ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನ ಹಕ್ಕು: ಎಡವಿದ ಪದವೀಧರರು, ಶಿಕ್ಷಕರು

ಮೂರು ಕ್ಷೇತ್ರಗಳಲ್ಲಿ 11,499 ಮತಗಳು ತಿರಸ್ಕೃತ
Last Updated 16 ಜೂನ್ 2022, 20:13 IST
ಅಕ್ಷರ ಗಾತ್ರ

ಬೆಳಗಾವಿ: ಮತದಾನದ ಬಗ್ಗೆ ಚುನಾವಣೆ ಆಯೋಗ ಹಾಗೂ ಆಯಾ ಜಿಲ್ಲಾಡಳಿತಗಳು ಎಷ್ಟೇ ಜಾಗೃತಿ ಮೂಡಿಸಿದ್ದರೂ, ಈ ಬಾರಿ ಚುನಾವಣೆಯಲ್ಲಿ ತಿರಸ್ಕೃತ ಮತಗಳ ಸಂಖ್ಯೆ 10 ಸಾವಿರಕ್ಕೂ ಹೆಚ್ಚು! ಅದರಲ್ಲೂ ಪ್ರಜ್ಞಾವಂತರು ಎಂದು ಕರೆಸಿಕೊಳ್ಳುವವರೇ ಹಕ್ಕು ಚಲಾಯಿಸುವಲ್ಲಿ ಎಡವಿದ್ದು ಅಚ್ಚರಿಗೆ ಕಾರಣವಾಗಿದೆ.

ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳ ವ್ಯಾಪ್ತಿ ಒಳಗೊಂಡ ವಾಯವ್ಯ ಶಿಕ್ಷಕರು, ಪದವೀಧರರ ಕ್ಷೇತ್ರಗಳು ಹಾಗೂ ಧಾರವಾಡ, ಗದಗ, ಉತ್ತರ ಕನ್ನಡ, ಹಾವೇರಿ ಜಿಲ್ಲೆ ಒಳಗೊಂಡ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಈ ಬಾರಿ ದಾಖಲೆ ಪ್ರಮಾಣದಲ್ಲಿ ಮತದಾನವಾಗಿತ್ತು. ಪದವೀಧರರು, ಶಿಕ್ಷಕರು ಸೇರಿ ಮೂರು ಕ್ಷೇತ್ರಗಳಲ್ಲಿಒಟ್ಟು 1,02,907 ಜನರು ಮತ ಚಲಾಯಿಸಿದ್ದರು. ಈ ಪೈಕಿ 91,408 ಮತಗಳು ಸಿಂಧುವಾಗಿವೆ. 11,499 ಮತಗಳು ತಿರಸ್ಕೃತವಾಗಿವೆ.

ಪದವೀಧರ ಕ್ಷೇತ್ರದಲ್ಲೇ ಅಧಿಕ: ಪದವೀಧರ ಕ್ಷೇತ್ರದಲ್ಲಿ ಈ ಬಾರಿ 65,922 ಮತಗಳು ಚಲಾವಣೆಯಾಗಿದ್ದವು. ಈ ಪೈಕಿ 56,916 ಮತಗಳು ಸಿಂಧುವಾಗಿದ್ದರೆ, 9,006 ಮತಗಳು ತಿರಸ್ಕೃತಗೊಂಡಿವೆ. ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ 21,402 ಮತ ಚಲಾವಣೆಯಾಗಿವೆ. ಇದರಲ್ಲಿ 20,132 ಮತಗಳು ಸಿಂಧುವಾಗಿದ್ದು, 1,270 ಮತ ತಿರಸ್ಕೃತಗೊಂಡಿವೆ. ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ 15,583 ಮತಗಳು ಚಲಾವಣೆಗೊಂಡಿದ್ದು, 14,360 ಮತಗಳು ಸಿಂಧುವಾಗಿವೆ. 1,223 ತಿರಸ್ಕೃತವಾಗಿವೆ.

2016ರಲ್ಲಿ ನಡೆದ ವಾಯವ್ಯ ಶಿಕ್ಷಕರು ಹಾಗೂ ಪದವೀಧರ ಕ್ಷೇತ್ರಗಳ ಚುನಾವಣೆಯಲ್ಲೂ 11,402 ಮತಗಳು ತಿರಸ್ಕೃತಗೊಂಡಿದ್ದವು. ಅದರಲ್ಲೂ ಪದವೀಧರ ಕ್ಷೇತ್ರವೊಂದರಲ್ಲೇ 10,455 ಮತ ತಿರಸ್ಕೃತವಾಗಿದ್ದವು. ಶಿಕ್ಷಕರ ಕ್ಷೇತ್ರದಲ್ಲಿ 947 ಮತಗಳು ಅಸಿಂಧುವಾಗಿದ್ದವು. ಈ ಬಾರಿ ಪದವೀಧರ ಮತಗಳ ತಿರಸ್ಕೃತ ಸಂಖ್ಯೆ ತುಸು ಕಡಿಮೆಯಾಗಿದ್ದರೆ, ಶಿಕ್ಷಕರ ತಿರಸ್ಕೃತ ಮತಗಳ ಸಂಖ್ಯೆ ಹೆಚ್ಚಿದೆ.

ತಿರಸ್ಕೃತವಾಗಲು ಕಾರಣವೇನು?: ‘ಇತ್ತೀಚೆಗೆ ನಡೆಯುತ್ತಿರುವ ಹಲವು ಚುನಾವಣೆಗಳಲ್ಲಿ ಇವಿಎಂ ಯಂತ್ರ ಬಳಸಲಾಗುತ್ತಿದೆ. ಆದರೆ, ವಿಧಾನ ಪ‍ರಿಷತ್‌ ಚುನಾವಣೆಯಲ್ಲಿ ಇಂದಿಗೂ ಬ್ಯಾಲೆಟ್‌ ಪೇಪರ್‌ ಬಳಸಲಾಗುತ್ತದೆ. ಮತದಾರರು ತಾವು ಆಯ್ಕೆ ಮಾಡಲು ಇಚ್ಛಿಸುವ ಅಭ್ಯರ್ಥಿ ಹೆಸರಿನ ಮುಂದೆ ‘1’ ಅಂಕಿಯನ್ನು ಬರೆಯಬೇಕು. ಇದನ್ನು ಪ್ರಥಮ ಪ್ರಾಶಸ್ತ್ಯದ ಮತ ಎಂದು ಗುರುತಿಸಲಾಗುತ್ತದೆ. ಆದರೆ, ಸಾವಿರಾರು ಅಭ್ಯರ್ಥಿಗಳು ಮತದಾನ ವೇಳೆ ನಿಯಮ ಸರಿಯಾಗಿ ಪಾಲಿಸಿಲ್ಲ. ಕೆಲವರು ಒಂದಕ್ಕಿಂತ ಹೆಚ್ಚಿನ ಅಭ್ಯರ್ಥಿಗಳ ಹೆಸರಿನ ಮುಂದೆ 1 ಅಂಕಿ ಬಳಸಿದ್ದರೆ, ಇನ್ನೂ ಕೆಲವರು ರೈಟ್‌ ಮಾರ್ಕ್‌ ಹಾಕಿದ್ದಾರೆ. ಇವೆಲ್ಲ ಕಾರಣಗಳಿಂದ ಮತ ತಿರಸ್ಕೃತಗೊಂಡಿವೆ’ ಎಂದು ಚುನಾವಣೆ ಕರ್ತವ್ಯಕ್ಕೆ ನಿಯೋಜನೆಯಾಗಿದ್ದ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಮೂರಂಕಿ ತಲುಪದ 11 ಮಂದಿ

ಮೂರು ಕ್ಷೇತ್ರಗಳಲ್ಲಿ 30 ಅಭ್ಯರ್ಥಿಗಳು ಕಣದಲ್ಲಿದ್ದರು. ಈ ಪೈಕಿ 11 ಅಭ್ಯರ್ಥಿಗಳ ಮತ ಮೂರಂಕಿಯನ್ನೇ ತಲುಪಿಲ್ಲ. ಅದರಲ್ಲೂ ಮೂವರು ಬೆರಳೆಣಿಕೆಯಷ್ಟು ಮತ ಗಳಿಸಿದ್ದಾರೆ.

ಪದವೀಧರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಘಟಿಗೆಪ್ಪ ಮಗದುಮ್ಮ 68 ಮತ ಪಡೆದಿದ್ದಾರೆ. ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಸಪ್ಪ ಮಣಿಗಾರ 39, ಶ್ರೀಕಾಂತ ಪಾಟೀಲ 19, ಜಯಪಾಲ ದೇಸಾಯಿ 10, ಅಪ್ಪಾಸಾಹೇಬ ಕುರಣೆ 9, ಶ್ರೇನಿಕ್‌ ಜಾಂಗಟೆ 8, ಸಂಗಮೇಶ ಚಿಕ್ಕನರಗುಂದ 4 ಮತ ಪಡೆದಿದ್ದಾರೆ. ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ವೆಂಕನಗೌಡ ಗೋವಿಂದಗೌಡರ 79, ಎಂ.‍‍ಪಿ.ಕರಿಬಸಪ್ಪ 60, ಕೃಷ್ಣವೇಣಿ 58 ಹಾಗೂ ಪ್ರೊ.ಎಫ್‌.ವಿ.ಕಲ್ಲನಗೌಡರ 27 ಮತ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT