ಬುಧವಾರ, ಆಗಸ್ಟ್ 10, 2022
20 °C

ರಾಜ್ಯದಲ್ಲಿ ಚುರುಕುಗೊಂಡ ಮುಂಗಾರು; 17ರವರೆಗೆ ಭಾರಿ ಮಳೆ ಸಾಧ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ಚುರುಕುಗೊಂಡಿದೆ. ಕರಾವಳಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಶನಿವಾರ ಉತ್ತಮ ಮಳೆಯಾಗಿದೆ.

ದಕ್ಷಿಣ ಜಿಲ್ಲೆಯಲ್ಲಿ ಮಂಗಳೂರು ನಗರ, ಬೆಳ್ತಂಗಡಿ, ಬಂಟ್ವಾಳ, ಪುತ್ತೂರು, ಸುಳ್ಯ ತಾಲ್ಲೂಕಿನ ಉತ್ತಮ ಮಳೆಯಾಗಿದೆ. ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ನದಿ ತುಂಬಿ ಹರಿಯುತ್ತಿದೆ. ದರ್ಪಣ ತೀರ್ಥ ನದಿಯಲ್ಲೂ ನೀರಿನ ಹರಿವು ಏರಿದೆ.

ಉಡುಪಿ ಜಿಲ್ಲೆಯಾದ್ಯಂತ ಬಿರುಗಾಳಿ ಸಹಿತ ಬಿರುಸಿನ ಮಳೆ ಸುರಿಯಿತು. ಕಾರ್ಕಳ ತಾಲ್ಲೂಕಿನ ವಿವಿಧೆಡೆ ಹಾನಿಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರ, ಕೊಪ್ಪ,ಬಾಳೆಹೊನ್ನೂರು ಸೇರಿ ವಿವಿಧೆಡೆ ಮಳೆಯಾಗಿದೆ.

ಕಲ್ಯಾಣ ಕರ್ನಾಟಕ ಭಾಗದಲಲ್ಲಿ ಕಲಬುರ್ಗಿ, ಬೀದರ್, ಯಾದಗಿರಿಯಲ್ಲಿ ಮಳೆಯಾಗಿದೆ.

ಕಲಬುರ್ಗಿ ನಗರ, ಚಿಂಚೋಳಿ ಮತ್ತು ಕಾಳಗಿ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಯಿತು. ಬೀದರ್‌ ಜಿಲ್ಲೆಯಲ್ಲಿ ನಗರ ಸೇರಿ ಭಾಲ್ಕಿ, ಔರಾದ್, ಕಮಲನಗರ, ಬಸವಕಲ್ಯಾಣ ತಾಲ್ಲೂಕಿನಲ್ಲಿ ಮಳೆಯಾಗಿದೆ.

ಉತ್ತರ ಕರ್ನಾಟಕದಲ್ಲಿ ಹುಬ್ಬಳ್ಳಿ– ಧಾರವಾಡ, ಬೆಳಗಾವಿ, ಗೋಕಾಕ ಹಾಗೂ ಹಿರೇಬಾಗೇವಾಡಿಯಲ್ಲಿ ಕೆಲಕಾಲ ಸಾಧಾರಣ ಮಳೆಯಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂಕೋಲಾ, ಗೋಕರ್ಣ, ಕುಮಟಾ, ಹೊನ್ನಾವರ, ಭಟ್ಕಳ, ಜೊಯಿಡಾ, ದಾಂಡೇಲಿ, ಯಲ್ಲಾಪುರ, ಸಿದ್ದಾಪುರ ಕಡೆ ಉತ್ತಮ ಮಳೆಯಾಯಿತು.

ಕೊಡಗು ಜಿಲ್ಲೆಯ ವಿವಿಧೆಡೆ ಶನಿವಾರ ದಿನವಿಡೀ ಗಾಳಿ ಸಹಿತ ಧಾರಾಕಾರ ಮಳೆಯಾಗಿದೆ.

17ರವರೆಗೆ ಭಾರಿ ಮಳೆ ಸಾಧ್ಯತೆ

ಬೆಂಗಳೂರು: ‘ಮುಂಗಾರು ಹಾಗೂ ಪೂರ್ವ ಅರಬ್ಬಿ ಸಮುದ್ರ–ಬಂಗಾಳ ಉಪಸಾಗರಗಳಲ್ಲಿ ವಾಯುಭಾರ ಕುಸಿತ ಮತ್ತು ಮೇಲ್ಮೈಸುಳಿಗಾಳಿ ಉಂಟಾಗಿದ್ದು, ರಾಜ್ಯದ ಕರಾವಳಿ, ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಜೂ.13ರಿಂದ 17ರವರೆಗೆ ಧಾರಾಕಾರ ಮಳೆ ಆಗಬಹುದು’ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ ತಿಳಿಸಿದರು.

‘ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಸಹಿತ ಭಾರಿ ಮಳೆ ಮುನ್ಸೂಚನೆ ಇರುವುದರಿಂದ ಇದೇ 17ರವರೆಗೆ ‘ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ಗಂಟೆಗೆ 50 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿರುವುದರಿಂದ ಈ ಅವಧಿಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು’ ಎಂದು ಎಚ್ಚರಿಕೆ ನೀಡಿದರು.

‘ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ಯಾದಗಿರಿ, ವಿಜಯಪುರ, ಕೊಪ್ಪಳ, ಹಾವೇರಿ, ಗದಗ, ಧಾರವಾಡ, ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲೂ ವ್ಯಾಪಕ ಮಳೆಯಾಗುವ ಸಾಧ್ಯತೆ ಇರುವುದರಿಂದ ‘ಯೆಲ್ಲೊ ಅಲರ್ಟ್‌‘ ಘೋಷಿಸಲಾಗಿದೆ’ ಎಂದವರು ಹೇಳಿದರು.

ಮಳೆ–ಎಲ್ಲಿ, ಎಷ್ಟು?: ಉಡುಪಿ ಜಿಲ್ಲೆ ಕೊಲ್ಲೂರಿನಲ್ಲಿ ಗರಿಷ್ಠ 10 ಸೆಂ.ಮೀ ಮಳೆಯಾಗಿದೆ. ಭಟ್ಕಳ 7, ಸಿದ್ದಾಪುರ 5, ಮೂಡುಬಿದಿರೆ 4, ಕಾರವಾರ, ಪುತ್ತೂರು, ಕಾರ್ಕಳ, ಶೃಂಗೇರಿ 3, ಕುಂದಾಪುರ, ಸುಳ್ಯ, ಕೊಪ್ಪ, ಕಳಸ, ಸಾಗರ 2, ಉಡುಪಿ, ಮಂಗಳೂರು, ಸೊರಬದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ. ರಾಯಚೂರಿನಲ್ಲಿ 36 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು