ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಯಿ ಬಿಟ್ಟರೆ ಬಣ್ಣಗೇಡು ಎಂಬಂತೆ ಕೇಂದ್ರ –ರಾಜ್ಯ ಸರ್ಕಾರ: ಕುಮಾರಸ್ವಾಮಿ ಟೀಕೆ

Last Updated 29 ಏಪ್ರಿಲ್ 2021, 14:29 IST
ಅಕ್ಷರ ಗಾತ್ರ

ಬೆಂಗಳೂರು: ಮೇ 1ರಿಂದ 18 ವರ್ಷ ಮೇಲ್ಪಟವರಿಗೆ ಉಚಿತ ಲಸಿಕೆ ನೀಡುವುದಾಗಿ ಘೋಷಿಸಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ಮೇ ಒಂದರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ ಎಂದು ಬೊಬ್ಬೆ ಹೊಡೆದ ಕೇಂದ್ರ ಮತ್ತು ರಾಜ್ಯ ಸರ್ಕಾರ ಪುಕ್ಕಟೆ ಪುಂಗಿ ಊದಿದ್ದೇ ಬಂತು. ಲಸಿಕೆಯ ದಾಸ್ತಾನಿಲ್ಲದೆ, ಸೂಕ್ತ ಮುನ್ನೆಚ್ಚರಿಕೆ, ವ್ಯವಸ್ಥೆ ಮಾಡಿಕೊಳ್ಳದೆ ಬರೀ ಪ್ರಚಾರ ತೆಗೆದುಕೊಂಡ ಕೇಂದ್ರ, ರಾಜ್ಯ ಸರ್ಕಾರಗಳ ನಿಲುವು ಅಕ್ಷಮ್ಯ ಮತ್ತು ಖಂಡನೀಯ’ ಎಂದಿದ್ದಾರೆ.

‘ಲಭ್ಯವಿರುವ ಮಾಹಿತಿ ಪ್ರಕಾರ ಮೇ ಒಂದರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಸರ್ಕಾರ ಏದುಸಿರು ಬಿಡುತ್ತಿದೆ. 45 ವರ್ಷ ಮೇಲ್ಪಟ್ಟವರಿಗೆ ಎರಡನೇ ಡೋಸ್ ಕೊಡಲು ಹೆಣಗಾಡುತ್ತಿದೆ. 18 ವರ್ಷ ಮೇಲ್ಪಟ್ಟ ದೇಶದ ಕೋಟ್ಯಾಂತರ ಮಂದಿಗೆ ಲಸಿಕೆ ನೀಡುವುದಾಗಿ ಬಾಯಿಮಾತಿನ ಉಪಚಾರ ಮಾಡಿದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹೊಣೆಗೇಡಿತನ ಮತ್ತು ತಿಕ್ಕಲುತನವನ್ನು ದೇಶದ ಜನತೆ ಎಂದಿಗೂ ಕ್ಷಮಿಸುವುದಿಲ್ಲ’ ಎಂದು ಕಿಡಿಕಾರಿದ್ದಾರೆ.

‘ಆತುರಗಾರನಿಗೆ ಬುದ್ಧಿ ಕಡಿಮೆ ಎಂಬಂತೆ ಕೇವಲ ಮಾತಿನಲ್ಲಿ ಜನರನ್ನು ಓಲೈಸುವ ಇಂತಹ ಬೂಟಾಟಿಕೆಯನ್ನು ಸರ್ಕಾರ ಬಿಡಬೇಕು. ‘ನಿಮ್ಮನ್ನು ನೀವೇ ಕಾಪಾಡಿಕೊಳ್ಳಿ’ ಎನ್ನುವ ಸರ್ಕಾರ ಇದ್ದರೇನು? ಇಲ್ಲದಿದ್ದರೇನು? ಮೊದಲ ಹಂತದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಎಷ್ಟು ಮಂದಿಗೆ ಲಸಿಕೆ ಹಾಕಲಾಗಿದೆ? ಅವರಲ್ಲಿ ಎಷ್ಟು ಮಂದಿಗೆ ಎರಡನೇ ಹಂತದಲ್ಲಿ ಲಸಿಕೆ ಕೊಡಲಾಗಿದೆ ಎಂಬ ಅಂಕಿಅಂಶಗಳನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸುವಂತೆ ಸವಾಲು ಹಾಕಿದ್ದಾರೆ.

‘18 ವರ್ಷ ಮೇಲ್ಪಟ್ಟವರಿಗೆ ಎಷ್ಟು ಮಂದಿಗೆ ಯಾವತ್ತಿನಿಂದ ಲಸಿಕೆ ಹಾಕುವ ಅಭಿಯಾನ ಶುರು ಮಾಡುವಿರಿ? ಎಂಬುದನ್ನು ಸ್ಪಷ್ಟವಾಗಿ ದೇಶದ ಜನತೆಗೆ ಮಾಹಿತಿ ಕೊಡಿ. ಬಾಯಿ ಬಿಟ್ಟರೆ ಬಣ್ಣಗೇಡು ಎಂಬಂತೆ ವರ್ತಿಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ಲಕ್ಷ್ಯತನ ದೇಶದ ಜನತೆ ಮೂರ್ಖರು ಎಂದು ಭಾವಿಸಿದಂತಿದೆ’ ಎಂದು ವ್ಯಂಗ್ಯವಾಡಿದ್ದಾರೆ.

‘ದೇಶದಾದ್ಯಂತ ಕೊರೊನಾ ಸೋಂಕಿತರು ಬೆಡ್, ಆಕ್ಸಿಜನ್, ಆಂಬುಲೆನ್ಸ್, ಔಷಧಿಗಳಿಲ್ಲದೆ ಪರದಾಡುತ್ತಿದ್ದಾರೆ. ಸತ್ತವರ ಅಂತ್ಯಸಂಸ್ಕಾರಕ್ಕೂ ಪಾಳಿಯಲ್ಲಿ ನಿಲ್ಲಬೇಕಾದ ವ್ಯವಸ್ಥೆ ಸೃಷ್ಟಿಸಿದ ಕೇಂದ್ರ- ರಾಜ್ಯ ಸರ್ಕಾರಗಳ ದಯನೀಯ ವೈಫಲ್ಯದ ಬಗ್ಗೆ ದೇಶದ ಜನತೆ ಹಿಡಿಶಾಪ ಹಾಕುತ್ತಿದ್ದಾರೆ’ ಎಂದಿದ್ದಾರೆ.

‘ಅರಿವುಗೇಡಿಗಳಂತೆ ಪುಕ್ಕಟೆ ಪ್ರವಚನ ನೀಡುತ್ತಿರುವ ಪ್ರಧಾನಿ, ಮುಖ್ಯಮಂತ್ರಿ ಮತ್ತು ಸಚಿವರುಗಳು ಕನಿಷ್ಠ ಸಾಮಾನ್ಯ ರೀತಿ ಪ್ರತಿಕ್ರಿಯಿಸುವುದನ್ನು, ಇಂತಹ ದುರಿತ ಕಾಲದಲ್ಲಿ ತೆಗೆದುಕೊಳ್ಳಬೇಕಾದ ಎಚ್ಚರಿಕೆಯನ್ನು ಜವಾಬ್ದಾರಿಯಿಂದ ನಿಭಾಯಿಸುವುದು ಒಳಿತು’ ಎಂದು ಸಲಹೆ ನೀಡಿದ್ದಾರೆ.

‘ಲಸಿಕೆ ನೀಡುವ ವಿಷಯದಲ್ಲಿ ಜನತೆ ಸಿನಿಕರಾಗದಂತೆ ಎಚ್ಚರವಹಿಸುವುದು ಸರ್ಕಾರಗಳ ಜವಾಬ್ದಾರಿ. ಸಾರ್ವಜನಿಕರ ಆರೋಗ್ಯದ ವಿಷಯದಲ್ಲಿ ಸರ್ಕಾರ ಉಡಾಫೆಯ ಧೋರಣೆ ತಳೆಯುವುದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT