ಕೆರೆ ಜಾಗದಲ್ಲಿನ ಕಟ್ಟಡ ತೆರವಿಗೆ ಹೈಕೋರ್ಟ್ ಸೂಚನೆ

ಬೆಂಗಳೂರು: ಕೆರೆ ಒತ್ತುವರಿ ಮಾಡಿ ಕಟ್ಟಿರುವ ಕಟ್ಟಡಗಳನ್ನು ಭೂ ಕಂದಾಯ ಕಾಯ್ದೆಯಡಿ ಲಭ್ಯ ಇರುವ ಅಧಿಕಾರ ಚಲಾಯಿಸಿ ತೆರವುಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಕೆರೆ ಪುನರುಜ್ಜೀವನ ಮತ್ತು ಒತ್ತುವರಿ ತೆರವು ಸಂಬಂಧ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ಈ ಆದೇಶ ನೀಡಿದೆ.
‘ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆಗೆ(2014) 2018ರಲ್ಲಿ ತಿದ್ದುಪಡಿ ತರಲಾಗಿದೆ. ಕಾಯ್ದೆಯ ಸೆಕ್ಷನ್ 12ರ ಪ್ರಕಾರ ಕೆರೆಯ ಸುತ್ತಲ 30 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಕಟ್ಟಡ ನಿರ್ಮಾಣಕ್ಕೆ ನಿಷೇಧವಿದೆ. ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು’ ಎಂದು ಪೀಠ ತಿಳಿಸಿತು. ಈ ಸಂಬಂಧ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೂ ನೋಟಿಸ್ ನೀಡಲು ಆದೇಶಿಸಿತು.
‘ಕೆರೆಗಳ ಸುತ್ತಮುತ್ತಲ 30 ಮೀಟರ್ ವ್ಯಾಪ್ತಿಯ ಬಫರ್ ಪ್ರದೇಶದಲ್ಲಿ ಕಟ್ಟಿರುವ ಕಟ್ಟಡಗಳನ್ನು ತೆರವುಗೊಳಿಸುವ ಸಂಬಂಧ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಿಗೆ ನಗರಾಭಿವೃದ್ಧಿ ಇಲಾಖೆ ಸೂಚನೆ ನೀಡಬೇಕು’ ಎಂದು ನಿರ್ದೇಶನ ನೀಡಿತು. ‘ಪ್ರಾಧಿಕಾರಗಳ ಕರ್ತವ್ಯ ಪಾಲನೆ ಬಗ್ಗೆ ಮೇಲ್ವಿಚಾರಣೆ ನಡೆಸುವುದು ಸಮಿತಿಗಳ ಮೂಲ ಕರ್ತವ್ಯ’ ಎಂದು ಪೀಠ ಹೇಳಿತು.
ರಾಜ್ಯದಲ್ಲಿರುವ 39,179 ಕೆರೆಗಳಲ್ಲಿ 17,009 ಕೆರೆಗಳ ಸರ್ವೆಯನ್ನು 2021ರ ಫೆಬ್ರುವರಿ 23ರವರೆಗೆ ಪೂರ್ಣಗೊಳಿಸಲಾಗಿದೆ ಎಂದು ಸರ್ಕಾರದ ಪರ ವಕೀಲರು ವಿವರ ಸಲ್ಲಿಸಿದರು.
‘ಏಪ್ರಿಲ್‌ನಿಂದ ಕೋವಿಡ್ ಎರಡನೇ ಅಲೆ ಎದುರಿಸುವ ಕೆಲಸದಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ ಎಂಬ ಅಂಶ ನಮಗೆ ತಿಳಿದಿದೆ. ಈಗ ಪರಿಸ್ಥಿತಿ ಸುಧಾರಿಸಿದ್ದು, ಸಮೀಕ್ಷೆಯನ್ನು ಕೂಡಲೇ ಆರಂಭಿಸಬೇಕು. ಈ ಸಂಬಂಧ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಬೇಕು’ ಎಂದು ಪೀಠ ಆದೇಶಿಸಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.