ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇತುವೆಗಳು ಮುಳುಗಡೆ, ಸಂಚಾರ ಬಂದ್: ನದಿ ಪಾತ್ರದ ನಿವಾಸಿಗಳಲ್ಲಿ ನೆರೆ ಆತಂಕ

ಕಲಬುರಗಿ ಜಿಲ್ಲೆ ಸೊನ್ನ ಬ್ಯಾರೇಜಿನಿಂದ ನದಿಗೆ 1.30 ಲಕ್ಷ ಕ್ಯುಸೆಕ್ ನೀರು l ನದಿ ಪಾತ್ರದ ನಿವಾಸಿಗಳಲ್ಲಿ ನೆರೆ ಆತಂಕ
Last Updated 11 ಸೆಪ್ಟೆಂಬರ್ 2022, 18:37 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಕಲಬುರಗಿ, ಬೆಳಗಾವಿ, ವಿಜಯಪುರ, ಉತ್ತರ ಕನ್ನಡ, ಕೊಡಗು ಮತ್ತು ಹಾಸನ ಜಿಲ್ಲೆಯಲ್ಲಿ ಭಾನುವಾರ ಮಳೆ ಅಬ್ಬರಿಸಿದೆ. ಹಲವೆಡೆ ಸೇತುವೆಗಳು ಜಲಾವೃತಗೊಂಡು, ಸಂಚಾರ ಸ್ಥಗಿತಗೊಂಡಿದೆ.

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಭೀಮಾ ನದಿಯ ಸುತ್ತಮುತ್ತ ಭಾರಿ ಮಳೆಯಾಗಿದ್ದರಿಂದ ಹಾಗೂ ಮಹಾರಾಷ್ಟ್ರದ ಉಜನಿ ಜಲಾಶಯದಿಂದ ನೀರು ಬಿಡುಗಡೆ ಮಾಡಿದ್ದರಿಂದ ಪ್ರಸಿದ್ಧ ತೀರ್ಥಕ್ಷೇತ್ರಗಳ ಬಳಿಯ ಸೇತುವೆಗಳು ಜಲಾವೃತವಾಗಿವೆ. ಹೀಗಾಗಿ, ಸೇತುವೆ ಮೇಲಿನ ಸಂಚಾರ ಬಂದ್ ಆಗಿದೆ.

ಮಹಾರಾಷ್ಟ್ರ ಭಾಗದಲ್ಲಿ ಭಾರಿ ಮಳೆಯಾಗಿದ್ದರಿಂದ ಉಜನಿ ಜಲಾಶಯದಿಂದ ಭೀಮಾ ನದಿಗೆ 1 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಅಫಜಲಪುರ ತಾಲ್ಲೂಕಿನ ಮಣ್ಣೂರು ಗ್ರಾಮದ ಯಲ್ಲಮ್ಮ ದೇವಿ ದೇವಸ್ಥಾನ ಭೀಮಾ ನದಿ ನೀರಿನಿಂದಜಲಾವೃತವಾಗಿದೆ. ಮಣ್ಣೂರ– ಭುಯ್ಯಾರ ಗ್ರಾಮದ ಮೂಲಕ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿಗೆ ಸಂಪರ್ಕಿಸುವ ಬ್ಯಾರೇಜ್ ಮೇಲೆ ಅಪಾರ ಪ್ರಮಾಣದ ನೀರು ಹರಿಯುತ್ತಿದೆ. ಇದರಿಂದ ಸಂಚಾರ ಸ್ಥಗಿತವಾಗಿದೆ.

3 ಟಿಎಂಸಿ ಅಡಿ ಸಾಮರ್ಥ್ಯದ ಸೊನ್ನ ಭೀಮಾ ಬ್ಯಾರೇಜಿನಿಂದ 1.30 ಲಕ್ಷ ಕ್ಯುಸೆಕ್ ನೀರನ್ನು ಎಲ್ಲ 15 ಗೇಟುಗಳಿಂದ ಹರಿಸಲಾಗುತ್ತಿದೆ. ನದಿ ದಂಡೆಯ ಗ್ರಾಮಸ್ಥರು ನದಿಯ ಬಳಿ ಹೋಗದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

ಬೀದರ್‌ ಜಿಲ್ಲೆಯ ಹುಮನಾಬಾದ್ ತಾಲ್ಲೂಕಿನಲ್ಲಿ 2 ಮನೆ ಭಾಗಶಃ ಕುಸಿದಿವೆ.

ಬೆಳಗಾವಿ ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶನಿವಾರ ರಾತ್ರಿಯಿಂದ ಧಾರಾಕಾರ ಮಳೆ ಸುರಿಯುತ್ತಿದೆ.ಚಿಕ್ಕೋಡಿ ತಾಲ್ಲೂಕಿನಲ್ಲಿ ಕೃಷ್ಣಾ ಹಾಗೂ ಅದರ ಉಪನದಿಗಳಾದ ವೇದಗಂಗಾ, ದೂಧಗಂಗಾಗಳಲ್ಲೂ ನೀರಿನ ಮಟ್ಟ ಯಥಾಸ್ಥಿತಿ ಇದೆ.

ನಿಪ್ಪಾಣಿ ತಾಲ್ಲೂಕಿನ ಜತ್ರಾಟ- ಬಿವಶಿ ಸೇತುವೆ ಮೇಲೆ ಕೃಷ್ಣಾ ನೀರು ಹರಿದು ಸಂಚಾರ ಬಂದ್ ಮಾಡಲಾಗಿದೆ. ಬೈಲಹೊಂಗಲ ತಾಲ್ಲೂಕಿನ ಸಂಪಗಾಂವ ಗ್ರಾಮದಲ್ಲಿ ಮನೆ ಪೂರ್ಣ ಕುಸಿದಿದೆ.

ವಿಜಯಪುರ ಜಿಲ್ಲೆಯಲ್ಲಿ 39 ಮನೆಗಳಿಗೆ ಹಾನಿಯಾಗಿದೆ. ಮಹಾರಾಷ್ಟ್ರ ದಿಂದ ಭೀಮಾ ನದಿಗೆ ನೀರು ಬಿಟ್ಟಿರುವುದರಿಂದ ಆಲಮೇಲ ತಾಲ್ಲೂ ಕಿನ ಬಗಲೂರ ಗ್ರಾಮದ ಸೇತುವೆ ಮುಳುಗಿದ್ದು, ವಾಹನ ಸಂಚಾರ ಬಂದ್‌ ಮಾಡಲಾಗಿದೆ. ನದಿ ದಂಡೆಯ ಕಡೆ ಹೋಗದಂತೆ ಸೂಚನೆ ನೀಡಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಮುಂಡಗೋಡ, ಜೊಯಿಡಾ, ಕಾರ ವಾರ, ಕುಮಟಾ, ಹೊನ್ನಾವರ, ಭಟ್ಕಳ ತಾಲ್ಲೂಕುಗಳಲ್ಲಿ ವ್ಯಾಪಕ ಮಳೆಯಾಗಿದೆ. ಹೊನ್ನಾವರದಲ್ಲಿ ಚಿಕ್ಕನಕೋಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಟದಮಕ್ಕಿ ಸೇತುವೆ ಮೇಲೆ ನೀರು ಹರಿಯಿತು.

ಮಡಿಕೇರಿ ತಾಲ್ಲೂಕಿನ ಮಾದಾ ಪುರದ ಮೂವತ್ತೊಕ್ಲು ಗ್ರಾಮದ ಸಮೀಪ ಗುಡ್ಡದಿಂದ ಮಣ್ಣು ಕುಸಿದು ಆತಂಕ ಮೂಡಿಸಿದೆ. ತಾಲ್ಲೂಕಿನ ಮದೆ ಮತ್ತು ಕರಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಲಾ 9 ಸೆಂ.ಮೀ ಮಳೆ ದಾಖಲಾಗಿದೆ.ಹಾಸನ ಜಿಲ್ಲೆಯ ಹೆತ್ತೂರು, ವನಗೂರು, ಮಾಗೇರಿ, ಹೊಸಹಳ್ಳಿ, ಹಿರದನಹಳ್ಳಿ, ಉಚ್ಚಂಗಿ ಹಾಗೂ ಬಿಸ್ಲೆ ಘಾಟ್‌ನಲ್ಲೂ ಉತ್ತಮ ಮಳೆಯಾಗಿದೆ.

ಮಳೆಯಿಂದ ಹಾನಿಗೊಳಗಾಗಿರುವ ಸೇತುವೆ ವೀಕ್ಷಣೆಗೆ ಬರುವಂತೆ ಆಗ್ರಹಿಸಿ ಬಿ.ಸಿ.ಪಾಟೀಲ ಅವರಿಗೆ ಗದಗ ತಾಲ್ಲೂಕಿನ ಬೆಂತೂರು ಗ್ರಾಮದಲ್ಲಿ ಭಾನುವಾರ ಸಾರ್ವಜನಿಕರು ಮುತ್ತಿಗೆ ಹಾಕಿ ಒತ್ತಾಯಿಸಿದರು. ಜನರ ಮನವಿಗೆ ಸ್ಪಂದಿಸಿದ ಪಾಟೀಲ, ಸೇತುವೆ ವೀಕ್ಷಣೆ ಮಾಡಿ, ದುರಸ್ತಿಯ ಭರವಸೆ ನೀಡಿದರು.

ಶ್ರೀರಂಗಪಟ್ಟಣ: ಮತ್ತೆ ಕುಸಿದ ಕೋಟೆ

ಶ್ರೀರಂಗಪಟ್ಟಣ: ಪಟ್ಟಣದ ಸ್ನಾನ ಘಟ್ಟದ ಬಳಿ ಐತಿಹಾಸಿಕ ಕೋಟೆಯ ಒಂದು ಭಾಗ ಕುಸಿದಿದೆ.

ಉತ್ತರದ ದಿಕ್ಕಿನಲ್ಲಿ ಸುಮಾರು 30 ಅಡಿ ಕೋಟೆ ಕುಸಿದಿದೆ. ಕೋಟೆ ಕಟ್ಟಲು ಬಳಸಿರುವ ದಪ್ಪ ಗಾತ್ರದ ಕಲ್ಲುಗಳು ಹಾಗೂ ಚುರುಕಿ ಗಾರೆ, ಗೋಡೆಯ ಅವಶೇಷಗಳು ಕಂದಕಕ್ಕೆ ಉರುಳಿವೆ.

‘ಕೋಟೆಯ ಮೇಲೆ ಬೆಳೆದಿರುವ ಮರ–ಗಿಡಗಳನ್ನು ತೆಗೆದು ಸ್ವಚ್ಛಗೊಳಿಸು ವಷ್ಟು ಅನುದಾನ ಲಭ್ಯವಿಲ್ಲ. ಕುಸಿದಿರುವ ಕೋಟೆಯ ಭಾಗವನ್ನು ಮಾತ್ರ ದುರಸ್ತಿಪಡಿಸಬಹುದು ’ ಎಂದು ಪ್ರಾಚ್ಯವಸ್ತು ಮತ್ತು ವಸ್ತುಸಂಗ್ರಹಾಲಯ ಇಲಾಖೆ ಎಂಜಿನಿಯರ್‌ ಕುಬೇರಪ್ಪ ತಿಳಿಸಿದರು.

6 ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್’

ಬೆಂಗಳೂರು: ಕರಾವಳಿ ಮತ್ತು ಉತ್ತರ ಒಳನಾಡಿನ ಬಹುತೇಕ ಕಡೆ ಹಾಗೂ ದಕ್ಷಿಣ ಒಳನಾಡಿನ ಹಲವು ಕಡೆ ಸೋಮವಾರ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಳಗಾವಿ, ಧಾರವಾಡ, ಉತ್ತರ ಕನ್ನಡ, ಹಾವೇರಿ, ಉಡುಪಿ ಹಾಗೂ ದಕ್ಷಿಣ ಕನ್ನಡಕ್ಕೆ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ. ಕರಾವಳಿ ಮತ್ತು ಉತ್ತರ ಒಳನಾಡಿನ ಒಂದೆರಡು ಕಡೆ ಗುಡುಗು ಸಹಿತ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಕೆಲವು ಬಾರಿ ಗುಡುಗು ಸಹಿತ ಸಾಧಾರಣ ಮಳೆ ಆಗುವ ಸಾಧ್ಯತೆಯಿದೆ ಎಂದು ಇಲಾಖೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT