ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಜಾಬ್‌ ಆದೇಶ ವಿದ್ಯಾರ್ಥಿಗಳಿಗೆ ಮರಣ ಶಾಸನ: ಸುಪ್ರೀಂ ಕೋರ್ಟ್‌ನಲ್ಲಿ ವಾದ

Last Updated 14 ಸೆಪ್ಟೆಂಬರ್ 2022, 19:31 IST
ಅಕ್ಷರ ಗಾತ್ರ

ನವದೆಹಲಿ: ‘ಶಾಲಾ ಕಾಲೇಜುಗಳಲ್ಲಿ ಹಿಜಾಬ್‌ ಧರಿಸಲು ವಿದ್ಯಾರ್ಥಿನಿಯರಿಗೆ ಅನುಮತಿ ನೀಡದಿರುವ ಕರ್ನಾಟಕ ಸರ್ಕಾರದ ಆದೇಶವು ಜಾತ್ಯತೀತ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಕೊನೆಯ ಮೊಳೆಯಾಗಿದೆ’ ಎಂದು ವಿದ್ಯಾರ್ಥಿನಿಯರ ಪರ ವಕೀಲರು ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದರು.

ಕರ್ನಾಟಕದ ಪದವಿಪೂರ್ವ ಕಾಲೇಜುಗಳಲ್ಲಿ ಹಿಜಾಬ್‌ ನಿಷೇಧಿಸಿರುವ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿರುವ ಮೇಲ್ಮನವಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ನ ನ್ಯಾಯಪೀಠವು ಬುಧವಾರ ಮುಂದುವರಿಸಿತು.

ನ್ಯಾಯಮೂರ್ತಿಗಳಾದ ಹೇಮಂತ್‌ ಗುಪ್ತ ಹಾಗೂ ಸುಧಾಂಶು ಧುಲಿಯಾ ಅವರನ್ನು ಒಳಗೊಂಡ ಪೀಠದ ಎದುರು ವಾದ ಮಂಡಿಸಿದ ಹಿರಿಯ ವಕೀಲರಾದ ಹುಜೆಫಾ ಅಹ್ಮದಿ, ’ಈ ನಿರ್ಬಂಧ ಹೇರುವ ವೇಳೆ ರಾಜ್ಯ ಸರ್ಕಾರಕ್ಕೆ ಯಾವುದೇ ಕಾನೂನುಬದ್ಧ ಹಿತಾಸಕ್ತಿ ಇರಲಿಲ್ಲ’ ಎಂದರು.

ಸರ್ಕಾರದ ಆದೇಶ ತಟಸ್ಥವಾದಂತೆ ತೋರಿದರೂ, ಅದು ಒಂದು ಸಮುದಾಯವನ್ನು ಗುರಿಯಾಗಿಸಿದೆ. ಅದು ಸಂವಿಧಾನದ ಪರಿಚ್ಛೇದ 14ರ ಉಲ್ಲಂಘನೆಯಾಗಿದೆ. ಈ ಸಮುದಾಯದ ಹಲವು ವಿದ್ಯಾರ್ಥಿಗಳು ತಲೆ ಮೇಲೆ ಸ್ಕಾರ್ಫ್‌ ಧರಿಸಿ ಶಾಲೆಗೆ ಹೋಗುವ ಮೂಲಕ ಪೂರ್ವಾಗ್ರಹಗಳನ್ನು ಬೇಧಿಸಲು ಸಾಧ್ಯವಾಗಿದೆ. ಆದರೆ, ಈ ಸರ್ಕಾರಿ ಆದೇಶ ಇಂತಹ ವಿದ್ಯಾರ್ಥಿಗಳಿಗೆ ಮರಣಶಾಸನವಾಗಿದೆ. ಹಿಜಾಬ್‌ಗೆ ಅನುಮತಿ ನಿರಾಕರಿಸಿ ಶಿಕ್ಷಣಕ್ಕೆ ತಡೆ ಹಾಕಲಾಗುತ್ತಿದೆ ಎಂದರು. ‌

ಇದಕ್ಕೂ ಮುನ್ನ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ರಾಜೀವ್‌ ಧವನ್‌, ಹಿಜಾಬ್‌ ಧರಿಸುವುದರಿಂದ ಯಾರಿಗೂ ತೊಂದರೆ ಆಗುವುದಿಲ್ಲ ಎಂದಾದಲ್ಲಿ ಅದಕ್ಕೆ ಅನುಮತಿ ನೀಡಬಹುದು. ಇದಕ್ಕಾಗಿ ಧಾರ್ಮಿಕ ಪಠ್ಯಗಳನ್ನು ಪರಿಗಣಿಸುವ ಅಗತ್ಯ ಇಲ್ಲ ಎಂದು ಅಭಿಪ್ರಾಯ‍ಪಟ್ಟರು.

ವಾಸ್ತವದಲ್ಲಿ ವೇದಗಳಲ್ಲಿ ನಿಸರ್ಗವನ್ನು ಪೂಜಿಸುತ್ತಿದ್ದರು. ಆಗ ಯಾವುದೇ ದೇಗುಲಗಳು ಇರಲಿಲ್ಲ. ಅದೇ ರೀತಿ, ಕರ್ನಾಟಕದಲ್ಲಿ ಹಿಜಾಬ್‌ ಬಳಸಲಾಗುತ್ತಿದೆ ಎಂದಾದಲ್ಲಿ ಅದು ಅಗತ್ಯ ಪದ್ಧತಿ ಎಂದು ಸಾಬೀತಾಗಿದೆ. ಅಗತ್ಯ ಪದ್ಧತಿ ಅಲ್ಲ ಎಂದು ಹೇಳಲು ಯಾವುದೇ ಹೊರಗಿನ ಜಾತ್ಯತೀತ ಶಕ್ತಿಗಳಿಗೆ ಅಧಿಕಾರ ಇಲ್ಲ ಎಂದರು.

ವಿಶ್ವದಾದ್ಯಂತ ಲಕ್ಷಾಂತರ ಜನರು ಹಿಜಾಬ್‌ ಧರಿಸುತ್ತಿದ್ದಾರೆ. ಹಾಗಿರುವಾಗ, ಅದನ್ನು ತರಗತಿಯೊಳಗೆ ಧರಿಸಲು ಅನುಮತಿ ನೀಡುವುದಿಲ್ಲ ಎಂಬುವುದಕ್ಕೆ ಸ್ಪಷ್ಟೀಕರಣ ಏನಿದೆ. ಹೈಕೋರ್ಟ್‌ ಕೂಡಾ ಇದಕ್ಕೆ ಯಾವುದೇ ಸ್ಪಷ್ಟೀಕರಣ ನೀಡಿಲ್ಲ ಎಂದು ಅವರು ವಾದಿಸಿದರು.

‘ಈ ಸರ್ಕಾರಿ ಆದೇಶ ಬಹುಶಃ ಮುಸ್ಲಿಮ್‌ ಮಹಿಳೆಯರನ್ನು ಗುರಿಯಾಗಿಸಿ ಹೊರಡಿಸಲಾಗಿದೆ. ಇದು ಸಂವಿಧಾನದ 14 ಹಾಗೂ 15 ಪರಿಚ್ಛೇದಗಳನ್ನು ಉಲ್ಲಂಘಿಸಿದೆ. ಹಾಗಾಗಿ, ಅದು ಅಸಂವಿಧಾನಿಕ’ ಎಂದರು.

‘17 ಸಾವಿರ ವಿದ್ಯಾರ್ಥಿಗಳು ಶಾಲೆಯಿಂದ ಹೊರಕ್ಕೆ’

ರಾಜ್ಯದ ಜನರಲ್ಲಿ ವೈವಿಧ್ಯತೆಯನ್ನು ಪ್ರೋತ್ಸಾಹಿಸುವುದು ಸರ್ಕಾರದ ಹಿತಾಸಕ್ತಿಯಾಗಬೇಕು. ಯಾರಾದರೂ ಹಿಜಾಬ್‌ ಧರಿಸುವುದಕ್ಕೆ ಅಡ್ಡಿ ಮಾಡಿದರೆ ಅದು ಸಂವಿಧಾನದ ಭ್ರಾತೃತ್ವ ತತ್ವಕ್ಕೆವಿರುದ್ಧವಾಗುತ್ತದೆ ಎಂದುಹಿರಿಯ ವಕೀಲರಾದ ಹುಜೆಫಾ ಅಹ್ಮದಿ ಹೇಳಿದರು.

ಕರ್ನಾಟಕಹೈಕೋರ್ಟ್‌ ಮಾರ್ಚ್‌ 15ರಂದು ತೀರ್ಪು ನೀಡಿದ ಬಳಿಕ ಶಾಲೆಯಿಂದ ಹೊರಬಿದ್ದ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಪಿಯುಸಿಎಲ್‌ ವರದಿ ಪ್ರಕಾರ, 17 ಸಾವಿರ ವಿದ್ಯಾರ್ಥಿಗಳು ಈಗಾಗಲೇ ಶಾಲೆ ತ್ಯಜಿಸಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT