ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ವಿರೋಧಿ ಬಜೆಟ್: ಸಿದ್ದರಾಮಯ್ಯ ಟೀಕಾಪ್ರಹಾರ

Last Updated 15 ಮಾರ್ಚ್ 2021, 21:29 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ 2004ರಲ್ಲಿ ವಿತ್ತೀಯ ಹೊಣೆಗಾರಿಕೆ ಕಾಯ್ದೆ ಜಾರಿಗೆ ಬಂದ ಬಳಿಕ ಮೊದಲ ಬಾರಿಗೆ ಖೋತಾ ಬಜೆಟ್‌ ಮಂಡನೆಯಾಗಿದೆ. ಇದೊಂದು ಅಭಿವೃದ್ಧಿ ವಿರೋಧಿ ಬಜೆಟ್‌' ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಾಪ್ರಹಾರ ನಡೆಸಿದರು.

ವಿಧಾನಸಭೆಯಲ್ಲಿ ಸೋಮವಾರ ಬಜೆಟ್‌ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ’ಈ ಸಲ ₹143 ಕೋಟಿ ಮಿಗತೆ ವರಮಾನದ ನಿರೀಕ್ಷೆ ಮಾಡಲಾಗಿತ್ತು. ಆದರೆ, ಈ ಸಲ ₹19,485 ಕೋಟಿ ವರಮಾನ ಕೊರತೆಯಾಗಿದೆ. ಮುಂದಿನ ವರ್ಷದ ವೇಳೆ ಕೊರತೆ ಪ್ರಮಾಣ ₹15,133 ಕೋಟಿ ಆಗಬಹುದು. ಇಂತಹ ಪರಿಸ್ಥಿತಿಯಲ್ಲಿ ಅಭಿವೃದ್ಧಿ ಚಟುವಟಿಕೆಗಳಿಗೆ ದುಡ್ಡು ಎಲ್ಲಿದೆ‘ ಎಂದು ಪ್ರಶ್ನಿಸಿದರು.

’ಒಟ್ಟು ಆಂತರಿಕ ಉತ್ಪನ್ನದ ಶೇ 25ರಷ್ಟು ಸಾಲ ಪಡೆಯಲು ಅವಕಾಶ ಇದೆ. ಹೆಚ್ಚುವರಿಯಾಗಿ ಶೇ 2ರಷ್ಟು ಸಾಲ
ಪಡೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಸರ್ಕಾರ ₹71 ಸಾವಿರ ಕೋಟಿ ಸಾಲ (ಶೇ 26.9) ಪಡೆಯಲು ತೀರ್ಮಾನಿಸಿದೆ. ಸಾಲ ಪಡೆಯುವುದು ತಪ್ಪಲ್ಲ. ಅದನ್ನು ಶಾಶ್ವತ ಆಸ್ತಿ ಸೃಷ್ಟಿಗೆ ಬಳಸಿಕೊಳ್ಳಬೇಕು. ಆದರೆ, ಬಿಜೆಪಿ ಸರ್ಕಾರ ಈ ಮೊತ್ತವನ್ನು ಬದ್ಧ ವೆಚ್ಚಗಳಿಗೆ ಬಳಸಿಕೊಳ್ಳುತ್ತಿದೆ‘ ಎಂದು ಅವರು ಹೇಳಿದರು.

’ಬಂಡವಾಳ ವೆಚ್ಚಕ್ಕೆ ₹46 ಸಾವಿರ ಕೋಟಿ ಮೀಸಲಿಡಲಾಗಿದೆ ಎಂದು ಸರ್ಕಾರ ಹೇಳಿತ್ತು. ಈ ವರ್ಷ ಬಳಸಿದ್ದು ₹19 ಸಾವಿರ ಕೋಟಿ ಮಾತ್ರ. 2021–22ರಲ್ಲಿ ₹44,237 ಕೋಟಿ, 22–23ರಲ್ಲಿ ₹26,735 ಕೋಟಿ, 23–24ರಲ್ಲಿ ₹14,284 ಕೋಟಿ, 24–25ರಲ್ಲಿ ₹10,942 ಕೋಟಿಗೆ ಬಂಡವಾಳ ವೆಚ್ಚ ಇಳಿಯಲಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಪಿಂಚಣಿ ಕೊಡಲು ಸಹ ಸರ್ಕಾರದ ಬಳಿ ಹಣ ಇರುವುದಿಲ್ಲ‘ ಎಂದು ಅವರು ಅಭಿಪ್ರಾಯಪಟ್ಟರು.

’ನಮ್ಮ ಸರ್ಕಾರ ಇದ್ದಾಗ ಬದ್ಧ ವೆಚ್ಚ ಶೇ 78ರಷ್ಟು ಇತ್ತು. 2019–20ರಲ್ಲಿ ಶೇ 87, 20–21ರಲ್ಲಿ ಶೇ 92 ಆಗಿತ್ತು. ಮುಂದಿನ ವರ್ಷದ ವೇಳೆ ಶೇ 102 ಆಗಲಿದೆ ಎಂದು ಅಂದಾಜಿಸಲಾಗಿದೆ. ಎರಡು ಕಡೆಯಲ್ಲಿ ಡಬಲ್‌ ಎಂಜಿನ್‌ ಸರ್ಕಾರ ಇದ್ದರೆ ಸ್ವರ್ಗ ಸೃಷ್ಟಿ ಆಗಲಿದೆ ಎಂದು ಬಿಜೆಪಿಯವರು ಹೇಳಿದ್ದರು. ಇದೇನಾ ಸ್ಚರ್ಗ‘ ಎಂದು ಛೇಡಿಸಿದರು.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ’ಬಂಡವಾಳ ವೆಚ್ಚಕ್ಕೆ ಶೇ 17 ಮೊತ್ತ ಮೀಸಲು ಇಡಲಾಗಿದೆ. ಬಜೆಟ್‌ನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಮೀಸಲಿಟ್ಟ ಹಣ ಕಡಿತ ಮಾಡುವುದಿಲ್ಲ‘ ಎಂದರು.

ಅನುಗ್ರಹ– ಬಾಕಿ ಬಿಡುಗಡೆ: ‘ಅನುಗ್ರಹ’ ಯೋಜನೆ ಮುಂದುವರಿಸಲಾಗುವುದು. ಬಾಕಿ ಇರುವ ₹38 ಕೋಟಿಯನ್ನು ಇನ್ನು 2–3 ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಯಡಿಯೂರಪ್ಪ ಭರವಸೆ ನೀಡಿದರು.

ಜಾನುವಾರುಗಳು ಆಕಸ್ಮಿಕವಾಗಿ ಮೃತಪಟ್ಟ ಸಂದರ್ಭದಲ್ಲಿ ಪರಿಹಾರ ನೀಡುವ ಈ ಯೋಜನೆ ನಿಲ್ಲಿಸಲಾಗಿದೆ ಎಂದು ಕಾಂಗ್ರೆಸ್‌ ಸದಸ್ಯರು ಟೀಕಾ ಪ್ರಹಾರ ನಡೆಸಿದರು.

ಮತ್ತೆ ಅಧಿಕಾರಕ್ಕೆ: ಸಿದ್ದರಾಮಯ್ಯ ವಿಶ್ವಾಸ

‘ಮುಂದಿನ ಸಲ ನಮಗೆ ಜನರು ಅವಕಾಶ ನೀಡಲಿದ್ದಾರೆ. ವಿ ವಿಲ್‌ ಕಮ್‌ ಬ್ಯಾಕ್’ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

‘ರಾಜ್ಯ ಸರ್ಕಾರ ಮಿತಿ ಮೀರಿ ಸಾಲ ಮಾಡುತ್ತಿದೆ’ ಎಂದು ಸಿದ್ದರಾಮಯ್ಯ ಆರೋಪಿಸಿದರು. ಆಗ ಮಧ್ಯಪ್ರವೇಶಿಸಿದ ಯಡಿಯೂರಪ್ಪ, ’ನನ್ನ ಜಾಗದಲ್ಲಿ ನೀವು ಇದ್ದಿದ್ದರೆ ಏನು ಮಾಡುತ್ತಿದ್ದೀರಿ‘ ಎಂದು ಪ್ರಶ್ನಿಸಿದರು.

’ನೀವು ಆ ಜಾಗ ಬಿಡಿ. ನಾನೇನು ಮಾಡುವೆ ಎಂದು ಆಗ ಹೇಳುವೆ‘ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು. ‘ನಿಮ್ಮನ್ನು ಜನರು ತಿರಸ್ಕರಿಸಿದ್ದಾರಲ್ಲ‘ ಎಂದು ಬಿಜೆಪಿ ಸದಸ್ಯರು ಕಾಲೆಳೆದರು.

‘ರಾಜ್ಯದಲ್ಲಿ 1947ರಿಂದ ಬೇರೆ ಬೇರೆ ಪಕ್ಷಗಳಿಗೆ ಜನರು ಅವಕಾಶ ನೀಡಿದ್ದಾರೆ. ಮತ್ತೆ ನಾವೇ ಬರುತ್ತೇವೆ’ ಎಂದು ಸಿದ್ದರಾಮಯ್ಯ ಹೇಳಿದರು.

ಮುಂದೆಯೂ ಬಾದಾಮಿಯಿಂದಲೇ ಸ್ಪರ್ಧೆ

‘ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ. ರಾಜಕಾರಣದಿಂದ ಓಡಿ ಹೋಗುವುದಿಲ್ಲ. ಈ ಬಗ್ಗೆ ಯಾರಿಗೂ ಸಂಶಯ ಬೇಡ’ ಎಂದು ಸಿದ್ದರಾಮಯ್ಯ ಹೇಳಿದರು.

‘ಮತ್ತೆ ಮುಖ್ಯಮಂತ್ರಿಯಾಗುವ ತಿರುಕನ ಕನಸನ್ನು ಕಾಣುತ್ತಿದ್ದೀರಿ. ಮುಂಬರುವ ಉಪಚುನಾವಣೆಗಳಲ್ಲಿ ನಾವೇ ಗೆದ್ದು ಬರುತ್ತೇವೆ. ಮತ್ತೆ ಇಲ್ಲಿ ಬಂದು ಮಾತನಾಡೋಣ’ ಎಂದು ಯಡಿಯೂರಪ್ಪ ಛೇಡಿಸಿದರು.

‘ಉಪಚುನಾವಣೆಯಲ್ಲಿ ನಮ್ಮ ಸರ್ಕಾರ ಇದ್ದಾಗ ನಾವೂ ಗೆದ್ದಿದ್ದೆವು. ನಿಮಗೆ ಧೈರ್ಯ ಇದ್ದರೆ ವಿಧಾನಸಭೆ ವಿಸರ್ಜಿಸಿ, ಚುನಾವಣೆ ಎದುರಿಸಿ’ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT