ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರಕಟ: ಗಣೇಶ ಕೊಲೆಕಾಡಿಗೆ ‘ಪಾರ್ತಿಸುಬ್ಬ ಪ್ರಶಸ್ತಿ’

ಕರ್ನಾಟಕ ಯಕ್ಷಗಾನ ಅಕಾಡೆಮಿಯ 2022ನೇ ಸಾಲಿನ ಪ್ರಶಸ್ತಿಗಳು ಪ್ರಕಟ
Last Updated 29 ಆಗಸ್ಟ್ 2022, 13:36 IST
ಅಕ್ಷರ ಗಾತ್ರ

ಬೆಂಗಳೂರು:ಕರ್ನಾಟಕ ಯಕ್ಷಗಾನ ಅಕಾಡೆಮಿಯ 2022ನೇ ಸಾಲಿನ ಪ್ರಶಸ್ತಿಗಳು ಪ್ರಕಟವಾಗಿದ್ದು, ‘ಪಾರ್ತಿಸುಬ್ಬ ಪ್ರಶಸ್ತಿ’ಗೆ ಪ್ರಸಂಗಕರ್ತ ಹಾಗೂ ಯಕ್ಷಗಾನ ಗುರು ಗಣೇಶ ಕೊಲೆಕಾಡಿ ಆಯ್ಕೆಯಾಗಿದ್ದಾರೆ.

ಸೋಮವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಅಧ್ಯಕ್ಷ ಜಿ.ಎಲ್. ಹೆಗಡೆ ಅವರು ಪ್ರಶಸ್ತಿ ಪಟ್ಟಿ ಬಿಡುಗಡೆ ಮಾಡಿದರು. ಅಕಾಡೆಮಿ ರಿಜಿಸ್ಟ್ರಾರ್ ಎಸ್‌.ಎಚ್. ಶಿವರುದ್ರಪ್ಪ ಇದ್ದರು.‘ಪಾರ್ತಿಸುಬ್ಬ ಪ್ರಶಸ್ತಿ’ಯು ₹ 1 ಲಕ್ಷ ನಗದು ಒಳಗೊಂಡಿದೆ.

2022ನೇ ಸಾಲಿನ ‘ಗೌರವ ಪ್ರಶಸ್ತಿ’ಗೆ ತೆಂಕುತಿಟ್ಟಿನ ಯಕ್ಷಗಾನ ಭಾಗವತ ಪುತ್ತಿಗೆ ರಘುರಾಮ ಹೊಳ್ಳ (ಮಂಗಳೂರು), ತೆಂಕುತಿಟ್ಟು ಭಾಗವತ ಪಟ್ಲ ಸತೀಶ್ ಶೆಟ್ಟಿ (ಮಂಗಳೂರು), ಮೂಡಲಪಾಯ ಯಕ್ಷಗಾನ ಭಾಗವತ ಹಾಗೂ ಕಲಾವಿದ ಭಾಗವತ ಚಂದಯ್ಯ (ತುಮಕೂರು), ಭಾಗವತ ಹಾಗೂ ಪಾರಂಪರಿಕ ಯಕ್ಷಗಾನ ಕಲಾವಿದ ಭಾಗವತ ಉಮೇಶ ಭಟ್ ಬಾಡ (ಉತ್ತರ ಕನ್ನಡ) ಮತ್ತು ಭಾಗವತ ಹಾಗೂ ಬಡಗುತಿಟ್ಟು ಯಕ್ಷಗಾನ ಕಲಾವಿದ ಕೆ.ಪಿ. ಹೆಗಡೆ (ಉಡುಪಿ) ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿ ತಲಾ ₹ 50 ಸಾವಿರ ನಗದು ಒಳಗೊಂಡಿದೆ.

‘ಯಕ್ಷಸಿರಿ ವಾರ್ಷಿಕ ಪ್ರಶಸ್ತಿ’ಗೆ ಯಕ್ಷಗಾನ ಕ್ಷೇತ್ರದ 10 ಮಂದಿ ಸಾಧಕರನ್ನು ಆಯ್ಕೆ ಮಾಡಲಾಗಿದೆ. ‘ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ಪ್ರಶಸ್ತಿ’ಗೆ ಪಾರಂಪರಿಕ ಯಕ್ಷಗಾನ ಕಲಾವಿದ ಹುಕ್ಕಲಮಕ್ಕಿ ಕಮಲಾಕರ ಹೆಗಡೆ (ಉತ್ತರ ಕನ್ನಡ) ಭಾಜನರಾಗಿದ್ದಾರೆ.ಈ ಪ್ರಶಸ್ತಿಗಳು ತಲಾ ₹ 25 ಸಾವಿರ ನಗದು ಒಳಗೊಂಡಿವೆ.

2021ನೇ ಸಾಲಿನ ಪುಸ್ತಕ ಬಹುಮಾನಕ್ಕೆ ಮಂಗಳೂರಿನ ಪೊಳಲಿ ನಿತ್ಯಾನಂದ ಕಾರಂತ ಅವರ ‘ಯಕ್ಷಗಾನ ಪ್ರಸಂಗ ಸಂಪುಟ’, ಬೆಳಗಾವಿಯ ಎಲ್‌.ಎಸ್. ಶಾಸ್ತ್ರಿ ಅವರ ‘ಯಕ್ಷಗಾನ ನಕ್ಷತ್ರಗಳು’ ಹಾಗೂ ಬೆಂಗಳೂರಿನ ವಿದ್ಯಾರಶ್ಮಿ ಪೆಲತ್ತಡ್ಕ ಅವರ ‘ಯಕ್ಷಗಾನ ಲೀಲಾವಳಿ’ ಕೃತಿಗಳು ಆಯ್ಕೆಯಾಗಿವೆ. ಈ ಬಹುಮಾನವು ತಲಾ ₹ 25 ಸಾವಿರ ನಗದು ಒಳಗೊಂಡಿವೆ.

‘ಪಾರ್ತಿಸುಬ್ಬ ಸೇರಿ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗಳ ಪ್ರದಾನ ಸಮಾರಂಭವು ಸೆಪ್ಟೆಂಬರ್ ತಿಂಗಳ ಎರಡು ಅಥವಾ ಮೂರನೇ ವಾರದಲ್ಲಿ ಉಡುಪಿಯ ಕಮಲಶಿಲೆಯಲ್ಲಿ ನಡೆಯಲಿದೆ. ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ’ ಎಂದುಜಿ.ಎಲ್. ಹೆಗಡೆ ತಿಳಿಸಿದರು.

‘ಯಕ್ಷಸಿರಿ ವಾರ್ಷಿಕ ಪ್ರಶಸ್ತಿ’ಗೆ ಆಯ್ಕೆಯಾದವರು

ಹೆಸರು; ಜಿಲ್ಲೆ; ವಿಭಾಗ

ಕೋಲ್ಯಾರು ರಾಜು ಶೆಟ್ಟಿ; ಹೊರನಾಡು ಕನ್ನಡಿಗ; ಯಕ್ಷಗಾನ ಕಲಾವಿದ

ಕೃಷ್ಣ ಗಾಣಿಗ ಕೋಡಿ; ಉಡುಪಿ; ಬಡಗತಿಟ್ಟು ಯಕ್ಷಗಾನ ಕಲಾವಿದ

ಕೃಷ್ಣನಾಯ್ಕ ಜಿ. ಬೇಡ್ಕಣಿ; ಉತ್ತರ ಕನ್ನಡ; ಬಡಾಬಡಗು ಯಕ್ಷಗಾನ ಕಲಾವಿದ

ಶುಭಾನಂದ ಶೆಟ್ಟಿ; ಕಾಸರಗೋಡು; ತೆಂಕುತಿಟ್ಟು ಯಕ್ಷಗಾನ ಕಲಾವಿದ

ಬಾಲಕೃಷ್ಣ ನಾಯಕ್; ಉಡುಪಿ; ಬಡಗುತಿಟ್ಟು ಯಕ್ಷಗಾನ ಪ್ರಸಾಧನ ಕಲಾವಿದ

ಕವ್ವಾಳೆ ಗಣಪತಿ ಭಾಗವತ; ಉತ್ತರ ಕನ್ನಡ; ಬಡಾಬಡಗು ಯಕ್ಷಗಾನ ಕಲಾವಿದ

ಎಸ್‌.ಪಿ. ಅಪ್ಪಯ್ಯ; ಬೆಂಗಳೂರು; ಮೂಡಲಾಪಯ ಯಕ್ಷಗಾನ ಕಲಾವಿದ

ಡಿ. ಭೀಮಯ್ಯ; ತುಮಕೂರು;ಮೂಡಲಾಪಯ ಯಕ್ಷಗಾನ ಕಲಾವಿದ

ಕೊಲ್ಲೂರು ಕೊಗ್ಗ ಆಚಾರ್ಯ; ಉಡುಪಿ; ಬಡಗುತಿಟ್ಟು ಯಕ್ಷಗಾನ ಹಿಮ್ಮೇಳ ಕಲಾವಿದ

ಅಜಿತ್ ಕುಮಾರ್ ಜೈನ್; ಉಡುಪಿ; ತೆಂಕುತಿಟ್ಟು ಯಕ್ಷಗಾನ ಕಲಾವಿದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT