ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಜನ್ ವರದಿ ಅಂತಿಮ: ಸಿಎಂ ಬೊಮ್ಮಾಯಿ

ಇಂದು ಒಕ್ಕೊರಲ ನಿರ್ಣಯ l ವಿಧಾನಸಭೆಯಲ್ಲಿ ಬೊಮ್ಮಾಯಿ ಪ್ರಕಟ
Last Updated 20 ಡಿಸೆಂಬರ್ 2022, 22:00 IST
ಅಕ್ಷರ ಗಾತ್ರ

ಬೆಳಗಾವಿ: ‘ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾಜನ್‌ ವರದಿಯೇ ಅಂತಿಮ ಮತ್ತು ಗಡಿ ವಿವಾದ ಮುಗಿದ ಅಧ್ಯಾಯ. ರಾಜ್ಯದ ಒಂದು ಇಂಚು ಜಾಗವನ್ನೂ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಬುಧವಾರ ನಿರ್ಣಯ ಮಂಡಿಸಿ, ಸರ್ವಾನುಮತದಿಂದ ಅಂಗೀಕರಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.

ವಿಧಾನಸಭೆಯಲ್ಲಿ ಮಂಗಳವಾರ ನಿಯಮ 69ರ ಅಡಿ ಚರ್ಚೆಯ ವೇಳೆಯಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ಅವರು, ’ರಾಜ್ಯದ ನಿಲುವು ಅಚಲವಾಗಿದೆ. ಮತ್ತೊಮ್ಮೆ ನಿರ್ಣಯ ಕೈಗೊಳ್ಳುವ ಮೂಲಕ ಒಗ್ಗಟ್ಟುಪ್ರದರ್ಶಿಸಬೇಕು. ಈ ಸಂಬಂಧ ನಿರ್ಣಯ ಮಾಡಿ ಕಳಿಸೋಣ’ ಎಂದು ಹೇಳಿದರು.

‘ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಇತರ ಶಾಸಕರೂ ಸರ್ವಾನುಮತದ ನಿರ್ಣಯವನ್ನು ತೆಗೆದುಕೊಳ್ಳಲೇಬೇಕು’ ಎಂದು ಒತ್ತಾಯಿಸಿದರು.

ಸಿಎಸ್‌ಗೆ ಬರೆದ ಪತ್ರ ಮಹತ್ವದ ದಾಖಲೆ

ಮಹಾರಾಷ್ಟ್ರದ ಸಚಿವರು ಮತ್ತು ಸಂಸದರು ಗಡಿ ವಿಚಾರಕ್ಕಾಗಿ ಬೆಳಗಾವಿಗೆ ಬರುವುದು ಸರಿಯಲ್ಲ. ಅವರನ್ನು ತಡೆಯಬೇಕು ಎಂದು ಅಲ್ಲಿನ ಸರ್ಕಾರದ ಮುಖ್ಯಕಾರ್ಯದರ್ಶಿಯವರಿಗೆ ಬರೆದ ಪತ್ರ ಮಹತ್ವದ ದಾಖಲೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಪಾದಿಸಿದರು.

‘ಈ ದಾಖಲೆ ಮುಂದಿನ ದಿನ ಗಳಲ್ಲಿ ಮಹತ್ವ ದಾಖಲೆಯಾಗಲಿದೆ. ಈ ಪತ್ರದಕಾರಣದಿಂದಾಗಿ ಅಲ್ಲಿನ ಸಚಿವರು ಬರಲಿಲ್ಲ. ನಾವು
ಎಚ್ಚರಿಕೆಯನ್ನೂ ಕೊಟ್ಟಿದ್ದೇವೆ. ಅದೇ ರೀತಿ ಯಾರೂ ಇಲ್ಲಿಗೆ ಕಾಲಿಡಲು ಅವಕಾಶ ನೀಡಲಿಲ್ಲ. ಆದರೆ, ಹಿಂದೆ ಶರದ್‌ ಪವಾರ್ ಅವರು ಬೆಳಗಾವಿಗೆ ಬಂದು ಭಾಷಣ ಮಾಡಿ ಹೋಗಿದ್ದರು, ಅವರನ್ನು ತಡೆದಿರಲಿಲ್ಲ. ಆಗ ಅವರು ಯಾರ ಮನೆಯಲ್ಲಿ ಉಳಿದುಕೊಂಡಿದ್ದರು ಎಂಬುದು ಗೊತ್ತಿದೆ’ ಎಂದರು.

‘ನಾವು ಮಹಾಮೇಳಾವ ನಡೆಸಲು ಅವಕಾಶ ನೀಡಲಿಲ್ಲ. ಬರುತ್ತಿದ್ದವರನ್ನು ಬಂಧಿಸಿ ಕಳಿಸಿದ್ದೇವೆ’ ಎಂದು ಬೊಮ್ಮಾಯಿ ಹೇಳಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕರ್ನಾಟಕ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿ ಮತ್ತು ಗೃಹ ಸಚಿವರನ್ನು ಕರೆಸಿದ್ದು ಸರಿಯಲ್ಲ. ಅವರು ಕರೆದ ಸಭೆಗೆ ನೀವು ಹೋಗಬಾರದಿತ್ತು. ಇದರಿಂದ ಗಡಿ ವಿವಾದ ಇದೆ ಎಂಬುದನ್ನು ನಾವೇ ಒಪ್ಪಿಕೊಂಡಂತಾಗುತ್ತದೆ’ಎಂದು ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು.

‘ಡಬಲ್‌ ಎಂಜಿನ್‌ ಸರ್ಕಾರ ಅಲ್ಲ ಟ್ರಬಲ್‌ ಎಂಜಿನ್‌ ಸರ್ಕಾರ ಆಗಿದೆ. ಈ ವಿಷಯಕ್ಕೆ ಮಧ್ಯ ಪ್ರವೇಶಿಸಬೇಡಿ, ಬಾಯಿ ಮುಚ್ಚಿಕೊಂಡು ಇರಿ ಎಂದು ಅಲ್ಲಿ ಹೇಳಬೇಕಿತ್ತು. ಮಹಾರಾಷ್ಟ್ರದ ಸಚಿವರು, ಸಂಸದರು ಕರ್ನಾಟಕಕ್ಕೆ ನುಗ್ಗದಂತೆ ತಡೆದು ಒಳ್ಳೆಯ ಕ್ರಮ ತೆಗೆದುಕೊಂಡಿದ್ದೀರಿ’ ಎಂದು ಅವರು ಹೇಳಿದರು.

ಆಗ ಮಧ್ಯಪ್ರವೇಶಿಸಿ ಮಾತನಾಡಿದ ಬೊಮ್ಮಾಯಿ, ‘ಎರಡೂ ರಾಜ್ಯಗಳ ನಡುವೆ ಯಾವುದೇ ರೀತಿಯಲ್ಲಿ ಅಶಾಂತಿ ಉಂಟಾಗಬಾರದು, ವ್ಯಾಪಾರ– ವ್ಯವಹಾರಗಳಿಗೆ, ಸಂಚಾರಕ್ಕೆ ತೊಂದರೆ ಆಗಬಾರದು. ಉಳಿದಂತೆ ವ್ಯಾಜ್ಯವನ್ನು ನ್ಯಾಯಾಲಯದಲ್ಲೇ ಬಗೆಹರಿಸಿಕೊಳ್ಳಿ ಎಂದು ಅಮಿತ್‌ ಶಾ ಸಭೆಯಲ್ಲಿ ಹೇಳಿದರು. ಸಭೆಯಲ್ಲಿ ಏಕನಾಥ ಶಿಂದೆ ಅವರ ಪ್ರಶ್ನೆಗಳಿಗೆ ತೀಕ್ಷ್ಣವಾಗಿಯೇ ಪ್ರತಿಕ್ರಿಯೆ ನೀಡಿದ್ದೇನೆ’ ಎಂದು ವಿವರಿಸಿದರು.

‘ಗಡಿ ವಿಚಾರದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣವನ್ನು ಕೈಗೆತ್ತಿಕೊಳ್ಳಬಹುದೇ ಎಂಬ ಬಗ್ಗೆ ವಿಚಾರಣೆ ನಡೆಯಬೇಕಿದೆ. ಈ ವಿಷಯದಲ್ಲಿ ಮಹಾರಾಷ್ಟ್ರವೇ ಪ್ರಚೋದನೆ ಮಾಡುತ್ತಿದೆ. ಆದರೆ, ನೀವು (ಕಾಂಗ್ರೆಸ್ ನಾಯಕರು) ಅತಿಯಾಗಿ ವ್ಯಾಖ್ಯಾನ ಮಾಡುವ ಅಗತ್ಯವಿಲ್ಲ. ಶಾ ಅವರು ಗಡಿ ವಿವಾದವನ್ನು ಬಗೆಹರಿಸಲು ಕರೆದಿರಲಿಲ್ಲ. ಜವಾಬ್ದಾರಿಯುತವಾಗಿ ಸತ್ಯದಿಂದ ಮಾತನಾಡಬೇಕು’ ಎಂದು ಬೊಮ್ಮಾಯಿ ತಿರುಗೇಟು ನೀಡಿದರು.

‘ಆ ಸಭೆಯಲ್ಲಿ ಏನಾಯಿತು ಎಂಬ ಬಗ್ಗೆ ಮುಖ್ಯಮಂತ್ರಿಯವರು ಮಾಹಿತಿಯನ್ನು ನೀಡಲಿಲ್ಲ, ಸ್ವಯಂಪ್ರೇರಿತರಾಗಿ ಹೇಳಿಕೆ ನೀಡಬೇಕಿತ್ತು ಅಥವಾ ಶ್ವೇತಪತ್ರ ಮಂಡಿಸಬೇಕಿತ್ತು’ ಎಂದು ಕಾಂಗ್ರೆಸ್‌ನ ಎಚ್‌.ಕೆ.ಪಾಟೀಲ ತರಾಟೆಗೆ ತೆಗೆದುಕೊಂಡರು.

‘ಸಭೆಯಲ್ಲಿ ಆದ ಮಾಹಿತಿಯ ಬಗ್ಗೆ ಮಾಧ್ಯಮಗಳಿಗೆ ಅವತ್ತೇ ತಿಳಿಸಿದ್ದೇನೆ’ ಎಂದು ಬೊಮ್ಮಾಯಿ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಆ ವಿಷಯ ಪತ್ರಿಕೆಗಳಲ್ಲಿ ದೊಡ್ಡದಾಗಿ ಬರುವ ಹಾಗೆ ಮಾಡಬೇಕಿತ್ತು’ ಎಂದರು.

ಇದರಿಂದ ಕೊಂಚ ಮುಜಗರಕ್ಕೆ ಒಳಗಾದ ಬೊಮ್ಮಾಯಿ, ‘ನೀವು ವಿರೋಧಪಕ್ಷದವರ ಹಾಗೇ ಹೇಳುತ್ತೀರಲ್ಲ’ ಎಂದರು. ‘ನಾನು ಆ ರೀತಿ ಹೇಳಿದ್ದಲ್ಲ, ನೀವು ಆ ಮಾಹಿತಿ ದೊಡ್ಡದಾಗಿ ಬರುವ ಹಾಗೆ ಮಾಡಬಹುದಿತ್ತು ಎಂಬುದಷ್ಟೇ ನನ್ನ ಉದ್ದೇಶವಾಗಿತ್ತು ’ ಎಂದು ಕಾಗೇರಿ ಸಮಜಾಯಿಷಿ ನೀಡಿದರು. ‘ಸಭಾಧ್ಯಕ್ಷರ ಬಗ್ಗೆ ಆಕ್ಷೇಪ ವ್ಯಕ್ತಪಡಿಸುವುದು ಸರಿಯಲ್ಲ‘ ಎಂದು ಸಿದ್ದರಾಮಯ್ಯ ಅವರು ನಗುತ್ತಲೇ ಹೇಳಿದರು. ಬೊಮ್ಮಾಯಿ ಬಳಿಕ ಮೆತ್ತಗಾದರು.

ಕರ್ನಾಟಕದ ವಿರುದ್ಧ ‘ಮಹಾ’ ಅಧಿವೇಶನದಲ್ಲಿ ಟೀಕೆ

ಕರ್ನಾಟಕದಲ್ಲಿ ಮರಾಠಿ ಭಾಷಿಕರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಮಹಾರಾಷ್ಟ್ರದ ವಿಧಾನಸಭಾ ಅಧಿವೇಶನದಲ್ಲಿ ಮಂಗಳವಾರ ದೂರಿದ ಪ್ರತಿಪಕ್ಷಗಳು ಕರ್ನಾಟಕ ಸರ್ಕಾರದ ವಿರುದ್ಧ ಟೀಕೆ ವ್ಯಕ್ತಪಡಿಸಿದವು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು,‘ಮೊದಲ ಬಾರಿಗೆ ಕೇಂದ್ರ ಸರ್ಕಾರವು ಮಧ್ಯಪ್ರವೇಶಿಸಿರುವುದು ಸಕಾರಾತ್ಮಕ ಹೆಜ್ಜೆಯಾಗಿದೆ’ ಎಂದು ಹೇಳಿದರು.

‘ಈ ವಿಷಯವನ್ನು ವಿಸ್ತೃತವಾಗಿ ಚರ್ಚಿಸುವ ಕುರಿತು ಈಗಾಗಲೇ ನಿರ್ಧರಿಸಲಾಗಿದ್ದು, ಇದಕ್ಕೆ ಆಡಳಿತ ಹಾಗೂ ಪ್ರತಿಪಕ್ಷಗಳು ಒಪ್ಪಿಗೆ ಸೂಚಿಸಿವೆ’ ಎಂದು ಸ್ಪೀಕರ್ ರಾಹುಲ್ ನಾರ್ವೇಕರ್ತಿಳಿಸಿದರು.

ಎನ್‌ಸಿಪಿ ಶಾಸಕ ಹಸನ್ ಮುಶ್ರಿಫ್‌ ಸೇರಿದಂತೆ ಅನೇಕರು ಕರ್ನಾಟಕದಲ್ಲಿ ಎಂಇಎಸ್ ಆಯೋಜಿಸಿದ್ದ ಮಹಾ ಮೇಳಾವದಲ್ಲಿ ಭಾಗವಹಿಸಲು ತೆರಳಿದ್ದರು. ಈ ವೇಳೆ ಗಡಿಯಲ್ಲಿ ಕರ್ನಾಟಕದ ಪೊಲೀಸರು ತಮ್ಮ ಮೇಲೆ ಲಾಠಿ ಚಾರ್ಜ್ಮಾಡಿದ್ದಾರೆ ಎಂದು ನಾಯಕರು ಆರೋಪಿಸಿದ್ದರು.

ಆದರೆ, ಮಹಾರಾಷ್ಟ್ರ ಪೊಲೀಸರು ಅವರನ್ನು ಬಂಧಿಸಿ ಬಳಿಕ ಬಿಡುಗಡೆ ಮಾಡಿದ್ದರು. ಆದರೆ, ಕೊಲ್ಹಾಪುರ ಜಿಲ್ಲಾ ಪೊಲೀಸರು ಬಂಧನದ ಹೇಳಿಕೆಯನ್ನು ನಿರಾಕರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT