ಭಾನುವಾರ, ಅಕ್ಟೋಬರ್ 24, 2021
23 °C
ಆಯೋಗದ ವರದಿ ಸುತ್ತಲ ವಿದ್ಯಮಾನಗಳ ಕುರಿತು ಚಿಂತನ–ಮಂಥನ

ನ್ಯಾ.ಸದಾಶಿವ ವರದಿ ಬಗ್ಗೆ ಚರ್ಚೆ ನಡೆಯಲಿ: ಸಿದ್ದರಾಮೇಶ್ವರ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ. ವರದಿ ಬಗ್ಗೆ ಸಾರ್ವಜನಿಕ ಚರ್ಚೆ ನಡೆಯಬೇಕು ಎಂದು ಆಗ್ರಹಿಸಿದೆ.

ಆಯೋಗದ ವರದಿ ಸುತ್ತ ನಡೆಯುತ್ತಿರುವ ವಿದ್ಯಾಮಾನಗಳ ಬಗ್ಗೆ ಚರ್ಚಿಸಲು ಚಿತ್ರದುರ್ಗದ ಭೋವಿ ಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ನಗರದಲ್ಲಿ ಗುರುವಾರ ನಡೆದ ಭೋವಿ, ಲಂಬಾಣಿ, ಕೊರಮ, ಕೊರಚ, ಅಲೆಮಾರಿ ಸಮುದಾಯಗಳ ಮುಖಂಡರ ಚಿಂತನಾ ಸಮಾವೇಶದಲ್ಲಿ ಈ ಅಭಿಪ್ರಾಯ ವ್ಯಕ್ತವಾಯಿತು.

ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ, ‘ಭೋವಿ ಮತ್ತು ಲಂಬಾಣಿ ಸಮುದಾಯದ ಶಾಸಕರು ಮತ್ತು ಸ್ವಾಮೀಜಿಗಳು ವರದಿ ಜಾರಿಗೆ ಸಮ್ಮತಿಸಿದ್ದಾರೆ ಎಂಬುದು ಸುಳ್ಳು. ಈ ವಿಷಯದಲ್ಲಿ ತಾರ್ಕಿಕ ಅಂತ್ಯ ಕಾಣುವ ರೀತಿಯ ಯಾವುದೇ ಚರ್ಚೆಗಳೂ ನಡೆದಿಲ್ಲ. ಏಕಪಕ್ಷೀಯವಾಗಿ ವರದಿ ಜಾರಿಗೊಳಿಸಲು ಮುಂದಾದರೆ ದೊಡ್ಡಮಟ್ಟದಲ್ಲಿ ಹೋರಾಟ ನಡೆಯಲಿದೆ. ವರದಿ ಬಗ್ಗೆ ಸಾರ್ವಜನಿಕ ಚರ್ಚೆಯಾಗಲಿ’ ಎಂದು ಹೇಳಿದರು.

‘ಸಚಿವ ಸಂಪುಟದ ಮುಂದೆ ಅಥವಾ ಅಧಿವೇಶನದ ಮುಂದೆ ಈ ವರದಿ ಯಾವುದೇ ಕ್ಷಣದಲ್ಲಾದರೂ ಬರಬಹುದು. ಆದರೆ, ಅಂಗೀಕಾರ ಆಗದಂತೆ ನೋಡಿಕೊಳ್ಳಬೇಕಿದೆ. ಸಚಿವ ಪ್ರಭು ಚೌವ್ಹಾಣ್ ಅವರ ಏಕಾಂಗಿಯಾಗಿ ವಿರೋಧಿಸುತ್ತಿದ್ದಾರೆ. ಅವರ ಕೈ ಬಲಪಡಿಸುವ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.

‘ವರದಿ ಜಾರಿ ವಿರೋಧಿಸಿ ಸೆ.24ರಂದು ಎಲ್ಲಾ ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಸಮುದಾಯದ ಮುಖಂಡರು ಸಜ್ಜಾಗಬೇಕು. ಸೆ.25ರಂದು ಎಲ್ಲಾ ಶಾಸಕರಿಗೆ ಮನವಿ ಪತ್ರ ಸಲ್ಲಿಸಬೇಕು. ಮುಖ್ಯಮಂತ್ರಿ ಆದಿಯಾಗಿ ಎಲ್ಲಾ ಸಚಿವರಿಗೂ ಮನವಿ ಪತ್ರ ತಲುಪಿಸಿ ವರದಿ ಜಾರಿಯಾದರೆ ಆಗಲಿರುವ ಅನ್ಯಾಯದ ಬಗ್ಗೆ ಮನವರಿಕೆ ಮಾಡಿಸಬೇಕು’ ಎಂದು ಮುಖಂಡರಿಗೆ ತಿಳಿಸಿದರು.

‘ಸಂತ ಸೇವಾಲಾಲ್ ಅವರು ತಮ್ಮ ಕಾಲಘಟ್ಟದಲ್ಲಿ ಸಮಾಜದ ಏಳಿಗೆಗೆ ಕೊಡುಗೆ ನೀಡಿದ್ದಾರೆ. ಯಾವುದೇ ಸಮುದಾಯದ ಗುರುಗಳು ಅಥವಾ ದಾರ್ಶನಿಕರನ್ನು ಅವಮಾನಿಸಬಾರದು. ಈ ರೀತಿಯ ನಡೆವಳಿಕೆಗಳ ವಿರುದ್ಧ ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಾಹಿತಿ ಬಿ.ಟಿ. ಲಲಿತಾ ನಾಯಕ್ ಮಾತನಾಡಿ, ‘ಬಿ.ಆರ್. ಅಂಬೇಡ್ಕರ್ ಅವರು ಈ ಸಮುದಾಯಗಳಿಗೆ ನೀಡಿರುವ ಮೀಸಲಾತಿಯನ್ನು ಕಸಿದುಕೊಳ್ಳಲು ಯಾರಿಂದಲೂ ಆಗುವುದಿಲ್ಲ. ಪರಿಶಿಷ್ಟ ಜಾತಿ ಮತ್ತು ಪಂಗಡದಲ್ಲಿ ಇರುವ ಎಲ್ಲಾ ಜಾತಿಗಳನ್ನು ಸಮಾನವಾಗಿ ಕಾಣಬೇಕು. ಈ ವಿಷಯದಲ್ಲಿ ಸಂಘರ್ಷಕ್ಕೆ ಇಳಿಯುವುದು ಸರಿಯಲ್ಲ. ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಅವರಿಗೂ ಮನವರಿಕೆ ಮಾಡಿಕೊಡುವ ಅಗತ್ಯವಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು