಾಡಿಕೊಂಡು ಹೋಗುವಂತೆ ಆದೇಶಿಸಬೇಕು’ ಎಂದರು. ರಾಜಕೀಯಗೊಳಿಸುವ ಪದವನ್ನು ಬಲವಾಗಿ ನಾವದಗಿಆಕ್ಷೇಪಿಸಿದರು.

ದೇವರ ನಾಡಿನ ವಕೀಲರು: ಮಧ್ಯಾಹ್ನದ ಕಲಾಪ ಮುಕ್ತಾಯಗೊಳಿಸುವ ಮುನ್ನ ವಿಡಿಯೊ ಕಾನ್ಫರೆನ್ಸ್‌ ಮೂಲಕ ಹಾಜರಾಗಿ, ‘ಈ ಪ್ರಕರಣದಲ್ಲಿ ನಾನೂ ವಾದ ಮಂಡಿಸಲಿದ್ದೇನೆ’ ಎಂದು ವಕೀಲ ಹಾಗೂ ಅಂಕಣಕಾರ ಕಾಳೇಶ್ವರಮ್‌ ರಾಜ್‌ ಕೋರಿದರು.

‘ನೀವು ಎಲ್ಲಿಂದ ಮಾತನಾಡುತ್ತಿದ್ದೀರಿ‘ ಎಂದು ನ್ಯಾಯಮೂರ್ತಿಗಳು ಕಾಳೇಶ್ವರಮ್‌ ಅವರನ್ನು ಪ್ರಶ್ನಿಸಿದರು. ಆಗ ಅವರು, ‘ನಾನು ಕೇರಳದಿಂದ ಮಾತನಾಡುತ್ತಿದ್ದೇನೆ‘ ಎಂದರು. ‘ಓಹ್‌ ನೀವು ದೇವರ ನಾಡಿನವರು. ತಾವು ಅವಶ್ಯವಾಗಿ ಮಧ್ಯಂತರ ಅರ್ಜಿ ಸಲ್ಲಿಸಿ ವಾದ ಮಂಡಿಸಬಹುದು‘ ಎಂದು ನ್ಯಾಯಮೂರ್ತಿಗಳು ಅನುಮತಿ ನೀಡಿದರು.

ಫುಲ್‌ ರಷ್‌..! ವಿಚಾರಣೆಯನ್ನು ವಿಡಿಯೊ ಕಾನ್ಫರೆನ್ಸ್‌ ಮುಖಾಂತರ ವೀಕ್ಷಿಸುತ್ತಿದ್ದವರ ಸಂಖ್ಯೆ ದಿನವಿಡೀ 500 ಇತ್ತು. ಈ ಸಂಖ್ಯೆ ಹೆಚ್ಚಾಗಲು ಅವಕಾಶ ನೀಡದ ಕೋರ್ಟ್ ಆಫೀಸರ್‌, ಮಧ್ಯದಲ್ಲಿ ಸೇರ್ಪಡೆಯಾಗಲು ಪ್ರಯತ್ನಿಸುತ್ತಿದ್ದವರ ಮನವಿಯನ್ನು ತಿರಸ್ಕರಿಸುತ್ತಿದ್ದರು. ಒಂದು ಹಂತದಲ್ಲಿ ಅಡ್ವೊಕೇಟ್‌ ಜನರಲ್‌ ಅವರಿಗೇ ಆನ್‌ಲೈನ್‌ಲ್ಲಿ ಅವಕಾಶ ಇಲ್ಲದಂತಾಗಿತ್ತು.

ಈ ಕುರಾನ್‌ ಅಧಿಕೃತವೇ?

ವಾದದ ಮಧ್ಯೆದೇವದತ್ತ ಕಾಮತ್ಕುರಾನ್‌ ಸಾಲುಗಳನ್ನು ಉಲ್ಲೇಖಿಸಿದರು.‌ ಮೊದಲಿಗೆ ‘ಕುರಾನ್‌‘ ಎಂದು ಸಂಬೋಧಿಸುತ್ತಿದ್ದಂತೆಯೇ ನ್ಯಾಯಮೂರ್ತಿಗಳು, ’ಪವಿತ್ರ ಕುರಾನ್‌’ ಎಂದು ತಿದ್ದಿದರು.ಹೈಕೋರ್ಟ್ ಗ್ರಂಥಾಲಯದಲ್ಲಿರುವ ಕುರಾನ್ ಪ್ರತಿ ತರಿಸುವಂತೆಕೋರ್ಟ್ ಅಧಿಕಾರಿಗೆ ಆದೇಶಿಸಿದರು. ಕುರಾನ್‌ ಪ್ರತಿಯನ್ನು ಕೋರ್ಟ್ ಅಧಿಕಾರಿ ರಾಘವೇಂದ್ರ ನ್ಯಾಯಮೂರ್ತಿಗಳಿಗೆ ನೀಡಿದರು.ಕೃತಿ ಪರಿಶೀಲಿಸಿದ ನ್ಯಾಯಮೂರ್ತಿಗಳು, ‘ಇದು ಮಂಗಳೂರಿನ ಶಾಂತಿ ಪ್ರಕಾಶನ ಪ್ರಕಟಿಸಿರುವ ಕನ್ನಡ ಅನುವಾದದ ಕುರಾನ್‌. ಇದು ಸರ್ವಸಮ್ಮತ ಮತ್ತು ಅಧಿಕೃತ ಎಂದು ಒಪ್ಪಬಹುದೇ’ ಎಂದು ಕಾಮತ್ ಮತ್ತು ನಾವದಗಿ ಅವರನ್ನು ಪ್ರಶ್ನಿಸಿದರು. ಈ ಪ್ರಶ್ನೆಗೆ ಇಬ್ಬರೂ ತಬ್ಬಿಬ್ಬಾದರು!. ನಂತರ, ‘ಅಧಿಕೃತ ಎಂದು ಒಪ್ಪಬಹುದು’ ಎಂದರು. ಇಬ್ಬರ ಸಮ್ಮತಿ ನಂತರ, ರವೀಂದ್ರನಾಥ್ ಟ್ಯಾಗೋರ್‌ರ ‘ಗೀತಾಂಜಲಿ‘ಯ ಅನುವಾದದ ಪ್ರಸಂಗವೊಂದನ್ನು ಉದ್ಧರಿಸಿದ ನ್ಯಾಯಮೂರ್ತಿಗಳು ಕುರಾನ್ ಭಾಗಗಳ ವಿಶ್ಲೇಷಣೆಗೆ ಅವಕಾಶ ಕೊಟ್ಟರು. ‘ಮಹಿಳೆಯ ಅಂಗಾಂಗಗಳು ಕಾಣದಂತೆ ಉಡುಪು ಧರಿಸುವಂತೆಮತ್ತು ಅಪರಿಚಿತರಿಗೆ ಹೆಣ್ಣಿನ ಮುಖ ಹಾಗೂ ಕೈಗಳ ಹೊರತು ದೇಹದ ಮತ್ತಾವ ಅಂಗವೂ ಕಾಣಿಸದಂತೆ ಮಹಿಳೆ ಉಡುಪು ಧರಿಸಬೇಕೆಂದು ಕುರಾನ್‌ನಲ್ಲಿ ತಿಳಿಸಲಾಗಿದೆ’ ಎಂದು ಕಾಮತ್‌ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT