ಶಿವಶಂಕರ್ ನೆನಪಾರ್ಥ ‘ಹನಿಗವನ ಸಾಹಿತ್ಯ ಪ್ರಶಸ್ತಿ’
ಬೆಂಗಳೂರು: ‘ಹನಿಗವನಗಳ ಜನಕ, ಚುಟುಕು ಕವಿ ಜರಗನಹಳ್ಳಿ ಶಿವಶಂಕರ್ ಅವರ ನೆನಪಾರ್ಥಕವಾಗಿ ಪ್ರತಿ ವರ್ಷ ಮೇ 5ರಂದು ‘ಹನಿಗವನ ಸಾಹಿತ್ಯ ಪ್ರಶಸ್ತಿ’ ನೀಡಲಾಗುವುದು’ ಎಂದು ಕರ್ನಾಟಕ ವಿಕಾಸ ರಂಗದ ಅಧ್ಯಕ್ಷ ವ.ಚ.ಚನ್ನೇಗೌಡ ತಿಳಿಸಿದರು.
ಶಿವಶಂಕರ್ ಅವರ ಸಮಾಧಿ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.
‘ಶ್ರೇಷ್ಠ ಹನಿಗವನ ಕೃತಿಕಾರರಿಗೆ ಈ ಪ್ರಶಸ್ತಿ ಕೊಡಲಾಗುತ್ತದೆ. ಇದು ₹5 ಸಾವಿರ ನಗದು ಒಳಗೊಂಡಿರುತ್ತದೆ’ ಎಂದರು.
ಸಾಹಿತಿ ರಾ.ನಂ.ಚಂದ್ರಶೇಖರ್ ‘ಶಿವಶಂಕರ್ ಅವರು ಮಾತೃಹೃದಯಿ. ಅಜಾತ ಶತ್ರು. ಎಲ್ಲರನ್ನು ಪ್ರೀತಿಯಿಂದ ಕಾಣುತ್ತಿದ್ದರು. ತಮ್ಮ ಹನಿಗವನಗಳ ಮೂಲಕ ಪರಿಸರದ ಕುರಿತು ಜಾಗೃತಿ ಮೂಡಿಸಿದ್ದರು. ಸಮಾಜದ ನ್ಯೂನತೆಗಳನ್ನು ತಿದ್ದುತಿದ್ದರು. ಕನ್ನಡಕ್ಕೆ ಅನ್ಯಾಯವಾದಾಗಲೆಲ್ಲಾ ಗಟ್ಟಿ ಧ್ವನಿ ಎತ್ತುತ್ತಿದ್ದರು’ ಎಂದು ಸ್ಮರಿಸಿದರು.
ಶಿವಶಂಕರ್ ಅವರ ಪುತ್ರಿ ಶುಭದ ‘ಅಪ್ಪನ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸಿ ವರ್ಷವಿಡೀ ಸಾಹಿತ್ಯದ ಚಟುವಟಿಕೆಗಳನ್ನು ನಡೆಸಲು ತಯಾರಿ ಮಾಡಿಕೊಳ್ಳುತ್ತಿದ್ದೇವೆ’ ಎಂದು ಹೇಳಿದರು.
ರಫಾಯಲ್ ರಾಜ್, ಪ.ಗಜಣ್ಣ, ವೀರಭದ್ರಪ್ಪ, ಜಯಣ್ಣ ಹಾಗೂ ಶಿವಣ್ಣ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.