ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಅಶ್ವತ್ಥನಾರಾಯಣ ರಾಜೀನಾಮೆಗೆ ಎಚ್‌.ಡಿ. ಕುಮಾರಸ್ವಾಮಿ ಆಗ್ರಹ

ಬಿಎಂಎಸ್‌ ಶಿಕ್ಷಣ ಸಂಸ್ಥೆ: ಬೈ–ಲಾ ಉಲ್ಲಂಘಿಸಿ ನೇಮಕ
Last Updated 22 ಸೆಪ್ಟೆಂಬರ್ 2022, 20:12 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಎಂಎಸ್‌ ಶಿಕ್ಷಣ ಸಂಸ್ಥೆಯಲ್ಲಿ ಬೈಲಾ ಉಲ್ಲಂಘಿಸಿ ಟ್ರಸ್ಟಿಗಳ ನೇಮಕ, ಪ್ರವೇಶ ಪ್ರಕ್ರಿಯೆ, ಶುಲ್ಕ ವಸೂಲಿ ಮತ್ತು ಜಮೀನಿನಲ್ಲಿ ಅಕ್ರಮ ನಡೆದಿದ್ದು, ಇದರಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಶಾಮೀಲಾಗಿರುವುದರಿಂದ ಅವರ ತಲೆದಂಡ ಆಗಲೇಬೇಕು’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಒತ್ತಾಯಿಸಿದರು.

ವಿಧಾನಸಭೆಯಲ್ಲಿ ಗುರುವಾರ ನಿಯಮ 69ರ ಅಡಿ ಈ ವಿಷಯವನ್ನು ಪ್ರಸ್ತಾಪಿಸಿದ ಅವರು, ಈ ವಿಷಯದ ಬಗ್ಗೆ ಒಂದೂವರೆ ಗಂಟೆಗಳ ಕಾಲ ಸುದೀರ್ಘ ವಿವರಣೆ ನೀಡಿದರಲ್ಲದೇ ಸಮಗ್ರ ತನಿಖೆ ಆಗಬೇಕು ಎಂದು ಒತ್ತಾಯಿಸಿದರು. ‘ಆರೋಪದಲ್ಲಿ ಯಾವುದೇ ಹುರುಳಿಲ್ಲ, ಆದ್ದರಿಂದ ತನಿಖೆಯ ಅಗತ್ಯವೇ ಇಲ್ಲ’ ಎಂದುಸಚಿವ ಅಶ್ವತ್ಥನಾರಾಯಣ ಹೇಳಿದರು

ಸಚಿವರ ಉತ್ತರವನ್ನು ಪ್ರತಿಭಟಿಸಿ ಜೆಡಿಎಸ್‌ ಸದಸ್ಯರು ಸಭಾಧ್ಯಕ್ಷರ ಪೀಠದ ಎದುರು ಧರಣಿಗೆ ಮುಂದಾದರು. ಆ ವೇಳೆ, ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಲಾಯಿತು. ಅದನ್ನು ಒಪ್ಪದ ಜೆಡಿಎಸ್ ಸದಸ್ಯರು ಅಹೋರಾತ್ರಿ ಧರಣಿಗೆ ಕುಳಿತರು.

ಗಾಳಿಯಲ್ಲಿ ಗುಂಡು: ಸಚಿವರ ವ್ಯಂಗ್ಯ

‘ಬಿಎಂಎಸ್‌ ಶಿಕ್ಷಣ ಸಂಸ್ಥೆಯ ಟ್ರಸ್ಟ್‌ ಮೇಲೆ ಸರ್ಕಾರದ ಸಂಪೂರ್ಣ ಅಧಿಕಾರ ಇದೆ. ಟ್ರಸ್ಟ್‌ನಲ್ಲಿ ಸರ್ಕಾರದ ಪ್ರತಿನಿಧಿಯೂ ಇರುತ್ತಾರೆ. ಟ್ರಸ್ಟ್‌ ಡೀಡ್‌ನಲ್ಲಿ ಯಾವುದೇ ಬದಲಾವಣೆ ಮಾಡಬೇಕಾದರೂ ಸರ್ಕಾರದ ಅನುಮೋದನೆ ಪಡೆಯಬೇಕಾಗುತ್ತದೆ. ಕುಮಾರಸ್ವಾಮಿ ಗಾಳಿಯಲ್ಲಿ ಗುಂಡು ಹೊಡೆಯುತ್ತಿದ್ದಾರೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು.

‘ಟ್ರಸ್ಟಿಗಳನ್ನು ನೇಮಕ ಮಾಡುವ ಅಧಿಕಾರವನ್ನು ಸರ್ಕಾರ ಈಗಲೂ ಹೊಂದಿದೆ. ಬೈಲಾಗೆ ಎಚ್‌.ಡಿ. ಕುಮಾರಸ್ವಾಮಿ ಸರ್ಕಾರದ ಅವಧಿಯಲ್ಲಿ ಆದ ತಿದ್ದುಪಡಿಗಳಿಗೆ ನಮ್ಮ ಸರ್ಕಾರ ಬಂದ ಮೇಲೆ ಒಪ್ಪಿಗೆ ನೀಡಿದೆ. ಟ್ರಸ್ಟ್‌ ಇರುವುದು ಶಿಕ್ಷಣದ ಉದ್ದೇಶಕ್ಕಾಗಿಯೇ ಹೊರತು, ವಾಣಿಜ್ಯ ಉದ್ದೇಶಕ್ಕಲ್ಲ. ಆ ಸಂಸ್ಥೆಗೆ ಸರ್ಕಾರ ಕೊಟ್ಟ ಜಮೀನು 2 ಎಕರೆ 28 ಗುಂಟೆ. ಬಿ.ಎಸ್‌.ನಾರಾಯಣ ಅವರು 15 ಎಕರೆ ಸ್ವಂತ ಜಮೀನಿನಲ್ಲಿ ಸಂಸ್ಥೆ ಆರಂಭಿಸಿದ್ದು. ಯಲಹಂಕದಲ್ಲಿ 21 ಎಕರೆ ಖರೀದಿಸಿ ಅಲ್ಲಿಯೂ ಶಿಕ್ಷಣ ಸಂಸ್ಥೆ’ ಆರಂಭಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT