ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 Karnataka Update: 4,225 ಹೊಸ ಪ್ರಕರಣ, 26 ಮಂದಿ ಸಾವು

ರಾಜ್ಯದಲ್ಲಿ 10 ಲಕ್ಷದತ್ತ ಕೋವಿಡ್ ಪ್ರಕರಣಗಳು
Last Updated 31 ಮಾರ್ಚ್ 2021, 15:26 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಬುಧವಾರ 4,225 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಕಳೆದ ಐದು ತಿಂಗಳಲ್ಲಿ 24 ಗಂಟೆಗಳ ಅವಧಿಯಲ್ಲಿ ವರದಿಯಾದ ಗರಿಷ್ಠ ಪ್ರಕರಣಗಳು ಇವಾಗಿದ್ದು, ಒಂದು ವರ್ಷದಿಂದೀಚೆಗೆ ಕೋವಿಡ್ ಪೀಡಿತರಾದವರ ಒಟ್ಟು ಸಂಖ್ಯೆ 10 ಲಕ್ಷದ ಗಡಿಯತ್ತ (9.97 ಲಕ್ಷ) ದಾಪುಗಾಲು ಇರಿಸಿದೆ.

ರಾಜ್ಯದಲ್ಲಿ ಕಳೆದ ವರ್ಷ ಮಾ.8ರಂದು ಮೊದಲ ಪ್ರಕರಣ ವರದಿಯಾಗಿತ್ತು. ಬಳಿಕ ಪ್ರಕರಣಗಳ ಸಂಖ್ಯೆ 1 ಲಕ್ಷದ ಗಡಿ ತಲುಪಲು 108 ದಿನಗಳು ಹಿಡಿದಿತ್ತು. ಜೂನ್ ಬಳಿಕ ಪ್ರಕರಣಗಳ ಸಂಖ್ಯೆ ಏರಿಕೆ ಕಂಡ ಪರಿಣಾಮ ಅಲ್ಪಾವಧಿಯಲ್ಲಿಯೇ ಲಕ್ಷಾಂತರ ಸಂಖ್ಯೆಯಲ್ಲಿ ಪ್ರಕರಣಗಳು ವರದಿಯಾಗಿದ್ದವು. ನವೆಂಬರ ಎರಡನೇ ವಾರದ ಬಳಿಕ ಇಳಿಕೆ ಕಂಡು, ಡಿ.12ರಂದು 9 ಲಕ್ಷದ ಗಡಿ ದಾಟಿತ್ತು. ಈಗ ಮತ್ತೆ ಏರುಗತಿ ಪಡೆದುಕೊಂಡಿದ್ದು, ಮಾರ್ಚ್‌ನಲ್ಲಿ 45,753 ಮಂದಿ ಸೋಂಕಿತರಾಗಿರುವುದು ಖಚಿತಪಟ್ಟಿದೆ.

ಬೆಂಗಳೂರಿನಲ್ಲಿ ಹೊಸ ಪ್ರಕರಣಗಳ ಸಂಖ್ಯೆ 3 ಸಾವಿರದ ಗಡಿ (2,928) ಸಮೀಪಿಸಿದೆ. ಈವರೆಗೆ ಸೋಂಕಿತರಾದವರ ಸಂಖ್ಯೆ 4.34 ಲಕ್ಷ ದಾಟಿದೆ. ಬೀದರ್ (159), ಮೈಸೂರು (142), ತುಮಕೂರು (138), ಕಲಬುರ್ಗಿ (142) ಜಿಲ್ಲೆಯಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಮೂರಂಕಿ ತಲುಪಿದೆ. ಕೋವಿಡ್ ಮರಣ ಪ್ರಕರಣಗಳ ಸಂಖ್ಯೆ ಕೂಡ ಹೆಚ್ಚಳವಾಗುತ್ತಿದ್ದು, ಸೋಂಕಿತರಲ್ಲಿ ಮತ್ತೆ 26 ಮಂದಿ ಸಾವಿಗೀಡಾಗಿರುವುದು ಖಚಿತಪಟ್ಟಿದೆ. ಬೆಂಗಳೂರಿನಲ್ಲಿ 18 ಮಂದಿ, ತುಮಕೂರು ಹಾಗೂ ಕಲಬುರ್ಗಿಯಲ್ಲಿ ತಲಾ ಇಬ್ಬರು, ಉತ್ತರ ಕನ್ನಡ, ಉಡುಪಿ, ಕೋಲಾರ, ಚಿಕ್ಕಮಗಳೂರು ಜಿಲ್ಲೆಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಈ ತಿಂಗಳು 236 ಮರಣ ಪ್ರಕರಣಗಳು ವರದಿಯಾಗಿವೆ.

ಈವರೆಗೆ ಸಾವಿಗೀಡಾದವರ ಸಂಖ್ಯೆ 12,567ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 28,248ಕ್ಕೆ ಏರಿಕೆಯಾಗಿದೆ. ಅವರಲ್ಲಿ 266 ಮಂದಿ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇದ್ದಾರೆ. ಕೊರೊನಾ ಸೋಂಕಿತರಲ್ಲಿ 1,492 ಮಂದಿ ಚೇತರಿಸಿಕೊಂಡಿದ್ದಾರೆ. ಈವರೆಗೆ ಗುಣಮುಖರಾದವರ ಸಂಖ್ಯೆ 9.56 ಲಕ್ಷ ದಾಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT