ಮಂಗಳವಾರ, ಮೇ 17, 2022
26 °C

ಪಿಎಫ್‌ಐ ವಿರುದ್ಧ ಕಠಿಣ ಕ್ರಮ: ಗೃಹ ಸಚಿವ ಬಸವರಾಜ ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

DH File

ಬೆಂಗಳೂರು: ‘ಭಾರತದ ಅಸಲಿ ಶತ್ರುವಾಗಿರುವ ಆರೆಸ್ಸೆಸ್‌ ನಿರ್ಮೂಲನೆಗೆ ಪ್ರತಿ ಗಲ್ಲಿಗಳಲ್ಲೂ ವ್ಯಾಕ್ಸಿನ್‌ ನೀಡುತ್ತೇವೆ’ ಎಂದು ಮಂಗಳೂರಿನ ಉಲ್ಲಾಳದಲ್ಲಿ ಇತ್ತೀಚೆಗೆ ನಡೆದ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ ಸಮಾವೇಶದಲ್ಲಿ ಕೆಲವು ಮುಖಂಡರು ನೀಡಿದರೆನ್ನಲಾದ ಹೇಳಿಕೆಯನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಖಂಡಿಸಿದ್ದು, ‘ಪಿಎಫ್‌ಐ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ತಿಳಿಸಿದರು.

ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಪಿಎಫ್‌ಐ ಮುಖಂಡರು ದೇಶವನ್ನು ಒಡೆಯುವ ಮಾತುಗಳನ್ನು ಆಡಿದ್ದಾರೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಹೇಳಿದರು.

ದೇಶ ಭಕ್ತ ಸಂಘಟನೆಯಾದ ಆರೆಸ್ಸೆಸ್‌ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಅಯೋಧ್ಯೆ ರಾಮಮಂದಿರ ಸುಪ್ರೀಂಕೋರ್ಟ್‌ ಈಗಾಗಲೇ ಆದೇಶ ನೀಡಿದೆ. ಈ ಕುರಿತು ಪಿಎಫ್‌ಐ ಆಕ್ಷೇಪಾರ್ಹ ಮಾತುಗಳನ್ನು ಆಡಿದೆ. ಈ ಮೂಲಕ ಪಿಎಫ್‌ಐ ತನ್ನ ನಿಜವಾದ ಬಣ್ಣವನ್ನು ಪದೇ ಪದೇ ತೋರಿಸುತ್ತಲೇ ಬಂದಿದೆ. ದೇಶ ವಿರೋಧಿ ಹೇಳಿಕೆಗಳನ್ನು ನೀಡುತ್ತಿರುವ ಈ ಸಂಘಟನೆ ವಿರುದ್ಧ ಕ್ರಮ ತೆಗೆದುಕೊಳ್ಳಲು ಸ್ಥಳೀಯ ಪೊಲೀಸರಿಗೆ ಸೂಚಿಸುತ್ತೇನೆ ಎಂದು ಬೊಮ್ಮಾಯಿ ತಿಳಿಸಿದರು.

ಪಿಎಫ್‌ಐ ಹೇಳಿದ್ದೇನು:

‘ದೆಹಲಿಯ ಗದ್ದುಗೆಯಲ್ಲಿ ಕುಳಿತಿರುವ ಇಬ್ಬರು ಮಹಾನ್‌ ನಾಟಕಕಾರರಿಗೆ ಸ್ಪಷ್ಟ ಸಂದೇಶ ನೀಡಲು ನಾವು ಈ ಬೃಹತ್ ಸಮಾವೇಶ ನಡೆಸಿದ್ದೇವೆ. ಹಿಂದೆ ಮಾಧ್ಯಮಗಳು ನಮಗೆ ಪ್ರಚಾರ ನೀಡುತ್ತಿರಲಿಲ್ಲ. ಇಂದು ಪರಿಸ್ಥಿತಿ ಬದಲಾಗಿದೆ. ನಾವು ಯಾರು ಅಂತ ತಿರುಗಿ ನೋಡುವಂತಾಗಿದೆ. ಸಿಬಿಐ, ಇ.ಡಿ ಮತ್ತು ಇತರ ತನಿಖಾ ಸಂಸ್ಥೆಗಳು ಆರೆಸ್ಸೆಸ್‌ ಪ್ರೇರಿತ ಸುಪಾರಿ ಕಿಲ್ಲರ್‌ಗಳಂತೆ ವರ್ತಿಸುತ್ತಿವೆ. ಇವರಿಗೆ ಹೆದರುವ ಅಗತ್ಯವಿಲ್ಲ. ಕಾನೂನು ಮೂಲಕ ಇವರನ್ನು ಸದೆ ಬಡಿದು ಮುನ್ನುಗ್ಗಬೇಕು’ ಎಂದು ಸಭೆಯಲ್ಲಿ ಮುಖಂಡರು ಪ್ರತಿಪಾದಿಸಿದರು.

ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಕೇಳಲು ಬಂದರೆ ಯಾವುದೇ ಮುಸ್ಲಿಮ್‌ ವ್ಯಕ್ತಿ ಒಂದು ರೂಪಾಯಿ ಕೊಡಬಾರದು. ಅಲ್ಲಿ ನಿರ್ಮಾಣವಾಗುವುದು ರಾಮಮಂದಿರವಲ್ಲ ಆರೆಸ್ಸೆಸ್ ಮಂದಿರ ಎಂದು ಹೇಳಿದ್ದರೆನ್ನಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು