ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಸಿಗಾಗಿ ಪೋಸ್ಟಿಂಗ್ ಬಗ್ಗೆ ಎಂಟಿಬಿ ಮಾತು: ಐಟಿ, ಇಡಿ ಎಲ್ಲಿವೆ ಎಂದ ಪ್ರಿಯಾಂಕ್

Last Updated 29 ಅಕ್ಟೋಬರ್ 2022, 6:21 IST
ಅಕ್ಷರ ಗಾತ್ರ

ಬೆಂಗಳೂರು: ಕಾಸಿಗಾಗಿ ಪೋಸ್ಟಿಂಗ್ ವಿಚಾರಕ್ಕೆ ಸಂಬಂಧಿಸಿ ಸಚಿವ ಎಂ.ಟಿ.ಬಿ. ನಾಗರಾಜ್ ನೀಡಿರುವ ಹೇಳಿಕೆ ಕುರಿತು ಕಾಂಗ್ರೆಸ್‌ ಶಾಸಕ ಪ್ರಿಯಾಂಕ್ ಖರ್ಗೆ ಅವರು ರಾಜ್ಯ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ.

ಎಂ.ಟಿ.ಬಿ. ನಾಗರಾಜ್ ಅವರು ಮಾತನಾಡಿರುವ ವಿಡಿಯೊವನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿರುವ ಅವರು, ಸರ್ಕಾರದ ಮಂತ್ರಿಗಳು ತಮ್ಮದೇ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡಿರುವಾಗ ಮುಖ್ಯಮಂತ್ರಿಗಳು ಮೌನವಾಗುತ್ತಾರೆ. ಐಟಿ, ಇಡಿ ಈಗ ಎಲ್ಲಿ ಅಡಗಿವೆ? ಎಂದು ಪ್ರಶ್ನಿಸಿದ್ದಾರೆ.

‘ಪ್ರಜಾವಾಣಿ ವರದಿ’ ಉಲ್ಲೇಖಿಸಿ ಟ್ವೀಟ್ ಮಾಡಿರುವ ಪ್ರಿಯಾಂಕ್, ‘ಎಂ.ಟಿ.ಬಿ. ನಾಗರಾಜ್ ಅವರ ಸಂಭಾಷಣೆಯನ್ನು ಗಮನಿಸಿದರೆ #PayCM ದರ ನಿಗದಿ ಮಾಡಿರುವುದು ಸ್ಪಷ್ಟವಾಗಿ ತೋರುತ್ತದೆ’ ಎಂದು ಬರೆದುಕೊಂಡಿದ್ದಾರೆ.

‘ಇನ್‌ಸ್ಪೆಕ್ಟರ್‌ ಹುದ್ದೆಗೆ ₹70 ರಿಂದ ₹80 ಲಕ್ಷ ಕೊಟ್ಟು ಬಂದರೆ ಹೃದಯಾಘಾತವಾಗದೆ ಇನ್ನೇನಾಗುತ್ತದೆ’ ಎಂದು ಎಂ.ಟಿ.ಬಿ. ನಾಗರಾಜ್ ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಅಮಾನತುಗೊಂಡಿದ್ದ ಕೆ.ಆರ್.ಪುರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್‌ ಎಚ್‌.ಎಲ್‌. ನಂದೀಶ್ ಹೃದಯಾಘಾತದಿಂದ ಗುರುವಾರ ಮೃತಪಟ್ಟ ಸಂದರ್ಭದಲ್ಲಿ ಅಂತಿಮ ದರ್ಶನ ಪಡೆಯಲು ಬಂದ ಸಚಿವ ಎಂ.ಟಿ.ಬಿ. ನಾಗರಾಜ್, ಬೆಂಗಳೂರು ಪೊಲೀಸ್ ಕಮಿಷನರ್‌ ಪ್ರತಾಪ್ ರೆಡ್ಡಿ ಅವರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದರು. ನಂದೀಶ್ ಅವರನ್ನು ಪಬ್‌ ವಿಚಾರದಲ್ಲಿ ಅಮಾನತುಗೊಳಿಸಿದ್ದಕ್ಕಾಗಿ ಕಿಡಿಕಾರಿದ್ದರು.

‘ತಪ್ಪು ನಡೆದಿದ್ದರೆ ಪೊಲೀಸ್‌ ಕಮಿಷನರ್‌ ನೋಟಿಸ್‌ ನೀಡಬಹುದಿತ್ತು. ಸಣ್ಣ ವಿಷಯಕ್ಕೆ ಅಮಾನತುಗೊಳಿಸಲಾಗಿತ್ತು. ಕಮಿಷನರ್ ಅವರು ದೊಡ್ಡ ಅಪರಾಧ ಮಾಡಿದವರನ್ನೇ ಏನೂ ಮಾಡಿಲ್ಲ. ಲೂಟಿ ಮಾಡುವವರು ಮಾಡುತ್ತಿದ್ದಾರೆ. ಈ ಇನ್‌ಸ್ಪೆಕ್ಟರ್‌ಗೆ ಒಂದು ಅವಕಾಶ ಕೊಡಬೇಕಾಗಿತ್ತು. ಎಚ್ಚರಿಕೆ ನೀಡಬೇಕಾಗಿತ್ತು’ ಎಂದು ಸಚಿವ ನಾಗರಾಜ್‌ ಹೇಳಿದ್ದರು.

ಸರ್ಕಾರದ ವಿರುದ್ಧ ಎಚ್‌ಡಿಕೆ ವಾಗ್ದಾಳಿ: ಸಚಿವ ನಾಗರಾಜ್‌ ಮಾತನಾಡಿರುವ ವಿಡಿಯೊವನ್ನು ಲಗತ್ತಿಸಿ ಟ್ವೀಟ್‌ ಮಾಡಿರುವ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು, ‘ಈಗ ಸರ್ಕಾರವೇ ಸತ್ಯ ಹೇಳಿದೆ! ಸದ್ಯ, ಸಾವಿನಲ್ಲೂ ಸತ್ಯ ಹೇಳುವ ಧೈರ್ಯವನ್ನು ಸರ್ಕಾರ ಮಾಡಿದೆ. ಬೊಮ್ಮಾಯಿ ಸಂಪುಟದ ಸಚಿವರೇ ವಿಷಯ ಬಹಿರಂಗಪಡಿಸಿದ್ದಾರೆ. ಎಂ.ಟಿ.ಬಿ. ನಾಗರಾಜ್ ಅವರ ಹೇಳಿಕೆಯು ಈ ಸರ್ಕಾರದ ಕಾಸಿಗಾಗಿ ಪೋಸ್ಟಿಂಗ್ ದಂಧೆಗೆ ಹಿಡಿದ ಕನ್ನಡಿ’ ಎಂದು ಗುಡುಗಿದ್ದಾರೆ.

‘ಸಚಿವರೇ ಹೇಳಿದಂತೆ ₹70-80 ಲಕ್ಷಗಳನ್ನು ನಂದೀಶ್ ಅವರು ಯಾರಿಗೆ ಕೊಟ್ಟರು? ಇದರಲ್ಲಿ ಅವರ ಮೇಲಿನ ಉನ್ನತ ಅಧಿಕಾರಿಗಳು, ಗೃಹ ಸಚಿವರು ಮತ್ತು ಮುಖ್ಯಮಂತ್ರಿಗೆ ಪರ್ಸಂಟೇಜ್ ಹೋಗಿದೆಯಾ? ಅಥವಾ ಕಾಣದ ರಿಮೋಟ್ ಯಾವುದಾದರೂ ಇದೆಯಾ? ಸಚಿವರಂತೆ ನೀವೂ ಸತ್ಯ ಹೇಳಿ ಸಿ.ಎಂ. ಸಾಹೇಬರೇ’ ಎಂದು ಎಚ್‌ಡಿಕೆ ಟ್ವೀಟ್‌ ಮಾಡಿದ್ದಾರೆ.

‘ಸಂಘ ಸಂಸ್ಕಾರದ ಗೃಹ ಸಚಿವರು ಉತ್ತರ ನೀಡಲೇಬೇಕು. ಧಮ್ಮಿದ್ರೆ, ತಾಕತ್ತಿದ್ರೆ ಎನ್ನುವ ಮುಖ್ಯಮಂತ್ರಿ ಅವರು ಈ ಬಗ್ಗೆ ಮೌನ ಮುರಿಯುವ ತಾಕತ್ತು ತೋರಬೇಕು’ ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT