ಶನಿವಾರ, ಅಕ್ಟೋಬರ್ 23, 2021
20 °C

ಸಿದ್ದರಾಮಯ್ಯಗೆ ಇನ್ನೊಬ್ಬರು ಮಲಗುವ ಕೋಣೆ ಇಣುಕಿ ನೋಡುವ ಚಟವಿದೆ: ಸಿ.ಟಿ.ರವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಜನತಾದಳದ ಅಡುಗೆ ಮನೆ, ಇನ್ನೊಬ್ಬರು ಮಲಗುವ ಕೋಣೆ ಇಣುಕಿ ನೋಡುವ ಚಟ ಅಂಟಿಕೊಂಡಿದೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಟೀಕಿಸಿದರು.

ಬಿಜೆಪಿ ರಾಜ್ಯ ಘಟಕದ ಕಚೇರಿಯಲ್ಲಿ ಭಾನುವಾರ ನಡೆದ ಪಕ್ಷದ ಪ್ರಮುಖರ ಸಮಿತಿ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡುವಾಗ ‘ಬಿಜೆಪಿ– ಜೆಡಿಎಸ್‌ ಒಳ ಒಪ್ಪಂದ ಮಾಡಿಕೊಂಡಿವೆ’ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಅವರು ಹೀಗೆ ಪ್ರತಿಕ್ರಿಯಿಸಿದರು.

‘ಇನ್ನೊಬ್ಬರ ಮನೆಯೊಳಗೆ ಇಣುಕಿ ನೋಡುವ ಕೆಟ್ಟ ಚಟ ಸಿದ್ದರಾಮಯ್ಯ ಅವರಿಗೆ ಏಕೆ ಬಂತೋ ಗೊತ್ತಿಲ್ಲ. ಆದರೆ, ಅದು ಒಳ್ಳೆಯ ಲಕ್ಷಣವಲ್ಲ’ ಎಂದರು.

ಒಳ ಒಪ್ಪಂದದ ಕಾರಣದಿಂದ ಜೆಡಿಎಸ್‌ ಅಲ್ಪಸಂಖ್ಯಾತರಿಗೆ ಟಿಕೆಟ್‌ ನೀಡಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ರವಿ, ‘ಯಾವ ಪಕ್ಷದವರು ಯಾರಿಗೆ ಟಿಕೆಟ್‌ ನೀಡಬೇಕು ಎಂಬುದನ್ನು ನಾನು ಹೇಳಲು ಸಾಧ್ಯವೆ? ಕಾಂಗ್ರೆಸ್‌ನವರು ಯಾವತ್ತಾದರೂ ಆರೆಸ್ಸೆಸ್‌ನವರಿಗೆ ಟಿಕೆಟ್‌ ಕೊಟ್ಟಿದ್ದಾರಾ? ಅವರಿಗೆ ರಾಷ್ಟ್ರೀಯ ಹಿತ ಇಲ್ಲ ಎಂದು ನಾನು ಹೇಳಲು ಸಾಧ್ಯವೆ’ ಎಂದು ಪ್ರಶ್ನಿಸಿದರು.

‘ಕಾಂಗ್ರೆಸ್‌ ಮತ್ತು ಜೆಡಿಎಸ್‌ನವರು ಒಳ ಒಪ್ಪಂದ ಮಾಡಿಕೊಂಡರೂ ಚುನಾವಣೆಯಲ್ಲಿ ಸೋಲುತ್ತಾರೆ. ಕಳೆದ ಲೋಕಸಭಾ ಚುನಾವಣೆಯಲ್ಲೇ ಅದು ಸಾಬೀತಾಗಿದೆ. ಬಿಜೆಪಿ ಅಭ್ಯರ್ಥಿಗಳು ಕಾಂಗ್ರೆಸ್‌, ಜೆಡಿಎಸ್‌ ನಾಯಕರ ಭಾವಚಿತ್ರ ತೋರಿಸಿ ಮತ ಕೇಳುವುದಿಲ್ಲ. ಅಟಲ್‌ ಬಿಹಾರಿ ವಾಜಪೇಯಿ, ಎಲ್‌.ಕೆ. ಅಡ್ವಾಣಿ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ, ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ, ಬಿ.ಎಸ್‌. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ನಳಿನ್‌ ಕುಮಾರ್‌ ಕಟೀಲ್‌ ಭಾವಚಿತ್ರ ತೋರಿಸಿ ಮತ ಕೇಳುತ್ತಾರೆ’ ಎಂದರು.

‘ಮುಂಬರುವ ವಿಧಾನ ಪರಿಷತ್‌ ಚುನಾವಣೆ ತಯಾರಿ, ಪಕ್ಷ ಸಂಘಟನೆ, ಚಿಂತನ ಶಿಬಿರ ನಡೆಸುವ ಕುರಿತು ಪ್ರಮುಖರ ಸಮಿತಿ ಸಭೆಯಲ್ಲಿ ಚರ್ಚೆ ನಡೆದಿದೆ. ದೀಪಾವಳಿ ಹಬ್ಬದ ಬಳಿಕ ಚಿಂತನ ಶಿಬಿರ ನಡೆಸಲಾಗುವುದು. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಹಾಗೂ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಗೆ ಮುನ್ನ ಪಕ್ಷದ ಪ್ರಮುಖ ನಾಯಕರ ಪ್ರವಾಸ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು