ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಳಿನ್ ಕುಮಾರ್ ಕಟೀಲ್ ಒಬ್ಬ ಕಾಡು ಮನುಷ್ಯ: ಸಿದ್ದರಾಮಯ್ಯ ವಾಗ್ದಾಳಿ

Last Updated 22 ಅಕ್ಟೋಬರ್ 2020, 8:34 IST
ಅಕ್ಷರ ಗಾತ್ರ

ಬೆಂಗಳೂರು: ಕಾಡಿಗೆ ಹುಲಿ ಓಡಿಸುತ್ತೇನೆ, ಬಂಡೆ ಒಡೆಯುತ್ತೇನೆ ಎಂದು ಹೇಳಿಕೊಂಡು ತಿರುಗಾಡುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಒಬ್ಬ ಕಾಡು ಮನುಷ್ಯ, ನಾಗರಿಕ ಜಗತ್ತಲ್ಲಿ ಇರಲು ನಾಲಾಯಕ್ ಆಗಿರುವ ಈ ವ್ಯಕ್ತಿಯನ್ನು ನಾಡಿನ ಜನರ ಹಿತದೃಷ್ಟಿಯಿಂದ ಬಿಜೆಪಿ ತಕ್ಷಣ ಕಾಡಿಗೆ ಕರೆದುಕೊಂದು ಹೋಗಿ ಬಿಡಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

‘ತಮ್ಮ ಪಕ್ಷ ಸೇರಬೇಕಾದರೆ ಹತ್ತು ವರ್ಷ ಪಕ್ಷದ ಕಚೇರಿಯ ಕಸಗುಡಿಸಬೇಕು ಎಂದು ಕೆ.ಎಸ್.ಈಶ್ವರಪ್ಪ ಹೇಳಿದ್ದರು. ಈ ನಳಿನ್ ಕುಮಾರ್ ಕಟೀಲನ್ನು ಇನ್ನು ಒಂದು ಹತ್ತು ವರ್ಷ ಕಚೇರಿಯ ಕಸಗುಡಿಸಲು ಹಚ್ಚಿದರೆ ಏನಾದರೂ ಸ್ವಲ್ಪ ಬುದ್ದಿ ಬರಬಹುದೇನೋ’ ಎಂದು ಕಿಡಿಕಾರಿದ್ದಾರೆ.

‘ನಳಿನ್ ಕುಮಾರ್ ಕಟೀಲು ನಾಲಗೆಯಲ್ಲಿ ಮಾತ್ರ ಅಲ್ಲ, ಬೆನ್ನಿನಲ್ಲಿಯೂ ಎಲುಬು ಇಲ್ಲ. ಈ ಬೆನ್ನೆಲುಬಿಲ್ಲದ ಅಧ್ಯಕ್ಷನಿಗೆ ತಮ್ಮದೇ ಪಕ್ಷದ ಶಾಸಕರು ಪ್ರತಿದಿನ ತಮ್ಮದೇ ಮುಖ್ಯಮಂತ್ರಿ ವಿರುದ್ಧ ಟೀಕಾಪ್ರಹಾರ ಮಾಡುತ್ತಿದ್ದರೂ ಅವರ ವಿರುದ್ಧ ಕ್ರಮಕೈಗೊಳ್ಳುವ ತಾಕತ್ ಇಲ್ಲ. ನಮ್ಮ ಪಕ್ಷದ ಬಗ್ಗೆ ಕೂಗಾಡ್ತಾರೆ’ ಎಂದು ಹೇಳಿದ್ದಾರೆ.

‘ಮಂಗಳೂರಿನಲ್ಲಿ ಎಲ್ಲಿಯೋ ಬೀದಿ ಅಲೆಯುತ್ತಿದ್ದ ಈ ನಳಿನ್ ಕುಮಾರ್ ಕಟೀಲ್ ಎಂಬ ಪೋಕರಿಯನ್ನು ಯಾರೋ ತಮ್ಮ ‘ಸಂತೋಷ’ಕ್ಕಾಗಿ ತಂದು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದ್ದರು. ಇವರಿಗೆ ಕೊಟ್ಟಿರುವ ಕೆಲಸ ಪಕ್ಷ ಕಟ್ಟುವುದಲ್ಲ, ಬಿ.ಎಸ್.ಯಡಿಯೂರಪ್ಪನವರನ್ನು ಕೆಡವುದು, ಅದನ್ನೇ ಮಾಡುತ್ತಾ ಇದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ.

ಈಗ ನಡೆಯುತ್ತಿರುವ ಉಪಚುನಾವಣೆಗಳಲ್ಲಿ ಹೇಗಾದರೂ ಮಾಡಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಿ ಅದರ ಹೊಣೆಯನ್ನು ಯಡಿಯೂರಪ್ಪನವರ ತಲೆ ಮೇಲೆ ಕಟ್ಟಿ ಅವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿಸಬೇಕು. ಇದು ನಳಿನ್ ಕುಮಾರ್ ಕಟೀಲು ಅವರಿಗೆ ಪಕ್ಷದೊಳಗಿನ ಕೆಲವು ನಾಯಕರೇ ಕೊಟ್ಟಿರುವ ಟಾಸ್ಕ್ ಎನ್ನುವುದು ಈಗ ಗುಟ್ಟಾಗಿ ಉಳಿದಿಲ್ಲ ಎಂದು ತಿಳಿಸಿದರು.

‘ಮಾತೆತ್ತಿದರೆ ಸಂಸ್ಕಾರ, ಸಂಸ್ಕೃತಿ ಎಂದು ಬೋಧನೆ ಮಾಡುವ ಸಂಘ ಪರಿವಾರದಲ್ಲಿ ಯಾರಾದರೂ ಹಿರಿಯರು, ಮಾನವಂತರು ಉಳಿದಿದ್ದರೆ ಮೊದಲು ಈ ನಳಿನ್ ಕುಮಾರ್ ಕಟೀಲ್ ಅವರಿಗೆ ಸ್ವಲ್ಪ ಬುದ್ದಿ ಹೇಳಿ ನಾಲಿಗೆ ಬಿಗಿಹಿಡಿದು ಮಾತನಾಡಲು ಕಲಿಸಿ. ಇಲ್ಲದೆ ಇದ್ದರೆ ಇವರೊಬ್ಬರೇ ಸಾಕು ಎಲ್ಲರ ಮಾನ ಕಳೆಯಲು’ ಎಂದು ಅಸಮಾಧಾನ ಹೊರಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT