ಬೆಂಗಳೂರು: ಕೋವಿಡ್ ಕಾರಣಕ್ಕೆ ಖಾಸಗಿ ಶಾಲೆಗಳಲ್ಲಿನ 2020–21ನೇ ಸಾಲಿನ ಬೋಧನಾ ಶುಲ್ಕವನ್ನು ಶೇ 30ರಷ್ಟು ಕಡಿತಗೊಳಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ರದ್ದುಪಡಿಸಿರುವ ಹೈಕೋರ್ಟ್, ಶೇ 15ರಷ್ಟು ಮಾತ್ರ ರಿಯಾಯಿತಿ ನೀಡುವಂತೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಿದೆ.
ಸರ್ಕಾರದ ಆದೇಶ ಅನುಸರಿಸಿ 2020–21ರಲ್ಲಿ ಶೇ 70ರಷ್ಟು ಶುಲ್ಕ (2019–20ರಲ್ಲಿ ಪಾವತಿಸಿದ್ದ ಬೋಧನಾಶುಲ್ಕದ) ಪಾವತಿಸಿದ್ದ ಪೋಷ ಕರು, ಹಿಂದಿನ ಸಾಲಿನ ಲೆಕ್ಕದಲ್ಲಿ ಹೆಚ್ಚು ವರಿಯಾಗಿ ಶೇ 15ರಷ್ಟನ್ನು ಪಾವತಿಸಬೇಕಾಗುತ್ತದೆ. 2021–22ರ ಶೈಕ್ಷಣಿಕ ಸಾಲಿಗೆ ಇದು ಅನ್ವಯವಾಗುವುದಿಲ್ಲ.
ಸರ್ಕಾರ ಹೊರಡಿಸಿದ್ದ ಶುಲ್ಕ ರಿಯಾಯಿತಿ ಆದೇಶ ಪ್ರಶ್ನಿಸಿ ಕರ್ನಾಟಕ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ (ಕ್ಯಾಮ್ಸ್) ಹೈಕೋರ್ಟ್‌ನಲ್ಲಿ ತಕರಾರು ಅರ್ಜಿ ಸಲ್ಲಿಸಿತ್ತು. ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ಪೀಠ ಗುರುವಾರ ಪ್ರಕಟಿಸಿತು.
ಅಲ್ಲದೇ, ಖಾಸಗಿ ಶಾಲೆಗಳ ಶುಲ್ಕ ನಿಗದಿಪಡಿಸುವ ಅಧಿಕಾರ ಸರ್ಕಾರಕ್ಕೆ ಇಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ಏಕ ಸದಸ್ಯ ಪೀಠ, ಕೋವಿಡ್ ಕಾರಣದಿಂದ ಬೋಧನಾ ಶುಲ್ಕದಲ್ಲಿ ಶೇ 30ರಷ್ಟು ರಿಯಾಯಿತಿ ನೀಡಿ 2021ರ ಜ.29ರಂದು ಸರ್ಕಾರ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿದೆ.
ಇಂಡಿಯನ್ ಸ್ಕೂಲ್ ಆಫ್ ಜೋಧ ಪುರ ಹಾಗೂ ರಾಜಸ್ತಾನ ಸರ್ಕಾರದ ನಡುವಿನ ಪ್ರಕರಣದಲ್ಲಿ 2021ರ ಮೇ 3ರಂದು ತೀರ್ಪು ನೀಡಿರುವ ಸುಪ್ರೀಂ ಕೋರ್ಟ್, ಬೋಧನಾ ಶುಲ್ಕದಲ್ಲಿ ಶೇ 15ರಷ್ಟು ರಿಯಾಯಿತಿ ನೀಡುವಂತೆ ತಿಳಿಸಿತ್ತು. ಇದನ್ನು ಆಧರಿಸಿ ಹೈಕೋರ್ಟ್ ಪೀಠ ಈ ಆದೇಶ ನೀಡಿದೆ.
‘ಸರ್ಕಾರದ ಆದೇಶದಿಂದ ಶಾಲೆಗಳಲ್ಲಿ ಕಡಿಮೆ ಶುಲ್ಕ ಸಂಗ್ರಹವಾಗಲಿದೆ. ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ವೇತನ ಪಾವತಿಸಲು ಕಷ್ಟವಾಗುತ್ತದೆ. ಶಾಲೆಗಳ ಸಮರ್ಪಕ ಕಾರ್ಯನಿರ್ವಹಣೆ ಸಾಧ್ಯವಾಗುವುದಿಲ್ಲ. ಆನ್‌ಲೈನ್ ಶಿಕ್ಷಣ ನೀಡುತ್ತಿರುವುದ ರಿಂದ ಖರ್ಚು ಹೆಚ್ಚಾಗುತ್ತಿದೆ’ ಎಂದು ಒಕ್ಕೂಟ ಅರ್ಜಿಯಲ್ಲಿ ತಿಳಿಸಿತ್ತು.
‘ಕಳೆದ ವರ್ಷ ನಿಗದಿಪಡಿಸಿದ್ದ ಶುಲ್ಕವನ್ನೇ ಪೋಷಕರು ಪಾವತಿಸಿಲ್ಲ. ಕೋವಿಡ್ ಪರಿಸ್ಥಿತಿ ಉಲ್ಲೇಖಿಸಿ ಬೋಧನಾ ಶುಲ್ಕ ಕಡಿಮೆ ಮಾಡಲು ರಾಜ್ಯ ಸರ್ಕಾರಕ್ಕೆ ಹಕ್ಕಿಲ್ಲ. ಈ ಆದೇಶ ಶಿಕ್ಷಣ ಕಾಯ್ದೆಯ ನಿಯಮಗಳಿಗೆ ವಿರುದ್ಧವಾಗಿದೆ’ ಎಂದೂ ಒಕ್ಕೂಟ ವಾದಿಸಿತ್ತು.
ತೀರ್ಪು ಸ್ವಾಗತಾರ್ಹ: ಖಾಸಗಿ ಶಾಲೆಗಳ ಒಕ್ಕೂಟ
‘ಶಾಲಾ ಶುಲ್ಕ ಗೊಂದಲಕ್ಕೆ ಹೈಕೋರ್ಟ್ ತೆರೆ ಎಳೆದಿದೆ. ಶೇ 15ರಷ್ಟು ಶುಲ್ಕ ಕಡಿತಗೊಳಿಸಬೇಕೆಂಬ ತೀರ್ಪು ಸ್ವಾಗತಾರ್ಹ’ ಎಂದು ಖಾಸಗಿ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಹೇಳಿದರು.
‘ಇಡೀ ದೇಶಕ್ಕೆ ಅನ್ವಯವಾಗುವಂತೆ ಈ ಹಿಂದೆಯೇ ಶೇ 15ರಷ್ಟು ಶುಲ್ಕ ಕಡಿತಕ್ಕೆ ಸುಪ್ರೀಂ ಕೋರ್ಟ್ ಸಲಹೆ ನೀಡಿತ್ತು. ಅದಕ್ಕೆ ಪೂರಕವಾಗಿ ಹೈಕೋರ್ಟ್ ಕೂಡಾ ತೀರ್ಪು ನೀಡಿದೆ’ ಎಂದರು.
‘ರಾಜ್ಯ ಸರ್ಕಾರ ಅವೈಜ್ಞಾನಿಕವಾಗಿ ಶುಲ್ಕ ಕಡಿತ ಮಾಡಿತ್ತು. ಅಲ್ಲದೆ, ಶೇ 30ರಷ್ಟು ಕಡಿತ ಎಂದು ಹೇಳಿದ್ದರೂ ಇತರ ಶುಲ್ಕ ಕಡಿತಗಳನ್ನು ಸೇರಿಸಿದರೆ ಒಟ್ಟು ಪ್ರತಿ ಶಾಲೆಗೆ ಶೇ 40ರಿಂದ ಶೇ 50ರಷ್ಟು ಆಗುತ್ತಿತ್ತು. ಹೀಗಾಗಿ, ಸರ್ಕಾರದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದೆವು’ ಎಂದು ಅವರು ತಿಳಿಸಿದರು.
‘ಕೆಲವು ಶಾಲೆಗಳು ಈಗಾಗಲೇ ಶೇ 15ಕ್ಕಿಂತ ಹೆಚ್ಚು ಶುಲ್ಕ ಕಡಿತ ಮಾಡಿವೆ. ಅವೈಜ್ಞಾನಿಕವಾಗಿ ಶುಲ್ಕ ಕಡಿಮೆ ಮಾಡಿದ್ದರಿಂದ ಸಣ್ಣಪುಟ್ಟ ಶಾಲೆಗಳು ತೀವ್ರ ಆರ್ಥಿಕ ಸಮಸ್ಯೆಗೆ ಸಿಲುಕಿದ್ದವು. ಶುಲ್ಕ ಪಾವತಿಸಲು ಸಮಸ್ಯೆ ಇರುವ ಪೋಷಕರು ಆಯಾ ಶಿಕ್ಷಣ ಸಂಸ್ಥೆಗಳಿಗೆ ತೆರಳಿ ವಿನಾಯಿತಿ ಕೇಳಿ ಪಡೆದುಕೊಳ್ಳಬಹುದು’ ಎಂದೂ ಹೇಳಿದರು.
‘ಹೈಕೋರ್ಟ್ ನಿರ್ದೇಶನವನ್ನು ಪಾಲಿಸಲು ನಾವು ಬದ್ದರಿರುತ್ತೇವೆ’ ಎಂದು ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಸಂಘಟನೆಯ (ರುಪ್ಸಾ) ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.