ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಉಸ್ತುವಾರಿಗಾಗಿ ಸಚಿವ ಆರ್. ಅಶೋಕ -ಸೋಮಣ್ಣ ನಡುವೆ ಜಟಾಪಟಿ

Last Updated 9 ಅಕ್ಟೋಬರ್ 2021, 12:30 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ನಗರದ ಉಸ್ತುವಾರಿಗಾಗಿ ಸಚಿವರಾದ ಆರ್. ಅಶೋಕ ಮತ್ತು ವಿ. ಸೋಮಣ್ಣ ನಡುವೆ ಜಟಾಪಟಿ ಆರಂಭವಾಗಿದೆ. ಅಶೋಕ ಅವರ ವರ್ತನೆ ಕುರಿತು ಸೋಮಣ್ಣ ಏಕವಚನದಲ್ಲೇ ಹರಿಹಾಯ್ದಿದ್ದಾರೆ.

ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಸೋಮಣ್ಣ, ‘ನಾನು ಮಂತ್ರಿಯಾಗಿದ್ದಾಗ ಅಶೋಕ ಕೇವಲ ಶಾಸಕನಾಗಿದ್ದ. ಅವನ ಅಪ್ಪ, ಅಮ್ಮ ಅಶೋಕ ಎಂದು ಯಾಕೆ ಹೆಸರಿಟ್ಟರೋ ಗೊತ್ತಿಲ್ಲ.‌ ಸಾಮ್ರಾಟನಂತೆ ಆಡುತ್ತಾನೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾವು ಕರೆದ ಸಭೆಗೆ ಅಶೋಕ ಬಂದಿಲ್ಲ. ಆ ರೀತಿ ತಾವು ಮಾಡುವುದಿಲ್ಲ. ಅಶೋಕ ಕರೆಯುವ ಸಭೆಗೆ ಹಾಜರಾಗಲಾಗುವುದು ಎಂದರು.

ತಮ್ಮ ಹಿರಿತನ ಕುರಿತು ಹಲವು ಬಾರಿ ಪ್ರಸ್ತಾಪಿಸಿದ ಸೋಮಣ್ಣ, ಬೆಂಗಳೂರು ನಗರ ಉಸ್ತುವಾರಿ ಸಚಿವರ ಹುದ್ದೆಗೆ ತಮ್ಮನ್ನೂ ಪರಿಗಣಿಸಬೇಕು ಎಂದರು.

ಸಿಎಂ ಪರಮಾಧಿಕಾರ: ಸೋಮಣ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅಶೋಕ, 'ನಾನು ಯಾವುದೇ ಜಿಲ್ಲೆಯ ಉಸ್ತುವಾರಿ ನೀಡುವಂತೆ ಬೇಡಿಕೆ ಇಟ್ಟಿಲ್ಲ. ಉಸ್ತುವಾರಿ ಸಚಿವರನ್ನು ನೇಮಿಸುವುದು ಮುಖ್ಯಮಂತ್ರಿಯವರ ಪರಮಾಧಿಕಾರ. ಮುಖ್ಯಮಂತ್ರಿ ನಿರ್ಧಾರಕ್ಕೆ ನಾನು ಬದ್ಧ' ಎಂದರು.

'ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ನೀಡಲಾಗಿತ್ತು. ಅದನ್ನು ತಮಗೆ ನೀಡುವಂತೆ ಎಂ.ಟಿ.ಬಿ. ನಾಗರಾಜ್ ಕೇಳಿದಾಗ ಬಿಟ್ಟುಕೊಟ್ಟಿದ್ದೆ. ಯಾವುದೇ ಜಿಲ್ಲೆಯ ಉಸ್ತುವಾರಿ ಇಲ್ಲದೆಯೂ ಕೆಲಸ ಮಾಡಿದ್ದೆ' ಎಂದು ಹೇಳಿದರು.

'ಯಾವುದೇ ಸಚಿವರು ಸಭೆ ಕರೆದರೂ ನಾನು ಹಾಜರಾಗುತ್ತೇನೆ. ಶಾಸಕರು ಸಭೆ ಕರೆದರೂ ಹೋಗುವೆ. ನನ್ನ ಪೂರ್ವನಿಗದಿತ ಕಾರ್ಯಕ್ರಮ ಅಥವಾ ಪ್ರವಾಸ ಇದ್ದರೆ ಮಾತ್ರ ಹಾಜರಾಗಲು ಸಾಧ್ಯವಾಗುವುದಿಲ್ಲ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT